Tanaav Season 2 Review: ಬಾಲಿವುಡ್ ಚಮೇಲಿಗಳ ಮುಖವಾಡ ತೋರಿಸುವ 'ತನಾವ್' ಸರಣಿ; ರಾಜೀವ್‌ ಹೆಗಡೆ ಬರಹ-tanaav season 2 review two sides of same story about kashmir directed by sudhir mishra smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Tanaav Season 2 Review: ಬಾಲಿವುಡ್ ಚಮೇಲಿಗಳ ಮುಖವಾಡ ತೋರಿಸುವ 'ತನಾವ್' ಸರಣಿ; ರಾಜೀವ್‌ ಹೆಗಡೆ ಬರಹ

Tanaav Season 2 Review: ಬಾಲಿವುಡ್ ಚಮೇಲಿಗಳ ಮುಖವಾಡ ತೋರಿಸುವ 'ತನಾವ್' ಸರಣಿ; ರಾಜೀವ್‌ ಹೆಗಡೆ ಬರಹ

OTT - Tanaav Season 2 : ‘ತನಾವ್‌-ಟು ಸೈಡ್‌ ಆಫ್‌ ದಿ ಸೇಮ್‌ ಸ್ಟೋರಿ’ ಎನ್ನುವ ಅಡಿ ಬರಹದಲ್ಲಿ ಮೂಡಿ ಬಂದ ಸರಣಿ ಭಾರತ ವಿರೋಧಿ ಅಂಶವನ್ನು ತೋರಿಸುವ ಪ್ರಯತ್ನ ಮಾಡಿಲ್ಲ ಎಂದುಕೊಂಡೇ, ಜಮ್ಮು-ಕಾಶ್ಮೀರದ ಎರಡು ಮುಖ ತೋರಿಸಲು ಹೊರಟಿದ್ದೇನೆ ಎಂದು ಹೇಳುವ ನಿರ್ದೇಶಕ ಮಾಡಿದ್ದೇನು? ಇಲ್ಲಿದೆ ಈ ಬಗ್ಗೆ ಮಾಹಿತಿ. (ಬರಹ - ರಾಜೀವ್ ಹೆಗಡೆ)

ತನಾವ್‌-ಟು ಸೈಡ್‌ ಆಫ್‌ ದಿ ಸೇಮ್‌ ಸ್ಟೋರಿ
ತನಾವ್‌-ಟು ಸೈಡ್‌ ಆಫ್‌ ದಿ ಸೇಮ್‌ ಸ್ಟೋರಿ (Sony)

ಬಾಲಿವುಡ್‌ ಮಂದಿಗೆ ತಲೆಯಿಲ್ಲ ಎಂದು ಸಾಕಷ್ಟು ಕಲಾವಿದರೇ ಈಗಾಗಲೇ ಷರಾ ಒತ್ತಿದ್ದಾರೆ. ಇತ್ತೀಚೆಗೆ ನಮ್ಮ ರಿಷಬ್‌ ಶೆಟ್ಟಿ ಕೂಡ ಈ ಬಗ್ಗೆ ಮಾತನಾಡಿ, ದೇಶದ ಬಗ್ಗೆ ನಕಾರಾತ್ಮಕವಾಗಿ ತೋರಿಸಿ ಪ್ರಶಸ್ತಿ ಪಡೆಯುವುದು ಇವರ ಚಾಳಿಯೆಂದು ಹೇಳಿದ್ದರು. ಇದರ ಬೆನ್ನಲ್ಲೇ ಕಂದಹಾರ್‌ ಹೈಜಾಕ್‌ಗೆ ಸಂಬಂಧಿಸಿದ ಸರಣಿಯೊಂದು ಭಯೋತ್ಪಾದಕರ ಹೆಸರಿಗೆ ಸಂಬಂಧಿಸಿ ವಿವಾದಕ್ಕೆ ಕಾರಣವಾಯಿತು. ಆದರೆ ಇವೆಲ್ಲದರ ಮಧ್ಯೆ ಸುಧೀರ್‌ ಮಿಶ್ರಾ ಎನ್ನುವ ಹಿರಿಯ ನಿರ್ದೇಶಕರೊಬ್ಬರು ಮಾಡಿದ ʼತನಾವ್‌ʼ ಎನ್ನುವ ಸರಣಿ ಅಷ್ಟೊಂದು ಸುದ್ದಿ ಆಗಿಲ್ಲ ಅಥವಾ ನನ್ನ ಗಮನಕ್ಕೆ ಬಂದಿಲ್ಲ.

ʼತನಾವ್‌-ಟು ಸೈಡ್‌ ಆಫ್‌ ದಿ ಸೇಮ್‌ ಸ್ಟೋರಿʼ ಎನ್ನುವ ಅಡಿ ಬರಹದಲ್ಲಿ ಈ ಸರಣಿಯು ನಿರ್ಮಾಣವಾಗಿದೆ. ಜಮ್ಮು-ಕಾಶ್ಮೀರದಲ್ಲಿನ ಸೇನೆ, ಗುಪ್ತಚರ ವಿಭಾಗ ಹಾಗೂ ಅಲ್ಲಿಯ ʼಸ್ವಾತಂತ್ರ್ಯ ಹಾರಾಟʼದ ಕಥೆಯ ಎರಡು ಮುಖವನ್ನು ನಿಮ್ಮ ಮುಂದಿಡುತ್ತೇವೆ ಎನ್ನುವುದು ʼಚಮೇಲಿʼ ಖ್ಯಾತಿಯ ಸುಧೀರ್‌ ಮಿಶ್ರಾರ ಒಕ್ಕಣಿಕೆಯಾಗಿದೆ.

ಸುಧೀರ್‌ ಮಿಶ್ರಾ ಮಾಡಿರುವ ಎಡವಟ್ಟನ್ನು ನನ್ನ ಬರವಣಿಗೆಯಲ್ಲೂ ಮಾಡಿದರೆ ತಪ್ಪಾಗುತ್ತದೆ. ಅಂದ್ಹಾಗೆ ಈ ಸರಣಿಯು ಇಸ್ರೇಲಿ ಗುಪ್ತಚರ ವಿಭಾಗದ ಆಪರೇಷನ್‌ಗೆ ಸಂಬಂಧಿಸಿದ ಖ್ಯಾತ ʼಫೌದಾʼ ಸರಣಿಯನ್ನು ಆಧರಿಸಿ ಭಾರತದಲ್ಲೂ ರಿಮೇಕ್‌ ಮಾಡಲಾಗಿದೆ. ಪ್ಯಾಲೇಸ್ತೈನ್‌, ಗಾಜಾಪಟ್ಟಿ ಹಾಗೂ ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್‌ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ʼಫೌದಾʼ ಸರಣಿಯಲ್ಲಿ ಒಂದು ತಂಡದ ಉದಾಹರಣೆ ಮೂಲಕ ವಿವರಿಸಲಾಗಿದೆ. ಆದರೆ ಚಮೇಲಿ ನಿರ್ದೇಶಕನ ತಲೆ ಎಷ್ಟರ ಮಟ್ಟಿಗೆ ಹಾಳಾಗಿದೆಯೆಂದರೆ, ಇಸ್ರೇಲ್-ಪ್ಯಾಲೇಸ್ತೈನ್ ಹಾಗೂ ಜಮ್ಮು ಕಾಶ್ಮೀರದ ಭೌಗೋಳಿಕ, ರಾಜಕೀಯ ವ್ಯತ್ಯಾಸವೂ ತಿಳಿಯದೇ ಅತ್ಯಂತ ಕೆಟ್ಟ ರೀತಿಯಲ್ಲಿ ಒಂದು ಸರಣಿ ಮಾಡುತ್ತಿದ್ದಾರೆ. ವಿಪರ್ಯಾಸವೆದರೆ ರಿಮೇಕ್‌ ಹೆಸರಲ್ಲಿ ಜಮ್ಮು-ಕಾಶ್ಮೀರದ ಬಗ್ಗೆ ಹಸಿ ಸುಳ್ಳು ಹಾಗೂ ತನ್ನದೇ ಮಾನಸಿಕ ಗುಲಾಮಿತನವನ್ನು ಜಗತ್ತಿಗೆ ತೋರಿಸುತ್ತಿರುವ ಸುಧೀರ್‌ ಮಿಶ್ರಾನ ತಂಡದ ಬಗ್ಗೆ ಯಾವುದೇ ದೊಡ್ಡ ಪ್ರತಿಭಟನೆ, ದೂರು ಕಾಣಿಸುತ್ತಿಲ್ಲ.

ಸರಣಿಯಲ್ಲಿ ಭಾರತ ವಿರೋಧಿ ಅಂಶವನ್ನು ತೋರಿಸುವ ಪ್ರಯತ್ನ ಮಾಡಿಲ್ಲ ಎಂದುಕೊಂಡೇ, ಜಮ್ಮು-ಕಾಶ್ಮೀರದ ಎರಡು ಮುಖ ತೋರಿಸಲು ಹೊರಟಿದ್ದೇನೆ ಎಂದು ಹೇಳುವ ನಿರ್ದೇಶಕ, ಭಾರತದ ಸಾರ್ವಭೌಮ ಹಾಗೂ ಸೇನೆ ವಿರುದ್ಧ ದೊಡ್ಡ ಅಪಚಾರ ಮಾಡುವ ಕೆಲಸ ಮಾಡಿದ್ದಾರೆ. ಸರಣಿಯ ಆರಂಭದಲ್ಲಿ ʼಫೌದಾʼ ರಿಮೇಕ್‌ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ರಿಮೇಕ್‌ ಆಗಿರುವುದರಿಂದ ಅಲ್ಲಿ ಬರುವ ಘಟನೆ ಹಾಗೂ ಸ್ಥಳಗಳನ್ನು ಗಾಜಾಪಟ್ಟಿ, ಪ್ಯಾಲೆಸ್ತೈನ್‌ ಹಾಗೂ ಇಸ್ರೇಲ್‌ಗೆ ಸೀಮಿತ ಮಾಡಬಹುದಿತ್ತು ಅಥವಾ ಕಾಲ್ಪನಿಕವಾಗಿ ಇಡಬಹುದಿತ್ತು. ಆದರೆ ಈ ಪುಣ್ಯಾತ್ಮ ಮಧ್ಯ ಪ್ರಾಚ್ಯದ ಯಾವುದೇ ರಾಜಕೀಯ ಹಾಗೂ ಭೌಗೋಳಿಕ ಸಂಗತಿಗೆ ಹೊಂದದ ಕಾಶ್ಮೀರದ ಹೆಸರನ್ನು ಇರಿಸಿಕೊಂಡು, ಕಣಿವೆ ರಾಜ್ಯದ ಎರಡು ಮುಖ ತೋರಿಸುತ್ತೇನೆ ಎಂದು ಸುಳ್ಳಿನ ಕಂತೆ ಕಟ್ಟಿದ್ದಾರೆ.

ತಲೆಬುಡವಿಲ್ಲದ ಕಥೆಕಟ್ಟಿದರೆ ಹೇಗೆ?

ʼಫೌದಾʼದಿಂದ ಪ್ರಭಾವಿತರಾಗಿ ಕಾಶ್ಮೀರವನ್ನು ಅಧ್ಯಯನ ಮಾಡಿ ಇವರಿಗೆ ಕಾಣಿಸುವ ಎರಡು ಮುಖವನ್ನಾದರೂ ತೋರಿಸುವ ಪ್ರಯತ್ನ ಮಾಡಿದ್ದರೆ ಅದನ್ನು ಒಪ್ಪಬಹುದು. ಆದರೆ ಕಾಶ್ಮೀರದ ಯಾವುದೇ ಮುಖವನ್ನು ಅಧ್ಯಯನ ಮಾಡದೇ, ಇಸ್ರೇಲ್‌-ಪ್ಯಾಲೇಸ್ತೈನ್‌ನ ಕನ್ನಡಕದಲ್ಲಿ ನಮ್ಮ ಕಾಶ್ಮೀರವನ್ನು ನೋಡಿಕೊಂಡು ಎರಡು ಮುಖ ಎಂದು ಮುಖವಾಡ ಹಾಕಿಕೊಂಡು ಭಯೋತ್ಪಾದಕರ ಬಗ್ಗೆ ಎಲ್ಲಿಲ್ಲದ ಪ್ರೀತಿ ತೋರುವುದು ಏಕೆ ಎನ್ನುವುದು ಅರ್ಥವಾಗುವುದಿಲ್ಲ. ಬಾಲಿವುಡ್‌ ಸರಿ ಕೆಲ ಎಡಚರರಲ್ಲಿ ಕೆಲವರಿಗೆ ಕಾಶ್ಮೀರ ಹಾಗೂ ದೇಶದಲ್ಲಿನ ಒಂದಿಷ್ಟು ಭಯೋತ್ಪಾದಕರು, ಅವರ ಅನುಯಾಯಿಗಳ ಮೇಲೆ ಅನುಕಂಪವಿರುವುದು ಗೊತ್ತಿದೆ. ಅದನ್ನು ನೇರವಾಗಿ ಹೇಳುವ ಕೆಲಸ ಮಾಡಿದರೆ ಯಾವುದೇ ಸಮಸ್ಯೆಯಿಲ್ಲ. ʼಫೌದಾʼ ಕಥೆಯನ್ನು ಯಥಾವತ್ತಾಗಿ ಇಲ್ಲಿರಿಸಿಕೊಂಡು, ತಲೆಬುಡವಿಲ್ಲದ ಕಥೆಕಟ್ಟಿದರೆ ಹೇಗೆ?

ಒಂದೊಮ್ಮೆ ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳ ರೀತಿಯ ನಿರ್ದಯಯವಾಗಿ ಭಾರತೀಯ ಸೇನೆ ಅಥವಾ ಗುಪ್ತಚರ ಸಂಸ್ಥೆ ಕೆಲಸ ಮಾಡಿದ್ದರೆ ಕಾಶ್ಮೀರದಲ್ಲಿ ಇಂದಿನ ಸ್ಥಿತಿಯೇ ಇರುತ್ತಿರಲಿಲ್ಲ. ಅದಲ್ಲದೇ ಸುಧೀರ್‌ ಮಿಶ್ರಾರ ರೀತಿ ಹುಚ್ಚು ಹುಚ್ಚಾಗಿ ಸಿನೆಮಾ ಮಾಡಿ, ಭಾರತದಲ್ಲಿ ಯಥಾವತ್ತಾಗಿ ಬಿಡುಗೆಯಾಗಲೂ ಆಗುತ್ತಿರಲಿಲ್ಲ.

ಕಾಶ್ಮೀರದ ಎರಡು ಮುಖ ತೋರಿಸುತ್ತೇವೆ ಎನ್ನುವ ನಿರ್ದೇಶಕರ ಒಕ್ಕಣಿಕೆಯನ್ನು ಮಾತ್ರ ಓದಿಕೊಂಡು, ʼಫೌದಾʼ ಬಗ್ಗೆ ಯಾವುದೇ ಮಾಹಿತಿ ಇರದಿದ್ದರೆ ದೊಡ್ಡ ಅನಾಹುತವಾಗುತ್ತದೆ. ಏಕೆಂದರೆ ಒಂದು ಕ್ಷಣಕ್ಕೆ ನಮ್ಮ ಸೇನೆ, ಗುಪ್ತಚರ ಸಂಸ್ಥೆ ಬಗ್ಗೆ ಕೋಪವೂ ಬರುತ್ತದೆ. ಇದಲ್ಲದೇ ಕಾಶ್ಮೀರದಲ್ಲಿನ ಪ್ರತಿಯೊಬ್ಬರೂ ಭಾರತ ವಿರೋಧಿಗಳೇ ಎನ್ನುವ ಮಟ್ಟಿಗೆ ಬಣ್ಣ ಕಟ್ಟಿಕೊಡುವ ಕೆಲಸವನ್ನು ಸುಧೀರ್‌ ಮಿಶ್ರಾ ಮಾಡಿದ್ದಾರೆ.

ಎಂಜಲುತನಕ್ಕೂ ತಲೆ ಬಳಸಿ!

ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ ʼಆವೇಶಂʼ ಸಿನೆಮಾವನ್ನು ಹಿಂದಿಯಲ್ಲಿ ನೋಡಿದ್ದ. ಮಲೆಯಾಳಂ ಸಿನೆಮಾದಲ್ಲಿನ ಬೆಂಗಳೂರಿನ ಕಥೆಯನ್ನು ಹಿಂದಿಗೆ ತೆಗೆದುಕೊಂಡು ಹೋಗುವಾಗ, ಮುಂಬೈನ ಕಥೆಯನ್ನಾಗಿಸಿದ್ದ. ಮುಂಬೈನಲ್ಲಿ ಹುಟ್ಟಿ ಬೆಳೆದ ಆತನಿಗೆ, ಈ ಕಥೆಯನ್ನು ನೋಡಿ ಗಾಬರಿಯಾಗಿತ್ತು. ಸಿನೆಮಾ ಮಾಡುವಾಗ ಈ ರೀತಿ ತಲೆಯಿಲ್ಲದ ಕೆಲಸ ಮಾಡಿದಾಗ, ದೊಡ್ಡ ಅಪಚಾರವಾಗುತ್ತದೆ. ಅದು ಕೂಡ ದೇಶದ ಸಮಗ್ರತೆ ವಿಚಾರ ಬಂದಾಗ ಇನ್ನಷ್ಟು ಹುಷಾರಾಗಿರಬೇಕು. ದೇಶ ಪ್ರೇಮವಿಲ್ಲದ ಕೆಲ ಎಡಚರ ಕಲಾ ಪ್ರೇಮಿಗಳಿಗೆ ಇದು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ ಎನಿಸಬಹುದು. ಅಂತಹ ಜನರು ತಮ್ಮ ಮನೆಯ ವಿಳಾಸ ಕೊಡಿ. ಬಳಿಕ ಆ ಜಾಗದಲ್ಲಿ ಒಂದು ಟೆಂಟ್‌ ನಿರ್ಮಿಸಿದರೆ ಹೇಗೆ ಕಿರಿಕಿರಿ ಆಗುತ್ತದೆ ಎನ್ನುವುದನ್ನು ಒಮ್ಮೆ ನೋಡಿ. ಆಗಲು ಎರಡು ಮು ಕತೆ ಹೇಳುವ ಸಂಯಮವಿದ್ದರೆ, ಬಂದು ಕೇಳಲಾಗುವುದು.

ಹುಚ್ಚುತನಕ್ಕೆ ಕೆಲ ಉದಾಹರಣೆ:

ಕಳೆದೊಂದು ದಶಕದಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆಯೇ ನಡೆಯುತ್ತಿಲ್ಲ. ಹೀಗಿರುವಾಗ ಸರಣಿಯಲ್ಲಿ ಆಗಾಗ ಎರಡು ದೇಶಗಳ ನಡುವಿನ ಶಾಂತಿ-ಮಾತುಕತೆ ಕುರಿತು ಚರ್ಚೆಯಾಗುತ್ತದೆ.

ಕಾಶ್ಮೀರದಲ್ಲಿ ಭಾರತದ ಸರ್ಕಾರ ಅಸ್ತಿತ್ವದಲ್ಲಿದೆ ಎನ್ನುವ ಯಾವುದೇ ಕುರುಹು ಕೂಡ ಸರಣಿಯಲ್ಲಿಲ್ಲ. ಏಕೆಂದರೆ ʼಫೌದಾʼ ಸರಣಿಯಲ್ಲಿನ ಆಪರೇಷನ್‌ ನಡೆಯುವುದು ಬಹುತೇಕವಾಗಿ ಪ್ಯಾಲೆಸ್ತೈನ್‌ ಅಥವಾ ಗಾಜಾಪಟ್ಟಿಯಲ್ಲಿ.

ಸೈನ್ಯದ ಕಾರ್ಯಾಚರಣೆಯಲ್ಲಿ ಉಗ್ರನನ್ನು ಹೊಡೆದಾಗಲೆಲ್ಲ ಗಂಡನನ್ನು ಕಳೆದುಕೊಂಡ ಹೆಂಡತಿ ಕಷ್ಟ, ಅಪ್ಪನನ್ನು ಕಳೆದುಕೊಂಡ ಮಕ್ಕಳ ರೋದನೆ ತೋರಿಸುತ್ತಾರೆ. ಆದರೆ ಸೈನ್ಯದ ವಿಚಾರಕ್ಕೆ ಬಂದಾಗ ಅಲ್ಲಿ ಜಾಣ ಮೌನ ಕಾಣಿಸುತ್ತದೆ.

ಕಾಶ್ಮೀರದಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ ಹಾಗೂ ಅವರಿಗೆ ಭಾರತೀಯ ಸೇನೆಯ‌ ಕಣ್ಗಾವಲಿದೆ.

ಕೊನೆಯದಾಗಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ʼಚಮೇಲಿʼ ಕೆಲಸವನ್ನು ಮಾಡಿದಾಗ ಮಾತ್ರ ʼತನಾವ್‌ʼ ರೀತಿಯ ಸರಣಿ ಮಾಡಲು ಸಾಧ್ಯ. ಜಮ್ಮು-ಕಾಶ್ಮೀರವು ನಮ್ಮ ದೇಶದ ಅವಿಭಾಜ್ಯ ಅಂಗ. ಹಾಗೆಯೇ ಈ ರಾಜ್ಯವನ್ನು ಭಾರತದ ಭಾಗವನ್ನಾಗಿಸುವ ಭಾರತೀಯ ಸೇನೆಯ ಹೋರಾಟದಲ್ಲಿ ನಾವೆಂದಿಗೂ ಭಾರತದ ಭಾಗವಾಗಿಯೇ ನೋಡಲು ಬಯಸುತ್ತೇವೆ. ವಿಶ್ವ ಮಾನವರಾಗುವ ಇರಾದೆಯಲ್ಲಿ ಭಾರತ ಹಾಗೂ ಭಾರತೀಯ ಸೇನೆಯನ್ನು ಪಾಕಿಸ್ತಾನದ ಕನ್ನಡಕದಲ್ಲಿ ನೋಡುವ ದೇಶದ್ರೋಹದ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

ಬರಹ: ರಾಜೀವ ಹೆಗಡೆ - (ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಇಲ್ಲಿ ಯಥಾವತ್ತು ಮರುಪ್ರಕಟಿಸಲಾಗಿದೆ)

ಇದನ್ನೂ ಓದಿ: GOAT OTT Release: ದಳಪತಿ ವಿಜಯ್‌ GOAT ಸಿನಿಮಾ ಒಟಿಟಿ ಬಿಡುಗಡೆ ಯಾವಾಗ? ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ಯಾವುದು?

mysore-dasara_Entry_Point