Bangalore News: ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಇನ್ನು ಮುಂದೆ ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು ಹೆಸರು
D Devaraj Urs ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹೆಸರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಇಡಲಾಗುತ್ತಿದೆ.
ಬೆಂಗಳೂರು: ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರನಾಗಿ ಹೆಸರು ಮಾಡಿದ್ದೂ ಅಲ್ಲದೇ ಬೆಂಗಳೂರು. ಮೈಸೂರು ಸೇರಿದಂತೆ ಹಲವಾರು ಭಾಗಗಳಲ್ಲಿ ಕೈಗಾರಿಕಾ ವಲಯಗಳ ಸ್ಥಾಪನೆ ಮೂಲಕ ಅಭಿವೃದ್ದಿಗೂ ಒತ್ತು ನೀಡಿದ್ದದವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು. ಅವರ ಹೆಸರನ್ನು ಹಲವಾರು ರಸ್ತೆ, ಬಡಾವಣೆಗಳಿಗೆ ಇಡಲಾಗಿದೆ. ಬೆಂಗಳೂರಿನಲ್ಲೂ ಹಲವು ಭಾಗಗಳಿಗೆ ಅರಸು ಅವರ ಹೆಸರಿದೆ. ಆದರೆ ಬೆಂಗಳೂರಿನ ಪ್ರಮುಖ ಉದ್ಯಮ ಭಾಗವಾದ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ನಾಮಕರಣ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕ ಏಕೀಕರಣ 1956 ನವಂಬರ್ 1 ರಂದೇ ಆಗಿದ್ದರೂ, 1973 ರಲ್ಲಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಾವು ಕರ್ನಾಟಕ ಸಂಭ್ರಮ ವರ್ಷಾಚರಣೆ ನಡೆಸುತ್ತಿದ್ದು, ನವೆಂಬರ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧ ಮುಂಭಾಗದಲ್ಲಿ ನವೆಂಬರ್ 1 ರಂದು ಅನಾವರಣಗೊಳಿಸಲಾಗುವುದು. ಅಲ್ಲದೇ ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ನಾಮಕರಣ ಮಾಡಲಾಗುವುದು. ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ದೇವರಾಜ ಅರಸು ಅವರು ಅರಸು ಮನೆತನದಲ್ಲಿ ಹುಟ್ಟಿದ್ದರೂ, ಸಮಾಜದ ತಳ ಸಮುದಾಯವಾದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರ ಬಗ್ಗೆ ಬಹಳ ಕಾಳಜಿ ಹೊಂದಿದ್ದರು. ಅರಸು ಅವರು ಉಳುವವನೇ ಭೂಮಿಯೊಡೆಯ ಎಂದು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಅಸಂಖ್ಯಾತ ಜನರಿಗೆ ಭೂಮಿಯ ಮಾಲೀಕತ್ವ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಭೂಮಿಯ ಹಕ್ಕನ್ನು ಖಾತ್ರಿಪಡಿಸಲು 79 ಎ ಮತ್ತು ಬಿ ಗೆ ಮಾಡಿರುವ ತಿದ್ದುಪಡಿಯನ್ನು ಮತ್ತೆ ಸರಿಪಡಿಸಲಾಗುವುದು ಎನ್ನುವುದು ಸಿಎಂ ನೀಡಿದ ಸ್ಪಷ್ಟನೆ.
ಎಲ್ಲರಿಗೂ ಸಮಾನ ಅವಕಾಶ ಸಿಗಲು ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗದ ಆಯೋಗ ರಚನೆ ಮಾಡಿ, ಎಷ್ಟೇ ವಿರೋಧ ಇದ್ದರೂ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರು. ಇದರಿಂದ ಹಿಂದುಳಿದ ವರ್ಗದವರಿಗೆ ಶಿಕ್ಷಣದಲ್ಲಿ ಮೀಸಲಾತಿ ಸಾಧ್ಯವಾಯಿತು. ತಳ ಸಮುದಾಯದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲಗೊಳಿಸಲು ಎಷ್ಟೇ ವಿರೋಧ ಇದ್ದರೂ, ಜಾರಿಗೊಳಿಸಿದರು. ಹಿಂದುಳಿದವರಿಗೆ ಶೇ.38 ರಷ್ಟು ಮೀಸಲಾತಿ ಸಿಕ್ಕಿದ್ದರೆ ಅದಕ್ಕೆ ಅರಸು ಅವರೇ ಕಾರಣ.
ವಿರೋಧಿಗಳ ವಿರುದ್ದ ಟೀಕಾ ಪ್ರಹಾರ
ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿ ಆದ ಮೇಲೆ ಬಡವರಿಗಾಗಿ, ಮಹಿಳೆಯರಿಗಾಗಿ, ರೈತರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು, ರೈತರು, ಯುವಕರ ಪರವಾಗಿದೆ. ಆದರೆ ಬದಲಾವಣೆ ಬಯಸದ, ಬಡವರ ವಿರೋಧಿ ಪಟ್ಟಭದ್ರರು ಇದನ್ನು ವಿರೋಧಿಸುತ್ತಿದಾರೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಾವು ಜಾತಿ ಗಣತಿ ಮಾಡಿದ್ದೇವೆ. ಜಾತಿ ಗಣತಿ ಮಾಡದೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಒದಗಿಸಲು ನಾವು ನಡೆಸುತ್ತಿರುವ ಪ್ರಯತ್ನಗಳಿಂದ ಹತಾಶರಾಗಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ಮಾಡುತ್ತಿದ್ದಾರೆ .ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಖರ್ಚು ಮಾಡಲು ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆಗೆ ತಿದ್ದುಪಡಿ ತಂದದ್ದು ನಮ್ಮ ಸರ್ಕಾರ. ಕೇಂದ್ರದಲ್ಲಿ ಈ ರೀತಿಯ ಕಾಯ್ದೆಯನ್ನು ಜಾರಿಗೆ ತರದೇ ಇಲ್ಲಿ ಅನುಷ್ಠಾನದ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಈ ರೀತಿ ಟೀಕಿಸಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ.ನಾನು 1984ರಲ್ಲಿ ಮೊದಲ ಬಾರಿಗೆ ಮಂತ್ರಿಯಾದ ಬಳಿಕ ಕಳೆದ 40 ವರ್ಷಗಳಲ್ಲಿ ಇಂದಿನವರೆಗೆ ನನ್ನ ಜೀವನದಲ್ಲಿ ಯಾವುದೇ ಕಳಂಕವಿಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ಈಗ ಕಪ್ಪು ಮಸಿ ಬಳಿಯಲು ನಿರಂತರ ಪ್ರಯತ್ನ ನಡೆಯುತ್ತಿದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ, ಸಾಮಾಜಿಕ ನ್ಯಾಯದ ವಿಷಯದಲ್ಲಿ, ನಂಬಿರುವ ಸಿದ್ಧಾಂತಗಳ ಕುರಿತು ಯಾವತ್ತೂ ರಾಜಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.