ಯಾರಿಗೆ ಸಿಎಂ ಗದ್ದುಗೆ, ದಿನಕ್ಕೊಂದು ಬೆಳವಣಿಗೆ; ಡಿಕೆ ಶಿವಕುಮಾರ್, ಪರಮೇಶ್ವರ್ ಭೇಟಿ ಬೆನ್ನಲ್ಲೇ ಮೂವರು ದಲಿತ ಸಚಿವರ ಗೌಪ್ಯ ಸಭೆ
ಕನ್ನಡ ಸುದ್ದಿ  /  ಕರ್ನಾಟಕ  /  ಯಾರಿಗೆ ಸಿಎಂ ಗದ್ದುಗೆ, ದಿನಕ್ಕೊಂದು ಬೆಳವಣಿಗೆ; ಡಿಕೆ ಶಿವಕುಮಾರ್, ಪರಮೇಶ್ವರ್ ಭೇಟಿ ಬೆನ್ನಲ್ಲೇ ಮೂವರು ದಲಿತ ಸಚಿವರ ಗೌಪ್ಯ ಸಭೆ

ಯಾರಿಗೆ ಸಿಎಂ ಗದ್ದುಗೆ, ದಿನಕ್ಕೊಂದು ಬೆಳವಣಿಗೆ; ಡಿಕೆ ಶಿವಕುಮಾರ್, ಪರಮೇಶ್ವರ್ ಭೇಟಿ ಬೆನ್ನಲ್ಲೇ ಮೂವರು ದಲಿತ ಸಚಿವರ ಗೌಪ್ಯ ಸಭೆ

ರಾಜಕೀಯ ವಿಶ್ಲೇಷಣೆ: ಎರಡು ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ಇದೀಗ ಮೂವರು ದಲಿತ ಸಚಿವರು ಗೌಪ್ಯ ಸಭೆ ನಡೆಸಿರುವುದು ಮತ್ತಷ್ಟು ಚರ್ಚೆ ಹುಟ್ಟು ಹಾಕಿದೆ.

ಹೆಚ್ಚಾಗ್ತಿದೆ ಸಿಎಂ ಕುರ್ಚಿಗೆ ಟವೆಲ್ ಹಾಕುವವರ ಸಂಖ್ಯೆ; ಮೂವರು ದಲಿತ ಸಚಿವರ ಗೌಪ್ಯ ಸಭೆ
ಹೆಚ್ಚಾಗ್ತಿದೆ ಸಿಎಂ ಕುರ್ಚಿಗೆ ಟವೆಲ್ ಹಾಕುವವರ ಸಂಖ್ಯೆ; ಮೂವರು ದಲಿತ ಸಚಿವರ ಗೌಪ್ಯ ಸಭೆ

ಕರ್ನಾಟಕ ರಾಜಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಸೈಟ್​ ಹಗರಣದಲ್ಲಿ ಸಿಲುಕಿದಾಗಿನಿಂದ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಕುರ್ಚಿಯ ಮೇಲೆ ಟವೆಲ್ ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಡಾ ತನಿಖೆ ತೀವ್ರಗೊಂಡಷ್ಟೂ ಸಿಎಂ ಬದಲಾವಣೆಯ ವಿಚಾರದ ಚರ್ಚೆ ಹೆಚ್ಚಾಗುತ್ತಿದೆ. ಇದು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮುಂದೇನಾಗಬಹುದು ಎನ್ನುವುದನ್ನು ಯಾರಿಗೂ ಅಂದಾಜು ಮಾಡಲು ಆಗುತ್ತಿಲ್ಲ. ಮತ್ತೊಂದೆಡೆ ಸಿಕ್ಕಿದ್ದೇ ಅವಕಾಶ ಎಂದು ಸಿಎಂ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಕಾಂಗ್ರೆಸ್ ಪಾಳಯದಲ್ಲಿ ಬಹಿರಂಗವಾಗಿ ಯಾರೂ ಸಿಎಂ ಬದಲಾಗುತ್ತಾರೆ ಎಂದು ಹೇಳುವ ಧೈರ್ಯ ಮಾಡದಿದ್ದರೂ, ಗೌಪ್ಯವಾಗಿ ಸಭೆಗಳ ಮೇಲೆ ಸಭೆಗಳನ್ನು ನಡೆಸುವ ಮೂಲಕ ಸಿದ್ದರಾಮಯ್ಯ ಕೆಳಗಿಳಿಯುವುದು ಖಚಿತ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ ನಾಯಕರ ನಡುವೆಯೇ ಮುಸುಕಿನ ಗುದ್ದಾಟ ನಡೆಯುತ್ತಿದೆ. 2 ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ ಪರಮೇಶ್ವರರನ್ನು ಭೇಟಿಯಾಗಿ ಸಿಎಂ ಸ್ಥಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ಈ ಬೆನ್ನಲ್ಲೇ ಮೂವರು ದಲಿತ ಸಚಿವರು ಗೌಪ್ಯ ಸಭೆ ನಡೆಸಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ. ಈ ಕುರಿತು ವಿಶ್ವಾಸಾರ್ಹ ಮೂಲಗಳಿಂದ ‘ಎಚ್‌ಟಿ ಕನ್ನಡ’ ಪ್ರತಿನಿಧಿಗೆ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಗೃಹ ಸಚಿವ ಪರಮೇಶ್ವರ ಮನೆಗೆ ಭೇಟಿ ಕೊಟ್ಟು ಸಿಎಂ ಸ್ಥಾನದ ಬಗ್ಗೆ ಚರ್ಚಿಸಿದ್ದರು. ಈ ಬೆಳವಣಿಗೆ ನಡೆದು ಇನ್ನು ಒಂದು ವಾರವೂ ಆಗಿಲ್ಲ. "ನಾವು ಮೂಲ ಕಾಂಗ್ರೆಸ್ಸಿಗರು ಆದ ಕಾರಣ ಸಿಎಂ ನಾನಾಗಬೇಕು ಅಥವಾ ನೀವಾಗಬೇಕು ಎಂದು ಡಿಕೆಶಿ, ಪರಂಗೆ ಹೇಳಿದ್ದರು". ಮುಖ್ಯಮಂತ್ರಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ತೇಲಿ ಬರುತ್ತಿರುವ ಕಾರಣ ಡಿಕೆಶಿ ಈ ಮಾತು ಹೇಳಿದ್ದಾರೆ" ಎಂದು ಸಭೆಯಿಂದ ಸೋರಿಕೆಯಾಗಿದ್ದ ಸಂಭಾಷಣೆಯ ವಿವರಗಳಲ್ಲಿ ತಿಳಿದುಬಂದಿತ್ತು.

ಸತೀಶ್ ಅವರು ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಬಂದವರು. ಹಾಗಾಗಿ ಮೂಲ ಕಾಂಗ್ರೆಸ್ಸಿಗರೇ ಸಿಎಂ ಆಗಬೇಕು ಎನ್ನುವುದು ಡಿಕೆಶಿ ಆಶಯ. ಆದರೆ ವಿಷಯದ ಕುರಿತು ಪರಮೇಶ್ವರ ಬಳಿ ಕೇಳಿದಾಗ, ಎತ್ತಿನಹೊಳೆ ಯೋಜನೆ ಅನುದಾನದ ವಿಚಾರ ಪ್ರಸ್ತಾಪಿಸಿ ನಾಜೂಕಾಗಿ ವಿಷಯ ದೂರ ಸರಿಸಿದರು. ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಹೇಳಿ ಪ್ರಶ್ನೆಗಳಿಂದ ತಪ್ಪಿಸಿಕೊಂಡರು. ಆದರೆ ರಾಜಕೀಯ ಮೂಲಗಳು ಹೇಳಿದ್ದೇ ಬೇರೆ. ಪರಮೇಶ್ವರ ಅವರಿಗೆ ಸಿಎಂ ಆಗುವ ಕನಸಿದ್ದರೂ ಅದರ ಬಗ್ಗೆ ಎಲ್ಲೂ ತುಟಿಪಿಟಿಕ್ ಎನ್ನುತ್ತಿಲ್ಲ. ಹೈಕಮಾಂಡ್​ಗೂ ನೀವು ನನಗೆ ಕೊಟ್ಟರೆ ನಾನು ಸಿದ್ದ ಎಂದು ಸಂದೇಶ ಕೊಟ್ಟಿದ್ದಾರೆ. ಮತ್ತೊಂದೆಡೆ ಡಿಕೆಶಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪಕ್ಷದಲ್ಲೇ ಡಿಕೆಶಿ ಸಿಎಂ ಆಗಲು ವಿರೋಧ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸತೀಶ್ ಜಾರಕಿಹೊಳಿ ಹೆಸರಿಗೆ ಸಿದ್ದರಾಮಯ್ಯ ಒಲವು

ಮತ್ತೊಂದಡೆ ಸತೀಶ್ ಜಾರಕಿಹೊಳಿ ಹೆಸರು ಕೂಡ ಮುಂಚೂಣಿಯಲ್ಲಿದೆ. ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ಸತೀಶ್​ ಅವರನ್ನೇ ಸಿಎಂ ಸೀಟ್​ನಲ್ಲಿ ಕೂರಿಸಲು ಸಿದ್ದರಾಮಯ್ಯ ಒಲವು ತೋರುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಇದೀಗ ದಲಿತ ಸಮುದಾಯದ ಸಚಿವರಾದ ಪರಮೇಶ್ವರ, ಎಚ್‌ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ ಮಂಗಳವಾರ ಸಂಜೆ (ಅ 1) ಗೌಪ್ಯ ಸಭೆ ನಡೆಸಿದ್ದಾರೆ. ಈ ಭೇಟಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಇಲ್ಲಿ ಜಾರಕಿಹೊಳಿ ಮತ್ತು ಪರಮೇಶ್ವರ್​ ರೇಸ್​ನಲ್ಲಿದ್ದರೂ ಇಬ್ಬರಲ್ಲಿ ಯಾರೇ ಮುಖ್ಯ ಜವಾಬ್ದಾರಿ ಪಡೆದರೂ ಬೆಂಬಲ ವ್ಯಕ್ತಪಡಿಸಲು ಮಹದೇವಪ್ಪ ಸಿದ್ದರಾಗಿದ್ದಾರೆ. ಎಚ್​ಸಿ ಮಹದೇವಪ್ಪ ನಿವಾಸಕ್ಕೆ ಪರಮೇಶ್ವರ, ಸತೀಶ್ ಜಾರಕಿಹೊಳಿ ಅವರು ಆಗಮಿಸಿ ಒಂದು ತಾಸಿಗು ಹೆಚ್ಚು ಸುದೀರ್ಘ ಚರ್ಚೆ ನಡೆಸಿದ್ದಾರೆ. ಮುಡಾದಲ್ಲಿ ನಿವೇಶನ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳಿಂದ ಒತ್ತಡ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೆ ದಲಿತ ಸಮುದಾಯದ ಮುಂಚೂಣಿ ನಾಯಕರು ಒಂದೇ ಕಡೆ ಸಭೆ ಸೇರಿರುವುದು ಮಹತ್ವ ಪಡೆದುಕೊಂಡಿದೆ. ಮುಂದಿನ ರಾಜಕೀಯ ಬೆಳವಣಿಗೆಗಳು, ಮುಖ್ಯಮಂತ್ರಿ ಸ್ಥಾನ, ಪಕ್ಷದಲ್ಲಿ ಬಣಗಳಾದಂತೆ ನೋಡಿಕೊಳ್ಳುವುದೇಗೆ.. ಹೀಗೆ ಎಲ್ಲವನ್ನೂ ಚರ್ಚಿಸಿದ್ದಾರೆ.

ಯಾರಿಗೆ ಸಿಎಂ ಗದ್ದುಗೆ: ದಿನಕ್ಕೊಂದು ಬೆಳವಣಿಗೆ

ಅಲ್ಲದೇ, ಎರಡು ದಿನದ ಹಿಂದೆಯಷ್ಟೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಹ ಗೃಹ ಸಚಿವ ಪರಮೇಶ್ವರ ಅವರ ಸದಾಶಿವನಗರದಲ್ಲಿರುವ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿದ್ದರು. ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚಿಸಲು ಬಂದಿರುವುದಾಗಿ ಡಿಕೆ ಶಿವಕುಮಾರ್ ಅವರು ಹೇಳಿದ್ದರಾದರೂ ,‌ಈ ಭೇಟಿಯು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಸ್ತುತ ಮೂವರು ದಲಿತ ಸಚಿವರ ಸಭೆ ಬಳಿಕ ಚಾಲುಕ್ಯ ವೃತ್ತದ ಬಳಿ ಇರುವ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ‌ ಮಾಡಿದ್ದಾರೆ. ಮುಖ್ಯಮಂತ್ರಿ ಜೊತೆಗಿನ ಈ ಸಭೆಯಲ್ಲಿ ಕೆಹೆಚ್ ಮುನಿಯಪ್ಪ, ಹೆಚ್​​ಕೆ ಪಾಟೀಲ್, ಚೆಲುವರಾಯಸ್ವಾಮಿ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ರಾಜ್ಯಸಭೆಯ ಮಾಜಿ ಸದಸ್ಯ ಎಲ್ ಹನುಮಂತಯ್ಯ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಅದರಲ್ಲೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ದಸರಾ ಉತ್ಸವದ ಆಯೋಜನೆಗೆ ಸಂಬಂಧಿಸಿ ಮೈಸೂರಿನಲ್ಲೇ ಬೀಡುಬಿಟ್ಟಿದ್ದರು. ಆದರೆ, ಅದೆಲ್ಲವನ್ನೂ ನೋಡಿಕೊಳ್ಳುವುದನ್ನು ಬಿಟ್ಟು ಬೆಂಗಳೂರಿಗೆ ದಿಢೀರ್ ಬಂದಿದ್ದು ಅಚ್ಚರಿ ಮೂಡಿಸಿದೆ. ದಿನಕ್ಕೊಂದು ನಡೆಯುತ್ತಿರುವ ದಿಢೀರ್ ಬೆಳವಣಿಗೆಗಳು ಯಾವಾಗ ಏನು ಬೇಕಾದರೂ ನಡೆಯಬಹುದು ಎಂಬುದರ ಮುನ್ಸೂಚನೆ ನೀಡುತ್ತಿವೆ. ನೋಡೋಣ ಇದೆಲ್ಲಾ ಎಲ್ಲಿಗೆ ತಲುಪುತ್ತೋ..!

(ಗಮನಿಸಿ: ವಿಶ್ವಾಸಾರ್ಹ ಮೂಲಗಳಿಂದ ಲಭ್ಯವಾದ ಮಾಹಿತಿ ಆಧರಿಸಿದ ವಿಶ್ಲೇಷಣೆ ಇಲ್ಲಿದೆ. ಈ ಬರಹದಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)

Whats_app_banner