Box Office: ಮೊದಲ ದಿನವೇ ಕೋಟ್ಯಧಿಪತಿಯಾದ ಕೃಷ್ಣಂ ಪ್ರಣಯ ಸಖಿ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ-sandalwood news krishnam pranaya sakhi box office collection day 1 golden star ganesh movie collect 1 25 cr ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Box Office: ಮೊದಲ ದಿನವೇ ಕೋಟ್ಯಧಿಪತಿಯಾದ ಕೃಷ್ಣಂ ಪ್ರಣಯ ಸಖಿ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ

Box Office: ಮೊದಲ ದಿನವೇ ಕೋಟ್ಯಧಿಪತಿಯಾದ ಕೃಷ್ಣಂ ಪ್ರಣಯ ಸಖಿ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ

Krishnam Pranaya Sakhi Box Office Collection Day 1: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾವು ಸ್ವಾತಂತ್ರ್ಯ ದಿನದಂದು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ಈ ವೀಕೆಂಡ್‌ ಈ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ಕೃಷ್ಣಂ ಪ್ರಣಯ ಸಖಿ ಬಾಕ್ಸ್‌ ಆಫೀಸ್‌ ವರದಿ ದಿನ 1
ಕೃಷ್ಣಂ ಪ್ರಣಯ ಸಖಿ ಬಾಕ್ಸ್‌ ಆಫೀಸ್‌ ವರದಿ ದಿನ 1

Krishnam Pranaya Sakhi Box Office Collection Day 1: ಕೃಷ್ಣಂ ಪ್ರಣಯ ಸಖಿ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ದ್ವಾಪರ ದಾಟುತ, ಚಿನ್ನಮ್ಮ ಚಿನ್ನಮ್ಮ ಸೇರಿದಂತೆ ಹಲವು ಹಾಡುಗಳ ಮೋಡಿಗೆ ಪ್ರೇಕ್ಷಕರು ಸಿಲುಕಿದ್ದರು. ಈ ವರ್ಷ ಈ ಸಿನಿಮಾ ನೋಡಲೇಬೇಕು ಎಂದು ಸಾಕಷ್ಟು ಜನರು ಅಂದುಕೊಂಡಿದ್ದರು. ಮುಂಗಾರು ಮಳೆಯ ಬಳಿಕ ಮತ್ತೆ ನಮ್ಮ ಗಣೇಶ್‌ ಸಿಕ್ಕ ಎಂಬ ಖುಷಿಯಲ್ಲಿ ಥಿಯೇಟರ್‌ನತ್ತ ಪ್ರಯಾಣ ಬೆಳೆಸಿದ್ದರು. ಈ ಸಿನಿಮಾ ಪ್ರೇಕ್ಷಕರಿಗೆ ಮುಂಗಾರು ಮಳೆಯ ಫೀಲ್‌ ನೀಡ್ತಾ, ರೋಮಿಯೋ ಸಿನಿಮಾ ನೆನಪಿಸ್ತಾ ಅನ್ನೋದು ಬೇರೆ ವಿಷಯ. ಶ್ರೀನಿವಾಸ್‌ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡಿದೆ ಎನ್ನುವ ವಿಚಾರ ತಿಳಿಯೋಣ.

ಕೃಷ್ಣಂ ಪ್ರಣಯ ಸಖಿ ಬಾಕ್ಸ್‌ ಆಫೀಸ್‌ ಗಳಿಕೆ

ಸಕ್‌ನಿಲ್ಕ್‌.ಕಾಂ ಪ್ರಕಾರ ಮೊದಲ ದಿನ ಅಂದರೆ ಸ್ವಾತಂತ್ರ್ಯ ದಿನದಂದು ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 1.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಬುಧವಾರ ಸಂಜೆಯೇ ಪ್ರೀಮಿಯರ್‌ ಶೋ ಆರಂಭಿಸಿತ್ತು. ಅಂದರೆ, ಕೆಲವು ಥಿಯೇಟರ್‌ಗಳಲ್ಲಿ ಪ್ರೀಮಿಯರ್‌ ಶೋ ಆಯೋಜಿಸಿತ್ತು. ಅಂದಿನ ಗಳಿಕೆಯ ಲೆಕ್ಕ ಇದರಲ್ಲಿ ಸೇರಿರುವುದೇ ಎಂದು ಸಕ್‌ನಿಲ್ಕ್‌ ಖಚಿತಪಡಿಸಿಲ್ಲ. ಒಟ್ಟಾರೆ, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಈ ಸಿನಿಮಾ ಮೊದಲ ದಿನವೇ ಗಲ್ಲಾಪೆಟ್ಟಿಗೆಗೆ 1.25 ಕೋಟಿ ರೂಪಾಯಿ ತುಂಬಿಸಿಕೊಂಡು ಉತ್ತಮ ಆರಂಭ ಪಡೆದಿದೆ. ಸಕ್‌ನಿಲ್ಕ್‌ ತಾಣವು ಬುಕ್‌ಮೈ ಶೋ, ಪೇಟಿಎಂ ಮುಂತಾದ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ತಾಣಗಳಿಂದ ಮಾಹಿತಿ ಸಂಗ್ರಹಿಸಿ ಬಾಕ್ಸ್‌ ಆಫೀಸ್‌ ವರದಿ ಪ್ರಕಟಿಸುತ್ತಿದೆ. ಸಿಂಗಲ್‌ ಥಿಯೇಟರ್‌ಗಳಲ್ಲಿ "ಎರಡು ಟಿಕೆಟ್‌ ಕೊಡಿ ಸಾರ್‌" ಎಂದು ನಗದು ಹಣ ನೀಡಿ ಟಿಕೆಟ್‌ ಖರೀದಿಸುವ ಲೆಕ್ಕ ಸಾಮಾನ್ಯವಾಗಿ ಈ ಬಾಕ್ಸ್‌ ಆಫೀಸ್‌ ವರದಿಯಲ್ಲಿ ಸೇರಿರುವುದಿಲ್ಲ. ಈ ಲೆಕ್ಕದಿಂದಲೂ ನೋಡುವುದಾದರೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಗಳಿಕೆ ಹೆಚ್ಚಿರಬಹುದು.

ಕೃಷ್ಣಂ ಪ್ರಣಯ ಸಖಿ ಸಿನಿಮಾದ ಬಗ್ಗೆ

ಕೃಷ್ಣಂ ಪ್ರಣಯ ಸಖಿ ಸಿನಿಮಾವು ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಸಿನಿಮಾ. ಗಣೇಶ್‌ ಜತೆ ಮಾಳವಿಕಾ ನಾಯರ್‌ ನಟಿಸಿದ್ದಾರೆ. ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಮಾಳವಿಕ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಶರಣ್ಯ ಶೆಟ್ಟಿ ಎರಡನೇ ನಾಯಕಿ. ಇನ್ನುಳಿದಂತೆ ಸಾಧುಕೋಕಿಲಾ, ರಂಗಾಯಣ ರಘು, ಸುಧಾರಾಣಿ, ಶ್ರುತಿ, ಶ್ರೀನಿವಾಸ ಮೂರ್ತಿ ಕೂಡ ನಟಿಸಿದ್ದಾರೆ. ಆಗಸ್ಟ್‌ 15, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾದ ಕುರಿತು ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯ ವ್ಯಕ್ತಪಡಿಸಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕಥೆ

ಶ್ರೀಮಂತ ಉದ್ಯಮಿ ಮತ್ತು ಕಂಪನಿಯೊಂದರ ಸಂಸ್ಥಾಪಕ ಪ್ರಣಯ ಎಂಬ ಯುವತಿಯನ್ನು ಪ್ರೀತಿಸುವ ಸಲುವಾಗಿ ಚಾಲಕನಾಗುತ್ತಾನೆ. ನಾನು ಶ್ರೀಮಂತ ಎಂದಾದರೆ ಈಕೆ ನನ್ನ ನಿರಾಕರಿಸಬಹುದು ಎಂದುಕೊಂಡು ಆಕೆಯ ಬಳಿ ಚಾಲಕನಾಗಿ ಕೆಲಸ ಮಾಡುತ್ತಾನೆ. ಈ ಸಿನಿಮಾದಲ್ಲಿ ವಿಸ್ಮೃತಿಯ ವಿಷಯವೂ ಇದೆ. ಹಲವು ನಾಯಕಿಯರೂ ಇದ್ದಾರೆ. ದೊಡ್ಡ ಅವಿಭಕ್ತ ಕುಟುಂಬದ ಕಥೆಯೂ ಇದೆ.

ಕೃಷ್ಣಂ ಪ್ರಣಯ ಸಖಿ ಹಾಡುಗಳು

ಕೃಷ್ಣಂ ಪ್ರಣಯ ಸಖಿಯಲ್ಲಿ ಹಲವು ಸುಂದರವಾದ ಹಾಡುಗಳಿವೆ. ಕೆಲವು ಹಾಡುಗಳು ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆಗಿದ್ದವು. ಅರ್ಜುನ್‌ ಜನ್ಯ ಸಂಗೀತ, ನಾಗೇಂದ್ರ ಪ್ರಸಾದ್‌, ಜಯಂತ್‌ ಕಾಯ್ಕಿಣಿ ಮುಂತಾದವರ ಸಾಹಿತ್ಯ, ಜನಪ್ರಿಯ ಗಾಯಕಿ, ಗಾಯಕರ ಮಧುರ ಕಂಠದಿಂದ ಮೂಡಿ ಬಂದ ಈ ಹಾಡುಗಳು ಸಾಕಷ್ಟು ಹಿಟ್‌ ಆಗಿತ್ತು. ಅವುಗಳಲ್ಲಿ ದ್ವಾಪರ ದಾಟಲು ಹಾಡು ಸಾಕಷ್ಟು ಜನಪ್ರಿಯತೆ ಪಡೆಯಿತು. ಕೃಷ್ಣಂ ಪ್ರಣಯ ಸಖಿಯಲ್ಲಿ ಮೈ ಮ್ಯಾರೇಜ್‌ ಈಸ್‌ ಫಿಕ್ಸಡ್‌, ಚಿನ್ನಮ್ಮ ಚಿನ್ನಮ್ಮ, ದ್ವಾಪರ ದಾಟಲು, ಹೇ ಗಗನ, ನಿನ್ನ ಹೆಗಲು, ಕಾಡೆದೆಯೇ ಹೇಗಿರಲಿ, ಶ್ರೀ ಕೃಷ್ಣಂ ಜಗತ್ ಕಾರಣಂ ಸೇರಿದಂತೆ ಹಲವು ಹಾಡುಗಳಿವೆ.

ಕೃಷ್ಣಂ ಪ್ರಣಯ ಸಖಿ ಕ್ರಿಟಿಕ್ಸ್‌ ರಿವ್ಯೂ

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಕೆಲವರಿಗೆ ಈ ಸಿನಿಮಾದ ಹಾಸ್ಯ ಇಷ್ಟವಾಗಿದೆ. ಅವಿಭಕ್ತ ಕುಟುಂಬದ ಮಹತ್ವ ಸಾರುವ ಕಥೆ ಇಷ್ಟವಾಗಿದೆ. ಇನ್ನು ಕೆಲವರಿಗೆ ಈ ಸಿನಿಮಾ ಗೊಂದಲದ ಗೂಡಿನಂತೆ ಭಾಸವಾಗಿದೆ. ಅದೇ ಹಳೆ ಗಣಿ ಫಾರ್ಮುಲಾವೇ ಇದೆ ಎಂದಿದ್ದಾರೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವೂ ಕೃಷ್ಣಂ ಪ್ರಣಯ ಸಖಿ ಸಿನಿಮಾದ ವಿಮರ್ಶೆ ಪ್ರಕಟಿಸಿದೆ. 
ಓದಿ: Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ; ಸುಂದರ ಸಂಗೀತದ ನಡುವೆ ನಿರ್ದೇಶಕರು, ಗಣೇಶ್‌ ಮರೆತದ್ದೇನು?