Sati Sulochana: ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾಗೆ 90ರ ಪ್ರಾಯ! ಈ ಚಿತ್ರದ ಕುರಿತ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ
ಕನ್ನಡ ಚಿತ್ರರಂಗದ ಉದಯಕ್ಕೆ ಕಾರಣವಾದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಸಿನಿಮಾ ತೆರೆಕಂಡು ಮಾರ್ಚ್ 3ಕ್ಕೆ ಭರ್ತಿ 90 ವರ್ಷಗಳಾಗಲಿವೆ. ಇದೀಗ ಇದೇ ಸಿನಿಮಾದ ಕುರಿತ ಒಂದಷ್ಟು ಆಸಕ್ತಿಕ ವಿಚಾರಗಳು ಇಲ್ಲಿವೆ.
Sati Sulochana: ಸಿನಿಮಾ ಕ್ಷೇತ್ರದಲ್ಲಿನ ಬದಲಾವಣೆ ಇದೀಗ ನೋಡುಗರ ಕಣ್ಣರಳಿಸುತ್ತಿವೆ. ಊಹೆಗೂ ನಿಲುಕದ ಚಿತ್ರ ವಿಚಿತ್ರಗಳನ್ನು ಪರದೆ ಮೇಲೆ ಕಣ್ತುಂಬಿಕೊಳ್ಳುತ್ತಿದ್ದಾನೆ ಪ್ರೇಕ್ಷಕ. ಆದರೆ, ಕಪ್ಪು ಬಿಳುಪಿಕ ಕಾಲದಲ್ಲಿ ಹೀಗಿರಲಿಲ್ಲ. ಅದಕ್ಕೂ ಹಿಂದೆ ಮಾತುಗಳೇ ಇರದ ಚಿತ್ರಗಳೂ ಅಂದಿನ ಪ್ರೇಕ್ಷಕನಿಗೆ ಅಚ್ಚರಿಯೇ. ತೆರೆಮೇಲೆ ಸಿಂಹಗಳು ಬಂದರೆ, ನಿಜವಾದ ಸಿಂಹವೇ ಬಂತೆಂದು ಸ್ಥಳದಿಂದಲೇ ಪ್ರೇಕ್ಷಕ ಕಾಲ್ಕಿತ್ತ ಸಾಕಷ್ಟು ಉದಾಹರಣೆಗಳಿವೆ. ಇದೀಗ ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನ ಬಗ್ಗೆ ಹೇಳುವ ಸಮಯ ಬಂದಿದೆ. ಅಂದರೆ ಈ ಚಿತ್ರಕ್ಕೀಗ ಭರ್ತಿ 90ರ ಪ್ರಾಯ!
1934ರ ಮಾರ್ಚ್ 3 ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಸೂರ್ಯನ ಉದಯವಾಗಿತ್ತು. ಮಾತುಗಳೇ ಇರದ ಮೂಕಿ ಸಿನಿಮಾಗಳನ್ನು ನೋಡಿಕೊಂಡು ಬರುತ್ತಿದ್ದ ಪ್ರೇಕ್ಷಕನಿಗೆ, ಮೊದಲ ಬಾರಿ ತೆರೆಮೇಲೆ ದೃಶ್ಯಗಳ ಜತೆಗೆ ಅವರಾಡುವ ಮಾತುಗಳೂ ಕೇಳಿಸಿದ್ದವು. ಹಾಗೇ ಮೊದಲ ಸಲ ಎಲ್ಲರ ಮುಂದೆ ಮಾತುಗಳಿರುವ ಸಿನಿಮಾ ತಂದಿರಿಸಿದ್ದು ನಿರ್ದೇಶಕ ವೈ ವಿ ರಾವ್. ಅದೇ ಸತಿ ಸುಲೋಚನಾ ಚಿತ್ರ! ರಾವ್ ಅವರ ಈ ಸಾಹಸಕ್ಕೆ ಕೈ ಜೋಡಿಸಿದ್ದು ಮಾರ್ವಾಡಿ ನಿರ್ಮಾಪಕ ಜೋಡಿ. ಸೌತ್ ಇಂಡಿಯಾ ಮೂವಿಟೋನ್ ಬ್ಯಾನರ್ ಮೂಲಕ ಈ ಚಿತ್ರ ತೆರೆಗೆ ತಂದಿದ್ದರು.
90 ವರ್ಷಗಳ ಹಿಂದೆ ಹಲವು ಹೊಸತುಗಳಿಗೆ ಕಾರಣವಾಗಿದ್ದ ಸತಿ ಸುಲೋಚನಾ ಸಿನಿಮಾ, ಕನ್ನಡ ಚಿತ್ರೋದ್ಯಮದ ಮೊದಲ ಟಾಕಿ ಚಿತ್ರ. ಮಾರ್ವಾಡಿಗಳಾದ ಚಮನ್‌ಲಾಲ್ ದೂಂಗಾಜಿ ಮತ್ತು ಶಾ ಬೂರ್ಮಲ್ ಚಮನ್‌ಲಾಲ್‌ಜಿ ಒಟ್ಟಿಗೆ ತಮ್ಮದೇ ಆದ ಸೌತ್ ಇಂಡಿಯಾ ಮೂವಿಟೋನ್ ಬ್ಯಾನರ್ ತೆರೆದು, ಅದರ ಮೂಲಕ ಈ ಸಿನಿಮಾ ನಿರ್ಮಾಣ ಮಾಡಿದ್ದರು. ಇದಷ್ಟೇ ಅಲ್ಲ ಇನ್ನೂ ಹತ್ತು ಹಲವು ವಿಶೇಷತೆಗಳು ಈ ಸಿನಿಮಾದಲ್ಲಿ ಅಡಗಿವೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.
ಸತಿ ಸುಲೋಚನಾ ಸಿನಿಮಾ ಕುರಿತ ಆಸಕ್ತಿಕರ ವಿಚಾರಗಳು
- 1934ರ ಮಾರ್ಚ್ 3ರಂದು ತೆರೆಗೆ ಬಂದಿದ್ದ ಸತಿ ಸುಲೋಚನಾ ಸಿನಿಮಾ, ಆಗಿನ ಕಾಲದಲ್ಲಿ ಆರು ವಾರಗಳ ಭರ್ಜರಿ ಪ್ರದರ್ಶನ ಕಂಡ ಕನ್ನಡದ ಮೊದಲ ಟಾಕಿ ಸಿನಿಮಾ.
- 1905ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ (ಪ್ಯಾರಾಮೌಂಟ್) ಚಿತ್ರಮಂದಿರದಲ್ಲೇ ಸತಿ ಸುಲೋಚನಾ ಸಿನಿಮಾ ಬಿಡುಗಡೆಯಾಗಿತ್ತು.
- ಒಟ್ಟು 170 ನಿಮಿಷ ಅವಧಿಯ ಈ ಸಿನಿಮಾ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಅಂದರೆ 90 ವರ್ಷಗಳ ಹಿಂದೆ ತಗುಲಿದ ವೆಚ್ಚ ಬರೋಬ್ಬರಿ 40 ಸಾವಿರ ರೂಪಾಯಿ.
ಇದನ್ನೂ ಓದಿ: ಒಟಿಟಿಯಲ್ಲಿ ನಾಳೆ ಬಿಡುಗಡೆಯಾಗುತ್ತಿಲ್ಲ ಹನುಮಾನ್ ಸಿನಿಮಾ; ಮುಂದಿನ ವಾರ ತೇಜ ಸಜ್ಜಾ ಸಿನಿಮಾ ರಿಲೀಸ್
- ಸತಿ ಸುಲೋಚನಾ ಸಿನಿಮಾ ನಿರ್ಮಾಣಕ್ಕೆ ಆಗಿನ ಸಮಯದಲ್ಲಿ ಎರಡು ತಿಂಗಳು ಬೇಕಾಯಿತು. ನ್ಯಾಚುರಲ್ ಸೂರ್ಯನ ಬೆಳಕಿನಲ್ಲಿ ಮತ್ತು ಮ್ಯಾನ್ ಮೇಡ್ ಪ್ರತಿಫಲಕಗಳನ್ನು ಬಳಸಿ ಚಿತ್ರೀಕರಣ ಮಾಡಲಾಗಿದೆ.
- ಸಿನಿಮಾದಲ್ಲಿ ಅಳುವ ದೃಶ್ಯಗಳು ನೈಜವಾಗಿ ಬರಲಿ ಎಂಬ ಕಾರಣಕ್ಕೆ ಈರುಳ್ಳಿಯನ್ನು ಕಣ್ಣಿಗೆ ಉಜ್ಜಿ ಅಳುವ ದೃಶ್ಯ ಸೆರೆಹಿಡಿಯುತ್ತಿದ್ದರು. ಅದು ಅಷ್ಟು ವರ್ಕೌಟ್ ಆಗ ಕಾರಣ, ಕೊಲ್ಲಾಪುರದಲ್ಲಿ ಸಿಗುವ ಖಾರದ ಹಸಿರು ಮೆಣಸಿನಕಾಯಿಯನ್ನು ಕಣ್ಣ ರೆಪ್ಪೆ ಮೇಲೆ ಹಾಕಿ ಪ್ರಯತ್ನಿಸಲಾಯಿತು.
- ಮೈಸೂರು ಮಹಾರಾಜರ ಆಳ್ವಿಕೆಯಲ್ಲಿದ್ದ ಮೈಸೂರು ಸಂಸ್ಥಾನದಲ್ಲಿ ತೆರೆಕಂಡ ಕನ್ನಡದ ಮೊದಲ ಸಿನಿಮಾ ಎಂಬ ಗೌರವವನ್ನು ಸತಿ ಸುಲೋಚನಾ ಪಡೆದಿದೆ.
- ಸತಿ ಸುಲೋಚನಾ ಸಿನಿಮಾದಲ್ಲಿ ಸಿಂಹ ಬರುವ ದೃಶ್ಯವಿದೆ. ಅದನ್ನು ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಛೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ.
- ವೈ.ವಿ.ರಾವ್ (ಯರಗುಡಿಪಟಿ ವರದಾ ರಾವ್) ಸತಿ ಸುಲೋಚನಾ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರೆ, ಬೆಳ್ಳಾವೆ ನರಹರಿಶಾಸ್ತ್ರಿ ಕಥೆ ಮತ್ತು ಸಂಭಾಷಣೆ ಬರೆದಿದ್ದರು. ಆರ್.ನಾಗೇಂದ್ರರಾಯ ಸಂಗೀತ ನೀಡಿದ್ದರು.
- ಆರ್.ನಾಗೇಂದ್ರರಾಯ, ಲಕ್ಷ್ಮೀಬಾಯಿ, ಸುಬ್ಬಯ್ಯನಾಯ್ಡು, ತ್ರಿಪುರಾಂಭ, ಸಿ.ಟಿ.ಶೇಷಾಚಲಮ್, ಇಂದುಬಾಲಾ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದರು.
- ಆರ್.ನಾಗೇಂದ್ರರಾಯ (ಹಿರಿಯ ನಟಿ ಲಕ್ಷ್ಮೀ ಅವರ ತಂದೆ) ಕನ್ನಡದ ಟಾಕಿ ಸಿನಿಮಾದ ಮೊದಲ ನಾಯಕ ನಟ.
ಇದನ್ನೂ ಓದಿ: ಟಾಪ್ ಸ್ಥಾನದಿಂದ ಕೊನೆಗೂ ಕೆಳಗಿಳಿದ ‘ಪುಟ್ಟಕ್ಕನ ಮಕ್ಕಳು’; ಹೊಸ ಧಾರಾವಾಹಿಗೆ ಮಣೆ ಹಾಕಿದ ವೀಕ್ಷಕ