ಲೋಕಸಭಾ ಚುನಾವಣೆ; ಬಿಜೆಪಿ ಕಾರ್ಯತಂತ್ರ ವರ್ಕ್‌ ಆಯಿತಾ, ಎನ್‌ಡಿಎ ಪರ ಜನರ ಒಲವಿಗೆ ಕಾರಣವಾಯಿತಾ ಈ 10 ಅಂಶಗಳು
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಬಿಜೆಪಿ ಕಾರ್ಯತಂತ್ರ ವರ್ಕ್‌ ಆಯಿತಾ, ಎನ್‌ಡಿಎ ಪರ ಜನರ ಒಲವಿಗೆ ಕಾರಣವಾಯಿತಾ ಈ 10 ಅಂಶಗಳು

ಲೋಕಸಭಾ ಚುನಾವಣೆ; ಬಿಜೆಪಿ ಕಾರ್ಯತಂತ್ರ ವರ್ಕ್‌ ಆಯಿತಾ, ಎನ್‌ಡಿಎ ಪರ ಜನರ ಒಲವಿಗೆ ಕಾರಣವಾಯಿತಾ ಈ 10 ಅಂಶಗಳು

ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾದವು. ಬಹುತೇಕ ಸಮೀಕ್ಷೆಗಳು ಮತ್ತೊಂದು ಅವಧಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಎಂಬುದನ್ನು ಸೂಚಿಸಿವೆ. ಹಾಗಾದರೆ, ಬಿಜೆಪಿ ಕಾರ್ಯತಂತ್ರ ವರ್ಕ್‌ ಆಯಿತಾ, ಎನ್‌ಡಿಎ ಪರ ಜನರ ಒಲವಿಗೆ ಕಾರಣವಾಯಿತಾ ಈ 10 ಅಂಶಗಳು ನೋಡೋಣ.

ಲೋಕಸಭಾ ಚುನಾವಣೆ; ಬಿಜೆಪಿ ಕಾರ್ಯತಂತ್ರ ವರ್ಕ್‌ ಆಯಿತಾ, ಎನ್‌ಡಿಎ ಪರ ಜನರ ಒಲವಿಗೆ ಕಾರಣವಾಯಿತಾ ಈ 10 ಅಂಶಗಳು (ಸಾಂದರ್ಭಿಕ ಚಿತ್ರ)
ಲೋಕಸಭಾ ಚುನಾವಣೆ; ಬಿಜೆಪಿ ಕಾರ್ಯತಂತ್ರ ವರ್ಕ್‌ ಆಯಿತಾ, ಎನ್‌ಡಿಎ ಪರ ಜನರ ಒಲವಿಗೆ ಕಾರಣವಾಯಿತಾ ಈ 10 ಅಂಶಗಳು (ಸಾಂದರ್ಭಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಅಂತಿಮ ಹಂತದ ಮತದಾನ ಇಂದು (ಜೂನ್ 1) ಸಂಜೆ 6ಕ್ಕೆ ಕೊನೆಗೊಂಡಿದ್ದು, ನಂತರ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ಎಲ್ಲವೂ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೆ ಅವಧಿಗೆ ಆಡಳಿತ ಮುನ್ನಡೆಸುವ ಸೂಚನೆ ಸಿಕ್ಕಿದೆ. ಆದಾಗ್ಯೂ ಇದು ಅಂತಿಮ ಫಲಿತಾಂಶವಲ್ಲ. ಜೂನ್ 4 ರಂದು ಭಾರತದ ಚುನಾವಣಾ ಆಯೋಗ ಈ ಸಲದ ಲೋಕಸಭಾ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಿದೆ.

ಮತಗಟ್ಟೆ ಸಮೀಕ್ಷೆಗಳನ್ನು ಗಮನಿಸಿದರೆ ಎನ್‌ಡಿಎ ಪರವಾಗಿಯೇ ಜನರ ಒಲವು ವ್ಯಕ್ತವಾಗಿದೆ. ಐಎನ್‌ಡಿಎಐ ಒಕ್ಕೂಟ ಹಿಂದಿನ ಅವಧಿಗಿಂತ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಕಂಡುಬಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಪ್ರಚಾರ ಗಮನಿಸಿದರೆ, ಆಡಳಿತಾರೂಢ ಬಿಜೆಪಿಗೆ ಈ ಸಲದ ಚುನಾವಣೆ ತುಸು ತ್ರಾಸ ನೀಡಿದ್ದು ಕಂಡು ಬಂದಿದೆ. ಕಳೆದ ಎರಡು ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಹೆಚ್ಚಿತ್ತು. ಗೆದ್ದೇ ಗೆಲ್ಲುತ್ತೇವೆ ಎಂಬ ಭಾವದೊಂದಿಗೆ ಪ್ರಚಾರ ನಡೆಸಿದ್ದರು. ಯುಪಿಎ ಮೈತ್ರಿ ಬಿಟ್ಟು, ಹೊಸದಾಗಿ ಐಎನ್‌ಡಿಐಎ ಒಕ್ಕೂಟ ರಚಿಸಿದ್ದು ರಾಜಕೀಯವಾಗಿ ವಿಪಕ್ಷಗಳ ಉತ್ಸಾಹ ಹೆಚ್ಚಿಸಿತ್ತು.

ಇದಲ್ಲದೆ, ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಗ್ಯಾರೆಂಟಿ ಯೋಜನೆಗಳ ಮೂಲಕ ಸಿಕ್ಕ ಗೆಲುವು ಕಾಂಗ್ರೆಸ್ ಹುಮ್ಮಸ್ಸನ್ನು ಹೆಚ್ಚಿಸಿತ್ತು. ಆದಾಗ್ಯೂ, ಈಗ ಬಂದಿರುವ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಪರವಾಗಿ ಇರುವ ಕಾರಣ ಕಾಂಗ್ರೆಸ್‌ ಸ್ವಲ್ಪ ಎದೆಗುಂದಿರುವಂತೆ ಕಾಣುತ್ತಿದೆ. ಹಾಗಾದರೆ, ಬಿಜೆಪಿಯ ತಂತ್ರ ಈ ಸಲದ ಲೋಕಸಭಾ ಚುನಾವಣೆಯಲ್ಲಿ ವರ್ಕ್ ಔಟ್ ಅಗಿದೆಯಾ? ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಮತದಾರರ ಒಲವು ವ್ಯಕ್ತವಾಗಲು ಕಾರಣವೇನು?

ವರ್ಕೌಟ್ ಆಗಿದೆಯಾ ಬಿಜೆಪಿಯ ತಂತ್ರ; ಎನ್‌ಡಿಎ ಪರ ಜನರನ್ನು ಸೆಳೆದಿರಬಹುದಾದ ಟಾಪ್ 10 ಅಂಶಗಳಿವು

1) ಪ್ರಧಾನಿ ನರೇಂದ್ರ ಮೋದಿ ನಾಯಕತ್ವ - ಮೋದಿ ಹವಾ

ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮುಖ್ಯ ಕಾರಣ. 2014 ರಿಂದ 2024ರ ಅವಧಿಯಲ್ಲಿ ಆಗಿರುವ ಮೂಲಸೌಕರ್ಯ, ಅರ್ಥ ವ್ಯವಸ್ಥೆಯ ಬದಲಾವಣೆ, ಡಿಜಿಟಲ್ ಇಂಡಿಯಾ ಸೇರಿ ಹಲವು ಉಪಕ್ರಮಗಳು ಜನಮನ ಗೆದ್ದಿವೆ ಎಂಬುದನ್ನು ಮತಗಟ್ಟೆ ಸಮೀಕ್ಷೆಗಳು ಸುಳಿವು ನೀಡಿವೆ.

2) ಅಯೋಧ್ಯೆ ರಾಮ ಮಂದಿರ ನಿರ್ಮಾಣ

ಶತಮಾನಗಳ ಕನಸಾಗಿದ್ದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಸಾಕಾರಗೊಂಡಿರುವುದು ಗಮನಾರ್ಹ. ದೇವಸ್ಥಾನದ ಭೂಮಿ ಪೂಜೆಯಿಂದ ಹಿಡಿದು ಉದ್ಘಾಟನೆ ತನಕ ಪ್ರಧಾನಿ ಮೋದಿ ನೇತೃತ್ವ ಜನಮಾನಸದ ಮೇಲೆ ಅಚ್ಚಳಿಯದ ಪರಿಣಾಮ ಬೀರಿದೆ. ವಿಶೇಷ ಎಂದರೆ ಅಯೋಧ್ಯೆ ರಾಮ ಮಂದಿರ ಚುನಾವಣಾ ಪ್ರಚಾರದ ವಿಚಾರವಲ್ಲ ಎಂದು ಬಿಜೆಪಿ, ಪ್ರಧಾನಿ ಮೋದಿ ಸ್ಪಷ್ಟಪಡಿಸಿ ಚುನಾವಣೆ ಎದುರಿಸಿದ್ದರು.

3) ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿ ಭಾರತದ ಸುಪರ್ದಿಯೊಳಗೆ ಅದನ್ನು ಭದ್ರಗೊಳಿಸಿದ್ದು ಮತ್ತೊಂದು ಮಹತ್ವದ ನಡೆ. ಇದು ಭಾರತದ ಭದ್ರತೆ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ವಿಶ್ವಾಸವನ್ನು ಹೆಚ್ಚಿಸಿತು.

4) ಮೋದಿ ಗ್ಯಾರೆಂಟಿ

ಕಾಂಗ್ರೆಸ್ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜಾರಿಗೊಳಿಸಿರುವ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಗ್ಯಾರೆಂಟಿ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿತು. ಈ ಗ್ಯಾರೆಂಟಿ ಜನಮನಸೆಳೆಯಲಾರಂಭಿಸಿದಾಗ, ಬಿಜೆಪಿ “ಮೋದಿ ಗ್ಯಾರೆಂಟಿ”ಯನ್ನು ಜನರ ಮುಂದಿರಿಸಿತು. ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ, ಮಧ್ಯಮ ವರ್ಗದ ಜನರಿಗೆ, ನಾರಿಶಕ್ತಿಗೆ, ಯುವಜನರಿಗೆ, ಹಿರಿಯ ನಾಗರಿಕರಿಗೆ, ಕಿಸಾನ್ ಸಮ್ಮಾನ್‌, ಮೀನುಗಾರರು, ಶ್ರಮಿಕ್ ಸಮ್ಮಾನ್, ಸಬ್ ಕಾ ಸಾತ್ ಸಬ್ ಕಾ ವಿಕಾಸ್, ವಿಶ್ವ ಬಂಧು ಭಾರತ, ಸುರಕ್ಷಿತ ಭಾರತ, ಸಂಪದ್ಭರಿತ ಭಾರತ, ಜಾಗತಿಕ ಉತ್ಪಾದನಾ ಹಬ್‌, ವಿಶ್ವ ದರ್ಜೆಯ ಮೂಲಸೌಕರ್ಯ ಸೇರಿ ಹತ್ತಾರು ವಿಷಯಗಳ ಮೇಲೆ ಮೋದಿ ಗ್ಯಾರೆಂಟಿಯನ್ನು ವಿವರಿಸಿತು. 10 ವರ್ಷಗಳ ಸಾಧನೆ ಪ್ರಗತಿಯ ವಿವರವನ್ನು ಜನರಿಗೆ ತಲುಪಿಸಿತು.

5) ಅಬ್‌ ಕೀ ಬಾರ್ 400 ಪಾರ್

ಲೋಕ ಸಭಾ ಚುನಾವಣೆ ಪ್ರಚಾರದ ನಡುವೆ ಪ್ರಧಾನಿ ಮೋದಿ ಅವರು ಕಳೆದ ಎರಡು ಅವಧಿಗಳಲ್ಲೂ ಬಿಜೆಪಿಗೆ ನಿರೀಕ್ಷೆ ಮೀರಿ ಸ್ಥಾನಗಳನ್ನು ಒದಗಿಸಿಕೊಟ್ಟ ಮತದಾರರಿಗೆ ಕೃತಜ್ಞತೆ ಹೇಳುತ್ತಾ, “ಅಬ್‌ ಕೀ ಬಾರ್ 400 ಪಾರ್” ಘೋಷಣೆ ಮಾಡಿದರು. ಇದು ಬಹಳ ಸದ್ದು ಮಾಡಿತು.

6) ವಿಶ್ವ ಗುರು ಭಾರತ

ಕೋವಿಡ್ ಸಂಕಷ್ಟದ ಸಮಯದಲ್ಲಿ ವಿಶ್ವ ರಾಷ್ಟ್ರಗಳು ಭಾರತದ ಕಡೆಗೆ ನೋಡಿದ್ದವು. ಲಸಿಕೆ ಉತ್ಪಾದನೆಯಲ್ಲಿ ಕೂಡ ಭಾರತ ಇತರೆ ದೇಶಗಳಿಗೆ ನೆರವಾಗಿದ್ದು ಗಮನಾರ್ಹ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೀಗಾಗಿಯೆ “ವಿಶ್ವ ಬಂಧು ಭಾರತ” ಎಂಬುದನ್ನು ಉಲ್ಲೇಖಿಸಿದೆ. ವಿಶ್ವಮಟ್ಟದಲ್ಲಿ ಭಾರತದ ಇಮೇಜ್‌ ಆ ರೀತಿಯಾಗಿ ರೂಪಿಸಲ್ಪಟ್ಟಿದೆ. ಗುಜರಾತ್ ಮಾದರಿ ಮೂಲಕ ಭಾರತದ ಆಡಳಿತ ಚುಕ್ಕಾಣಿ ಹಿಡಿದ ಮೋದಿ ಹವಾ ಇನ್ನೂ ಮೋಡಿ ಕಳೆದುಕೊಂಡಿಲ್ಲ ಎಂಬುದನ್ನು ಮತಗಟ್ಟೆ ಸಮೀಕ್ಷೆಗಳು ಸೂಚಿಸಿವೆ.

7) ಅನಿವಾಸಿ ಭಾರತೀಯರ ಒಲವು

ರಷ್ಯಾ - ಉಕ್ರೇನ್ ಯುದ್ಧ, ಗಲ್ಫ್ ರಾಷ್ಟ್ರದ ಸಂಕಷ್ಟದ ಸಂದರ್ಭ ಸೇರಿ ಹಲವು ಸನ್ನಿವೇಶಗಳಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿರುವುದು ಭಾರತೀಯರನ್ನು, ಅನಿವಾಸಿ ಭಾರತೀಯರ ಮನೋಬಲವನ್ನು ಹೆಚ್ಚಿಸಿದೆ. ಹೀಗೆ, ವಿವಿಧೆಡೆ ಸಂಕಷ್ಟ ಎದುರಾದಾಗ ಭಾರತೀಯರನ್ನು ಅಲ್ಲಿಂದ ಭಾರತಕ್ಕೆ ವಾಪಸ್ ಕರೆತರುವಲ್ಲಿ ಭಾರತ ಸರ್ಕಾರದ ಕ್ರಮಗಳು ಕೂಡ ಮೆಚ್ಚುಗೆಗೆ ಪಾತ್ರವಾಗಿವೆ.

8) ಒಂದು ದೇಶ ಒಂದು ಚುನಾವಣೆ

ದಶಕಗಳ ಹಿಂದೆ ಚಾಲ್ತಿಯಲ್ಲಿದ್ದ ಒಂದು ದೇಶ ಒಂದು ಚುನಾವಣೆ ಜಾರಿಗೊಳಿಸುವ ವಿಚಾರಕ್ಕೆ ಮತ್ತೆ ಆದ್ಯತೆ ಸಿಕ್ಕಿದೆ. ಮುಂದಿನ ಅವಧಿಯಲ್ಲಿ ಇದನ್ನು ಜಾರಿಗೊಳಿಸುವ ಭರವಸೆ ನೀಡಿದ್ದು ಗಮನಸೆಳೆದಿದೆ. ಚುನಾವಣಾ ವೆಚ್ಚ ಕಡಿತಗೊಳಿಸುವುದಷ್ಟೇ ಅಲ್ಲ, ವ್ಯವಸ್ಥೆ ಸುಧಾರಿಸುವ ಕ್ರಮ ಎಂಬ ಕಾರಣಕ್ಕೆ ಮೆಚ್ಚುಗೆಗೆ ಪಾತ್ರವಾಗಿದೆ.

9) ಏಕರೂಪದ ನಾಗರಿಕ ಸಂಹಿತೆ

ಭಾರತದಲ್ಲಿ ವಿವಿಧ ವೈಯಕ್ತಿಕ ಕಾನೂನುಗಳು ಚಾಲ್ತಿಯಲ್ಲಿರುವ ಕಾರಣ ಎಲ್ಲ ನಾಗರಿಕರಿಗೂ ಅನ್ವಯಿಸುವ ನ್ಯಾಯ ಒದಗಿಸುವುದು ಕಷ್ಟ. ವಿಶೇಷವಾಗಿ ವಿವಾಹ ನೋಂದಣಿ, ವಿಚ್ಛೇದನ ಸೇರಿದಂತೆ ಕೆಲವು ಕಾನೂನುಗಳು ಇದರ ವ್ಯಾಪ್ತಿಗೆ ಬರುತ್ತದೆ. ಏಕರೂಪದ ನಾಗರಿಕ ಸಂಹಿತೆ ಈಗಾಗಲೇ ಉತ್ತರಾಖಂಡದಲ್ಲಿ ಜಾರಿಯಾಗಿದೆ. ಇದರ ಸಾಧಕ ಬಾಧಕ ಚರ್ಚೆಯಾಗಬೇಕು. ಆ ಮೂಲಕ ಭವಿಷ್ಯದಲ್ಲಿ ಇದು ದೇಶಾದ್ಯಂತ ಜಾರಿಯಾಗಬೇಕು. ಅದನ್ನು ಮಾಡಲಾಗುವುದು ಎಂದು ಘೋಷಿಸಿದ್ದು ಗಮನಾರ್ಹ.

10) ಕಾಂಗ್ರೆಸ್ ಪಕ್ಷದ ನಾಯಕತ್ವ- ಕುಟುಂಬ ರಾಜಕಾರಣ

ದಶಕಗಳಿಂದ ಭಾರತವನ್ನು ಆಳಿದ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನೇ ಬಿಜೆಪಿ, ಪ್ರಧಾನಿ ಮೋದಿ ಟಾರ್ಗೆಟ್ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ನೆಹರು-ಗಾಂಧಿ ಕುಟುಂಬದ ಭದ್ರ ಕೋಟೆಯಾಗಿದ್ದ ಅಮೇಥಿಯನ್ನು ಗೆದ್ದ ಬಿಜೆಪಿ, ಈ ಬಾರಿ ರಾಯ್ ಬರೇಲಿಯನ್ನು ಟಾರ್ಗೆಟ್ ಮಾಡಿದೆ. ಅಲ್ಲಿ, ಸೋನಿಯಾ ಗಾಂಧಿ ಅವರು ಕ್ಷೇತ್ರವನ್ನು ತಮ್ಮ ಕುಟುಂಬದ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಸೋನಿಯಾ ಗಾಂಧಿ ಹೇಳಿದ ಮಾತುಗಳನ್ನೇ ಬಿಜೆಪಿ ಎತ್ತಿ ತೋರಿಸಿದೆ. ಈ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ. ಇಲ್ಲಿ ಕೂಡ ಬಿಜೆಪಿ ಮತದಾರರ ಒಲವು ಗಳಿಸುವುದಕ್ಕೆ ಮತ್ತು ಕುಟುಂಬ ರಾಜಕಾರಣದ ವಿರುದ್ಧ ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಪ್ರಯತ್ನಿಸಿದ್ದು ಗಮನಸೆಳೆದಿದೆ.

Whats_app_banner