Dheekshith Shetty: ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ಮೂಲಕ ಬ್ಯಾಂಕ್ ಲೂಟಿಗೆ ಹೊರಟ ‘ದಿಯಾ’ ದೀಕ್ಷಿತ್ ಶೆಟ್ಟಿ
ನಟ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿರುವ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ. ಕನ್ನಡದ ಜತೆಗೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಈ ಸಿನಿಮಾ ಸಿದ್ಧವಾಗಲಿದೆ. ಮೊದಲ ಹಂತದ ಶೂಟಿಂಗ್ ಮುಗಿಸಿರುವ ಈ ಸಿನಿಮಾ, ಜನವರಿ ಬಳಿಕ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಲಿದೆ.
Dheekshith Shetty: ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು, ಪರಭಾಷೆಯ ಸಿನಿಮಾಗಳಲ್ಲಿ ಹೆಸರು ಮಾಡಿರುವ ನಟ ದೀಕ್ಷಿತ್ ಶೆಟ್ಟಿ, ದಿಯಾ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ರಂಗಿ ತರಂಗ, ಅವನೇ ಶ್ರೀಮನ್ನಾರಾಯಣ ಸಿನಿಮಾ ಖ್ಯಾತಿಯ ನಿರ್ಮಾಪಕ ಹೆಚ್. ಕೆ ಪ್ರಕಾಶ್, ಈ ಬಾರಿ ಮತ್ತೆ ಹೊಸ ತಂಡದೊಂದಿಗೆ ಹಾಸ್ಯ ಪ್ರಧಾನ ಚಿತ್ರ ನಿರ್ಮಿಸುತ್ತಿದ್ದಾರೆ. ಆ ಚಿತ್ರಕ್ಕೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಹೆಸರಿಟ್ಟಿದ್ದು, ಈಗಾಗಲೇ ಒಂದು ಹಂತದ ಚಿತ್ರೀಕರಣವನ್ನೂ ಈ ಸಿನಿಮಾ ಮುಗಿಸಿಕೊಂಡಿದೆ.
ದಿಯಾ ಸಿನಿಮಾ ಬಳಿಕ ತೆಲುಗಿನ ದಸರಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೀಕ್ಷಿತ್ ಶೆಟ್ಟಿ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹಾಸ್ಯ ಪಾತ್ರದ ಹುಡುಕಾಟದಲ್ಲಿದ್ದ ದೀಕ್ಷಿತ್ ಶೆಟ್ಟಿ ಬಯಸಿದಂತೆ ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಚಿತ್ರದಲ್ಲಿ ವಿಭಿನ್ನ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ದಿಯಾ ಹಾಗೂ ದಸರಾ ಬಳಿಕ ಸಾಲು ಸಾಲು ಅವಕಾಶಗಳನ್ನು ಪಡೆದ ದೀಕ್ಷಿತ್, ಸದ್ಯ ತಮಿಳು , ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಸದಾ ಹೊಸ ಪ್ರತಿಭೆಗೆ ಅವಕಾಶ ನೀಡುವ ನಿರ್ಮಾಪಕ ಹೆಚ್. ಕೆ ಪ್ರಕಾಶ್ ಅವರ ಈ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾಗೆ ನವ ನಿರ್ದೇಶಕ ಅಭಿಷೇಕ್ ಎಂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ', ‘ಬಹುಪರಾಕ್' ಮತ್ತು ‘ಆಪರೇಷನ್ ಅಲಮೇಲಮ್ಮ' ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗೂ ಕೆಲ ಸಿನಿಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ. 'ಪಿನಾಕ' ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ 'ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ.
ಬ್ಯಾಂಕ್ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ. ನಾಯಕಿಯಾಗಿ ಬೃಂದಾ ಆಚಾರ್ಯ ನಟಿಸುತ್ತಿದ್ದಾರೆ. ತಾರಾಗಣದಲ್ಲಿ ಅಶ್ವಿನ್ ರಾವ್, ಹಾಸ್ಟೇಲ್ ಹುಡುಗರು ಖ್ಯಾತಿಯ ಶ್ರೀ ವತ್ಸ, ಶ್ರೇಯಸ್ ಶರ್ಮಾ, ವಿನುತ ಇನ್ನಿತರು ಇದ್ದಾರೆ.
ಸದ್ಯ ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಹಾಗೂ ಚಿತ್ರದುರ್ಗ ಸುತ್ತ ಮುತ್ತ ಮುಗಿಸಿದ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ಜನವರಿ ಮೊದಲ ವಾರ ಆರಂಭವಾಗಲಿದೆ. ಹಾಗೆ ನಿರ್ಮಾಪಕರು ಚಿತ್ರವನ್ನು ಕನ್ನಡದ ಜೊತೆಗೆ ತೆಲುಗು, ತಮಿಳು, ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಮೇಲೆ ತರಲು ನಿರ್ಧರಿಸಿದ್ದಾರೆ.