ಕನ್ನಡ ಸುದ್ದಿ  /  ಮನರಂಜನೆ  /  ಕಿಚ್ಚ ಸುದೀಪ್‌ಗೆ ಆಕ್ಷನ್‌ ಕಟ್ ಹೇಳ್ತಾರೆ ಸಪ್ತಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ಎಂ ರಾವ್‌; ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ

ಕಿಚ್ಚ ಸುದೀಪ್‌ಗೆ ಆಕ್ಷನ್‌ ಕಟ್ ಹೇಳ್ತಾರೆ ಸಪ್ತಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ಎಂ ರಾವ್‌; ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ

ಕಿಚ್ಚ ಸುದೀಪ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮ್ಯಾಕ್ಸ್‌ ಸಿನಿಮಾದ ಬಹುತೇಕ ಶೂಟಿಂಗ್‌ ಮುಗಿಸಿರುವ ಅವರು, ಅದಾದ ಬಳಿಕ ಎರಡು ಸಿನಿಮಾಗಳ ಪೈಪ್‌ಲೈನ್‌ನಲ್ಲಿವೆ. ಈ ನಡುವೆ ಸಂದೇಶ್‌ ಪ್ರೊಡಕ್ಷನ್ಸ್‌ ಜತೆಗೂ ಕೈ ಜೋಡಿಸಿದ್ದಾರೆ ಕಿಚ್ಚ.

Kichcha Sudeep: ಕಿಚ್ಚ ಸುದೀಪ್‌ಗೆ ಆಕ್ಷನ್‌ ಕಟ್ ಹೇಳ್ತಾರೆ ಸಪ್ತಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ಎಂ ರಾವ್‌
Kichcha Sudeep: ಕಿಚ್ಚ ಸುದೀಪ್‌ಗೆ ಆಕ್ಷನ್‌ ಕಟ್ ಹೇಳ್ತಾರೆ ಸಪ್ತಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ಎಂ ರಾವ್‌

Kichcha Sudeep Upcoming Movie: ಕಿಚ್ಚ ಸುದೀಪ್‌ ಸದ್ಯ ಮ್ಯಾಕ್ಸ್‌ ಸಿನಿಮಾದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಬಹುಪಾಲು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸದಲ್ಲಿಯೂ ಈ ಸಿನಿಮಾ ತಂಡ ತೊಡಗಿಸಿಕೊಂಡಿದೆ. ಇದೀಗ ಗ್ಯಾಪ್‌ನಲ್ಲಿಯೇ ಮ್ಯಾಕ್ಸ್‌ ಬಳಿಕ ಕಿಚ್ಚ ಸುದೀಪ್‌ ಯಾವ ಸಿನಿಮಾಕ್ಕೆ ಚಾಲನೆ ನೀಡಲಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಈ ನಡುವೆ ಸುದೀಪ್‌ ಅವರ ಹೊಸ ಸಿನಿಮಾವೊಂದರ ಅಪ್‌ಡೇಟ್‌ ಸಹ ಹೊರಬಿದ್ದಿದ್ದು, ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

ಟ್ರೆಂಡಿಂಗ್​ ಸುದ್ದಿ

ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಈಗಾಗಲೇ ಬಿಗ್‌ ಬಜೆಟ್‌ ಸಿನಿಮಾಗಳನ್ನೂ ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಘೋಸ್ಟ್‌ ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಮತ್ತೊಂದು ಬಿಗ್‌ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಸಂದೇಶ್‌ ನಾಗರಾಜ್.‌

ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಕಿಚ್ಚನ ಸಿನಿಮಾ

ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಜತೆಗೆ ಎನ್‌ ಸಂದೇಶ್‌ ಮತ್ತು ಸಂದೇಶ್‌ ನಾಗರಾಜ್‌ ಒಟ್ಟಿಗೆ ಫೋಟೋಕ್ಕೆ ಪೋಸ್‌ ನೀಡಿದ್ದರು. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಮೊದಲ ಬಾರಿ ಈ ನಿರ್ಮಾಪಕ ಮತ್ತು ನಟನ ಸಿನಿಮಾ ಶುರುವಾಗಲಿದೆಯೇ ಎಂದೇ ಹೇಳಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಸೆಟ್ಟೇರಲಿದೆ.

ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ "ಊಲ್ಫ್‌" ಸಿನಿಮಾ ರೆಡಿಯಾಗಿದೆ. ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ ಘೋಸ್ಟ್‌ 2 ಅಥವಾ ಶಿವಣ್ಣನ ಜತೆಗಿನ ದಳವಾಯಿ ಮುದ್ದಣ್ಣ, ಬೀರಬಲ್ಲ 2 ಸಿನಿಮಾಗಳೂ ಸೆಟ್ಟೇರಲಿವೆ.

ಈಗಾಗಲೇ ಮ್ಯಾಕ್ಸ್‌ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿರುವ ಕಿಚ್ಚ ಸುದೀಪ್‌, ಆ ಚಿತ್ರದ ಬಳಿಕ ಚೇರನ್ ನಿರ್ದೇಶನದ ಸಿನಿಮಾದಲ್ಲಿ ಭಾಗವಹಿಸಲಿದ್ದಾರೆ. ಅದಾದ ನಂತರ ಅನೂಪ್‌ ಭಂಡಾರಿ ಜತೆಗೆ ಬಿಲ್ಲ ರಂಗ ಭಾಷಾ ಚಿತ್ರದಲ್ಲಿಯೂ ನಟಿಸಲಿದ್ದಾರೆ. ಈ ಎರಡು ಸಿನಿಮಾಗಳ ಬಳಿಕವೇ ಸಂದೇಶ್‌ ನಾಗರಾಜ್‌ ಅವರ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಇನ್ನೇನು ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಹಾಗಾದರೆ ಈ ಸಿನಿಮಾಕ್ಕೆ ನಿರ್ದೇಶಕರು ಯಾರು?

ಒಂದಾಗಲಿದೆ ಹೇಮಂತ್‌- ಕಿಚ್ಚ ಜೋಡಿ

ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಮೂಲಕವೇ ಗಮನ ಸೆಳೆದ ಯುವ ನಿರ್ದೇಶಕರಲ್ಲಿ ಹೇಮಂತ್‌ ಎಂ ರಾವ್‌ ಸಹ ಒಬ್ಬರು. ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಸೈಡ್‌ 1 ಮತ್ತು ಸೈಡ್‌ 2 ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ನೆಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ಇದೇ ನಿರ್ದೇಶಕ ಮೊದಲ ಸಲ ಕಿಚ್ಚ ಸುದೀಪ್‌ ಅವರ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಶಿವಣ್ಣನ ಸಿನಿಮಾದಲ್ಲಿ ಹೇಮಂತ್‌ ಬಿಜಿ

ಸದ್ಯ ಶಿವರಾಜ್‌ಕುಮಾರ್‌ ಅವರಿಗೆ ನಿರ್ದೇಶಕ ಹೇಮಂತ್‌ ಎಂ ರಾವ್‌ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಈಗಾಗಲೇ ತೆರೆಮರೆಯಲ್ಲಿ ಅದರ ತಯಾರಿಯೂ ನಡೆದಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದ ಸ್ಕ್ರಿಪ್ಟ್‌ ಕೆಲಸದಲ್ಲಿ ಹೇಮಂತ್‌ ಬಿಜಿಯಾಗಿದ್ದಾರೆ. ಈ ಸಿನಿಮಾ ಮುಗಿದ ಬಳಿಕವೇ ಸುದೀಪ್‌ ಜತೆಗಿನ ಚಿತ್ರದತ್ತ ಅವರು ಮುಖಮಾಡಲಿದ್ದಾರೆ. ಇತ್ತ ಶಿವರಾಜ್‌ಕುಮಾರ್‌ ಉತ್ತರಕಾಂಡ, ಭೈರತಿ ರಣಗಲ್‌, ಅರ್ಜುನ್‌ ಜನ್ಯ ನಿರ್ದೇಶನದ 45 ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಟಿ20 ವರ್ಲ್ಡ್‌ಕಪ್ 2024