ಭೂಮಿಕಾಳಿಗೆ ಸುಧಾ ಕೈತುತ್ತು, ಮನೆಕೆಲಸದವರನ್ನು ಕೆಲಸದಿಂದ ತೆಗೆದ ಗೌತಮ್‌, ಶಕುಂತಲಾ ಪಟಾಲಂಗೆ ಹೊಟ್ಟೆ ತುಂಬಿಸೋರು ಯಾರು? ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭೂಮಿಕಾಳಿಗೆ ಸುಧಾ ಕೈತುತ್ತು, ಮನೆಕೆಲಸದವರನ್ನು ಕೆಲಸದಿಂದ ತೆಗೆದ ಗೌತಮ್‌, ಶಕುಂತಲಾ ಪಟಾಲಂಗೆ ಹೊಟ್ಟೆ ತುಂಬಿಸೋರು ಯಾರು? ಅಮೃತಧಾರೆ ಧಾರಾವಾಹಿ

ಭೂಮಿಕಾಳಿಗೆ ಸುಧಾ ಕೈತುತ್ತು, ಮನೆಕೆಲಸದವರನ್ನು ಕೆಲಸದಿಂದ ತೆಗೆದ ಗೌತಮ್‌, ಶಕುಂತಲಾ ಪಟಾಲಂಗೆ ಹೊಟ್ಟೆ ತುಂಬಿಸೋರು ಯಾರು? ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯ ನವೆಂಬರ್‌ 19ರ ಸಂಚಿಕೆಯಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಎಂದಿನಂತೆ ಅಪೇಕ್ಷಾ ಮತ್ತು ಪಾರ್ಥರ ನಡುವೆ ವೈಮನಸ್ಸಿನ ಮಾತು ನಡೆದಿದೆ. ಮನೆ ಕೆಲಸದವರನ್ನು ತೆಗೆದಿರುವುದರಿಂದ ಶಕುಂತಲಾ ಪಟಾಲಂ ಚಿಂತಿತರಾಗಿದ್ದಾರೆ. ಸುಧಾ ಪ್ರೀತಿಯಿಂದ ಭೂಮಿಕಾಳನ್ನು ನೋಡಿಕೊಳ್ಳುತ್ತಿದ್ದಾಳೆ.


ಭೂಮಿಕಾಳಿಗೆ ಸುಧಾ ಕೈತುತ್ತು - ಅಮೃತಧಾರೆ ಧಾರಾವಾಹಿ
ಭೂಮಿಕಾಳಿಗೆ ಸುಧಾ ಕೈತುತ್ತು - ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿ ನವೆಂಬರ್‌ 19ರ ಕಥೆ: ಸುಧಾ ಮನೆಗೆ ಬಂದಿರುವುದು ಗೌತಮ್‌ಗೆ ಖುಷಿ ತಂದಿದೆ. "ನಾವಿಬ್ಬರು ಮಾತನಾಡುತ್ತಿರುವಾಗ ನಿನ್ನದ್ದೇನು" ಎಂದು ಆನಂದ್‌ಗೆ ಬಯ್ಯುತ್ತಾರೆ. "ಅರೇ, ಸುಧಾಳನ್ನು ಕರೆದುಕೊಂಡು ಬಂದದ್ದು ನಾನು, ನಾನು ಮೂರನೆಯವನಾಗಿ ಬಿಟ್ನ" ಎಂದು ತಮಾಷೆಗೆ ಕೇಳುತ್ತಾನೆ. ಈ ರೀತಿ ಗೌತಮ್‌ ಮತ್ತು ಆನಂದ್‌ ತಮಾಷೆ ಮಾಡುತ್ತಿರುವಾಗ ಸುಧಾ ಮೌನವಾಗಿದ್ದಾಳೆ. "ಯಾಕಮ್ಮ ಡಲ್‌ ಹೊಡೆಯುತ್ತಿದ್ದೀ" ಎಂದು ಆನಂದ್‌ ಕೇಳುತ್ತಾರೆ. "ಹೊಸ ಜಾಗ, ಹೊಸ ಜನ, ಸಹಜ, ಸರಿಯಾಗುತ್ತೆ" ಎಂದು ಗೌತಮ್‌ ಹೇಳುತ್ತಾರೆ. "ಏನೂ ಯೋಚನೆ ಮಾಡಬೇಡ, ಇವರು ಎಷ್ಟು ಗ್ರೇಟೋ, ಅತ್ತಿಗೆಯೂ ಅಷ್ಟೇ ಗ್ರೇಟು" ಎಂದು ಆನಂದ್‌ ಹೇಳುತ್ತಾರೆ. "ಅವರಿಗೆ ಅಂತಲ್ಲ, ಎಲ್ಲರಿಗೂ ಇಷ್ಟವಾಗುತ್ತಾಳೆ" ಎಂದು ಗೌತಮ್‌ ಹೇಳುತ್ತಾರೆ. "ನನಗೆ ನಿರಾಳವಾಯಿತು" ಎಂದು ಗೌತಮ್‌ ಹೇಳುತ್ತಾರೆ. "ಇವಳನ್ನು ಇಲ್ಲಿ ಬಿಟ್ಟೆ, ಮನೆಯಲ್ಲಿ ನಾನೇ ಕೆಲಸ ಮಾಡಬೇಕು" ಎಂದು ಆನಂದ್‌ ಹೇಳುತ್ತಾರೆ. "ಏನೂ ಮಾಡಲಾಗದು, ಯಾರು ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರುತ್ತಾರೆ, ಎವರ್‌ಥಿಂಗ್‌ ಈಸ್‌ ಡೆಸ್ಟಿನಿ" ಎಂದು ಗೌತಮ್‌ ಹೇಳುತ್ತಾರೆ.

ಎಲ್ಲರೂ ಭೂಮಿಕಾ ಕೋಣೆಗೆ ಬರುತ್ತಾರೆ. "ಇವರಿಬ್ಬರಿಗೆ ಪರಿಚಯ ಮಾಡಲು ನೋಡ್ತಿನಿ, ಇವರಿಬ್ಬರಿಗೆ ಮೊದಲೇ ಪರಿಚಯ" ಎಂದು ಆನಂದ್‌ ಹೇಳಿದಾಗ ಭೂಮಿಕಾಗೆ ಅಚ್ಚರಿಯಾಗುತ್ತದೆ. "ಹೇಗೆ" ಎಂದು ಭೂಮಿಕಾ ಕೇಳಿದಾಗ "ಆಗ ಸಹಾಯ ಮಾಡಿದ್ದು ಇವರೇ" ಎಂದು ಗೌತಮ್‌ ಹೇಳಿದಾಗ ಭೂಮಿಕಾಗೆ ಖುಷಿಯಾಗುತ್ತದೆ. "ನಿಮ್ಮ ಬಗ್ಗೆ ಗೌತಮ್‌ ತುಂಬಾ ಹೇಳಿದ್ದಾರೆ" ಎಂದು ಹೇಳುತ್ತಾಳೆ. ಈ ರೀತಿ ಪರಿಚಯವಾಗುತ್ತದೆ. ಭೂಮಿಕಾಳನ್ನು ನೋಡಿಕೊಳ್ಳಲು ಈಕೆ ಬಂದಿರುವುದು ಮಲ್ಲಿಗೆ ಬೇಸರವಾಗಿದೆ. ನಾನೇ ನೋಡಿಕೊಳ್ಳುತ್ತಿದ್ದೆ ಎನ್ನುವುದು ಆಕೆಯ ಚಿಂತೆ. "ಇನ್ನು ಮುಂದೆ ನೀನು ಭೂಮಿಕಾ ಜತೆ ಇರಬೇಕು" ಎಂದು ಹೇಳಿ ಗೌತಮ್‌ ಹೋಗುತ್ತಾರೆ.

ರಮಾಕಾಂತ್‌ ಓಡೋಡಿ ಬಂದು ಶಕುಂತಲಾದೇವಿಗೆ ಸುದ್ದಿ ಮುಟ್ಟಿಸುತ್ತಾನೆ. "ಈ ಮನೆಯಲ್ಲಿ ಇನ್ನು ಸೆಲ್ಫ್‌ ಸರ್ವೀಸ್‌ ಶುರುವಾಗಲಿದೆ ಅಕ್ಕ. ಏಜೆನ್ಸಿ ಮೂಲಕ ಬಂದ ಯಾವ ಕೆಲಸಗಾರರು ಬೇಡ ಎಂದು ಗೌತಮ್‌ ಸರ್ಜಿಕಲ್‌ ಸ್ಟೈಕ್‌ ಮಾಡಿದ್ದಾನೆ" ಎಂಬ ಸುದ್ದಿ ತಿಳಿಸುತ್ತಾನೆ. "ಇನ್ನು ಹೊಸಬರು ಬರುವ ತನಕ ನಾವು ಕಾಯಬೇಕು" ಎಂದು ಆತ ಹೇಳುತ್ತಾನೆ. "ಭೂಮಿಕಾ ಕೈಗೆ ಏಟು ಮಾಡಿ ಕೂತಿದ್ದಾಳೆ. ಈಗ ಅಡಿಗೆ ಮಾಡೋದು ಯಾರು" ಎಂದು ಶಕುಂತಲಾ ಕೇಳಿದಾಗ "ಅಪೇಕ್ಷಾ ಕೈಯಲ್ಲಿ ಮಾಡಿಸೋಣ" ಎಂದು ಹೇಳುತ್ತಾರೆ ಸಹೋದರ. ಅದಕ್ಕೆ ಶಕುಂತಲಾ "ಆಕೆ ಮಾಡಿದ ಅಡುಗೆ ತಿಂದ್ರೆ ಎಲ್ಲರ ಗತಿ ಅಷ್ಟೇ" ಎನ್ನುತ್ತಾರೆ. "ಹಾಗಾದರೆ ಮಲ್ಲಿಯನ್ನೇ ಈ ಕೆಲಸಕ್ಕೆ ಇಡೋಣ" ಎಂದು ಹೇಳಿದಾಗ "ಅವಳಿಗೆ ನಮ್ಮ ಅಡುಗೆ ಎಲ್ಲಾ ಎಲ್ಲಿ ಬರುತ್ತೆ ಅಣ್ಣಾ. ಮುದ್ದೆ ಸಾರು ಮಾಡು ಅಂದ್ರೆ ಮಾಡ್ತಾಳೆ ಅಷ್ಟೇ" ಎಂದು ಶಕುಂತಲಾ ಹೇಳುತ್ತಾರೆ. ಈಗ ಏನು ಮಾಡೋದು ಅಣ್ಣಾ ಎಂದಾಗ ಇನ್ನೊಂದು ಆಪ್ಷನ್‌ ಇದೆಯಲ್ವ ಎನ್ನುತ್ತಾನೆ. "ಯಾರೂ ನಾನಾ" ಎಂದು ಕೇಳುತ್ತಾರೆ.

ಈ ಸಮಯದಲ್ಲಿ ಹೊಸ ಕ್ಯಾರೆಕ್ಟರ್‌ ಎಂಟ್ರಿ ಆಗಿದೆ. ಆಕೆ ಕೇರ್‌ ಟೇಕರ್‌ ಕಂ ಮನೆ ಕೆಲಸದವಳು ಎಂದು ರಮಾಕಾಂತ್‌ ಹೇಳುತ್ತಾರೆ. "ಈ ಗೌತಮ್‌ನದು ಅತಿಯಾಯ್ತು. ಈ ಮನೆಯಲ್ಲಿ ಯಾರು ಇರಬೇಕು, ಇರಬಾರದು ಎಂದು ಗೌತಮ್‌ ಡಿಸೈಡ್‌ ಮಾಡುತ್ತಿದ್ದಾನೆ" ಎಂದು ಶಕುಂತಲಾದೇವಿ ಕೋಪದಿಂದ ಹೇಳುತ್ತಾಳೆ. "ಈಗ ಬದಲಾದ ರಾಜಕೀಯವಾದ ಸನ್ನಿವೇಶದಲ್ಲಿ ನಿನ್ನ ಪ್ರಾಬಲ್ಯ ಹಂತಹಂತವಾಗಿ ಕಡಿಮೆಯಾಗುತ್ತಿದೆ ಸಿಸ್ಟರ್‌" ಎಂದು ಹೇಳುತ್ತಾನೆ ಆಕೆಯ ಅಣ್ಣಾ.

ಭೂಮಿಕಾಳ ಕಾಳಜಿ ವಹಿಸುವ ಸುಧಾ

ಭೂಮಿಕಾಳಿಗೆ ಸುಧಾ ಬಿಸಿನೀರಿನ ಶಾಖ ನೀಡುತ್ತಾಳೆ. ಸ್ವಲ್ಪ ಉಪ್ಪಿನ ಶಾಖ ನೀಡಿದ್ರೆ ಸರಿಯಾಗುತ್ತದೆ ಎಂದು ಸುಧಾ ಹೇಳುತ್ತಾಳೆ. "ಅವತ್ತು ಗೌತಮ್‌ನನ್ನು ಕಾಪಾಡಿದ್ರಿ. ಅವತ್ತು ನೀವು ಇಲ್ಲದೆ ಇದ್ದರೆ ಗೌತಮ್‌ನ ಕಂಡಿಷನ್‌ ಸೀರಿಯಸ್‌ ಆಗುತ್ತಿತ್ತು. ಈಗ ನಮ್ಮ ಮನೆಗೆ ಬಂದು ನಮ್ಮ ಸೇವೆ ಮಾಡುತ್ತಿದ್ದೀರಿ" ಎಂದು ಭೂಮಿಕಾ ಹೇಳುತ್ತಾಳೆ. "ಅವತ್ತು ಅಣ್ಣಾ ಕಾರಲ್ಲಿ ತುಂಬಾ ಒದ್ದಾಡುತ್ತಿದ್ದರು, ನಾನು ಮನೆಗೆ ಕರೆದುಕೊಂಡೆ ಅಷ್ಟೇ" ಎಂದು ಹೇಳಿದಾಗ "ಅವತ್ತು ಗೌತಮ್‌ನ ಪ್ರಾಣ ಉಳಿಸುವ ಕೆಲಸ ಮಾಡಿದ್ದೀರಿ. ಪ್ರಾಣಕ್ಕಿಂತ ದೊಡ್ಡದು ಯಾವುದೂ ಇಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ಎಲ್ಲಾ ಎಷ್ಟು ಹತ್ತಿರವಾಗುತ್ತಿದ್ದಾರೆ" ಎಂದುಕೊಳ್ಳುತ್ತಾಳೆ ಭೂಮಿಕಾ. "ನಾನು ನಿಮ್ಮನ್ನು ಅಕ್ಕ ಎಂದು ಹೇಳಲ, ಮೇಡಂ ಎಂದು ಹೇಳಲ" ಎಂದು ಕೇಳುತ್ತಾಳೆ ಸುಧಾ. "ನೀವು ಅತ್ತಿಗೆ ಎಂದು ಕರೆಯಿರಿ" ಎಂದು ಭೂಮಿಕಾ ಹೇಳಿದಾಗ ಹಿಂಜರಿಕೆಯಿಂದಲೇ "ಅತ್ತಿಗೆ..." ಎಂದು ಕರೆಯುತ್ತಾರೆ ಸುಧಾ. ಹೀಗೆ ಭೂಮಿಕಾಳ ಸೇವೆ, ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿ ಸುಧಾಳ ಮನಸ್ಸಲ್ಲಿ ಬೇರೆ ಏನೋ ನೆನಪಾಗುತ್ತದೆ.

ಆನಂದ್‌ ಮತ್ತು ಗೌತಮ್‌ ಮಾತನಾಡುತ್ತಿದ್ದಾರೆ. "ಪೊಲೀಸರಿಂದ ಯಾವುದೇ ಸುದ್ದಿ ಬಂದಿಲ್ಲ. ಒಳ್ಳೆಯವರ ಮೇಲೆ ಕೆಟ್ಟದ್ದು ಮಾಡಿದವರನ್ನು ಸುಮ್ಮನೆ ಬಿಡಬಾರದು" ಮಾತನಾಡುತ್ತಿದ್ದಾರೆ. ಆಗ ಅಲ್ಲಿಗೆ ಮಲ್ಲಿ ಬರುತ್ತಾಳೆ. "ಭಾವರೇ, ಹೀಗೆ ಮಾಡಬಾರದಿತ್ತು. ಅಕ್ಕನ ನೋಡಿಕೊಳ್ಳಲು ನನಗೆ ಒಳ್ಳೆಯ ಅವಕಾಶ ಸಿಕ್ಕಿತ್ತು. ಅಕ್ಕ ನನ್ನನ್ನು ಎಷ್ಟು ಚಂದ ನೋಡಿಕೊಂಡಿದ್ದಾರೆ. ನಾನು ಅಕ್ಕನ ಚೆನ್ನಾಗಿ ನೋಡಿಕೊಳ್ತಾ ಇದ್ದೆ. ಹೊಸಬರನ್ನ ಯಾಕೆ ಕರ್ಕೊಂಡು ಬರಬೇಕಿತ್ತು" ಎಂದು ಬೇಸರದಲ್ಲಿ ಹೇಳುತ್ತಾಳೆ. "ಅದು ಹಾಗಲ್ಲಮ್ಮ, ಜೈದೇವ್‌ಗೂ ಏಟಾಗಿದೆ. ನೀನು ಭೂಮಿಕಾಗಿಂತ ಜಾಸ್ತಿ ಜೈದೇವ್‌ ಕಡೆಗೂ ಗಮನ ನೀಡಬೇಕು" ಎಂದು ಹೇಳುತ್ತಾರೆ ಗೌತಮ್‌. ಇದೇ ಸಮಯದಲ್ಲಿ ಪಾರ್ಥ ದೂರದಿಂದ ನೋಡುತ್ತಾ ಇದ್ದಾನೆ. "ಅತ್ತಿಗೆನ ನೋಡಿಕೊಳ್ಳಲು ಬೇರೆ ಯಾರೋ ಬಂದಿದ್ದಾರ" ಎಂದು ಪಾರ್ಥ ಯೋಚಿಸುತ್ತಾನೆ. "ಮಲ್ಲಿ ಎಷ್ಟು ಮುಗ್ಧೆ ಅಲ್ವಾ" ಎಂದು ಗೌತಮ್‌ ಮತ್ತು ಆನಂದ್‌ ಮಾತನಾಡುತ್ತಾರೆ.

ಅಪೇಕ್ಷಾ ಫೋನ್‌ನಲ್ಲಿದ್ದಾಗ ಪಾರ್ಥ ಬರುತ್ತಾನೆ. "ಅತ್ತಿಗೆಯನ್ನು ನೋಡಿಕೊಳ್ಳಲು ಯಾಕೆ ಹೊರಗಿನಿಂದ ಬರಬೇಕು, ನೀವು ನಿಮ್ಮ ಅಕ್ಕ ಅಲ್ವ, ನೀವೇ ನೋಡಿಕೊಳ್ಳಬಹುದಿತ್ತು" ಎಂದು ಪಾರ್ಥ ಹೇಳುತ್ತಾನೆ. "ಅತ್ತಿಗೆ ಎಲ್ಲರ ಬಗ್ಗೆ ಎಷ್ಟು ಕಾಳಜಿ ವಹಿಸ್ತಾರೆ. ಅತ್ತಿಗೆನ ನೋಡಿದ್ರೆ ಇಮೋಷನ್‌ ಇಲ್ಲ. ನೀವು ತುಂಬಾ ಪ್ರಾಕ್ಟಿಕಲ್‌ ಆಗಲು ಹೋಗಿ, ಇಮೋಷನ್‌ ಕಳೆದುಕೊಂಡಿದ್ದೀರಿ. ಇದೇ ರೀತಿ ಕಂಟಿನ್ಯೂ ಆದ್ರೆ ಮುಂದೆ ಒಂದು ದಿನ ನನ್ನ ಗತಿ ಏನು" ಎಂದು ಹೇಳುತ್ತಾನೆ. "ನನ್ನ ಜತೆ ಚೆನ್ನಾಗಿರೋದು ನಿಮಗೆ ಇಷ್ಟ ಇಲ್ಲ. ನನ್ನ ಪಾಡಿಗೆ ನಾನು ಇದ್ದೇನೆ. ನನ್ನನ್ನು ತಿದ್ದಲು ಬರಬೇಡಿ" ಎಂದೆಲ್ಲ ಅಪೇಕ್ಷಾ ಎಂದಿನಂತೆ ಮಾತನಾಡುತ್ತಾಳೆ.

ಭೂಮಿಕಾಳಿಗೆ ಸುಧಾ ಊಟ ನೀಡಲು ಬರುತ್ತಾಳೆ. "ಚಮಚಾದಲ್ಲಿ ತಿಂದರೆ ಇಷ್ಟವಾಗೋದಿಲ್ಲ. ಕೈಯಲ್ಲಿ ತಿನ್ನಿಸಿ" ಎನ್ನುತ್ತಾರೆ ಭೂಮಿಕಾ. ನಾನು ಕೆಲಸದವಳು, ಕೈಯಲ್ಲಿ ಹೇಗೆ ತಿನ್ನಿಸಲಿ ಎಂದೆಲ್ಲ ಹೇಳಿದರೂ ಭೂಮಿಕಾ ಕೇಳುವುದಿಲ್ಲ. ಸುಧಾ ನೀಡಿದ ಕೈತುತ್ತು ತಿನ್ನುತ್ತಾಳೆ.

Whats_app_banner