90ರ ದಶಕದಲ್ಲಿ ಕನ್ನಡ ಚಿತ್ರೋದ್ಯಮದಲ್ಲಿತ್ತಾ ಕಾಸ್ಟಿಂಗ್ ಕೌಚ್? ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದ ನಟಿ ಪ್ರೇಮಾ
90ರ ಕಾಲಘಟ್ಟದಲ್ಲಿ ಕನ್ನಡ ಚಿತ್ರೋದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಇತ್ತಾ? ಸ್ಯಾಂಡಲ್‌ವುಡ್ ನಟಿ ಪ್ರೇಮಾ ಈ ಕಾಸ್ಟಿಂಗ್ ಕೌಚ್ ಕುರಿತು ತಾವು ಕಂಡ ಅಂದಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.
Actress Prema about casting couch: ಅವಕಾಶ ಸಿಗುತ್ತೆ ಎಂದಾದರೆ ಅಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದದ್ದೇ. ಅದರಲ್ಲೂ ಬಣ್ಣದ ಲೋಕದಲ್ಲಿ ಆ ವಿಚಾರ ಆಗಾಗ ಹೆಚ್ಚು ಮುನ್ನೆಲೆಗೆ ಬರುತ್ತಲಿರುತ್ತದೆ. ಸಿನಿಮಾ ಅವಕಾಶ ಬೇಕೆಂದರೆ, ನಟಿಯರು ಒಂದಷ್ಟು ಕಾಂಪ್ರಮೈಸ್ ಮಾಡಿಕೊಳ್ಳಲೇಬೇಕು ಎಂಬ ಮಾತಿದೆ. ಅಂಥ ಪರಿಸ್ಥಿತಿ ಎದುರಾದಾಗ ಅದಕ್ಕೆ ಎದೆಕೊಟ್ಟು ಎದುರಿಸಿದ ಎಷ್ಟೋ ನಟಿಯರಿದ್ದಾರೆ. ನಿಮ್ಮ ಚಿತ್ರದ ಅವಕಾಶವೇ ಬೇಡ ಎಂದು ಮುಖಕ್ಕೆ ಹೊಡದಂತೆ ಹೇಳಿ ಹೋದ ಎಷ್ಟೋ ನಟಿಯರಿದ್ದಾರೆ. ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ನೇರವಾಗಿಯೂ ಮಾತನಾಡಿ ಧೈರ್ಯವಂತೆ ಎನಿಸಿಕೊಂಡವರಿದ್ದಾರೆ. ಇದೀಗ ಇದೇ ಕಾಸ್ಟಿಂಗ್ ಕೌಚ್ ಕರಾಳತೆ ಬಗ್ಗೆ ಕನ್ನಡ ಚಿತ್ರೋದ್ಯಮ ಕಂಡ ಸ್ಟಾರ್ ನಟಿ ಪ್ರೇಮಾ ಮಾತನಾಡಿದ್ದಾರೆ.
ಓಂ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಪ್ರೇಮಾ, ಮೊದಲ ಚಿತ್ರದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡರು. ವಜ್ರೇಶ್ವರಿ ಕಂಬೈನ್ಸ್ ಮೂಲಕ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಪ್ರೇಮಾ ಅವರನ್ನು ಚಂದನವನಕ್ಕೆ ಕರೆತಂದರು. ಅಲ್ಲಿಂದ ಶುರುವಾದ ಅವರ ಬಣ್ಣದ ಲೋಕದ ಪಯಣ, ಮತ್ತ್ಯಾವತ್ತೂ ನಿಲ್ಲಲಿಲ್ಲ. ಪ್ರೇಮಾ ಅವರ ಯಶಸ್ಸಿನ ಓಟ ಮುಂದುವರಿಯುತ್ತಲೇ ಹೋಯಿತು. ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದರು. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಚಿತ್ರೋದ್ಯಮದಲ್ಲೂ ಮಿಂಚಿದರು.
ಕಿರುತೆರೆಯಲ್ಲಿ ಪ್ರೇಮಾ ಮಿಂಚು
ಹೀಗೆ ಬಹು ಚಿತ್ರರಂಗಗಳನ್ನು ಸುತ್ತಾಡಿದ ನಟಿ ಪ್ರೇಮಾ, ಸದ್ಯ ಸಿನಿಮಾಗಳಿಂದ ದೂರ ಉಳಿದು ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಈ ಮೂಲಕ ಪ್ರತಿ ಮನೆ ಮನಗಳಿಗೂ ಮತ್ತಷ್ಟು ಹತ್ತಿರವಾಗಿದ್ದಾರೆ ಪ್ರೇಮಾ. ಇದೀಗ ಇದೇ ನಟಿ, ತಮ್ಮ ವೃತ್ತಿ ಜೀವನದ ಬಗ್ಗೆ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ.
ಕಾಸ್ಟಿಂಗ್ ಕೌಚ್ ಬಗ್ಗೆ ಪ್ರೇಮಾ ಹೇಳಿದ್ದೇನು?
"ನನಗೆ ಅನಿಸಿದ್ದು ಓಂ ಸಿನಿಮಾ ಹಿಟ್ ಆಗಲಿಲ್ಲ ಅಂದಿದ್ದರೆ, ನಾನು ಬೇರೆ ಕೆಲಸ ಮಾಡಲು ಪ್ಲಾನ್ ಹಾಕಿದ್ದೆ. ಬೇರೆ ಕೆಲಸ ಮಾಡಲು ನಾನು ಮಾನಸಿಕವಾಗಿ ನಾನು ಸಿದ್ಧಳಿದ್ದೆ. ಚಿತ್ರರಂಗವನ್ನೇ ಬಿಡಲು ತೀರ್ಮಾನಿಸಿದ್ದೆ. ಏಕೆಂದರೆ, ಒಂದು ಕಾಲು ಅಲ್ಲಿ, ಒಂದು ಕಾಲು ಇಲ್ಲಿ ಇಡೋಕೆ ಆಗಲ್ಲ. ಓಂ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯ್ತು,. ಮೊದಲು ಒಬ್ಬ ನಟಿಯಾಗಿ ನಾವು ಪ್ರೂವ್ ಮಾಡಬೇಕು" ಎಂದಿದ್ದಾರೆ.
"ಆ ಕಾಸ್ಟಿಂಗ್ ಕೌಚ್ ಬಗ್ಗೆ ನನಗಷ್ಟು ಗೊತ್ತಿಲ್ಲ. ಈಗೀಗ ನನಗೆ ಅದರ ಬಗ್ಗೆ ಗೊತ್ತಾಗ್ತಿದೆ. ನಮ್ಮ ಕಾಲದಲ್ಲಿ ಅದು ಇರುತ್ತಿರಲಿಲ್ಲ. ನಮ್ಮ ಕೆಲಸದ ಮೂಲಕ ನಾವು ತೋರಿಸಬೇಕು. ನಾನು ಒಂದೇ ಕಡೆ ಇರುತ್ತಿರಲಿಲ್ಲ. ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿನ್ ಹೀಗೆ ಎಲ್ಲ ಕಡೆಗೂ ಸಿನಿಮಾ ಕೆಲಸದಲ್ಲಿ ಓಡಾಡುತ್ತಿರುತ್ತಿದ್ದೆ. ಆದರೆ, ನನಗೆ ಎಲ್ಲಿಯೂ ಆ ಅನುಭವ ಆಗಿಲ್ಲ. ಬೇರಾವ ನಿರ್ದೇಶಕರು ಕೀಳಾಗಿ ನೋಡುತ್ತಿರಲಿಲ್ಲ. ಯಾವ ಭಾಷೆಯಲ್ಲೂ ಆ ಥರದ ಅನುಭವ ಆಗಿಲ್ಲ"
ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ..
"ನಾನು ಹಾರ್ಡ್‌ವರ್ಕ್‌ನಲ್ಲಿ ನನ್ನನ್ನು ನಾನು ಪ್ರೂವ್ ಮಾಡಿಕೊಂಡವಳು, ನಟನೆಯಲ್ಲಿ ನಾನು ನನ್ನನ್ನು ಗುರುತಿಸಿಕೊಳ್ಳಬೇಕು. ನನ್ನ ಅದೃಷ್ಟವೋ ಏನೋ? ಒಳ್ಳೊಳ್ಳೆ ನಿರ್ದೇಶಕರು, ಒಳ್ಳೊಳ್ಳೆ ಕಥೆ ಸಿಕ್ಕವು. ನಿರ್ದೇಶಕರಿಗೂ ಕಾನ್ಫಿಡೆನ್ಸ್ ಬಂತು, ಓಹ್ ಇವ್ರು ಮಾಡ್ತಾರೆ ಅಂತ. ಹಾಗೆ ಸಿಕ್ಕ ಚಾನ್ಸ್ ಅನ್ನು ನಾನು ಸದ್ಬಳಕೆ ಮಾಡಿಕೊಂಡೆ. ಈಗಿನ ನಟಿಯರು, ಕಾರ್ ಬೇಕು, ಕ್ಯಾರಾವಾನ್ ಬೇಕು ಹೀಗೇ ಎನೇನೋ ಡಿಮಾಂಡ್ ಮಾಡುತ್ತಾರೆ. ಮೊದಲು ನಿಮ್ಮನ್ನು ನೀವು ಪ್ರೂವ್ ಮಾಡಿ. ಎಲ್ಲವೂ ತಾನಾಗಿಯೇ ಬರುತ್ತೆ. ನಾನೂ ಕೇಳ್ಪಟ್ಟಿದ್ದೇನೆ. ಆದರೆ, ನಮ್ಮ ಕಾಲದಲ್ಲಿ ಆ ಥರ ಇರಲಿಲ್ಲ" ಎಂದಿದ್ದಾರೆ ಪ್ರೇಮಾ.
ವಿಭಾಗ