ಕೆಪಿಎಸ್ಸಿ, ಕೆಇಎನಲ್ಲಿ ನೇಮಕಾತಿ ಪ್ರಕ್ರಿಯೆಗೆ ಈ 11 ಸಲಹೆ ಅನುಕರಿಸಿ; ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
Priyank Kharge: ಕೆಪಿಎಸ್ಸಿ, ಕೆಇಎ ಮತ್ತು ಇತರೆ ನೇಮಕಾತಿ ಪ್ರಾಧಿಕಾರಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಏನೆಲ್ಲಾ ಸಲಹೆಗಳನ್ನು ಅನುಕರಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ನೇಮಕಾತಿ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಇತರೆ ನೇಮಕಾತಿ ಪ್ರಾಧಿಕಾರಗಳಲ್ಲಿ ಚಾಲ್ತಿಯಲ್ಲಿರುವ ಮತ್ತು ಮುಂಬರುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಅನುಕರಿಸಬೇಕಾದ ಕೆಲವೊಂದಿಷ್ಟು ಸಲಹೆಗಳ ಪಟ್ಟಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ತಾನು ನೀಡಿರುವ ಸಲಹೆಗಳನ್ನು ಪರಿಗಣಿಸಿ ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಯ ಮುಖ್ಯಸ್ಥರು ಹಾಗೂ ನೇಮಕಾತಿ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಿಎಂಗೆ ಕೋರಿದ್ದಾರೆ. 545 ಪಿಎಸ್ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿ ಆಯ್ಕೆ ಪಟ್ಟಿ ಮತ್ತು ನೇಮಕಾತಿ ಆದೇಶ ಪ್ರಕಟಿಸದೇ ತಡೆ ಹಿಡಿಯುವಂತೆ ಒಳಾಡಳಿತ ಇಲಾಖೆಗೆ ಪ್ರಿಯಾಂಕ್ ಪತ್ರ ಬರೆದಿದ್ದರು. ಅವರು ಕೊಟ್ಟಿರುವ ಸಲಹೆಗಳೇನು?
1. ವಿವಿಧ ನೇಮಕಾತಿ ಪ್ರಾಧಿಕಾರಿಗಳು ಇಡೀ ನೇಮಕಾತಿ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು.
2. ಎಲ್ಲಾ ಗ್ರೂಪ್ ಸಿ ಪರೀಕ್ಷೆಗಳು ಒಂದೇ ಪಠ್ಯಕ್ರಮವನ್ನು ಹೊಂದಿವೆ. ಹೀಗಾಗಿ ಎಲ್ಲಾ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಗಳು ಒಂದೇ ಪರೀಕ್ಷೆಯನ್ನು ನಡೆಸಬೇಕು.
3. ಒಎಂಆರ್ ಆಧಾರಿತ ಲಿಖಿತ ಪರೀಕ್ಷೆಯ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಪರಿಚಯಿಸಬೇಕು. ಒಎಂಆರ್ ವಿಧಾನವು ಟ್ಯಾಂಪರಿಂಗ್ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಹಾಯಕವಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಕೂಡ ವೇಗಗೊಳಿಸುತ್ತದೆ.
4. ವಿವಿಧ ನೇಮಕಾತಿ ಪ್ರಾಧಿಕಾರಿಗಳು ಸಹಾಯವಾಣಿಯನ್ನು ಸಮರ್ಪಕವಾಗಿ ನಿರ್ವಹಿಸುವುದು.
5. ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳು ನಡೆಸುವ ಪರೀಕ್ಷೆಗಳ ನಡುವಿನ ದಿನಾಂಕಗಳ ಕಾಕತಾಳೀಯವಾಗಿ ಒಮ್ಮೆಲೆ ಬರುವ ಕಾರಣದಿಂದ ವಿವಿಧ ಪರೀಕ್ಷೆಯ ದಿನಾಂಕಗಳನ್ನು ಅನೇಕ ಬಾರಿ ಪರಿಷ್ಕರಿಸಲಾಗಿದೆ. ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳ ನಡುವೆ ಸಂವಹನವನ್ನು ಖಾತ್ರಿಪಡಿಸುವ ಅವಶ್ಯಕತೆ ಇದ್ದು, ಅಭ್ಯರ್ಥಿಗಳು ಅವರು ಅರ್ಹರಾಗಿರುವ ಎಲ್ಲಾ ಪರೀಕ್ಷೆಗಳಲ್ಲಿಯೂ ಬರೆಯುವ ಹಕ್ಕನ್ನು ಎತ್ತಿ ಹಿಡಿಯಬೇಕು.
6. ಒಂದು ದಿನ ನಡೆಸುವ 2 ಪರೀಕ್ಷೆಗಳಿಗೆ 2 ವಿವಿಧ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುವ ಮೂಲಕ ಆಯೋಗವು ಹಲವು ಬಾರಿ ಮುಜುಗರವನ್ನು ಎದುವರಿಸುವಂತಾಗಿದ್ದು, ಇದು ಅಭ್ಯರ್ಥಿಗಳಲ್ಲಿ ಗೊಂದಲವನ್ನು ಮೂಡಿಸುತ್ತಿರುತ್ತದೆ.
7. ಒಮ್ಮೆ 1:3 ಪಟ್ಟಿಯನ್ನು ಪ್ರಕಟಿಸಿದ ನಂತರ 1:1 ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಲು ಸುಮಾರು 6 ತಿಂಗಳ ಕಾಲವನ್ನು ತೆಗೆದುಕೊಳ್ಳುತ್ತದೆ. ಸಮಯವನ್ನು ಉಳಿಸಲು ಮತ್ತು ಪ್ರಕ್ರಿಯೆಯನ್ನು ವೇಗಗೊಳಿಸಲು ವಿವಿಧ ನೇಮಕಾತಿ ಪ್ರಾಧಿಕಾರಿಗಳು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಾಧ್ಯವಿರುವ ಕಡೆ ಕಂದಾಯ ವಿಭಾಗ ಸಂಖ್ಯೆ (ಆರ್ಡಿ ಸಂಖ್ಯೆ) ಬಳಕೆ ಮಾಡಬಹುದು.
8. ಇತರೆ ನೇಮಕಾತಿ ಏಜೆನ್ಸಿಗಳಿಗೆ ಹೋಲಿಸಿದರೆ ಕೆಇಎ ನಡೆಸುವ ಎಲ್ಲಾ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕಗಳು ದುಬಾರಿಯಾಗಿದೆ. ಇದರಿಂದ ಅಭ್ಯರ್ಥಿಗಳು ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿವೆ.
9. ಕೆಇಎ ಕನ್ನಡ ಕಡ್ಡಾಯ ಪರೀಕ್ಷೆ ನಡೆಸುವ ವಿಧಾನವನ್ನು ಮಾರ್ಪಡಿಸಿ ಕೆಪಿಎಸ್ಸಿ ನಿಗದಿಪಡಿಸುವ ಆದ್ಯತೆಯನ್ನು ಅನುಸರಿಸಬೇಕು. (ಕೆಪಿಎಸ್ಸಿ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಆಯೋಗವು ಕನ್ನಡ ಕಡ್ಡಾಯ ಪತ್ರಿಕೆಯನ್ನು ಒಮ್ಮೆ ತೇರ್ಗಡೆ ಮಾಡುವ ಪ್ರತಿಯೊಬ್ಬ ಅಭ್ಯರ್ಥಿಗೆ 3 ವರ್ಷಗಳವರೆಗೆ ಪರೀಕ್ಷೆಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡುತ್ತದೆ ಎಂದು ನಿಯಮ ಮಾಡಿದೆ)
10. ಸರ್ಕಾರದ ಮುಂದಿನ 3 ವರ್ಷಗಳ ನೇಮಕಾತಿ ಯೋಜನೆಯನ್ನು ಮುಂಚಿತವಾಗಿ ವಿವಿಧ ನೇಮಕಾತಿ ಪ್ರಾಧಿಕಾರಿಗಳಿಗೆ ತಿಳಿಸುವುದು. ಇದರಿಂದ ನೇಮಕಾತಿ ಪ್ರಾಧಿಕಾರ ತಮ್ಮ ವಾರ್ಷಿಕ ಕ್ಯಾಲೆಂಡರ್ ಅನ್ನು ತಯಾರಿಸುವುದು.
11. ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಲ್ಲಿ ಕನ್ನಡವನ್ನು ಮಾಧ್ಯಮವಾಗಿಟ್ಟುಕೊಂಡು ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆಯು ಅಂತಿಮ ಆಯ್ಕೆ ಪಟ್ಟಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿರುವುದನ್ನು ಗಮನಿಸಲಾಗಿದೆ. ಇದರಿಂದ ಕನ್ನಡ ಮಾಧ್ಯಮ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸಬೇಕು.