ಟಿಆರ್‌ಪಿಯಲ್ಲಿ ಕಂಬ್ಯಾಕ್ ಮಾಡಿದ ಪುಟ್ಟಕ್ಕನ ಮಕ್ಕಳು, ಸಾರ್ವಕಾಲಿಕ ಕುಸಿತ ಕಂಡ ಸೀತಾ ರಾಮ! ಬಿಗ್‌ಬಾಸ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು?
ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್ ಆರಂಭವಾಗಿದೆ. ಇತ್ತ ಬೇರೆ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳು ಅಬ್ಬರಿಸುತ್ತಿವೆ. ಈ ನಡುವೆ ಸೀರಿಯಲ್‌ಗಳೂ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಹೊಸತನ್ನು ಕೊಡುತ್ತಿವೆ. ಇದೀಗ ಈ ಎಲ್ಲ ಶ್ರಮಕ್ಕೆ ಸಿಕ್ಕ ಟಿಆರ್‌ಪಿ ಎಷ್ಟು? ಬಿಗ್‌ಬಾಸ್‌ನಿಂದ ಯಾವೆಲ್ಲ ಸೀರಿಯಲ್‌ಗಳಿಗೆ ಹೊಡೆತ ಬಿದ್ದಿದೆ? ಇಲ್ಲಿದೆ ವಿವರ.
Kannada Serial and Reality Show TRP: ಕನ್ನಡ ಕಿರುತೆರೆಯಲ್ಲೀಗ ಹಬ್ಬದ ಸೀಸನ್. ಅಂದರೆ, ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ 11ನೇ ಸೀಸನ್ ಶುರುವಾಗಿದೆ. ಕಳೆದ ತಿಂಗಳ ಸೆ. 29ರಂದು ಗ್ರ್ಯಾಂಡ್ ಓಪನಿಂಗ್ ಮೂಲಕ ಆರಂಭವಾಗಿದ್ದ ಬಿಗ್ ಬಾಸ್ ಶೋ, ಇದೀಗ ಎರಡು ವಾರದ ಸನಿಹಕೆ ಬಂದು ನಿಂತಿದೆ. ವೀಕ್ಷಕರಿಂದಲೂ ಶೋಗೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಕಿತ್ತಾಟ, ಭಿನ್ನಾಭಿಪ್ರಾಯದ ಮೂಲಕವೇ ಆರಂಭವಾದ ಬಿಗ್ ಬಾಸ್ ಕನ್ನಡ 11ರ ಶೋ ಆರಂಭವಾಗಿದ್ದು, ಮೊದಲ ವಾರ ಯಮುನಾ ಶ್ರೀನಿಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದೀಗ ಇದೇ ಶೋ ಸೇರಿ ಕಿರುತೆರೆಯ ಸೀರಿಯಲ್ ಮತ್ತು ರಿಯಾಲಿಟಿ ಶೋಗಳ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ.
ಬಿಗ್‌ಬಾಸ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು?
ಬಹು ನಿರೀಕ್ಷೆಯೊಂದಿಗೆ ಶುರುವಾದ ಬಿಗ್ ಬಾಸ್ ಕನ್ನಡ ಸೀಸನ್ 11, ಅಂದುಕೊಂಡಂತೆ ಗ್ರ್ಯಾಂಡ್ ಓಪನಿಂಗ್ ದಿನದಂದು ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿದೆ. ಕಿಚ್ಚ ಸುದೀಪ್ ಒಟ್ಟು 17 ಮಂದಿಯನ್ನು ಮನೆಗೆ ಸ್ವಾಗತಿಸಿದ್ದಾರೆ. ಹೀಗೆ ಕಲರ್‌ಫುಲ್ ಆಗಿಯೇ, ಹಾಡುಗಳ ಮೂಲಕ ನಡೆದ ಈ ಗ್ರ್ಯಾಂಡ್ ಓಪನಿಂಗ್ ದಿನವಾದ ಭಾನುವಾರ (ಸೆ. 29) 9.9 ಟಿಆರ್‌ಪಿ ಸಿಕ್ಕಿದೆ. ಅಲ್ಲಿಂದ ವಾರದ ದಿನಗಳಲ್ಲಿ 6.9 ಟಿಆರ್‌ಪಿ ಪಡೆದುಕೊಂಡಿದೆ ಬಿಗ್ ಬಾಸ್.
ಎರಡನೇ ವಾರ ವಾರಾಂತ್ಯ ಶನಿವಾರ ಮತ್ತು ಭಾನುವಾರ ಕಿಚ್ಚನ ಪಂಚಾಯ್ತಿಗೆ 8.6 ಟಿಆರ್‌ಪಿ ಸಿಕ್ಕರೆ, ವಾರದ ದಿನಗಳಲ್ಲಿ 6.0 ಟಿಆರ್‌ಪಿ ಸಂಪಾದಿಸಿದೆ. ಈ ಮೂಲಕ ಒಳ್ಳೆಯ ಆರಂಭವನ್ನು ಪಡೆದುಕೊಂಡಿದೆ. ದಿನ ಕಳೆದಂತೆ, ಬಿಗ್‌ಬಾಸ್ ಮನೆಯಲ್ಲಿ ಜನ ಕಡಿಮೆ ಆಗಲಿದ್ದಾರೆ. ಮನಸುಗಳು ಮತ್ತಷ್ಟು ಬಿಗಿಯಾಗಲಿವೆ. ಸದ್ಯದ ಪರಿಸ್ಥಿತಿ ಗಮನಿಸಿದರೆ, ಕಳೆದ ಬಿಗ್ ಬಾಸ್ ಸೀಸನ್ 10ರ ಟಿಆರ್‌ಪಿ ದಾಖಲೆಯನ್ನು ಈ ಸಲದ ಶೋ ಮುರಿಯುತ್ತಾ ಎಂಬುದನ್ನು ಕಾದು ನೋಡಬೇಕು.
ಜೀ ಕನ್ನಡದ ಶೋಗಳ ಟಿಆರ್‌ಪಿ ಹೇಗಿದೆ?
ಜೀ ಕನ್ನಡದ ವಾರಾಂತ್ಯದ ರಿಯಾಲಿಟಿ ಶೋಗಳಾದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಶೋ ಈ ವಾರ ಡಿಸೆಂಟ್ ಟಿಆರ್‌ಪಿ ಪಡೆದುಕೊಂಡಿವೆ. ಡಿಕೆಡಿ ಈ ವಾರ 7.0ಟಿಆರ್‌ಪಿ ಪಡೆದರೆ, ಕಾಮಿಡಿ ಕಿಲಾಡಿಗಳು 6.7 ಟಿಆರ್‌ಪಿ ಗಿಟ್ಟಿಸಿಕೊಂಡಿದೆ.
ಕನ್ನಡ ಕಿರುತೆರೆಯಯಲ್ಲಿ ಯಾರು ನಂಬರ್ 1
ಕಳೆದ ವಾರ ಮಹಾ ಟ್ವಿಸ್ಟ್ ಸಿಕ್ಕ ಹಿನ್ನೆಲೆಯಲ್ಲಿ ಅಮೃತಧಾರೆ ಸೀರಿಯಲ್ ಅತಿ ಹೆಚ್ಚು ಟಿಆರ್‌ಪಿ ಪಡೆದುಕೊಂಡು, ಟಾಪ್ 1 ಸ್ಥಾನದಲ್ಲಿತ್ತು. ಆದರೆ, ಈ ವಾರ 7.4 ರೇಟಿಂಗ್ ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಎಂದಿನಂತೆ ಮೊದಲ ಸ್ಥಾನದಲ್ಲಿ ಇರುತ್ತಿದ್ದ ಲಕ್ಷ್ಮೀ ನಿವಾಸ ಸೀರಿಯಲ್ 8.5 ಟಿಆರ್‌ಪಿ ಪಡೆದು ಮೊದಲ ಸ್ಥಾನಕ್ಕೆ ಆಗಮಿಸಿದೆ. ಅಚ್ಚರಿಯ ಸಂಗತಿ ಎಂದರೆ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಈ ವಾರ 7.5 ಟಿಆರ್‌ಪಿ ಪಡೆದು ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಸಾರ್ವಕಾಲಿಕ ಕುಸಿತ ಕಂಡ ಸೀತಾ ರಾಮ
ಈ ಮೊದಲು ಸದಾ ಎರಡನೇ ಸ್ಥಾನದಲ್ಲಿ ಇರುತ್ತಿದ್ದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಈ ವಾರ 7.0 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್ 6.7 ಟಿಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ. ಜೀ ಕನ್ನಡದ ಮತ್ತೊಂದು ಸೀರಿಯಲ್ ಅಣ್ಣಯ್ಯ 6.6 ಟಿಆರ್‌ಯೊಂದಿಗೆ ಆರನೇ ಸ್ಥಾನದಲ್ಲಿದೆ. ಭಾಗ್ಯಲಕ್ಷ್ಮೀ 5.9 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದ್ದರೆ, ನಿನಗಾಗಿ 5.3 ಯೊಂದಿಗೆ ಎಂಟನೇ ಸ್ಥಾನದಲ್ಲಿದೆ. ರಾಮಾಚಾರಿ 6.0 ಟಿಆರ್‌ಪಿ ಪಡೆದು ಒಂಭತ್ತನೇ ಸ್ಥಾನದಲ್ಲಿದೆ. ಬಿಗ್ ಬಾಸ್ ಎಫೆಕ್ಟ್‌ನಿಂದಾಗಿ ಸೀತಾ ರಾಮ ಸೀರಿಯಲ್ ಕೇವಲ 5 ಟಿಆರ್‌ಪಿ ಪಡೆದು 10ನೇ ಸ್ಥಾನಕ್ಕೆ ಕುಸಿದಿದೆ.
ವಿಭಾಗ