ಕರಾವಳಿ ಉತ್ಸವಕ್ಕೆ ಹೆಲಿಕಾಪ್ಟರ್ ತರಿಸಿದ್ದೀರಾ, ಸರ್ಕಾರಿ ಶಾಲಾ ಮಕ್ಕಳು ನಾವು, ಹಾರಲು ದುಡ್ಡಿಲ್ಲ, ಹತ್ತಿರದಿಂದ ನೋಡಲು ಬಿಡ್ತೀರಾ ಪ್ಲೀಸ್
Karavali Utsava 2024: ಸರ್ಕಾರಿ ಶಾಲಾ ಮಕ್ಕಳು ನಾವು, ಹಾರಲು ದುಡ್ಡಿಲ್ಲ, ಹತ್ತಿರದಿಂದ ನೋಡಲು ಬಿಡ್ತೀರಾ ಪ್ಲೀಸ್ ಎಂಬ ಬೇಡಿಕೆ ದಕ್ಷಿಣ ಕನ್ನಡ ಜಿಲ್ಲೆ ಸರ್ಕಾರಿ ಶಾಲಾಮಕ್ಕಳ ವಲಯದಲ್ಲಿ ಕೇಳತೊಡಗಿದೆ. ಕಾಪ್ಟರ್ ಹಾರಾಟ ಡಿ29ಕ್ಕೆ ಕೊನೆಯಾಗುತ್ತಿದ್ದು, ಅದಕ್ಕೂ ಮೊದಲೇ ಜಿಲ್ಲಾಡಳಿತ ಸ್ಪಂದಿಸುತ್ತ ನೋಡಬೇಕು. (ವರದಿ: ಹರೀಶ ಮಾಂಬಾಡಿ, ಮಂಗಳೂರು)
Karavali Utsava 2024: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು ಮಹಾನಗರಪಾಲಿಕೆ ಸಹಕಾರದೊಂದಿಗೆ ಕರಾವಳಿ ಉತ್ಸವ ಆರಂಭಗೊಂಡಿದೆ. ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಈ ಉತ್ಸವ ನಡೆಯುತ್ತಿದೆ. ಆಕರ್ಷಕ, ವೈವಿಧ್ಯಮಯ ಮಳಿಗೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಬೀಚ್ ಉತ್ಸವ, ಕಾರ್ಯಕ್ರಮಗಳ ವೈವಿಧ್ಯವೇ ಇದರಲ್ಲಿದೆ. ಆದರೆ ಉತ್ಸವದ ನಿಮಿತ್ತ ಹೆಲಿಕಾಪ್ಟರ್ ಇರುವುದು ಹಾಗೂ ಅದರಲ್ಲಿ 5 ನಿಮಿಷ ಕುಳಿತುಕೊಳ್ಳಲು ಒಬ್ಬರು 4,500 ರೂಪಾಯಿ ಆಗುತ್ತದೆ ಎಂಬ ವಿಚಾರ ಈ ಬಡ, ಮಧ್ಯಮ ವರ್ಗದವರಲ್ಲಿ ನಿರಾಸೆಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ ಸಹಿತ ಹಲವು ಇಲಾಖೆಗಳು ಇದಕ್ಕಾಗಿ ಸಾಕಷ್ಟು ಶ್ರಮವಹಿಸಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕರಾವಳಿ ಉತ್ಸವದ ಹೈಲೈಟ್ ಆಗಿ ವಸ್ತುಪ್ರದರ್ಶನ, ಬೀಚ್ ಉತ್ಸವದೊಂದಿಗೆ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಲಾಪ್ರಕಾರಗಳ ಪ್ರದರ್ಶನಕ್ಕೆ ಜನಮನ್ನಣೆಯೂ ದೊರೆಯುತ್ತಿದೆ. ಇದರೊಂದಿಗೆ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಹಾರಿ ಮಂಗಳೂರನ್ನು ಐದು ನಿಮಿಷಗಳಲ್ಲಿ ತೋರಿಸುವ ಹೆಲಿಕಾಪ್ಟರ್ ಸಂಚಾರ ಶುರುಮಾಡಲಾಗಿತ್ತು. ಈಗ ಇದು ಅಡ್ಯಾರಿನ ಸಹ್ಯಾದ್ರಿ ಗ್ರೌಂಡ್ಸ್‌ಗೆ ಸ್ಥಳಾಂತರವಾಗಿದೆ. ಇದುವೇ ಕರಾವಳಿ ಉತ್ಸವದ ಆಕರ್ಷಣೆಯ ಕೇಂದ್ರಬಿಂದು. ಆದರೆ, ಈಗ ಉತ್ಸವವನ್ನು ಕಣ್ತುಂಬಿಕೊಳ್ಳುವ ಹೊತ್ತಿನಲ್ಲೇ ಮುಂದಿನ ಭವಿಷ್ಯ ಎಂದು ಆಗಾಗ ಭಾಷಣಗಳಲ್ಲಿ ಉಲ್ಲೇಖಿಸುವ ಮಕ್ಕಳು ಇದರಿಂದ ಎಷ್ಟು ಪ್ರಯೋಜನ ಪಡೆದುಕೊಳ್ಳುತ್ತಾರೆ ಎಂಬ ವಿಷಯವೂ ಗಮನಾರ್ಹ. ಮುಖ್ಯವಾಗಿ ಹೆಲಿಕಾಪ್ಟರ್ ಸವಾರಿಯನ್ನು ಕೇಂದ್ರೀಕರಿಸಿಕೊಂಡು ಈ ಪ್ರಶ್ನೆಯನ್ನು ಎತ್ತಲಾಗಿದೆ.
ಕರಾವಳಿ ಉತ್ಸವ ಹೆಲಿಕಾಪ್ಟರ್ ಹಾರಾಟ: 5 ನಿಮಿಷಕ್ಕೆ 4500 ರೂ
ಸಾರ್ವಜನಿಕರನ್ನು ಸೆಳೆಯುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ಪ್ರಮುಖ ಆಕರ್ಷಣೆಯಾಗಿ ಹೆಲಿಕಾಪ್ಟರ್ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರ ಪ್ರಾಯೋಗಿಕ ಹಾರಾಟ ಶುಕ್ರವಾರ ನಡೆದಿದ್ದರೆ, ಶನಿವಾರ ಉದ್ಘಾಟನೆ ನಡೆಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರಸಂತ ಹರೇಕಳ ಹಾಜಬ್ಬ ಮತ್ತು ಸುರಂಗವನ್ನು ಏಕಾಂಗಿಯಾಗಿ ತೋಡುವ ಮೂಲಕ ಭಗೀರಥ ಪ್ರಯತ್ನ ಮಾಡಿ ನೀರು ಹರಿಸಿದ ಖ್ಯಾತಿಯ ಅಮೈ ಮಹಾಲಿಂಗ ನಾಯ್ಕ್ ಉದ್ಘಾಟಿಸಿ ಅರ್ಥಪೂರ್ಣವಾಗಿಸಿದರು. ಆದರೆ ಪ್ರತಿಯೊಂದು ಹಾರಾಟಕ್ಕೂ ATC (Air Traffic Control) ಕ್ಲಿಯರೆನ್ಸ್ ದೊರಕಬೇಕಾಗಿರುವ ಕಾರಣ, ಮೇರಿಹಿಲ್ ನಲ್ಲಿ ಹೆಲಿಕಾಪ್ಟರ್ ಹಾರಾಟ ಉದ್ಘಾಟನೆಯ ಬಳಿಕ ಮತ್ತೊಂದು ಉಡ್ಡಯನಕ್ಕೆ ತೊಡಕು ಸೃಷ್ಟಿಯಾಯಿತು. ಹೀಗಾಗಿ ಬೆರಳೆಣಿಕೆಯಷ್ಟು ಉಡ್ಡಯನ ಮಾತ್ರ ಸಾಧ್ಯವಾಗುತ್ತಿದೆ. ಒಂದು ಹೆಲಿಕಾಪ್ಟರ್ ನಲ್ಲಿ ಸಾರ್ವಜನಿಕರು ಒಟ್ಟು ಆರು ಮಂದಿ ನಗರ ದರ್ಶನ ಮತ್ತು ಕಡಲಕಿನಾರೆಯ ಸೌಂದರ್ಯವನ್ನು ಆಕಾಶಮಾರ್ಗದಲ್ಲಿ ಸವಿಯಲು ಅವಕಾಶವಿದೆ ಎಂದು ಕರಾವಳಿ ಉತ್ಸವ ಸಮಿತಿ ಹೇಳಿತ್ತು. ಬೆಂಗಳೂರಿನ ತುಂಬಿ ಏವಿಯೇಶನ್ ಎಂಬ ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಈ ಸವಾರಿಯನ್ನು ಆಯೋಜಿಸಿದೆ.ಸಾರ್ವಜನಿಕರಿಗೆ ಡಿ.21ರಂದು ಅಂದರೆ ಶನಿವಾರ ಆರಂಭಗೊಂಡು, ಡಿ.29ರವರೆಗೆ ಅಂದರೆ ಒಂಭತ್ತು ದಿನಗಳ ಕಾಲ ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಅದು ಈಗ ಅಡ್ಯಾರಿನ ಸಹ್ಯಾದ್ರಿ ಗ್ರೌಂಡಿಗೆ ಸ್ಥಳಾಂತರಗೊಂಡಿದೆ. ಆರು ಮಂದಿಗೆ ಸಂಚರಿಸಲು ಅವಕಾಶ, ಪ್ರತಿದಿನ ಬೆಳಗ್ಗೆ 9ರಿಂದ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 2ರಿಂದ 5 ಗಂಟೆವರೆಗೆ ಹೆಲಿಕಾಪ್ಟರ್ ನಲ್ಲಿ ತಿರುಗಾಡಬಹುದು. ಒಂದು ಪ್ರಯಾಣದಲ್ಲಿ ಒಟ್ಟು ಏಳು ನಿಮಿಷಗಳ ತಿರುಗಾಟವಿರುತ್ತದೆ. ಇದಕ್ಕೆ 4,500 ಸಾವಿರ ರೂ ಒಬ್ಬರಿಗೆ ಪ್ರವೇಶ ದರವಿರುತ್ತದೆ ಎಂಬ ಮಾಹಿತಿಯನ್ನು ಸಾರ್ವಜನಿಕ ಮಾಹಿತಿ ಇಲಾಖೆ ಮೂಲಕ ನೀಡಲಾಗಿತ್ತು. ಇದು ಎಷ್ಟು ಮಂದಿಗೆ ಹಾಗೂ ಯಾರಿಗೆ ಸಾಧ್ಯವಾಗುತ್ತದೆ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಸರ್ಕಾರಿ ಶಾಲಾ ಮಕ್ಕಳು ನಾವು, ಹಾರಲು ದುಡ್ಡಿಲ್ಲ, ಹತ್ತಿರದಿಂದ ನೋಡಲು ಬಿಡ್ತೀರಾ ಪ್ಲೀಸ್
ಇತ್ತೀಚೆಗೆ ಮಾಧ್ಯಮಗಳಲ್ಲಿ ಸರಕಾರಿ ಶಾಲೆ ಮಕ್ಕಳು ವಿಮಾನಯಾನ ಮಾಡಿದ ವಿಚಾರ ಸುದ್ದಿಯಾಗಿತ್ತು. ಪ್ರಾಯೋಜಕತ್ವದ ಮೂಲಕ ಈ ಅವಕಾಶ ಮಕ್ಕಳಿಗೆ ದೊರಕಿತ್ತು. ಇದೀಗ ಹೆಲಿಕಾಪ್ಟರ್ ನಲ್ಲೂ ಶಾಲಾ ಮಕ್ಕಳಿಗೆ ಅಂಥದ್ದು ಯಾರಾದರೂ ಸ್ಪಾನ್ಸರ್ ಗಳ ಮೂಲಕ ಅವಕಾಶ ಕಲ್ಪಿಸಬಹುದೇ ಎಂಬ ಪ್ರಶ್ನೆ ಇದ್ದು, ಆರು ಮಂದಿಗೆ ಇಪ್ಪತ್ತೇಳು ಸಾವಿರ ರೂ ಖರ್ಚಾಗುವ ಕಾರಣ ಲಕ್ಷಗಟ್ಟಲೆ ಖರ್ಚು ಮಾಡಿ ಎಲ್ಲ ಮಕ್ಕಳನ್ನು ಹೆಲಿಕಾಪ್ಟರ್ ನಲ್ಲಿ ಸುತ್ತಾಡಿಸುವ ಅವಕಾಶ ಕಡಿಮೆ. ಮಂಗಳೂರು ನಗರದಲ್ಲಿ ಲಕ್ಷಗಟ್ಟಲೆ ಫೀಸ್ ನೀಡಿ ಮಕ್ಕಳನ್ನು ಕಳುಹಿಸುವ ಹೆತ್ತವರು ತಮ್ಮ ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ಹೆಲಿಕಾಪ್ಟರ್ ನಲ್ಲಿ ಕೂರಿಸಿ ಸಂಚಾರ ಮಾಡಿಸಬಹುದು. ಆದರೆ ಬಡ ಮಕ್ಕಳ ಕತೆ ಏನು? ಅವರು ಇಂಥದ್ದನ್ನು ಅನುಭವಿಸುವುದು ಯಾವಾಗ? ಎಂಬ ಪ್ರಶ್ನೆಯೂ ಏಳುತ್ತದೆ.
ಈ ಕುರಿತು ಸರಕಾರಿ ಶಾಲೆಯ ಮಕ್ಕಳ ಹೆತ್ತವರೊಬ್ಬರು ಮಾತನಾಡಿ, ಮಕ್ಕಳಿಗೆ ಈಗ ಶೈಕ್ಷಣಿಕ ಪ್ರವಾಸದ ಸಮಯವಾಗಿದೆ. ಪಠ್ಯಪುಸ್ತಕಗಳಲ್ಲಿ ಉಲ್ಲೇಖವಾಗುವ ಹೆಲಿಕಾಪ್ಟರ್ ಊರಲ್ಲೇ ಇರುವುದಾದರೆ ಕನಿಷ್ಠ ಅದರ ದರ್ಶನವನ್ನಾದರೂ ಮಾಡಿಸಬಹುದು ಎಂಬ ಆಸೆ ಇದೆ. ನಾವು ನಾಲ್ಕೂವರೆ ಸಾವಿರ ರೂಪಾಯಿ ಕೊಟ್ಟು ಮಕ್ಕಳನ್ನು ಕುಳ್ಳಿರಿಸಿ ಕಳುಹಿಸುವಷ್ಟು ಸಮರ್ಥದಲ್ಲ. ಆದರೆ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗಿ ಹೆಲಿಕಾಪ್ಟರ್ ಹೇಗಿದೆ ಎಂದು ತೋರಿಸಬಹುದಲ್ವಾ? ಜಿಲ್ಲಾಡಳಿತ, ಕರಾವಳಿ ಉತ್ಸವ ಸಮಿತಿ ಈ ನಿಟ್ಟಿನಲ್ಲಿ ಮಕ್ಕಳ ಪರವಾಗಿ ಮನಸ್ಸು ಮಾಡಬೇಕು. ಬಡವರ ಮಕ್ಕಳೂ ಇಂಥದ್ದರ ಲಾಭ ಪಡೆಯಬೇಕು. ಮಧ್ಯಮ, ಬಡ ವರ್ಗದ ಮಕ್ಕಳನ್ನು ಹೆಲಿಕಾಪ್ಟರ್ ನಲ್ಲಿ ಹಾರಿಸಲು ಕಷ್ಟವಾದರೆ, ಸುತ್ತಮುತ್ತಲಿನ ಸರಕಾರಿ ಶಾಲೆಗಳ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸಬಹುದಲ್ವಾ? ಅದರಲ್ಲೇನಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು ಅಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಮಕ್ಕಳಸ್ನೇಹಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಈ ಕುರಿತು ಗಮನಹರಿಸಬಹುದು ಎಂಬ ಆಶಾಭಾವನೆಯನ್ನು ಅವರು ಹೊಂದಿದ್ದಾರೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)