ಕಿಚ್ಚ ಸುದೀಪ್ ಮ್ಯಾಕ್ಸ್, ಮೋಹನ್ ಲಾಲ್ ಬರೋಜ್ ಮಾತ್ರವಲ್ಲ; ಡಿ 25ರ ಕ್ರಿಸ್‌ಮಸ್‌ಗೆ ಚಿತ್ರಮಂದಿರಗಳಲ್ಲಿ 4 ಸಿನಿಮಾ ಬಿಡುಗಡೆ
December 25 Christmas movie releases: ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬದ ರಜೆಯ ದಿನ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್, ಮೋಹನ್ ಲಾಲ್ ನಟನೆ ಮತ್ತು ನಿರ್ದೇಶನದ ಬರೋಜ್ ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳು ಬಿಡುಗಡೆಯಾಗಲಿವೆ.
December 25 Christmas movie releases: ಕ್ರಿಸ್‌ಮಸ್ ಹಬ್ಬದ ರಜಾ ದಿನವಾದ ಡಿಸೆಂಬರ್ 25ರಂದು ಕನ್ನಡ, ಮಲಯಾಳಂ, ತೆಲುಗು, ಹಿಂದಿಯಲ್ಲಿ ತಲಾ ಒಂದರಂತೆ ನಾಲ್ಕು ಪ್ರಮುಖ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಕೆಲವು ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು, ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿವೆ. ಇವುಗಳಲ್ಲಿ ಸುದೀಪ್ ನಟನೆಯ ಮ್ಯಾಕ್ಸ್ ಮತ್ತು ಮೋಹನ್ ಲಾಲ್ ನಟನೆ ಮತ್ತು ನಿರ್ದೇಶನದ ಬರೋಜ್ ಸಿನಿಮಾಗಳು ಸೇರಿವೆ. ಡಿಸೆಂಬರ್ 25ರಂದು ಬಿಡುಗಡೆಯಾಗುವ ಸಿನಿಮಾಗಳ ವಿವರ ಇಲ್ಲಿದೆ.
ಮ್ಯಾಕ್ಸ್ (ಕನ್ನಡ)
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ರಂದು ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಸುದೀಪ್ ನಟನೆಯ ಮ್ಯಾಕ್ಸ್ ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎಂದರೆ ತಪ್ಪಾಗದು. 2022ರಲ್ಲಿ ವಿಕ್ರಾಂತ್ ರೋಣ ಬಿಡುಗಡೆಯಾದ ಬಳಿಕ ಸುದೀಪ್ ನಟಿಸಿದ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಸುದೀಪ್ ಅಭಿಮಾನಿಗಳು ಮ್ಯಾಕ್ಸ್‌ಗಾಗಿ ಸಾಕಷ್ಟು ದಿನಗಳಿಂದ ಕಾಯುತ್ತಿದ್ದರು. ಮ್ಯಾಕ್ಸ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮತ್ತೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಎನ್ನುವುದು ಮೂಲ ಕನ್ನಡ ಸಿನಿಮಾ ಎನ್ನುವುದು ನಿಜ. ಆದರೆ, ಈ ಸಿನಿಮಾ ನಿರ್ಮಿಸುತ್ತಿರುವುದು ತಮಿಳು ಪ್ರೊಡ್ಯುಸರ್ಸ್. ವಿಜಯ್ ಕಾರ್ತಿಕೇಯ ನಿರ್ದೇಶನದ ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈಗ ಮ್ಯಾಕ್ಸ್ ಸಿನಿಮಾ ಐದು ಭಾಷೆಯ ಬದಲು ಕೇವಲ ಮೂರು ಭಾಷೆ ಅಂದರೆ, ಕನ್ನಡ, ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಲಿದೆ.
ಬೇಬಿ ಜಾನ್ (ಹಿಂದಿ)
ವರುಣ್ ಧವನ್ ಅಭಿನಯದ ಬೇಬಿ ಜಾನ್ ಸಿನಿಮಾ ಕೂಡ ಕ್ರಿಸ್‌ಮಸ್ ಹಬ್ಬದಂದು ಬಿಡುಗಡೆಯಾಗುತ್ತಿದೆ. ಇದು ಜಾಕಿ ಶ್ರಾಫ್ ಮತ್ತು ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ ಸಿನಿಮಾ. ವರುಣ್ ಧವನ್ ಈ ಚಿತ್ರದಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೇಬಿ ಜಾನ್ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ , ವಮಿಕಾ ಮತ್ತು ರಾಜ್ಪಾಲ್ ಯಾದವ್ ಕೂಡ ನಟಿಸಿದ್ದಾರೆ.
ಬರೋಜ್ (ಮಲಯಾಳಂ)
ಮೋಹನ್‌ಲಾಲ್ ನಿರ್ದೇಶನ ಮತ್ತು ನಟನೆಯ ಬರೋಜ್ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಸುಮಾರು 40 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಮೊದಲ ಸಲ ಬರೋಜ್ ಮೂಲಕ ಮೋಹನ್ ಲಾಲ್ ಡೈರೆಕ್ಟರ್ ಆಗಿದ್ದಾರೆ. ಬರೋಜ್ ಚಿತ್ರವು ಮೇಕಿಂಗ್ ಮೂಲಕವೇ ಈ ಚಿತ್ರ ಗಮನ ಸೆಳೆದಿದೆ. ಯಾವುದೋ ಬಾಲಿವುಡ್ ಸಿನಿಮಾದಂತೆ ಈ ಸಿನಿಮಾ ಭಾಸವಾಗುತ್ತಿದೆ. ಆಸಕ್ತಿದಾಯಕ ಕಥೆಯನ್ನೂ ಈ ಸಿನಿಮಾ ಹೊಂದಿರುವ ಸೂಚನೆಯಿದೆ. ಕನ್ನಡದಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ.
ಶ್ರೀಕಾಕುಳಂ ಶೆರ್ಲಾಕ್‌ಹೋಮ್ಸ್ (ತೆಲುಗು)
ಶ್ರೀಕಾಕುಳಂ ಶೆರ್ಲಾಕ್‌ಹೋಮ್ಸ್ ಎಂಬ ತೆಲುಗು ಕಾಮಿಡಿ ಸಿನಿಮಾವು ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ. ಇದು ಬರಹಗಾರ ಮೋಹನ್ ನಿರ್ದೇಶನದ ಸಿನಿಮಾ. ಚಿತ್ರದಲ್ಲಿ ವೆನ್ನೆಲ ಕಿಶೋರ್ ಮತ್ತು ಅನನ್ಯ ನಾಗಲ್ಲ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿಯಾ ಗೌತಮ್, ರವಿತೇಜ ಮಹದಾಸ್ಯಮ್, ಮುರಳೀಧರ್ ಗೌಡ್, ಬಾಹುಬಲಿ ಪ್ರಭಾಕರ್, ಭದ್ರಂ, ಅನೀಶ್ ಕುರುವಿಲ್ಲ, ನಾಗ ಮಹೇಶ್ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುನಿಲ್ ಕಶ್ಯಪ್ ಸಂಗೀತ ಸಂಯೋಜಿಸಿದ್ದಾರೆ. ಮಲ್ಲಿಕಾರ್ಜುನ್ ನರಗಾಣಿ ಅವರ ಛಾಯಾಗ್ರಹಣ ಮತ್ತು ಅವಿನಾಶ್ ಗುಲ್ಲಿಂಕಾ ಸಂಕಲನವಿದೆ. ಶ್ರೀ ಗಣಪತಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆನ್ನಪುಸ ರಮಣ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.