ದಿವಂಗತ ಸರೋಜಾ ಸಂಜೀವ್ ಮಂಗಳೂರಿನವರು; ಮಾತೃವಿಯೋಗದಲ್ಲಿರುವ ಕಿಚ್ಚ ಸುದೀಪ್ ಕುಟುಂಬದ ಪರಿಚಯ
ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ ಅನಾರೋಗ್ಯದಿಂದ ನಿಧನರಾದ ಸುದ್ದಿ ಕೇಳಿ ನಟನ ಅಭಿಮಾನಿಗಳು ಬೇಸರದಲ್ಲಿದ್ದಾರೆ. ಸುದೀಪ್ ತಾಯಿ ಮಂಗಳೂರು ಮೂಲದವರು. ಸುದೀಪ್ ತಂದೆ ತಾಯಿ, ಕುಟುಂಬದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಕಿಚ್ಚ ಸುದೀಪ್ ಮಾತೃವಿಯೋಗದಲ್ಲಿದ್ದಾರೆ. ಬಿಗ್ಬಾಸ್ ಕನ್ನಡದಲ್ಲಿ ವೀಕೆಂಡ್ನಲ್ಲಿ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದ ಸುದೀಪ್ ಮನೆಯಲ್ಲಿ ಶೋಕ ಆವರಿಸಿದೆ. ಸುದೀಪ್ ಅಮ್ಮ ಸರೋಜ ಸಂಜೀವ್ ಮೃತಪಟ್ಟ ಸುದ್ದಿ ಕೇಳಿ ಕಿಚ್ಚನ ಅಭಿಮಾನಿಗಳ ಮನದಲ್ಲಿಯೂ ಬೇಸರ ಮೂಡಿದೆ. ಅಮ್ಮನ ಬಗ್ಗೆ ಸುದೀಪ್ ವೇದಿಕೆಗಳಲ್ಲಿ ಮಾತನಾಡಿದ್ದೇ ಕಡಿಮೆ. ಆದರೆ, ಕೆಲವು ತಿಂಗಳುಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮ್ಮನ ಮಂಗಳೂರು ಹಿನ್ನೆಲೆ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದರು.
"ನನ್ನ ಅಮ್ಮ ಮಂಗಳೂರಿನವರು. ನನ್ನ ಅಪ್ಪ ಇಡೀ ಕರ್ನಾಟಕ ಎಲ್ಲಾ ಹುಡುಕಿ ಮಂಗಳೂರಿನ ಹುಡುಗಿಯನ್ನು ಇಷ್ಟಪಟ್ಟು ಮದುವೆಯಾಗಿದ್ದರು. ನನ್ನ ತಾಯಿ ತುಂಬಾ ಚೆನ್ನಾಗಿ ತುಳು ಮಾತನಾಡುತ್ತಾರೆ. ಒಂದಿನ ನಾನೇ ಅವರನ್ನು ಕಳುಹಿಸಿಕೊಡುವೆ, ಅವರಲ್ಲಿ ತುಳು ಮಾತನಾಡಿ" ಎಂದು ಮಂಗಳೂರಿನಲ್ಲಿ ನಡೆದ ಯಕ್ಷ ಪಟ್ನ ಕಾರ್ಯಕ್ರಮದಲ್ಲಿ ಅಮ್ಮನ ಬಗ್ಗೆ ಪ್ರೀತಿಯಿಂದ ಸುದೀಪ್ ಮಾತನಾಡಿದ್ದರು
ಕಿಚ್ಚ ಸುದೀಪ್ ತಂದೆ ಮತ್ತು ತಾಯಿ
ಶಿವಮೊಗ್ಗ ಜಿಲ್ಲೆಯ ಸಂಜೀವ್ ಮಂಜಪ್ಪ ಸುದೀಪ್ ತಂದೆ. ಸರೋಜಾ ಸಂಜೀವ್ ಅವರು ಕಿಚ್ಚ ಸುದೀಪ್ ತಾಯಿ. ಸುದೀಪ್ 1971ರ ಸೆಪ್ಟೆಂಬರ್ 2 ರಂದು ಜನಿಸಿದರು. ಸುದೀಪ್ ತಂದೆ ಸಂಜೀವ್ ಮಂಜಪ್ಪ ಅವರು ಹೋಟೆಲ್ ಉದ್ಯಮದ ಜತೆಗೆ ಸಿನಿಮಾ ನಿರ್ಮಾಪರಾಗಿಯೂ ಜನಪ್ರಿಯತೆ ಪಡೆದಿದ್ದರು. ಸಂಜೀವ್ ಅವರು ತಾಯವ್ವ ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸಿದ್ದರು.
ಸುದೀಪ್ ಪತ್ನಿ ಯಾರು?
ಕಿಚ್ಚ ಸುದೀಪ್ ಪತ್ನಿ ಹೆಸರು ಪ್ರಿಯಾ. 2001ರಲ್ಲಿ ಪ್ರಿಯಾ ಜತೆ ಲವ್ ಮ್ಯಾರೇಜ್ ಆಗಿದ್ದರು. ಪ್ರಿಯಾ ಏರ್ಲೈನ್ನಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು.
ಸುದೀಪ್ ಮಗಳ ಹೆಸರೇನು?
ಸಾನ್ವಿ ಸುದೀಪ್. "ನನ್ನಪ್ಪ ವೇದಿಕೆ ಮೇಲೆ ಹೇಗೆ ಇರುತ್ತಾರೋ, ಮನೆಯಲ್ಲೂ ಹಾಗೆಯ ಇರುತ್ತಾರೆ. ನಾನು ತಂದೆಯಿಂದ ಸಾಕಷ್ಟು ಕಲಿತಿರುವೆ. ನನಗೆ ತಾಳ್ಮೆ ಮತ್ತು ಕೋಪ ನಿಯಂತ್ರಿಸುವುದನ್ನು ಹೇಳಿಕೊಟ್ಟಿರುವುದೇ ತಂದೆ" ಎಂದು ಫಾದರ್ಸ್ ಡೇ ಸಮಯದಲ್ಲಿ ಸಾನ್ವಿ ಸುದೀಪ್ ಕಿಚ್ಚ ಸುದೀಪ್ ಬಗ್ಗೆ ಹೇಳಿದ್ದರು.
ಸುದೀಪ್ ಸಹೋದರಿಯರು ಯಾರು?
ಸುದೀಪ್ಗೆ ಸುಜತಾ ಮತ್ತು ಸುರೇಖಾ ಎಂಬ ಇಬ್ಬರು ಸಹೋದರಿಯರು ಇದ್ದಾರೆ.
ಸುದೀಪ್ ಶಿಕ್ಷಣ
ಕಿಚ್ಚ ಸುದೀಪ್ ಅವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಇಂಡಸ್ಟ್ರಿಯಲ್ ಆಂಡ್ ಪ್ರೊಡಕ್ಷನ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ನಲ್ಲೂ ತರಬೇತಿ ಪಡೆದಿದ್ದಾರೆ.