Hari Om OTT: ವಯಸ್ಕರ ಕಂಟೆಂಟ್ ನೀಡೋ ಕಂಪನಿಯಿಂದ ಪೌರಾಣಿಕ ಒಟಿಟಿ ಹರಿ ಓಂ ಆರಂಭ; ಹಿರಿಯ ನಾಗರಿಕರು, ಯುವಕರು, ಮಕ್ಕಳೇ ಪ್ರಮುಖ ಟಾರ್ಗೆಟ್
Ullu launches mythological OTT: ಪ್ರಮುಖವಾಗಿ ಹಿರಿಯ ನಾಗರಿಕರು, ಮಕ್ಕಳು, ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಪೌರಾಣಿಕ, ಅನಿಮೇಷನ್ ಸಿನಿಮಾ, ಸರಣಿಗಳು, ಶೋಗಳಿಗಾಗಿ ಹೊಸ ಒಟಿಟಿ ಆರಂಭಿಸಲು ಉಲ್ಲು ಸ್ಥಾಪಕರು ನಿರ್ಧರಿಸಿದ್ದಾರೆ. ಈ ಒಟಿಟಿ ಜೂನ್ 2024ರಲ್ಲಿ ಆರಂಭವಾಗಲಿದೆ.
ಬೆಂಗಳೂರು: ಅಡಲ್ಟ್ ಕಂಟೆಂಟ್‌ಗೆ ಹೆಸರುವಾಸಿಯಾಗಿರುವ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಉಲ್ಲು (ULLU)ವಿನ ಸ್ಥಾಪಕ ಮತ್ತು ಸಿಇಒ ವಿಭು ಅಗರ್ವಾಲ್ ಅವರು ಹರಿ ಓಂ ಎಂಬ ಪೌರಾಣಿಕ ಒಟಿಟಿ ಸೇವೆಯನ್ನು ಆರಂಭಿಸುತ್ತಿದ್ದಾರೆ. ಮುಂದಿನ ತಿಂಗಳು ಹರಿ ಓಂ ಹೆಸರಿನ ಒಟಿಟಿ ಆರಂಭವಾಗಲಿದೆ. 'ಯು' ಶ್ರೇಣಿಯ ವಿಷಯ ಅಥವಾ ಎಲ್ಲಾ ವಯಸ್ಸಿನವರಿಗೆ ಸೂಕ್ತವಾದ ಕಾರ್ಯಕ್ರಮಗಳಷ್ಟೇ ಇದರಲ್ಲಿ ಪ್ರಸಾರವಾಗಲಿದೆ. ಹರಿ ಓಂ ಭಾರತೀಯ ಪರಂಪರೆ ಮತ್ತು ಧಾರ್ಮಿಕ ವಿಷಯವನ್ನು ಅನುಭವಿಸುವ ತಾಣವಾಗಿದೆ ಎಂದು ವಿಭು ಅಗರ್ವಾಲ್ ಹೇಳಿದ್ದಾರೆ.
ನೂತನ ಹರಿ ಓಂ ಒಟಿಟಿಯು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕಥೆಗಳನ್ನು ಹೊಂದಿರಲಿದೆ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಪುರಾಣ ವಿಷಯಗಳನ್ನು ಒಳಗೊಂಡ ಅನಿಮೇಟೆಡ್ ಕಂಟೆಂಟ್‌ಗಳೂ ಇದರಲ್ಲಿ ಲಭ್ಯವಿರಲಿದೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಯುವಕರಿಗಾಗಿ ರಚಿಸಲಾದ ದೀರ್ಘ ಮತ್ತು ಕಿರು ಸ್ವರೂಪದ 'ಯು' ರೇಟಿಂಗ್ ಹೊಂದಿರುವ ಸರಣಿಗಳು ಸೇರಿದಂತೆ 20 ಕ್ಕೂ ಹೆಚ್ಚು ಪೌರಾಣಿಕ ಶೋಗಳು ಮುಂದಿನ ತಿಂಗಳು ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.
"ಭಾರತೀಯರಾಗಿ ನಾವು ನಮ್ಮ ಬೇರುಗಳು, ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಭಾರತೀಯ ಪುರಾಣಗಳ ಕಥೆಗಳ ಕುರಿತು ಹಿರಿಯ ನಾಗರಿಕರು ಮತ್ತು ಯುವ ಪ್ರೇಕ್ಷಕರಲ್ಲಿನ ಬೇಡಿಕೆಯನ್ನು ಗುರುತಿಸಿ, ಹರಿ ಓಂ ಒಟಿಟಿಯನ್ನು ರಚಿಸಲಾಗಿದೆ" ಎಂದು ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹರಿ ಓಂ ಸರಣಿಯಲ್ಲಿ ಶ್ರೀ ತಿರುಪತಿ ಬಾಲಾಜಿ, ಮಾತಾ ಸರಸ್ವತಿ, ಛಾಯಾ ಗ್ರಹ ರಾಹು ಕೇತು, ಜೈ ಜಗನ್ನಾಥ್, ಕೈಕೇಯಿ ಕೆ ರಾಮ್, ಮಾ ಲಕ್ಷ್ಮಿ ಮತ್ತು ನವಗ್ರಹ ಮುಂತಾದ ಸರಣಿಗಳು ಪ್ರಸಾರಗೊಳ್ಳಲಿವೆ. ಶರದ್ ಮಲ್ಹೋತ್ರಾ, ರತಿ ಪಾಂಡೆ, ಯುಕ್ತಿ ಕಪೂರ್, ಮೃಣಾಲ್ ಜೈನ್, ವಿಶಾಲ್ ಕರ್ವಾಲ್ ಮತ್ತು ಇತರರು ನಟಿಸಿರುವ ಸರಣಿಗಳನ್ನು ನೋಡಬಹುದು.
ಷೇರುಪೇಟೆಯಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹಣವನ್ನು ಸಂಗ್ರಹಿಸಲು ಉಲ್ಲು ಡಿಜಿಟಲ್ ಈ ಫೆಬ್ರವರಿಯಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ತನ್ನ ಆರಂಭಿಕ ಕರಡು ದಾಖಲೆಗಳನ್ನು ಸಲ್ಲಿಸಿತ್ತು.
ಕಂಪನಿಯ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್ ಎಚ್ ಪಿ) ಪ್ರಕಾರ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮದ (ಎಸ್ಎಂಇ) ಸಾರ್ವಜನಿಕ ವಿತರಣೆಯು ತಲಾ 10 ರೂ ಮುಖಬೆಲೆಯ 62,62,800 ಈಕ್ವಿಟಿ ಷೇರುಗಳನ್ನು ವಿತರಣೆ ಮಾಡಲು ಉದ್ದೇಶಿಸಲಾಗಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ದೂರುಗಳ ನಂತರ ಉಲ್ಲು ಬಗ್ಗೆ ತನಿಖೆ ನಡೆಸುತ್ತಿವೆ ಎಂದು ವರದಿಗಳು ತಿಳಿಸಿವೆ.