Hassan Exit poll result 2024: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧ್ಯತೆಯ ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು
ಕನ್ನಡ ಸುದ್ದಿ  /  ಕರ್ನಾಟಕ  /  Hassan Exit Poll Result 2024: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧ್ಯತೆಯ ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು

Hassan Exit poll result 2024: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧ್ಯತೆಯ ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆಗಳು

ತೀವ್ರ ಕುತೂಹಲ ಕೆರಳಿಸಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ತುರುಸಿನ ಸ್ಪರ್ಧೆ ನಡುವೆಯೂ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಗೆಲ್ಲಬಹುದು ಎನ್ನುವ ಭವಿಷ್ಯವನ್ನು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿವೆ.

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಗೆಲ್ಲುವರು ಎನ್ನುವ ಭವಿಷ್ಯ ವನ್ನು ಮತಗಟ್ಟೆ ಸಮೀಕ್ಷೆಗಳು ಹೇಳಿವೆ
ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಗೆಲ್ಲುವರು ಎನ್ನುವ ಭವಿಷ್ಯ ವನ್ನು ಮತಗಟ್ಟೆ ಸಮೀಕ್ಷೆಗಳು ಹೇಳಿವೆ

ಹಾಸನ: ಲೋಕಸಭೆ ಚುನಾವಣೆಯ ನಡುವೆ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್‌ ಪ್ರಕರಣದ ನಡುವೆಯೇ ಅಲ್ಲಿನ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲ ಇದ್ದೇ ಇದೆ. ಶನಿವಾರ ಸಂಜೆ ಪ್ರಕಟಿಸಲಾದ ಬಹುತೇಕ ಸಮೀಕ್ಷೆಗಳಲ್ಲಿ ಹಾಸನದಲ್ಲಿ ಎನ್‌ ಡಿಎ ಮೈತ್ರಿ ಕೂಟ ಗೆಲ್ಲಬಹುದು ಎನ್ನುವ ಮುನ್ಸೂಚನೆಯನ್ನು ನೀಡಲಾಗಿದೆ. ಪ್ರಜ್ವಲ್‌ ರೇವಣ್ಣ ಅವರು ಹಾಸನದಲ್ಲಿ ವಿವಾದ, ಗೊಂದಲ, ರಾಜಕೀಯ ಸವಾಲುಗಳ ನಡುವೆಯೇ ಗೆಲುವು ಸಾಧಿಸಬಹುದು ಎಂದು ಭವಿಷ್ಯ ನುಡಿದಿರುವುದು ಕುತೂಹಲ ಮೂಡಿಸಿದೆ.

ಲೋಕಸಭೆ ಚುನಾವಣೆಯ ಕರ್ನಾಟಕದ ಮತಗಟ್ಟೆ ಸಮೀಕ್ಷೆ ಕುರಿತು ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೂ ಕ್ಷಣ ಕ್ಷಣಕ್ಕೂ ಒದಗಿಸಲಾಗುತ್ತಿದ್ದು, ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಬಹುದು.
ಕರ್ನಾಟಕದಲ್ಲಿ ಬಿಜೆಪಿ 20-22, ಜೆಡಿಎಸ್ 2-3, ಕಾಂಗ್ರೆಸ್ 3-5, ಸ್ಥಾನಗಳನ್ನು ಗಳಿಸಬಹುದು ಎಂದು ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಮುನ್ಸೂಚನೆಯಲ್ಲಿ ಅಂದಾಜಿಸಿದ್ದು. ಜೆಡಿಎಸ್‌ ಮೂರು ಗೆದ್ದು ಅದರಲ್ಲಿ ಪ್ರಜ್ವಲ್‌ ಕೂಡ ಇರಬಹುದು ಎಂದು ಹೇಳಲಾಗಿದೆ.

ಟಿವಿ 9 ನೀಡಿರುವ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಕರ್ನಾಟಕದಲ್ಲಿ, 18, ಜೆಡಿಎಸ್‌ ಗೆ 2 ಸ್ಥಾನ ಸಿಗಬಹುದು ಎಂದು ತಿಳಿಸಲಾಗಿದೆ. ಇದರಲ್ಲಿ ಹಾಸನವೂ ಇದೆ.

ರಿಪಬ್ಲಿಕ್‌ ಟಿವಿ- ಜನ್‌ ಕಿ ಬಾತ್‌ ಎಕ್ಸಿಟ್‌ ಪೋಲ್‌ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಎನ್‌ಡಿಎ 21ರಿಂದ 23 ಸ್ಥಾನ, ಇದರಲ್ಲಿ ಜೆಡಿಎಸ್‌ಗೆ 3 ಸ್ಥಾನ, ಕಾಂಗ್ರೆಸ್– 5ರಿಂದ 7 ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಿದೆ. ಇಂಡಿಯಾ ಟಿವಿ ಸಿಎನ್‌ಎಕ್ಸ್‌ ಮತಗಟ್ಟೆ ಕರ್ನಾಟಕದ ಸಮೀಕ್ಷೆಯಲ್ಲಿ ಎನ್‌ಡಿಎ 19 ರಿಂದ 25 ಸ್ಥಾನವಿದ್ದು, ಇದರಲ್ಲಿ ಜೆಡಿಎಸ್‌ಗೆ 3 ಸ್ಥಾನ ಸಿಗಬಹುದು. ಕಾಂಗ್ರೆಸ್‌ 4 ರಿಂದ 5 ಸ್ಥಾನ ಗಳಿಸಬಹುದು ಎಂದು ತಿಳಿಸಲಾಗಿದೆ. ಈ ಎರಡೂ ಸಮೀಕ್ಷೆಗಳಲ್ಲಿ ಹಾಸನವೂ ಇರುವುದರಿಂದ ಪ್ರಜ್ವಲ್‌ ಗೆಲ್ಲಬಹುದು ಎಂದು ಭವಿಷ್ಯ ನುಡಿಯಲಾಗಿದೆ.

ಹಾಸನದಲ್ಲಿ ಪ್ರಜ್ವಲ್‌ ವಿರುದ್ದದ ಲೈಂಗಿಕ ದೌರ್ಜನ್ಯದ ವಿಚಾರ ಚುನಾವಣೆಗೂ ಮುನ್ನ ಸಾರ್ವಜನಿಕವಾಗಿ ಮುನ್ನಲೆಗೆ ಬಂದಿರಲಿಲ್ಲ. ಆದರೆ ಪ್ರಜ್ವಲ್‌ ಅವರನ್ನು ಬದಲಿಸಿ ಎನ್‌ಡಿಎದಿಂದ ಬೇರೆ ಅಭ್ಯರ್ಥಿ ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆಗಳು ನಡೆದವು. ಆದರೆ ಅದಕ್ಕೆ ಅವಕಾಶ ನೀಡದೇ ಪ್ರಜ್ವಲ್‌ ಅವರನ್ನೇ ರೇವಣ್ಣ ಕುಟುಂಬ ಕಣಕ್ಕೆ ಇಳಿಯಲು ಯಶಸ್ವಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಪ್ರಜ್ವಲ್‌ ಪರ ಮತ ಯಾಚಿಸಿದ್ದರು. ಮತದಾನ ಇನ್ನು ಐದು ದಿನ ಇದೇ ಎಂದಾಗ ಹಾಸನದಲ್ಲಿ ಪೆನ್‌ಡ್ರೈವ್‌ ಹೊರ ಬಂದಿತ್ತು. ಆದರೆ ಮತದಾನ ನಡೆದ ಮರು ದಿನದಿಂದಲೇ ಇದು ತೀವ್ರ ಸ್ವರೂಪ ಪಡೆದಿತ್ತು.

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರದಲ್ಲಿ ಜೆಡಿಎಸ್‌ ಬಲ ಜೋರಾಗಿದೆ. ನಾಲ್ವರು ಜೆಡಿಎಸ್‌ ಶಾಸಕರು ಇದ್ದಾರೆ. ಇಬ್ಬರು ಬಿಜೆಪಿ ಶಾಸಕರಿದ್ದು. ಎನ್‌ಡಿಎ ಬಲವಿದೆ. ಕಡೂರು ಹಾಗೂ ಅರಸೀಕೆರೆಯಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಜೆಡಿಎಸ್‌ ಬಲ, ಸಂಘಟನೆ ಇರುವ ಕ್ಷೇತ್ರವಿದು. ಇದರ ನಡುವೆಯೇ ಪ್ರಜ್ವಲ್‌ ವಿರುದ್ದ ಗಂಭೀರ ಆರೋಪಗಳು ಕೇಳಿ ಬಂದು ಕ್ಷೇತ್ರದಲ್ಲಿ ಏನಾಗಬಹುದು ಎನ್ನುವ ಕುತೂಹಲ ಭಾರತ ಮಟ್ಟದಲ್ಲಿಯೇ ಇದೆ. ಚುನಾವಣೆ ಬಳಿಕ ಪ್ರಜ್ವಲ್‌ ವಿಚಾರವಾಗಿ ಜೆಡಿಎಸ್‌ ಮಾತ್ರವಲ್ಲದೇ ಬಿಜೆಪಿ ನಾಯಕರು ತೀವ್ರ ಹಿನ್ನಡೆ ಅನುಭವಿಸುವಂತಾಯಿತು. ಆದರೂ ಇಲ್ಲಿ ಪ್ರಜ್ವಲ್‌ ಗೆಲ್ಲುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇದರ ನಡುವೆ ಮತಗಟ್ಟೆ ಸಮೀಕ್ಷೆಗಳಲ್ಲಿ ಹಾಸನ ಮುನ್ನಡೆಯನ್ನು ಪಡೆದಿರುವುದು ಫಲಿತಾಂಶದ ದಿನದ ಮೇಲೆ ಗುರಿ ನೆಡುವಂತೆ ಮಾಡಿದೆ.

ಲೋಕಸಭೆ ಚುನಾವಣೆಯ ಕರ್ನಾಟಕದ ಮತಗಟ್ಟೆ ಸಮೀಕ್ಷೆ ಕುರಿತು ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೂ ಕ್ಷಣ ಕ್ಷಣಕ್ಕೂ ಒದಗಿಸಲಾಗುತ್ತಿದ್ದು, ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಬಹುದು.

(ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು)

Whats_app_banner