Silk Smitha: ‘ಆತನನ್ನು ಕುರುಡಾಗಿ ನಂಬಿದಳು, ಆ ತಪ್ಪು ಸಿಲ್ಕ್ ಸ್ಮಿತಾಳ ಜೀವವನ್ನೇ ಬಲಿಪಡೆಯಿತು!’ ಅಸಲಿ ಸತ್ಯ ತೆರೆದಿಟ್ಟ ಜಯಮಾಲಿನಿ
ಚಿಕ್ಕ ವಯಸ್ಸಲ್ಲೇ ಯಶಸ್ಸನ್ನು ಕಂಡವರಲ್ಲಿ ಸಿಲ್ಕ್ ಸ್ಮಿತಾ ಸಹ ಒಬ್ಬರು. ಕಿರು ಅವಧಿಯಲ್ಲಿಯೇ ಹಣ ಮತ್ತು ಹೆಸರು ಇವರ ಜತೆಗಿತ್ತು. ಆದರೆ, ಪ್ರೀತಿಯ ಹೆಸರಲ್ಲಿ ಮೋಸ ಹೋಗಿ ಅದೇ ಚಿಕ್ಕವಯಸ್ಸಲ್ಲೇ ಪ್ರಾಣ ಕಳೆದುಕೊಂಡರು. ಆ ಸಾವಿಗೆ ಕಾರಣ ಏನೆಂಬುದನ್ನು ಆ ಕಾಲದ ಐಟಂ ಡಾನ್ಸರ್ ಜಯಮಾಲಿನಿ ಹೇಳಿಕೊಂಡಿದ್ದಾರೆ.
Jayamalini about Silk Smitha Death: ಬಹುಭಾಷೆಯಲ್ಲಿ ತಮ್ಮ ಮಾದಕ ನೃತ್ಯದ ಮೂಲಕವೇ ಆಗಿನ ಕಾಲದಲ್ಲಿ ಹಲ್‌ಚಲ್ ಸೃಷ್ಟಿಸಿದ್ದರು ನಟಿ, ಐಟಂ ಡಾನ್ಸರ್ ಸಿಲ್ಕ್ ಸ್ಮಿತಾ. ಗಾಡ್ ಫಾದರ್ ಹಂಗಿಲ್ಲದೆ ಚಿತ್ರರಂಗಕ್ಕೆ ಬಂದ ಈ ಬೆಡಗಿ, ಕಡಿಮೆ ವರ್ಷಗಳ ಕಾಲ ಚಿತ್ರದಲ್ಲಿ ಇದ್ದರೂ, ಇದ್ದಷ್ಟು ದಿನ, ರಾಣಿಯಂತೆ ಮೆರೆದರು. ಹಣ, ಹೆಸರು ಎಲ್ಲವೂ ಈಕೆಯ ಕಾಲ ಕೆಳಗಿತ್ತು. ಆ ಮಟ್ಟಿಗಿನ ಪಾಪ್ಯುಲಾರಿಟಿ ಈ ಸಿಲ್ಕ್ ಸ್ಮಿತಾಗಿತ್ತು. ಒಂದೇ ಚಿತ್ರೋದ್ಯಮಕ್ಕೆ ಸೀಮಿತವಾಗದೆ, ಸೌತ್‌ನ ನಾಲ್ಕೂ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಬಾಲಿವುಡ್‌ನಲ್ಲೂ ಖ್ಯಾತಿ ಪಡೆದಿದ್ದರು.
ಬಹುಭಾಷೆಗಳಲ್ಲಿ ಮಿಂಚಿದ ನಟಿ
ಸಿಲ್ಕ್ ಸ್ಮಿತಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1979ರಲ್ಲಿ ಮಲಯಾಳಂ ಚಿತ್ರರಂಗದಿಂದ ನಟನೆ ಆರಂಭಿಸಿದ ವಿಜಯಲಕ್ಷ್ಮೀ ವದ್ಲಪಾಟಿ, ತಮಿಳಿನ ವಂದಿಚಕ್ರಂ ಸಿನಿಮಾದಲ್ಲಿ ಸಿಲ್ಕ್ ಹೆಸರಿನ ಬಾರ್ ಡಾನ್ಸರ್ ಪಾತ್ರದ ಮೂಲಕ ಗುರುತಿಸಿಕೊಂಡರು. ಅಲ್ಲಿಂದ ಸಿಲ್ಕ್ ಸ್ಮಿತಾ ಎಂದೇ ಪರಿಚಿತರಾದರು. ಕನ್ನಡದಲ್ಲೂ ಗೆದ್ದ ಮಗ, ಪ್ರಚಂಡ ಕುಳ್ಳ, ಕುಂಕುಮ ತಂದ ಸೌಭಾಗ್ಯ, ಟೈಗರ್ ಸೇರಿ ಹತ್ತಾರು ಸಿನಿಮಾಗಳಲ್ಲಿ ಸ್ಮಿತಾ ನಟಿಸಿದ್ದಾರೆ.
ಚಿತ್ರೋದ್ಯಮವನ್ನೇ ಶಾಕ್‌ಗೆ ದೂಡಿತ್ತು ಸಿಲ್ಕ್ ಆತ್ಮಹತ್ಯೆ
ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ, ಇದೇ ನಟಿ ಆತ್ಮಹತ್ಯೆಗೆ ಶರಣಾಗಿ ಚಿತ್ರೋದ್ಯಮವನ್ನೇ ಶಾಕ್‌ಗೆ ದೂಡಿದರು. ಆವತ್ತಿನ ಸಿಲ್ಕ್ ಸ್ಮಿತಾ ಅವರ ಆ ನಿರ್ಧಾರ ಹತ್ತು ಹಲವು ಅಚ್ಚರಿಗಳಿಗೆ ಕಾರಣವಾಗಿತ್ತು. ತರಹೇವಾರಿ ಅನುಮಾನಗಳು, ಹತ್ತಾರು ಹೆಸರುಗಳು ತಳುಕು ಹಾಕಿಕೊಂಡಿದ್ದವು. ಆದರೆ, ಏನೇ ಉತ್ತರ ಸಿಕ್ಕರೂ, ಆಕೆ ಮಾತ್ರ ಬದುಕುಳಿಯಲಿಲ್ಲ. ಈಗ ಇದೇ ನಟಿಯ ಆತ್ಮಹತ್ಯೆಯ ಬಗ್ಗೆ ಮಾಜಿ ಐಟಂ ಡಾನ್ಸರ್ ಜಯಮಾಲಿನಿ ಅಚ್ಚರಿಯ ವಿಚಾರಗಳನ್ನು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಸಿಲ್ಕ್ ಬಗ್ಗೆ ಜಯಮಾಲಿನಿ ಹೇಳುವುದೇನು?
"ಸಿಲ್ಕ್ ಸ್ಮಿತಾ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಆ ಹೆಸರಿಗೆ ತಕ್ಕಂತೆ ಹಣವೂ ಅವರ ಜತೆಗಿತ್ತು. ಜನಪ್ರಿಯತೆಯೂ ಉತ್ತುಂಗದಲ್ಲಿತ್ತು. ಸಿನಿಮಾ ಶೂಟಿಂಗ್ ಸಮಯದಲ್ಲಿ ಹೆಚ್ಚು ಮಾತಾಡುತ್ತಿರಲಿಲ್ಲ. ಹೀಗಿರುವಾಗಲೇ ಒಂದು ದಿನ ನಾನು, ನನ್ನ ತಂಗಿ ಜ್ಯೋತಿ ಲಕ್ಷ್ಮೀ ಮತ್ತು ಸಿಲ್ಕ್ ಸ್ಮಿತಾ ಒಟ್ಟಿಗೆ ಮೂರೂ ಜನ ಸ್ಟಾರ್ ನಟನ ಸಿನಿಮಾದಲ್ಲಿ ನಟಿಸಿದ್ದೇವು. ಆಕೆಯೇ ಆ ಚಿತ್ರಕ್ಕೆ ನಾಯಕಿ. ಹೀಗಿರುವಾಗಲೇ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಸ್ಮಿತಾ ಆತ್ಮಹತ್ಯೆ ನಿರ್ಧಾರ ಮಾಡಿಯೇ ಬಿಟ್ಟಳು. ಅದೇ ಅವಳು ಮಾಡಿದ ದೊಡ್ಡ ತಪ್ಪು!" ಎಂದಿದ್ದಾರೆ ಜಯಮಾಲಿನಿ.
ಪ್ರೀತಿಸಿದವನ ಕುರುಡಾಗಿ ನಂಬಿ ಮೋದ ಹೋದಳು!
"ತನ್ನ ಆಪ್ತರನ್ನು ಆಕೆ ನಡು ನೀರಿನಲ್ಲಿ ಕೈ ಬಿಟ್ಟು, ಇನ್ನೊಬ್ಬನ ಹಿಂದೆ ಹೋಗಬಾರದಿತ್ತು. ಪ್ರೀತಿಸುವುದು ತಪ್ಪಲ್ಲ. ಆದರೆ, ಪ್ರೀತಿ ಪಾತ್ರರನ್ನು ಬಿಟ್ಟು ಹೋಗುವುದು ದೊಡ್ಡ ತಪ್ಪು. ಆಕೆ ಪ್ರೀತಿಸಿದವನನ್ನು ಕುರುಡಾಗಿ ನಂಬಿದಳು. ಆದರೆ, ಆತ ಆಕೆಯಿಂದ ಎಲ್ಲವನ್ನು ಲಪಟಾಯಿಸಿ ಕೈ ಬಿಟ್ಟು ಹೋದ. ಮೋಸ ಮಾಡಿದ. ಆ ಸಮಯದಲ್ಲಿ ಆಕೆಯ ಬಳಿ ಯಾರೂ ಇರಲಿಲ್ಲ. ಅದಾಗಲೇ ಸಂಬಂಧಿಕರಿಂದಲೂ ಸ್ಮಿತಾ ದೂರವಾಗಿದ್ದಳು. ಆ ಖಿನ್ನತೆಯೇ ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿತು. ಆ ನೋವಿನಿಂದಲೇ ಸಾವಿಗೀಡಾದಳು" ಎಂದು ಜಯಮಾಲಿನಿ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಂದಹಾಗೆ, 1960ರಲ್ಲಿ ಆಂಧ್ರಪ್ರದೇಶದ ಏಲೂರಿನಲ್ಲಿ ಜನಿಸಿದ ಸ್ಮಿತಾ, ಕೇವಲ 35ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು. 1996ರಲ್ಲಿ ಚೆನ್ನೈನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರು.
ವಿಭಾಗ