ಬಾಸ್ ಜೈಲಲ್ಲಿದ್ರೂ ಹವಾ, ಹೊರಗಡೆ ಬಂದ್ರೂ ಹವಾ, ನಟ ದರ್ಶನ್ ಟ್ರ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರ? ನಿರ್ದೇಶಕ ಮಹೇಶ್ ಹೇಳಿದ್ದಿಷ್ಟು
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಲ್ಲಿರುವ ದರ್ಶನ್ ಯಾವುದೋ ಟ್ರ್ಯಾಪ್‌ನಲ್ಲಿ ಸಿಲುಕಿಕೊಂಡಿರಲೂಬಹುದು. ಜೈಲಲ್ಲಿದ್ರೂ ದರ್ಶನ್ ಬಾಸ್ ಹವಾ ನಡೆಯುತ್ತೆ, ಹೊರಗೆ ಬಂದರೂ ನಡೆಯುತ್ತದೆ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಲ್ಲಿರುವ ದರ್ಶನ್ ಕುರಿತು ಮದಗಜ ನಿರ್ದೇಶಕ ಮಹೇಶ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಟ ದರ್ಶನ್ ಜೈಲಿನಿಂದ ಎಷ್ಟು ಬೇಗ ಹೊರಗೆ ಬರುತ್ತಾರೋ ಕನ್ನಡ ಸಿನಿಮಾ ಉದ್ಯಮಕ್ಕೆ ಅಷ್ಟು ಒಳ್ಳೆಯದು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. "ಬಾಸ್ ಜತೆ (ನಟ ದರ್ಶನ್ ) ಕಾಟೇರ ಸಿನಿಮಾದಿಂದ ನನ್ನ ಒಡನಾಟವಲ್ಲ. ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ದರ್ಶನ್ ಸರ್‌ನ ಬಲ್ಲೆ. ರಾಬರ್ಟ್ ಸಿನಿಮಾದಿಂದ ನಾನೂ ದರ್ಶನ್ ಹತ್ತಿರವಾಗಿದ್ದೇನೆ. ಕಾಟೇರದಿಂದ ಇನ್ನೂ ಹತ್ತಿರವಾಗ್ತಿವಿ. ಒಂದು ಒಳ್ಳೆಯ ಒಡನಾಟ. ನಿರ್ದೇಶಕರೇ ಅಂತ ಗೌರವ ಕೊಟ್ಟು ಮಾತನಾಡಿಸುವಂತಹ ವ್ಯಕ್ತಿತ್ವ ಅವರದ್ದು. ಯಾರೇ ನಿರ್ದೇಶಕರು ಇದ್ದರೂ ಅವರು ಹೆಸರಿಡಿದು ಕರೆಯೊಲ್ಲ. ನಿರ್ದೇಶಕರೇ ಎಂದು ಕರೆಯುತ್ತಾರೆ" ಎಂದು ನಿರ್ದೇಶಕ ಮಹೇಶ್ ಕುಮಾರ್ ದರ್ಶನ್ ಬಗ್ಗೆ ತಿಳಿಸಿದ್ದಾರೆ.
ಆರೋಪಿಯಷ್ಟೇ, ಅಪರಾಧಿಯಲ್ಲ
"ದರ್ಶನ್ ಸರ್ ಆರೋಪಿಯಷ್ಟೇ, ಅಪರಾಧಿಯಲ್ಲ. ದರ್ಶನ್ ಸರ್ ಜೈಲಲ್ಲಿ ಇದ್ದಾರೆ. ಅಲ್ಲಿ ಏನು ನಡೆದಿದೆ ಎಂದು ನನಗೂ ಗೊತ್ತಿಲ್ಲ ನಿಮಗೂ ಗೊತ್ತಿಲ್ಲ. ಹಲವು ವರ್ಷಗಳ ಕಾಲ ಕಾನೂನು ಓದಿ ವಕೀಲರಾಗಿದ್ದಾರೆ, ಜಡ್ಜ್‌ಗಳಾಗಿದ್ದಾರೆ. ಅವರು ತೀರ್ಮಾನ ಕೈಗೊಳ್ಳುತ್ತಾರೆ. ದರ್ಶನ್ ಅಪರಾಧಿ ಎಂದು ಹೇಳಲು ನನಗೂ ನಿಮಗೂ ಯಾವುದೇ ಹಕ್ಕು ಇಲ್ಲ. ಅದು ನ್ಯಾಯಾಲಯದಲ್ಲಿ ಮಾತ್ರ ನಿರ್ಧಾರವಾಗುವಂತಹದ್ದು" ಎಂದು ಮಹೇಶ್ ಹೇಳಿದ್ದಾರೆ.
ಯಾರು ನಿಜವಾದ ಆರೋಪಿಗಳಿದ್ದಾರೆ? ಅಪರಾಧಿಗಳಿದ್ದಾರೆ.. ಅವರಿಗೆ ಶಿಕ್ಷೆಯಾಗಲಿ. ಮೇಲ್ನೋಟಕ್ಕೆ ನನಗೆ ಅನಿಸುವುದು ಬಾಸ್ ಅವರು ಒಂದು ಟ್ರ್ಯಾಪ್‌ನಲ್ಲಿ ತಗಲಾಕ್ಕಿಕೊಂಡಿರಬಹುದೇನೋ, ಆದಷ್ಟು ಬೇಗ ಅವರು ಹೊರಗಡೆ ಬರಲಿ, ಒಂದು ಮಾತು ಹೇಳ್ತಿನಿ, ಬಾಸ್ ಜೈಲಲ್ಲಿದ್ರೂ ಹವಾ ನಡೆಯುತ್ತ ಇರುತ್ತದೆ, ಹೊರಗಡೆ ಬಂದ್ರೂ ಹವಾ ನಡೆಯುತ್ತೆ" ಎಂದು ಮಹೇಶ್ ಕುಮಾರ್ ಹೇಳಿದ್ದಾರೆ.
"ದರ್ಶನ್ ಜೈಲಲ್ಲಿದ್ರೂ ಹೊರಗಿದ್ರೂ ಅವರ ಹವಾ ನಡೆಯುತ್ತದೆ. ಕನ್ನಡ ಸಿನಿಮಾ ಉದ್ಯಮದ ಮೇರುನಟ ಅವರು. ಅವರು ಇಂಡಸ್ಟ್ರಿಗೆ ಒಂದು ತೂಕ. ಅವರು ಎಷ್ಟು ಬೇಗ ಆಚೆ ಬರ್ತಾರೋ ಇಂಡಸ್ಟ್ರಿಗೆ ಒಳ್ಳೆಯದಾಗುತ್ತದೆ. ಒಳ್ಳೆಯ ಬೆಳವಣಿಗೆಗಳು ಆಗುತ್ತವೆ. ಒಳ್ಳೊಳ್ಳೆಯ ಸಿನಿಮಾಗಳು ಬರುತ್ತೆ. ನೂರಾರು ಕೋಟಿ ರೂಪಾಯಿ ಟರ್ನೊವರ್ ನಮ್ಮ ಇಂಡಸ್ಟ್ರಿಯಲ್ಲಿ ನಡೆಯುತ್ತದೆ. ಅವರು ಕನ್ನಡ ಸಿನಿಮಾ ಬಿಟ್ಟು ಬೇರೆ ಸಿನಿಮಾ ಮಾಡೋಲ್ಲ. ಎಷ್ಟೋ ಕನ್ನಡ ಟೆಕ್ನಿಷಿಯನ್‌ಗಳಿಗೆ ಅವರು ಅವಕಾಶ ನೀಡುತ್ತಾರೆ. ನಾನೊಬ್ಬ ಇಂಡಸ್ಟ್ರಿಯವನ್ನಾಗಿ, ನಿರ್ದೇಶಕನಾಗಿ ನಿಜವಾದ ಅಪರಾಧಿಗೆ ಶಿಕ್ಷೆಯಾಗಲಿ, ನಾನು ದೇವರಲ್ಲಿ ಕೇಳೋದಿಷ್ಟೇ, ದರ್ಶನ್ ಸರ್ ನಿರಾಪರಾಧಿಯಾಗಿ ಹೊರಗೆ ಬರಲಿ" ಎಂದು ಅವರು ಹೇಳಿದ್ದಾರೆ.
ನಿರ್ದೇಶಕ ಮಹೇಶ್ ಕುಮಾರ್ ಅವರು ಮದಗಜ, ಅಯೋಗ್ಯ ಮುಂತಾದ ಸಿನಿಮಾಗಳ ನಿರ್ದೇಶನದಿಂದ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಪಡೆದಿದ್ದಾರೆ.