ಕರ್ನಾಟಕದಲ್ಲಿ ಇಳಿಕೆ ಕಂಡ ಮಳೆ, ಚಳಿ ಆರಂಭ; ಬೆಂಗಳೂರು ಹಾಗೂ ಇತರ ಜಿಲ್ಲೆಗಳ ಇಂದಿನ ಹವಾಮಾನ ವರದಿ
ಗುರುವಾರದವರೆಗೆ ರಾಜ್ಯದಲ್ಲಿ ಹವಾಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರೀಕ್ಷೆ ಇಲ್ಲ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಇಂದು ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳ ಹವಾಮಾನ ವರದಿ ಇಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಅಬ್ಬರ ಬಹುತೇಕ ಕಡಿಮೆಯಾಗಿದೆ. ದೀಪಾವಳಿಯ ಮೂರೂ ದಿನಗಳಲ್ಲಿ ಕರಾವಳಿ ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿತ್ತು. ನಿಧಾನವಾಗಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಚಳಿ ಆರಂಭವಾಗಿದೆ. ಈ ದಿನ (ನವೆಂಬರ್ 6) ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ಹೇಳಿದೆ. ನಾಳೆಯೂ ರಾಜ್ಯದಲ್ಲಿ ಮಳೆಯ ಸಾಧ್ಯತೆ ಇಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಚಳಿ ಶುರುವಾಗಿದ್ದು, ಮುಂಜಾನೆ ಮತ್ತು ರಾತ್ರಿ ವೇಳೆ ಮಂಜು ಆವರಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನವೆಂಬರ್ 4ರ ಅಪರಾಹ್ನ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ನವೆಂಬರ್ 6 ಬೆಳಗ್ಗಿನವರೆಗೂ 14 ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಳಿದೆಡೆ ಒಣ ಹವೆ ಇರಲಿದೆ. ಉಳಿದಂತೆ ನಾಳೆಯವರೆಗೂ ರಾಜ್ಯದಲ್ಲಿ ಹವಾಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರೀಕ್ಷೆ ಇಲ್ಲ.
ಬೆಂಗಳೂರಿನಲ್ಲಿ ಇಂದು ತಾಪಮಾನವು 24.71 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕನಿಷ್ಠ 18.77 ಮತ್ತು ಗರಿಷ್ಠ 27.14 ಡಿಗ್ರಿ ತಾಪಮಾನ ಇರುವ ಸಾಧ್ಯತೆ ಇದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧೆಡೆ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಕೆಲವು ಕಡೆ ಹಗುರ ಮಳೆಯಾಗಬಹುದು. ಇನ್ನು ಕೆಲವು ಕಡೆ ಮುಂಜಾನೆ ವೇಳೆ ದಟ್ಟ ಮಂಜು ಆವರಿಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿತ್ತು. ಮಂಗಳವಾರ ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಶುಕ್ರವಾರದಿಂದ ಕೆಲವೆಡೆ ಮಳೆ
ನವೆಂಬರ್ 8ರ ಶುಕ್ರವಾರದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಡಗು, ಮೈಸೂರು, ಚಾಮರಾಜನಗರ, ಕೋಲಾರ, ಮಂಡ್ಯ, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಕೆಲವು ಸ್ಥಳಗಳಲ್ಲಿ ಮುಂಜಾನೆಯೇ ಮಂಜು ತುಂಬಿರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಸೆಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಆಗಿರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.