Exit Poll: ಕೇರಳದಲ್ಲಿ ಖಾತೆ ತೆರೆಯುವುದೇ ಬಿಜೆಪಿ? ಕಾಂಗ್ರೆಸ್, ಸಿಪಿಐಎಂ ನಡುವೆ ಪೈಪೋಟಿ, ಲೋಕ ಸಭೆ ಚುನಾವಣೆಯ ಕೇರಳ ಸ್ಟೋರಿ
Kerala Lok Sabha Election Predictions: ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಬಹುದೇ? ಕಾಂಗ್ರೆಸ್ ಮತ್ತು ಸಿಪಿಐನಲ್ಲಿ ಯಾರಿಗೆ ಹೆಚ್ಚು ಸ್ಥಾನ ದೊರಕಬಹುದು. ಕೇರಳದ ಎಕ್ಸಿಟ್ ಪೋಲ್ ಫಲಿತಾಂಶ ಹೇಗಿರಬಹುದು? ವಯನಾಡಿನಲ್ಲಿ ಮತದಾರರು ರಾಹುಲ್ ಗಾಂಧಿಗೆ ಗುಡ್‌ಬೈ ಹೇಳಬಹುದೇ? ಇಲ್ಲಿದೆ ವಿಶ್ಲೇಷಣೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಕೇರಳ ಕಬ್ಬಿಣದ ಕಡಲೆ. ಅಲ್ಲಿ ಈ ಬಾರಿ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ? ಒಂದಾದರೂ ಸೀಟು ಗೆಲ್ಲಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. 2019ರ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಯನಾಡಿನಲ್ಲಿ ಭರ್ಜರಿ 4 ಲಕ್ಷ ಮತಗಳಿಂದ ಗೆಲುವು ಪಡೆದಿದ್ದರು. ಆದರೆ, ಈ ಬಾರಿ ರಾಹುಲ್ ಗಾಂಧಿ ಸಿಪಿಐನ ಅನ್ನಿ ರಾಜಾ ಮತ್ತು ಕೇರಳದ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಎದುರು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಇತರೆ ಪಕ್ಷಗಳ ಜತೆ ಸೇರಿ ಇಂಡಿಯಾ ಎಂಬ ಮೈತ್ರಿಕೂಟ ರಚಿಸಿದ್ದು ಎಲ್ಲರಿಗೂ ಗೊತ್ತು. ಈ ಮೈತ್ರಿ ಕೂಟದಲ್ಲಿ ಸಿಪಿಐ ಕೂಡ ಇದೆ. ಇದೇ ಸಿಪಿಐ ರಾಹುಲ್ ಗಾಂಧಿಗೆ ಎದುರಾಗಿ ಈ ಬಾರಿ ಸ್ಪರ್ಧಿಸಿದೆ. ಇವರಿಬ್ಬರ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುವುದೇ? ಬಿಜೆಪಿಗೆ ಲಾಭವೂ ಇಲ್ಲ ನಷ್ಟವೂ ಇಲ್ಲ ಎನ್ನುತ್ತಾರೆ ರಾಜಕೀಯ ತಜ್ಞರು.
ಕೇರಳದಲ್ಲಿ ಖಾತೆ ತೆರೆಯುವುದೇ ಬಿಜೆಪಿ?
ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಎಂ ನಡುವೆ ಪ್ರಮುಖ ಸ್ಪರ್ಧೆ ನಡೆಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅಲ್ಲೂ ಒಂದೆರಡು ಸೀಟುಗಳನ್ನು ಗೆಲ್ಲುವ ಹವಣಿಕೆಯಲ್ಲಿ ಬಿಜೆಪಿ ಇದೆ. ತ್ರಿಶೂರ್, ತಿರುವನಂತಪುರಂ ಮುಂತಾದ ಕಡೆ ಗೆಲುವು ಪಡೆಯುವ ಹವಣಿಕೆಯಲ್ಲಿದೆ. ತ್ರಿಶೂರ್‌ನಲ್ಲಿ ನಟ ಕಂ ರಾಜಕಾರಣಿ ಸುರೇಶ್ ಗೋಪಿಯನ್ನು ಬಿಜೆಪಿ ನಿಲ್ಲಿಸಿದೆ. ಇವರು ಕಾಂಗ್ರೆಸ್ ಕೆ ಮುರಲೀಧರನ್ ಎದುರು ಸ್ಪರ್ಧಿಸಿದ್ದಾರೆ. ಸಿಪಿಐನ ವಿಎಸ್ ಸುನಿಲ್ ಕುಮಾರ್ ಕೂಡ ಸುರೇಶ್ ಗೋಪಿಯ ಎದುರು ಇದ್ದಾರೆ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಮುರಳೀಧರನ್ ಗೆಲುವು ಪಡೆದಿದ್ದರು. ಹೀಗಿದ್ದರೂ, ತ್ರಿಶೂರ್ ಮೂಲಕ ಬಿಜೆಪಿ ಖಾತೆ ತೆರೆಯುವ ಕನಸಿನಲ್ಲಿ ಬಿಜೆಪಿ ಇದೆ. ಕೇರಳದಲ್ಲಿ ಇಲ್ಲಿಯವರೆಗೆ ಬಿಜೆಪಿ ಗೆದ್ದಿಲ್ಲ. ಈ ಬಾರಿ ಸುರೇಶ್ ಗೋಪಿ ಮೂಲಕ ಗೆಲುವಿನ ಕನಸು ಕಾಣುತ್ತಿದೆ. 2019ರಲ್ಲಿ ಗೋಪಿ ಶೇಕಡ 28.19ರಷ್ಟು ಪಾಲು ಮತಗಳನ್ನು ತನ್ನದಾಗಿಸಿಕೊಂಡಿದದ್ದರು. ಆ ಸಮಯದಲ್ಲಿ ಸಿಪಿಐ ಶೇಕಡ 30.85 ಮತ ಪಡೆದಿತ್ತು. ಟಿಎನ್ ಪ್ರತಾಪನ್ ಶೇಕಡ 39.83ರಷ್ಟು ಮತ ಪಡೆದಿದ್ದರು. ಈ ಬಾರಿ ಗೋಪಿ ಹೆಚ್ಚು ಮತಗಳನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.
ಕೇರಳದಲ್ಲಿ ಯಾರು ಗೆಲ್ಲಬಹುದು?
ವಯನಾಡಿನಲ್ಲಿ ಕಾಂಗ್ರೆಸ್‌ನಿಂದ ರಾಹುಲ್, ಎಡಪಕ್ಷದಿಂದ ಅನ್ನಿ ರಾಜಾ, ಬಿಜೆಪಿಯಿಂದ ಕೆ ಸುರೇಂದ್ರನ್ ಸ್ಪರ್ಧಿಸಿದ್ದಾರೆ. ತ್ರಿಶೂರ್‌ನಲ್ಲಿ ಕಾಂಗ್ರೆಸ್‌ನ ಕೆ. ಮುರಳೀಧರನ್‌ಗೆ ಎದುರಾಗಿ ಎಡಪಕ್ಷದಿಂದ ವಿಎಸ್ ಸುನಿಲ್ ಕುಮಾರ್, ಬಿಜೆಪಿಯಿಂದ ಸುರೇಶ್ ಗೋಪಿ ಇದ್ದಾರೆ. ಅಟ್ನಿಗಲ್‌ನಲ್ಲಿ ಕಾಂಗ್ರೆಸ್‌ನ ಅಡೂರ್ ಪ್ರಕಾಶ್, ಸಿಪಿಐನ ವಿ ಜಾಯ್, ಬಿಜೆಪಿಯ ವಿ ಮುರಳೀಧರನ್ ಸ್ಪರ್ಧಿಸಿದ್ದಾರೆ. ಪಥನಮಿಟ್ಟದಲ್ಲಿ ಕಾಂಗ್ರಸ್‌ನ ಆಂಟೋ ಆಂಟೋನಿ, ಸಿಪಿಐನ ಥಾಮಸ್ ಐಸಕ್, ಬಿಜೆಪಿಯ ಅನಿಲ್ ಆಂಟೋನಿ ಸ್ಪರ್ಧಿಸಿದ್ದಾರೆ. ತಿರುವನಂತಪುರಂನಲ್ಲಿ ಕಾಂಗ್ರೆಸ್‌ನ ಶಶಿ ತರೂರು ಈ ಬಾರಿ ಸಿಪಿಐನ ಪನ್ನಿಯನ್ ರವೀಂದ್ರನ್ ಮತ್ತು ಬಿಜೆಪಿಯ ರಾಜೀವ್ ಚಂದ್ರಶೇಖರ್‌ರಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.
ಬಿಜೆಪಿಗೆ ಕೇರಳದಲ್ಲಿ ಇರುವ ಇನ್ನೊಂದು ನಿರೀಕ್ಷೆ ತಿರುವನಂತಪುರ. ಶಶಿ ತರೂರು ಎದುರು ಕೇಂದ್ರ ಸಚಿವ ರಾಜೀವ್ ಚಂದ್ರಶಶೇಖರ್ ನಿಂತಿದ್ದಾರೆ. ಸಿಪಿಐನ ಪನ್ನಿಯನ್ ರವೀಂದ್ರನ್ ಕೂಡ ಇದ್ದಾರೆ. ಹೀಗಾಗಿ ತಿರುವನಂತಪುರಂನಲ್ಲಿ ಈ ಚುನಾವಣೆಯಲ್ಲಿ ಭಯಂಕರ ಫೈಟಿಂಗ್ ಖಾತ್ರಿ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಲ್ಪ ಮತಗಳ ಅಂತರಗಳಲ್ಲಿ ಯಾರು ಗೆಲುವು ಪಡೆಯಲಿದ್ದಾರೆ ಎಂಬ ನಿರೀಕ್ಷೆ ಇದೆ. ಇಂದಿನ ಎಕ್ಸಿಟ್ ಪೋಲ್ ಈ ಕುರಿತು ಯಾವ ಫಲಿತಾಂಶ ಹೊಂದಿದೆ ಎಂಬ ನಿರೀಕ್ಷೆಯೂ ಇದೆ. ಶಶಿ ತರೂರು ತುಂಬಾ ಸ್ಟ್ರಾಂಗ್ ಎಂಬ ಅಭಿಪ್ರಾಯ ನಿಮ್ಮಲ್ಲಿ ಇರಬಹುದು. ಹೌದು, ಅವರು ಕಳೆದ ಹದಿನೈದು ವರ್ಷಗಳಿಂದ ತಿರುವನಂತಪುರದಲ್ಲಿ ಗೆಲುವು ಪಡೆಯುತ್ತ ಬಂದಿದ್ದಾರೆ. ಶಶಿ ತರೂರು ಮೂರು ಬಾರಿ ಸಂಸದರಾಗಿದ್ದರೂ ತಿರುವನಂತಪುರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗಿಲ್ಲ ಎಂಬ ಬೇಸರ ಮತದಾರರಿಗೆ ಇದೆಯಂತೆ. ಹೀಗಾಗಿ, ಈ ಬಾರಿ ಕೇರಳಿಗರು ರಾಜೀವ್ ಚಂದ್ರಶೇಖರ್ ಕೈ ಹಿಡಿಯಬಹುದೇ? ಕಾದುನೋಡಬೇಕಿದೆ.