Yuva Shooting Begins: ಸಾಹಸ ದೃಶ್ಯಗಳಿಂದಲೇ ‘ಯುವ’ ಚಿತ್ರಕ್ಕೆ ಓಂಕಾರ; ಅಪ್ಪು ಅಭಿಮಾನಿ ವಲಯದಲ್ಲಿ ಶುರುವಾಯ್ತು ಹರ್ಷೋದ್ಘಾರ
ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ‘ಯುವ’ ಸೆಟ್ಟೇರಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ.
Yuva Shooting Begins: ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಅಭಿನಯದ ಮೊದಲ ಸಿನಿಮಾ, ಯುವ ಟೈಟಲ್ ಟೀಸರ್ ಮೂಲಕವೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿತ್ತು. ಅದಾದ ಮೇಲೆ ನಾಯಕಿಯ ಆಯ್ಕೆಯನ್ನೂ ಅಂತಿಮ ಮಾಡಿತ್ತು. ಆದರೆ, ಶೂಟಿಂಗ್ ಯಾವಾಗ ಶುರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಇದೀಗ ಸದ್ದಿಲ್ಲದೆ, ಶೂಟಿಂಗ್‌ಗೆ ಚಾಲನೆ ನೀಡಿದ್ದಾರೆ ನಿರ್ದೇಶಕರು. ಆ ಶುರುವಾತಿನ ಫೋಟೋ ಝಲಕ್‌ನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡಿದ್ದಾರೆ.
ರಾಜಕುಮಾರ, ಯುವರತ್ನ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಯುವ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಯುಥ್ ಓರಿಯೆಂಟೆಡ್ ಮತ್ತು ಆಕ್ಷನ್ ಹಿನ್ನೆಲೆಯ ಸಿನಿಮಾ ಆಗಲಿದೆ ಎಂದು ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್ ಪುಷ್ಠಿ ನೀಡಿತ್ತು. "ಅವನನ್ನು ಹೊಡೆಯೋಕೆ ಅಂತ ಒಂದು ಗ್ಯಾಂಗ್ ಕಾಯುತ್ತಿತ್ತು, ಅವನನ್ನು ತಡೆಯೋಕೂ ಒಂದು ಗ್ಯಾಂಗ್ ಇತ್ತು. ನೀವು ದಾಟಿರೋದು ಬ್ಲಡ್ ಲೈನ್, ರಕ್ತ ಹರಿದೇ ಹರಿಯುತ್ತದೆ" ಎಂಬ ಡೈಲಾಗ್ ಯುವ ಅವರಿಂದ ಹೊಮ್ಮಿತ್ತು.
ಸಾಹಸ ದೃಶ್ಯದಿಂದಲೇ ಶುರು..
ಯುವ ರಾಜ್‌ಕುಮಾರ್ ಯುವ ಸಿನಿಮಾಕ್ಕಾಗಿ ಬೆವರು ಹರಿಸಿದ್ದಾರೆ. ಸಾಕಷ್ಟು ತಯಾರಿ ಮಾಡಿಕೊಂಡೇ, ಅಖಾಡಕ್ಕಿಳಿದಿದ್ದಾರೆ. ಕಳೆದ ತಿಂಗಳಷ್ಟೇ ಈ ಚಿತ್ರದ ಟೀಸರ್ ಬಿಡುಗಡೆ ಆಗಿತ್ತಾದರೂ, ಕಳೆದ ವರ್ಷದಿಂದಲೇ ಈ ಸಿನಿಮಾಕ್ಕೆ ಯುವ ಅವರಿಂದ ತಯಾರಿ ಆರಂಭವಾಗಿತ್ತು. ಜೂ. ಪವರ್‌ಸ್ಟಾರ್ ಎಂದೇ ಕರೆಸಿಕೊಂಡಿರುವ ಯುವ ಅವರು, ಸಾಹಸ ದೃಶ್ಯಗಳಿಗೆ ತರಬೇತಿಯನ್ನೂ ಪಡೆದಿದ್ದಾರೆ. ಇದೀಗ ಚಿತ್ರದ ಮೊದಲ ದೃಶ್ಯವನ್ನು ಸಾಹಸ ದೃಶ್ಯದಿಂದಲೇ ಸೆರೆಹಿಡಿಯುತ್ತಿದ್ದಾರೆ ನಿರ್ದೇಶಕರು.
ಸಪ್ತಮಿ ಗೌಡ ನಾಯಕಿ
ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ́ಕಾಂತಾರʼದ ಲೀಲಾ ಅಲಿಯಾಸ್ ಸಪ್ತಮಿ ಗೌಡ ಯುವ ರಾಜಕುಮಾರನ ಕೈ ಹಿಡಿದಿದ್ದಾರೆ. ಅಂದರೆ, ಯುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದ್ದ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿದ್ದ ಸಪ್ತಮಿ, ಇದೀಗ ಅದೇ ಹೊಂಬಾಳೆಯ ಮತ್ತೊಂದು ಪ್ರಾಜೆಕ್ಟ್‌ನಲ್ಲಿಯೂ ನಾಯಕಿಯಾಗಿದ್ದಾರೆ. ಅಂದಹಾಗೆ ಚಿತ್ರ ಇದೇ ವರ್ಷದ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ ಎಂದೂ ಸಹ ಈಗಾಗಲೇ ಘೋಷಣೆ ಆಗಿದೆ.
ಸಿನಿಮಾ ಸಂಬಂಧಿ ಈ ಸುದ್ದಿಯನ್ನೂ ಓದಿ
Gurudev Hoysala Success: ‘ಹೊಯ್ಸಳ’ ಗೆಲುವು ‘ಉತ್ತರಕಾಂಡ’ಕ್ಕೆ ಮತ್ತಷ್ಟು ಶಕ್ತಿ ತುಂಬಿದೆ; ಕೆಆರ್‌ಜಿ ಕಡೆಯಿಂದ ಸಕ್ಸಸ್ ಪತ್ರ..
Gurudev Hoysala Success: ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ ‘ಗುರುದೇವ್ ಹೊಯ್ಸಳ’ ಮಾರ್ಚ್ 30ರಂದು ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾಕ್ಕೆ ಅಷ್ಟೇ ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಈಗ ಮೂರನೇ ವಾರಕ್ಕೆ ಕಾಲಿರಿಸಿದೆ ಈ ಸಿನಿಮಾ. ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರಿಗೆ ಚಿತ್ರನಿರ್ಮಾಣ ಸಂಸ್ಥೆ ಕೆಆರ್‌ಜಿ ಸ್ಡುಡಿಯೋಸ್ ಪತ್ರದ ಮೂಲಕ ಧನ್ಯವಾದ ಅರ್ಪಿಸಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ