Anuradha: ‘ಹೆಣ್ಮಕ್ಕಳು ಚಿತ್ರರಂಗಕ್ಕೆ ಬರಬಾರ್ದು, ಬಂದ್ರೆ ನಾಯಿ ಪಾತ್ರ ಕೊಟ್ರೂ ಮಾಡಬೇಕಿತ್ತು!’ ಐಟಂ ಡಾನ್ಸರ್ ಅನುರಾಧ ಸಿನಿಮಾನುಭವ
ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಐಟಂ ಹಾಡಿನ ಮೂಲಕವೇ ಕ್ರೇಜ್ ಸೃಷ್ಟಿಸಿದ್ದ ನಟಿ ಅನುರಾಧ, ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಂದಿನ ಕಾಲದ ಸಿನಿಮಾಗಳು, ಆವತ್ತಿನ ಮಡಿವಂತಿಕೆ ಬಗ್ಗೆಯೂ ಅನುರಾಧ ನೆನಪುಗಳನ್ನು ಹರವಿದ್ದಾರೆ.
Anuradha: ಬಣ್ಣದ ಲೋಕದಲ್ಲಿ ಐಟಂ ಡಾನ್ಸ್ ಕಲರವ ಶುರುವಾಗಿಯೇ ಹಲವು ದಶಕಗಳು ಉರುಳಿವೆ. ಹಳೇ ಸಿನಿಮಾಗಳಲ್ಲಿ ಆ ಕಲರ್‌ಫುಲ್ ಐಟಂ ಹಾಡನ್ನು ಕಣ್ತುಂಬಿಕೊಳ್ಳಲೆಂದೇ ಅದೆಷ್ಟೋ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದರು. ಆ ಪೈಕಿ ತಮ್ಮ ಡಾನ್ಸ್ ಮೂಲಕವೇ ಎಲ್ಲರ ಗಮನ ಸೆಳೆದು ಒಂದಷ್ಟು ವರ್ಷಗಳ ಕಾಲ ಸೌತ್ ಚಿತ್ರೋದ್ಯಮವನ್ನು ಆಳಿದ ನಟಿಯರಲ್ಲಿ ಅನುರಾಧ ಸಹ ಒಬ್ಬರು. ಈಗ ಇದೇ ನಟಿ ತಮ್ಮ ಸಿನಿಮಾನುಭವನ್ನು ತೆರೆದಿಟ್ಟಿದ್ದಾರೆ.
ಅನುರಾಧಾ ಅವರ ಮೂಲಕ ಹೆಸರು ಸುಲೋಚನಾ ದೇವಿ. ಅಪ್ಪ ಅಮ್ಮನೂ ಚಿತ್ರರಂಗದಲ್ಲಿಯೇ ಸಕ್ರಿಯರು. ಹಾಗಾಗಿ 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ಅನುರಾಧಾ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಓರಿಯಾ ಸೇರಿ 700ಕ್ಕೂ ಅಧಿಕ ಸಿನಿಮಾಗಳಿಗೆ ಡಾನ್ಸರ್ ಆಗಿ ಅನುರಾಧಾ ಸೊಂಟ ಬಳುಕಿಸಿದ್ದಾರೆ. ಹತ್ತಾರು ಸಿನಿಮಾಗಳಿಗೆ ನಾಯಕಿಯಾಗಿಯೂ ನಟಿಸಿದ್ದಾರೆ. ಕನ್ನಡದಲ್ಲಿ 32 ಸಿನಿಮಾಗಳಲ್ಲಿ ಅನುರಾಧ ನಟಿಸಿದ್ದಾರೆ. ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನೃಯ ನಿರ್ದೇಶಕ ಸತೀಶ್ ಕುಮಾರ್ ಜತೆಗೆ ಇವರ ವಿವಾಹವೂ ಆಯ್ತು. ಇಬ್ಬರು ಮಕ್ಕಳೂ ಇವರಿದ್ದಾರೆ. ಸದ್ಯ ಚೆನ್ನೈನಲ್ಲಿ ನೆಲೆಸಿದ್ದಾರೆ ಅನುರಾಧಾ.
ಚಿತ್ರರಂಗದ ಕುಟುಂಬದಿಂದಲೇ ಬಂದಿರುವ ಅನುರಾಧಾ, ನಟಿಯಾಗಿ, ನಾಯಕಿಯಾಗಿಯೂ ಯಶಸ್ಸು ಕಂಡವರು. ಅದಕ್ಕಿಂತ ಹೆಚ್ಚಾಗಿ ಐಟಂ ಡಾನ್ಸರ್ ಆಗಿಯೇ ಮೋಡಿ ಮಾಡಿದವರು. ಈಗ ಇದೇ ನಟಿ ತಮ್ಮ ಅಂದಿನ ಸಿನಿಮಾ ಯಾನವನ್ನು ನೆನಪು ಮಾಡಿಕೊಂಡಿದ್ದಾರೆ. ನಟ, ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ.
ಐಟಂ ಡಾನ್ಸರ್ ಆಗುವುದಕ್ಕೂ ಮೊದಲು 34 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅನುರಾಧಾ, ಮಾದಕ ಹಾಡುಗಳಿಗೆ ಸೊಂಟ ಬಳುಕಿಸುವುದರ ಜತೆಗೆ ನಾಯಕಿಯಾಗಿಯೂ ಅಲ್ಲೊಂದು ಇಲ್ಲೊಂದು ಸಿನಿಮಾಳಲ್ಲಿ ನಾಯಕಿಯಾಗಿಯೂ ನಟಿಸಿದ್ದರು. "ನಾನು ಯಶಸ್ಸನ್ನು ನೋಡಿದ ಮೇಲೆ, ನನಗೆ ಕೆಲಸವೊಂದೇ ಮುಖ್ಯ ಆಗಿತ್ತು. ನಾಯಕಿಯಾಗಿ ಕಾಣಿಸಿಕೊಂಡೆ, ಕಾಮಿಡಿ ಪಾತ್ರ ಮಾಡಿದೆ, ರ್ಯಾಂಪ್ ಮೇಲೂ ಬಂದೆ. ಅದ್ಯಾವ ಮಟ್ಟಿಗೆ ಆಗಿತ್ತು ಅಂದರೆ, ನಿದ್ದೆ ಮಾಡುವುದಕ್ಕೂ ನನ್ನ ಬಳಿ ಸಮಯ ಇರಲಿಲ್ಲ. ಅಷ್ಟೊಂದು ಬಿಜಿಯಾಗಿರುತ್ತಿದೆ" ಎಂದಿದ್ದಾರೆ.
ಮಡಿವಂತಿಕೆ ಕಾಲದಲ್ಲಿಯೇ ಮಿಂಚಿದೆವು..
"ಕೆಲಸದ ವಿಚಾರದಲ್ಲಿ ತುಂಬ ಬದ್ಧತೆ ಇತ್ತು. ಏಳು ಗಂಟೆಗೆ ಕಾಲ್‌ಶೀಟ್ ಅಂದ್ರೆ, 6;30ಕ್ಕೆ ಕಾಸ್ಟೂಮ್ ಹಾಕ್ಕೊಂಡು, ಮೇಕಪ್ ಮಾಡಿಕೊಂಡು ರೆಡಿ ಇರುತ್ತಿದ್ದೆ. ನನ್ನ ಸಮಯಕ್ಕೆ ನಾನು ಅಲ್ಲಿರುತ್ತಿದೆ. ನನ್ನಿಂದ ಲೇಟ್ ಆಗಬಾರದು ಅಂತ ಅಮ್ಮ ಯಾವಾಗಲೂ ಹೇಳುತ್ತಿದ್ದರು. ಈಗಲೂ ನಾನು ಅದನ್ನು ಪಾಲಿಸುತ್ತಲೇ ಬಂದಿದ್ದೇನೆ. ಆಗಿನ ಕಾಲದಲ್ಲಿ ಮಡಿವಂತಿಕೆ ಹೆಚ್ಚು. ನಮ್ಮ ಕಿವಿಗೆ ಕೇಳುವ ಹಾಗೆ ಸಾಕಷ್ಟು ಚುಚ್ಚು ಮಾತುಗಳನ್ನು ನಾನು ಕೇಳಿದ್ದೇನೆ. ಕ್ಯಾಬ್ರೆ ಡಾನ್ಸರ್ ಅಂದವರೂ ಸಾಕಷ್ಟು ಮಂದಿ. ಆದರೆ, ಕೆಲಸದ ವಿಚಾರದಲ್ಲಿ ನಾನು ತುಂಬ ಕಟ್ಟುನಿಟ್ಟು. ಅದರಿಂದ ಅನ್ನ ಸಿಗುತ್ತದೆ ಅಂದ ಮೇಲೆ ನಾವು ಆ ಕೆಲಸಕ್ಕೆ ಗೌರವ ಕೊಡಬೇಕು.
ನಾಯಿ ಪಾತ್ರ ಕೊಟ್ರೂ ಮಾಡಬೇಕಿತ್ತು..
ನಟನೆ ನಮ್ಮ ವೃತ್ತಿ. ನಾಯಿ ಪಾತ್ರ ಕೊಟ್ಟರೂ, ಆ ಪಾತ್ರಕ್ಕೆ ನಾವು ನ್ಯಾಯ ಒದಗಿಸಬೇಕು. ಸೆಟ್‌ನಲ್ಲಿ ಅಯ್ಯೋ ನನ್ನನ್ನು ನೋಡ್ತಾರೆ, ನನ್ನ ಮೈ ಕಾಣ್ತಿದೆಮ ಮುಜುಗರ ಆಗ್ತಿದೆ ಅಂತ ಹೇಳಲು ಆಗುತ್ತಿರಲಿಲ್ಲ. ಕೆಲಸದ ವಿಚಾರದಲ್ಲಿ ಬದ್ಧತೆ ತುಂಬ ಮುಖ್ಯ. ಆ ಸಮಯದಲ್ಲಿ ನನ್ನ ಹಾಡು ಸಿನಿಮಾದಲ್ಲಿದೆ ಎಂದರೆ, ಸಾಲು ಸಾಲು ಡಿಸ್ಟ್ರಿಬ್ಯೂಟರ್ಸ್‌ಗಳು ಆ ಸಿನಿಮಾ ತೆಗೆದುಕೊಳ್ಳಲು ಬರ್ತಿದ್ರು. ಚಿತ್ರಮಂದಿರದ ಮುಂದೆ ಹೀರೋ ಸಮ ಕಟೌಟ್ ಸಹ ನಿಲ್ಲಿಸುತ್ತಿದ್ದರು" ಎಂದು ನೆನಪಿಸಿಕೊಂಡಿದ್ದಾರೆ ಅನುರಾಧಾ.
ಹೆಣ್ಮಕ್ಕಳು ಚಿತ್ರರಂಗಕ್ಕೆ ಬರಬಾರ್ದು, ಬಂದ್ರೆ...
ಚಿತ್ರರಂಗಕ್ಕೆ ಮೊದಲನೇದಾಗಿ ಹೆಣ್ಮಕ್ಕಳು ಬರಬಾರ್ದು. ಬಂದ್ರೆ, ಹುಕ್ ಆರ್ ಕುಕ್ ಸ್ಟ್ಯಾಂಡ್ ಆಗಬೇಕು. ನಾಯಕಿಯಾಗಿ, ಕಾಮಿಡಿಯನ್ ಆಗಿ ಅಥವಾ ಸೋಲೋ ಡಾನ್ಸರ್.. ಎಲ್ಲ ರೀತಿಯ ಪಾತ್ರವನ್ನು ಒಪ್ಪಿಕೊಳ್ಳಲೇಬೇಕು. ಯಾಕೆಂದ್ರ, ಯಾವ ಪಾತ್ರ ಯಾವಾಗ ಕ್ಲಿಕ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ನಾನೂ ಸಹ ಸಿಕ್ಕ ಪಾತ್ರವನ್ನು ಮಾಡುತ್ತ ಬಂದೆ. ಅಚ್ಚರಿಯ ವಿಚಾರ ಏನೆಂದರೆ, ನಾಯಕಿಯಾಗಿಯೂ ಯಶಸ್ಸು ಸಿಕ್ಕಿತ್ತು. ಜತೆಗೆ ಡಾನ್ಸರ್ ಆಗಿಯೂ ಜನ ಮೆಚ್ಚಿಕೊಂಡರು" ಎಂದಿದ್ದಾರೆ ಅನುರಾಧಾ.