KCCಗೆ ಯಶ್‌, ದರ್ಶನ್‌ಗೆ ಬುಲಾವ್‌ ಹೋಗಿಲ್ವಾ? ‘ಇದು ಬಲವಂತದ ಆಟ ಅಲ್ಲ’ ಎಂದ ಕಿಚ್ಚ ಸುದೀಪ್‌
ಕನ್ನಡ ಸುದ್ದಿ  /  ಮನರಂಜನೆ  /  Kccಗೆ ಯಶ್‌, ದರ್ಶನ್‌ಗೆ ಬುಲಾವ್‌ ಹೋಗಿಲ್ವಾ? ‘ಇದು ಬಲವಂತದ ಆಟ ಅಲ್ಲ’ ಎಂದ ಕಿಚ್ಚ ಸುದೀಪ್‌

KCCಗೆ ಯಶ್‌, ದರ್ಶನ್‌ಗೆ ಬುಲಾವ್‌ ಹೋಗಿಲ್ವಾ? ‘ಇದು ಬಲವಂತದ ಆಟ ಅಲ್ಲ’ ಎಂದ ಕಿಚ್ಚ ಸುದೀಪ್‌

ಇದೇ ಡಿ 23ರಿಂದ ಮೂರು ದಿನಗಳ ಕನ್ನಡ ಚಲನಚಿತ್ರ ಕಪ್‌ (KCC) ಶುರುವಾಗಲಿದೆ. ಸ್ಯಾಂಡಲ್‌ವುಡ್‌ನ ಬಹುತೇಕ ಕಲಾವಿದರು ಕ್ರಿಕೆಟ್‌ ಕಣಕ್ಕೆ ಇಳಿಯಲಿದ್ದಾರೆ. ಈ ನಡುವೆ ಯಶ್‌, ದರ್ಶನ್‌ ಸೇರಿ ಹಲವು ಈ ಟೂರ್ನಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸುದೀಪ್‌ ಮಾತನಾಡಿದ್ದಾರೆ.

KCCಗೆ ಯಶ್‌, ದರ್ಶನ್‌ಗೆ ಬುಲಾವ್‌ ಹೋಗಿಲ್ವಾ? ‘ಇದು ಬಲವಂತದ ಆಟ ಅಲ್ಲ’ ಎಂದ ಕಿಚ್ಚ ಸುದೀಪ್‌
KCCಗೆ ಯಶ್‌, ದರ್ಶನ್‌ಗೆ ಬುಲಾವ್‌ ಹೋಗಿಲ್ವಾ? ‘ಇದು ಬಲವಂತದ ಆಟ ಅಲ್ಲ’ ಎಂದ ಕಿಚ್ಚ ಸುದೀಪ್‌

Kannada Chalanachitra Cup 2023: ಸ್ಯಾಂಡಲ್‌ವುಡ್‌ ಕಲಾವಿದರೀಗ ಬ್ಯಾಟ್‌, ಬಾಲ್‌ ಹಿಡಿದು ಮೈದಾನಕ್ಕಿಳಿಯಲಿದ್ದಾರೆ. ಅಂದರೆ, ಡ, 23ರಿಂದ 25ರ ವರೆಗೆ ಮೂರು ದಿನಗಳ ಕೆಸಿಸಿ ಹಬ್ಬ ನಡೆಯಲಿದೆ. ನಾಲ್ಕನೇ ಸೀಸನ್‌ಗೆ ಕಾಲಿಟ್ಟಿರುವ ಕನ್ನಡ ಚಲನಚಿತ್ರ ಕಪ್‌, ಮತ್ತಷ್ಟು ಮಗದಷ್ಟು ಹೊಸತನಗಳ ಜತೆಗೆ ಆಗಮಿಸುತ್ತಿದೆ. ಕಳೆದ ಬಾರಿಯಂತೆ, ಈ ಸಲವೂ ಸ್ಯಾಂಡಲ್‌ವುಡ್‌ನ ಸಾಕಷ್ಟು ಕಲಾವಿದರು ಈ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಸುದೀಪ್‌ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಟೂರ್ನಮೆಂಟ್‌ನಲ್ಲಿ ಬರೀ ಸಿನಿಮಾ ಮಂದಿಯಷ್ಟೇ ಅಲ್ಲದೆ, ವೃತ್ತಿಪರ ಕ್ರಿಕೆಟ್‌ ಆಟಗಾರರೂ ಭಾಗವಹಿಸಲಿದ್ದಾರೆ. ಭಾರತ ತಂಡ ಪ್ರತಿನಿಧಿಸಿದ ಹಲವು ಆಟಗಾರರ ಜತೆಗೆ ವಿದೇಶಿ ಆಟಗಾರರೂ ಈ ಸೀಸನ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣ, ಗಣೇಶ್‌, ಸುದೀಪ್‌, ಧನಂಜಯ್‌, ದಿನಕರ್‌ ತೂಗುದೀಪ, ಹೀಗೆ ಸಿನಿಮಾ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಈ ಟೂರ್ನಮೆಂಟ್‌ನ ಭಾಗವಾಗಲಿದ್ದಾರೆ.

ಆದರೆ, ಇದೇ ಪಂದ್ಯಾವಳಿಯಲ್ಲಿ ದರ್ಶನ್‌, ಯಶ್ ಸೇರಿ ಸ್ಯಾಂಡಲ್‌ವುಡ್‌ ಕೆಲವು ಸ್ಟಾರ್‌ ನಟರು ಆಡುತ್ತಿಲ್ಲ. ಅವರೇಕೆ ಈ ಟೂರ್ನಿಯಲ್ಲಿಲ್ಲ? ಅವರಿಗೆ ಆಹ್ವಾನ ಹೋಗಿಲ್ಲವೇ? ಹೀಗೊಂದು ಪ್ರಶ್ನೆ ಕಾಡುತ್ತದೆಯಾದರೂ, ಆ ಎಲ್ಲ ಪ್ರಶ್ನೆಗಳಿಗೆ ಸ್ವತಃ ಕಿಚ್ಚ ಸುದೀಪ್‌ ಉತ್ತರ ನೀಡಿದ್ದಾರೆ. ಇದು ನನ್ನೊಬ್ಬನ ಆಟ ಅಲ್ಲ, ಎಲ್ಲರದ್ದು ಎಂದಿರುವ ಸುದೀಪ್‌, ಎಲ್ಲರಿಗೂ ಆಹ್ವಾನ ನೀಡಿದ್ದೇವೆ ಎಂದಿದ್ದಾರೆ. ಈ ಸಂಬಂಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ್ದಾರೆ.

ತ್ರಿವಳಿ ಶೆಟ್ರ ಬಗ್ಗೆ ಸುದೀಪ್‌ ಏನಂದ್ರು?

"ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ಅವರನ್ನು ಆಹ್ವಾನಿಸಿದ್ದೇವೆ. ಆದರೆ, ಅವರು ಏಕೆ ಬರಲ್ಲ ಅಂದಿದ್ದಾರೆ ಎಂಬುದನ್ನು ಅವರನ್ನೇ ಒಂದು ಬಾರಿ ಕೇಳಿ. ರಿಷಬ್‌ ಬಂದು ಹೋಗುತ್ತಾರಂತೆ, ರಕ್ಷಿತ್‌ಗೆ ಆಟ ಬರಲ್ವಂತೆ, ರಾಜ್‌ ಅವರಿಗೆ ಕೇಳಿದರೆ, ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಆಡಿದ್ದೇವಲ್ಲ ಎನ್ನುತ್ತಾರೆ. ಇಂದು ನಮ್ಮ ಜತೆಗೆ ಪುನೀತ್‌ ಇಲ್ಲ. ಅವರಿಗೂ ಆಡೋಕೆ ಬರುತ್ತಿರಲಿಲ್ಲ. ನಮ್ಮ ಜತೆಗೆ ಇರುತ್ತಿದ್ದರು. ಧನಂಜಯ್‌ ಸಹ ಕ್ರಿಕೆಟರ್‌ ಅಲ್ಲ. ಕೆಸಿಸಿ ಶುರುವಾದ ಬಳಿಕ ಕಲಿತಿದ್ದಾರೆ"

"ಇವರಷ್ಟೇ ಅಲ್ಲ ದುನಿಯಾ ವಿಜಯ್‌ ಅವರಿಗೂ ಕ್ರಿಕೆಟ್‌ ಬರಲ್ಲ. ಈಗ ಶುರು ಮಾಡಿದ್ದಾರೆ. ಇದು ಟೆನ್ನಿಸ್‌ ಬಾಲ್‌ ಆಟ ಅಲ್ಲ. ಲೆದರ್‌ ಬಾಲ್‌ ಆಟ. ನಮ್ಮ ಜತೆಗೆ ಪ್ರೋಫೆಷನಲ್‌ ಕ್ರಿಕೆಟರ್‌ಗಳೂ ಇರುತ್ತಾರೆ. ಆ ಕಾರಣಕ್ಕೂ ಬರದಿರಬಹುದು. ಹಾಗೆಂದ ಮಾತ್ರಕ್ಕೆ ಇವರ್ಯಾರನ್ನೂ ಕರೆದಿಲ್ಲ ಎನ್ನಬೇಡಿ. ಎಲ್ಲರನ್ನೂ ಕರೆದಿದ್ದೇವೆ. ಎಲ್ಲರೂ ನಮ್ಮ ಹುಡುಗ್ರೆ, ಹಳೇ ಪರಿಚಯ. ಕೆಲವರು ಕ್ರಿಕೆಟ್‍ ಆಡುವುದಿಲ್ಲ, ಬಂದು ಹೋಗುತ್ತೇನೆ ಎಂದಿದ್ದಾರೆ" ಎಂಬುದು ಸುದೀಪ್‌ ಮಾತು.

ಯಶ್‌, ದರ್ಶನ್‌ ಬಗ್ಗೆಯೂ ಮಾತು..

"ನಾವು ಯಶ್‌ ಮತ್ತು ದರ್ಶನ್‌ ಅವರನ್ನೂ KCC ಟೂರ್ನಮೆಂಟ್‌ಗೆ ಆಹ್ವಾನಿಸಿದ್ದೇವೆ. ಆಡಲು ಬಾರದಿದ್ದರೂ ಬಂದು ಹೋಗುವುದಾಗಿ ಕೆಲವರು ಹೇಳಿದ್ದಾರೆ. ಮೊದಲಿಗೆ ಸ್ಪಷ್ಟಪಡಿಸುವುದೇನೆಂದರೆ, ಕೆಸಿಸಿ ಎನ್ನುವುದು ಬಲವಂತ ಅಲ್ಲ. ಕೆಸಿಸಿ ಎಂಬುದು ಒಂದು ಗೌರವ. ಕನ್ನಡ ಚಿತ್ರೋದ್ಯಮ ಅಂದರೆ ನಾನೊಬ್ಬನೇ ಅಲ್ಲ, ಅದು ಎಲ್ಲರಿಗೂ ಸೇರಿದ್ದು. ಹಾಗಾಗಿಯೇ ಎಲ್ಲರಿಗೂ ಭಾಗವಹಿಸಿ ಎಂದು ಆಹ್ವಾನಿಸಿದ್ದೇವೆ. ಕೆಲವರು ಈ ಸೀಸನ್‍ ಬೇಡ ಎಂದರೆ, ಇನ್ನು ಕೆಲವರು ಮುಂದೆ ನೋಡೋಣ ಎನ್ನುತ್ತಾರೆ. ಬರೀ ಯಶ್‍ ಮತ್ತು ದರ್ಶನ್‍ ಅಷ್ಟೇ ಅಲ್ಲ, ಧ್ರುವ ಅವರ ಬಗ್ಗೆ ಯಾಕೆ ಕೇಳಲಿಲ್ಲ? ಅವರು ನಟ ಅಲ್ವಾ? ಧ್ರುವ ಸಹ ಕಳೆದ ವರ್ಷ ಬಂದಿದ್ದರು. ಬಿಜಿಯಾಗಿದ್ದರೂ ಬಂದು ಹೋದರು. ಎಲ್ಲರನ್ನೂ ಕರೆದಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ ಸುದೀಪ್.‌

Whats_app_banner