Bangalore News: ಬೆಂಗಳೂರಿನ ಈ ವರ್ಷದ ನೀರಿನ ಸಮಸ್ಯೆ ಬಿಡಿ! ಭವಿಷ್ಯದ ವರ್ಷಗಳ ಸಮಸ್ಯೆಗೆ ಪರಿಹಾರಗಳೇನು?
ಬೇಸಿಗೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ನೀರಿನ ಬವಣೆ ಕಾಣಿಸಿಕೊಂಡಿದ್ದರೂ ಯೋಜನೆ ರೂಪಿಸದೇ ಇದ್ದರೆ ಜಲಗಂಡಾಂತರ ಮುಂದಿನ ವರ್ಷಗಳಲ್ಲಿ ಖಂಡಿತಾ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ(ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಕೇವಲ ಮಳೆಯ ಕೊರತೆ ಮಾತ್ರ ಕಾರಣವೇ? ಹೆಚ್ಚುತ್ತಿರುವ ಜನಸಂಖ್ಯೆ ನಗರದ ಮೇಲಿನ ಒತ್ತಡ, ಅವೈಜ್ಞಾನಿಕ ರೀತಿಯ ನಗರ ವಿಸ್ತರಣೆ ಮೊದಲಾದ ಸಮಸ್ಯೆಗಳೂ ಕಾರಣವಲ್ಲವೇ? ನಾಲ್ಕು ದಶಕಗಳ ಹಿಂದೆ ಇದ್ದ ಜನಸಂಖ್ಯೆ ಎಷ್ಟು ಮತ್ತು ಕಳೆದ ಮೂರು ದಶಕಗಳಿಂದ ಯಾವ ಪ್ರಮಾಣದಲ್ಲಿ ಬೆಂಗಳೂರುವಿಸ್ತರಣೆಗೊಂಡಿದೆ ಮತ್ತು ಜನಸಂಖ್ಯೆ ಹೆಚ್ಚಳವಾಗಿದೆ ಎನ್ನುವುದಕ್ಕೆ ಅಂಕಿಅಂಶಗಳ ಸಾಕ್ಷ್ಯ ಬೇಕಿಲ್ಲ, ನೀರಿನ ಅಭಾವವೊಂದೇ ಸಾಕು.
ಲೋಕಸಭೆ, ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆ ಎದುರಾದಾಗ ರಾಜಕೀಯ ಪಕ್ಷಗಳು ಸಮಗ್ರ ಮತ್ತು ವಿಸ್ತೃತವಾದ ಪ್ರಣಾಳಿಕೆಯನ್ನು ಜನರ ಮುಂದಿಡುತ್ತವೆ. ಅವರ ಪ್ರಣಾಳಿಕೆಗಳ ಅಂಶಗಳೆಲ್ಲವೂ ನಗರದ ಅಭಿವೃದ್ಧಿಗೆ ಪೂರಕವಾಗಿದ್ದರೂ ಅಧಿಕಾರಕ್ಕೆ ಬಂದ ನಂತರ ಆಡಳಿತ ಪಕ್ಷ ಮರೆತುಬಿಡುತ್ತದೆ. ವಿಪಕ್ಷಗಳೂ ಅದರ ಉಸಾಬರಿಗೆ ಹೋಗುವುದಿಲ್ಲ.
ಪರಿಹಾರಗಳೇನು
ಸರ್ಕಾರವೇನೋ ಖಾಸಗಿ ಟ್ಯಾಂಕರ್ ಗಳ ನೀರಿಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಉದ್ಯಾನ ನಗರದ 3,700 ಸಾರ್ವಜನಿಕ ಕೊಳವೆ ಬಾವಿಗಳು ಬತ್ತಿಹೋಗಿವೆ. 10,955 ಖಾಸಗಿ ಬೋರ್ ವೆಲ್ ಗಳ ಪೈಕಿ 2000 ದಷ್ಟು ಬೋರ್ ಗಳಲ್ಲಿ ನೀರಿಲ್ಲ. ವಾಸ್ತವ ಪರಿಸ್ಥಿತಿ.ಹೀಗಿರುವಾಗ ಸಮಸ್ಯೆಗೆ ಪರಿಹಾರವಾದರೂ ಏನು?
ಕರ್ನಾಟಕ ಜಲ ನೀತಿ-2023 ಜಾರಿಗೆ ಬಂದು ಎರಡು ವರ್ಷಗಳು ಸಂದಿವೆ. ನೀರಿನ ಪುನರ್ ಬಳಕೆ, ನೀರು ಶುದ್ದೀಕರಣ, ಮಳೆ ನೀರು ಕೊಯ್ಲು, ತ್ಯಾಜ್ಯ ಮತ್ತು ಮಳೆ ನೀರು ಸಂಸ್ಕರಣೆ, ಮೊದಲಾದ ಕ್ರಮಗಳನ್ನು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಯಾವುದೇ ಕ್ರಮ ಅನುಸರಿಸುತ್ತಿಲ್ಲ. ಇದರ ಪರಿಣಾಮ ಇಂದು ಕೊಡಗಳನ್ನು ಹೊತ್ತ ಮಹಿಳೆಯರು ಮತ್ತು ಮಕ್ಕಳ ಸರತಿ ಸಾಲನ್ನು ನೋಡುವಂತಾಗಿದೆ.
ಆಗಲೇ ಹೇಳಿದಂತೆ ನೀರಿನ ಅಭಾವಕ್ಕೆ ವರುಣನನ್ನು ಮಾತ್ರ ದೂಷಿಸಿ ಪ್ರಯೋಜನವಿಲ್ಲ..ಜನಸಂಖ್ಯಾ ಸ್ಫೋಟ, ಅವೈಜ್ಞಾನಿಕ ನಗರೀಕರಣ, ಪರಿಸರ ವಿರೋಧಿ ಕೈಗಾರಿಕೆಗಳ ಸ್ಥಾಪನೆ.ಮೊದಲಾದ ಕಾರಣಗಳು ನೀರಿನ ಸಮಸ್ಯೆ ಬಿಗಡಾಯಿಸಲು ಕೊಡುಗೆ ನೀಡಿವೆ ಎಂದೇ ಹೇಳಲಾಗುತ್ತಿದೆ.
ಜನಸಂಖ್ಯೆ ಆಧರಿತ ಯೋಜನೆ
ಯಾರು ಏನೇ ಹೇಳಿದರೂ ಕಾವೇರಿ ನೀರಿನ ಮೇಲಿನ ಅತಿಯಾದ ಅವಲಂಬನೆ ಮತ್ತು ನೀರು ನಿರ್ವಹಣೆ ಕುರಿತಾದ ಅಸಡ್ಡೆಯ ದೋರಣೆ ಇವತ್ತಿನ ಸಮಸ್ಯೆಗೆ ಮೂಲಭೂತ ಕಾರಣವಾಗಿದೆ. ಇತ್ತೀಚಿನವರ್ಷಗಳ ರೀತಿಯಲ್ಲೇ ಜನಸಂಖ್ಯೆ ಹೆಚ್ಚಳವಾಗುತ್ತಾ ಹೋದರೆ 2031ರ ವೇಳೆಗೆ 20.3 ಮಿಲಿಯನ್ ದಾಟುವ ಆತಂಕವಿದೆ. ನೀರಿನ ಬೇಡಿಕೆ ಮತ್ತು ಪೂರೈಕೆಗೆ ಅಜಗಜಾಂತರ ವ್ಯತ್ಯಾಸವಿರುತ್ತದೆ. ಈಗಲೇ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ 30 ವರ್ಷಗಳ ಕಾಲ ವಾರ್ಷಿಕ ಶೇ.3ರ ಬೆಳವಣಿಗೆ ದರದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದೆ.
ಈ ಪರಿಯ ಏರಿಕೆಗೆ ಕಾವೇರಿ ನೀರೊಂದೇ ಪರಿಹಾರವಾಗುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಈಗಿನಿಂದಲೇ ನೀರನ ವೈಜ್ಞಾನಿಕ ನಿರ್ವಹಣೆಯಾಗಬೇಕು.
ವಾಟರ್ ಫ್ಯೂಚರ್ ಹಬ್
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ವಾಟರ್ ಫ್ಯೂಚರ್ ಹಬ್ ಎಂಬ ಯೋಜನೆಯೊಂದನ್ನು ಸಿದ್ದಪಡಿಸಿಟ್ಟುಕೊಂಡಿದೆ ಎಂದು ತಿಳಿದು ಬಂದಿದೆ. ಒಂದು ಸಣ್ಣ ಕಂಪನಿಯಿಂದ ಹಿಡಿದು ರಾಷ್ಟ್ರೀಯ ಮಟ್ಟದ ಜಲ ತಜ್ಞರವರೆಗೆ ಸಂವಹನ ಸಾಧಿಸಿ ಭವಿಷ್ಯದ ನೀರಿನ ಸವಾಲನ್ನು ಎದುರಿಸಲು ಜ್ಞಾನವನ್ನು ಹಂಚಿಕೊಳ್ಳಬೇಕಿದೆ. ಸ್ಥಳೀಯವಾಗಿ ನೀರಿನಸದ್ಬಳಕೆ, ಮಳೆ ನೀರು ಕೊಯ್ಲು, ನೀರಿನ ಪುನರ್ ಬಳಕೆ ಮಾಡುವ ವಿಧಾನಗಳನ್ನು ಪ್ರಚಾರ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಸಲಹೆ.
ಬೆಂಗಳೂರಿನ ಅನೇಕ ಭಾಗಗಳ ನಾಗರೀಕರು ನೀರಿನ ಬಡತನವನ್ನು ಅನುಭವಿಸುತ್ತಿದ್ದಾರೆ. ಕೆರೆಗಳು ಬತ್ತಿ ಹೋಗಿವೆ ಇಲ್ಲವೇ ಮಲಿನವಾಗಿವೆ. ಇರುವ ಕೆರೆಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಮಳೆ ನೀರು ಕೊಯ್ಲುಕಡ್ಡಾಯಗೊಳಿಸಬೇಕು. ಅದಕ್ಕಾಗಿ ಮನೆ ಕಟ್ಟುವವರಿಗೆ ಪ್ರೋತ್ಸಾಹ ಅಥವಾ ರಿಯಾಯಿತಿಗಳನ್ನು ಘೋಷಿಸಬೇಕು. ಅಪಾರ್ಟ್ ಮೆಂಟ್ ಗಳು ತಮ್ಮದೇ ಆದ ನೀರಿನ ಮೂಲಗಳನ್ನು ಕಂಡುಕೊಳ್ಳಬೇಕು.
ಸುಖಾಸುಮ್ಮನೆ ಗಗನಚುಂಬಿ ಕಟ್ಟಡಗಳನ್ನು ಏರಿಸಿದರೆ ಪ್ರಯೋಜನವಿಲ್ಲ. ಅಲ್ಲಿರುವ ಅಷ್ಟೂ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಮಳೆ ನೀರು ಕೊಯ್ಲು, ನೀರಿನ ಸಂಸ್ಕರಣೆ, ಪುನರ್ ಬಳಕೆಯಂತಹ ವಿಧಾನಗಳನ್ನು ಅನುಸರಿಸುವುದನ್ನು ಕಡ್ಡಾಯಗೊಳಿಸಬೇಕು. ನೀರಿನ ಸಮಸ್ಯೆ ರಾಜಕಾರಣದ ವಿಷಯ ಅಲ್ಲವೇ ಅಲ್ಲ. ಆದ್ದರಿಂದ ತ್ವರಿತ ಕ್ರಮಗಳನ್ನು ಸಮರೋಪಾದಿಯಲ್ಲಿ ಅನುಸರಿಸುವ ಅಗತ್ಯವಿದೆ ಎನ್ನುವ ಗಂಭೀರ ಸಲಹೆಗಳು ಕೇಳಿ ಬಂದಿವೆ.
(ವರದಿ: ಎಚ್.ಮಾರುತಿ. ಬೆಂಗಳೂರು)
ವಿಭಾಗ