New Year Resolution: ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಿ; ವರ್ಷಪೂರ್ತಿ ಸಂತೋಷ, ಯಶಸ್ಸು ತುಂಬಿರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  New Year Resolution: ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಿ; ವರ್ಷಪೂರ್ತಿ ಸಂತೋಷ, ಯಶಸ್ಸು ತುಂಬಿರುತ್ತೆ

New Year Resolution: ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಿ; ವರ್ಷಪೂರ್ತಿ ಸಂತೋಷ, ಯಶಸ್ಸು ತುಂಬಿರುತ್ತೆ

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುತ್ತಿದೆ. ಜನವರಿ ಒಂದನ್ನು ಸ್ವಾಗತಿಸಲು ಜನರು ಸಜ್ಜಾಗುತ್ತಿದ್ದಾರೆ. ಹೊಸ ವರ್ಷವನ್ನು ಹೊಸದಾಗಿ ಆರಂಭಿಸಬೇಕು,ನೂತನ ಸಂಕಲ್ಪ ಕೈಗೊಳ್ಳಬೇಕು,2025 ಪೂರ್ತಿ ಸಂತೋಷ,ಸಂಭ್ರಮದಿಂದ ಕೂಡಿರಬೇಕು ಎಂಬ ಅಭಿಲಾಷೆ ಎಲ್ಲರಿಗೂ ಇರುತ್ತದೆ. ಹೊಸ ವರ್ಷದ ಮೊದಲ ದಿನವನ್ನು ನೀವು ಹೇಗೆ ಕಳೆಯಬಹುದು, ಇಲ್ಲಿದೆ ಟಿಪ್ಸ್.

ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಿ; ವರ್ಷಪೂರ್ತಿ ಫಲ ಕಾಣುವಿರಿ
ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಿ; ವರ್ಷಪೂರ್ತಿ ಫಲ ಕಾಣುವಿರಿ (PC: Pinterest )

2024 ವರ್ಷ ಇನ್ನೇನು ಮುಗಿಯುತ್ತಾ ಬಂತು. ಹಲವು ಏರು-ಪೇರು, ಸಿಹಿ-ಕಹಿ ನೆನಪುಗಳೊಂದಿಗೆ ಈ ವರ್ಷಕ್ಕೆ ಗುಡ್‌ಬೈ ಹೇಳಿ, ಹೊಸವರ್ಷ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ. 2025ರಲ್ಲಿ ಹೊಸತೇನಾದರೂ ಮಾಡಬೇಕು ಎಂಬ ನಿರ್ಧಾರ ನಮ್ಮದಾಗಿರುತ್ತದೆ. ಹೊಸ ವರ್ಷದ ಮೊದಲ ದಿನ ನಾವೇನು ಮಾಡುತ್ತೇವೆಯೋ, ಅದರ ಫಲಿತಾಂಶ ವರ್ಷಪೂರ್ತಿ ಇರುತ್ತದೆ ಎಂಬ ಮಾತಿದೆ. ಅದು ಸತ್ಯವೂ ಹೌದು. ಹೇಗೆ ನಾವು ವರ್ಷದ ಮೊದಲ ದಿನವನ್ನು ಆಚರಿಸುತ್ತೇವೆಯೋ, ಅದರ ಪ್ರಭಾವ ಆ ವರ್ಷ ನಮ್ಮ ಮೇಲಿರುತ್ತದೆ. 2025ನ್ನು ನಿಮ್ಮ ವರ್ಷವಾಗಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ. ಖಂಡಿತ ಸಂತೋಷ, ಯಶಸ್ಸು ನಿಮ್ಮದಾಗುತ್ತದೆ.

ಹೊಸವರ್ಷ 2025ನ್ನು ಹೀಗೆ ಸ್ವಾಗತಿಸಿ

ಹೊಸದಿನವನ್ನು ಪೂಜೆಯೊಂದಿಗೆ ಆರಂಭಿಸಿ: ವರ್ಷದ ಮೊದಲ ದಿನ ಖಂಡಿತವಾಗಿಯೂ ನಮಗೆ ಹೊಸ ಹುರುಪನ್ನು ಕೊಡುವ ಜತೆಗೆ, ಕೆಲವೊಂದು ಭರವಸೆಗಳನ್ನು ಕೂಡ ನೀಡುತ್ತದೆ. ಅಂದು ನೀವು ಸಮೀಪದ ಮಂದಿರ, ಚರ್ಚ್ ಅಥವಾ ಮಸೀದಿಗೆ ಹೋಗಿ, ದೇವರ ಪೂಜೆಯೊಂದಿಗೆ ಹೊಸ ದಿನವನ್ನು ಆರಂಭಿಸಿ. ಸಾಧ್ಯವಾಗದಿದ್ದರೆ, ಮನೆಯಲ್ಲೇ ದೇವರ ಪೂಜೆ ಮಾಡಿ, ಪ್ರಾರ್ಥಿಸಿ. ಅಂದುಕೊಂಡ ಕೆಲಸಗಳೆಲ್ಲವೂ ಈ ವರ್ಷ ಸಾಂಗವಾಗಿ ನೆರವೇರಲಿ ಎಂದು ದೇವರನ್ನು ಕೇಳಿಕೊಳ್ಳಿ. ಹಾಗೆಯೇ, ನಿಮಗೆ, ನಿಮ್ಮ ಕುಟುಂಬ ಮತ್ತು ಬಂಧುಮಿತ್ರರಿಗೆ ಈ ವರ್ಷ ಸಕಲ ಆಯುಷ್ಯ, ಆರೋಗ್ಯ ಮತ್ತು ಸಂಪತ್ತು ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ.

ಒಂದು ಗುರಿ ಇರಲಿ: ಈ ವರ್ಷವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಅಂದುಕೊಂಡಿದ್ದರೆ, ಅದರ ಸಾಧನೆಗೆ ಗುರಿಯೊಂದನ್ನು ಗೊತ್ತುಪಡಿಸಿ. ಮೊದಲ ದಿನದಿಂದಲೇ ಗುರಿ ಸಾಧನೆಗೆ ಎಲ್ಲ ಪ್ರಯತ್ನ ಮಾಡಿ. ಜತೆಗೆ ಉಳಿತಾಯವನ್ನು ಆರಂಭಿಸಿ, ಅನಗತ್ಯ ಖರ್ಚು, ಶಾಪಿಂಗ್‌ಗೆ ಕಡಿವಾಣ ಹಾಕಿ. ಮೊದಲ ದಿನವೇ ಈ ಸಂಕಲ್ಪ ಮಾಡಿ, ವರ್ಷಪೂರ್ತಿ ಪಾಲಿಸುವ ದೃಢ ನಿರ್ಧಾರ ನಿಮ್ಮದಾಗಿರಲಿ.

ಅಗತ್ಯವಿದ್ದವರಿಗೆ ಸಹಾಯ ಮಾಡಿ: ನಿಮ್ಮ ಕುಟುಂಬ, ಆಪ್ತರ ಒಳಿತನ್ನು ಬಯಸುವ ಜತೆಗೇ, ಸಾಧ್ಯವಾದರೆ ಇತರರಿಗೆ ಅಗತ್ಯ ಸಹಾಯ ಮಾಡಿ. ಹಣಕಾಸಿನ ಸಹಾಯವೇ ಮಾಡಬೇಕೆಂದಿಲ್ಲ. ಶಾಲೆಯ ಫೀಸ್, ಔಷಧ, ಆಹಾರ, ಉಡುಪು ಹೀಗೆ ವಿವಿಧ ರೀತಿಯಲ್ಲಿ ನೀವು ಕೊಡುಗೆ ನೀಡಬಹುದು. ಹಣದ ಬದಲು, ಅವಶ್ಯಕ ವಸ್ತು ಅಗತ್ಯವಿರುವವರಿಗೆ ನೆರವಾಗುತ್ತದೆ. ಇದರಿಂದ ನಿಮಗೂ ನೆಮ್ಮದಿ ದೊರೆಯುತ್ತದೆ. ಸಹಾಯ ಪಡೆದವರ ಕೃತಜ್ಞತೆ, ಆಶೀರ್ವಾದವೂ ದೊರೆಯುತ್ತದೆ.

ಹೊಸ ನಿರ್ಧಾರ ಕೈಗೊಳ್ಳಿ: ನಿಮ್ಮ ಯಶಸ್ಸಿಗೆ ಯಾವುದು ಪೂರಕವೋ, ಅದಕ್ಕೆ ಹೊಂದುವ ಸೂಕ್ತಿ ನಿರ್ಧಾರ ಕೈಗೊಳ್ಳಿ. ದುರಾಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಹೊಸ ಆರೋಗ್ಯಕರ ಅಭ್ಯಾಸ ಮೈಗೂಡಿಸಿಕೊಳ್ಳಿ, ಮನಸ್ಸಿಗೆ ಉಲ್ಲಾಸ, ದೇಹಕ್ಕೆ ಆರೋಗ್ಯ ನೀಡುವ ಹವ್ಯಾಸದತ್ತ ಗಮನ ಹರಿಸಿ.

ನಿಮ್ಮನ್ನು ನೀವು ಪ್ರೀತಿಸಿ: ಹೊಸ ವರ್ಷದ ಮೊದಲ ದಿನ ನೀವು ಮಾಡಬೇಕಾದ ಮತ್ತೊಂದು ಪ್ರಮುಖ ಕೆಲಸವೆಂದರೆ, ನಿಮ್ಮನ್ನು ನೀವು ಪ್ರೀತಿಸಲಾರಂಭಿಸಿ. ನಿಮಗೆಂದೇ ಇಂತಿಷ್ಟು ಸಮಯ ನೀಡಿ. ಯೋಗ, ಧ್ಯಾನ, ವರ್ಕೌಟ್ ಎಂದು ದಿನಕ್ಕೆ ಕನಿಷ್ಠ 30 ರಿಂಜ 45 ನಿಮಿಷ ಮೀಸಲಿಡಿ. ಮನಸ್ಸು ಮತ್ತು ದೇಹ ಉಲ್ಲಾಸವಾಗಿದ್ದರೆ, ಖಂಡಿತವಾಗಿಯೂ ನೀವು ನಿಗದಿತ ಗುರಿಯನ್ನು ತಲುಪುತ್ತೀರಿ. ಅದಕ್ಕಾಗಿ ಆರೋಗ್ಯಕರ ಜೀವನಶೈಲಿ ರೂಪಿಸುವ ನಿರ್ಧಾರವನ್ನು ಜನವರಿ 1ರಂದೇ ರೂಢಿಸಿಕೊಳ್ಳಿ. ವರ್ಷಪೂರ್ತಿ ಅದರಂತೆ ನಡೆದುಕೊಳ್ಳಿ.

Whats_app_banner