Bangalore News: ಮಾರತಹಳ್ಳಿ ಸೇತುವೆಗೆ ಹೊಸ ನಿರ್ಬಂಧ ಹೇರಿದ ಬೆಂಗಳೂರು ಸಂಚಾರ ಪೊಲೀಸರು, ಈ ಮಾರ್ಗದಲ್ಲಿ ಹೀಗೆ ಸಂಚರಿಸಿ
ಬೆಂಗಳೂರಿನ ಮಾರತಹಳ್ಳಿ ಭಾಗದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸಂಚಾರ ಪೊಲೀಸರು ಹಲವಾರು ಸುಧಾರಣಾ ಕ್ರಮ, ಮಾರ್ಗ ಬದಲಾವಣೆ ನಿಯಮಗಳನ್ನು ಜಾರಿಗೊಳಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನ ವರ್ತೂರು ರಸ್ತೆಯ ಮಾರತಹಳ್ಳಿ ಸೇತುವೆ ಜಂಕ್ಷನ್ ನಲ್ಲಿನ ದಟ್ಟಣೆಯನ್ನು ನಿವಾರಿಸಲು ಬೆಂಗಳೂರು ಸಂಚಾರ ಪೊಲೀಸರು ಹೊಸ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಎಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಈ ಪ್ರದೇಶವು ಭಾರೀ ವಾಹನ ದಟ್ಟಣೆಯಿದೆ. ಇದು ಪ್ರಯಾಣಿಕರಿಗೆ ವಿಳಂಬದ ಪ್ರಯಾಣಕ್ಕೆ ದಾರಿಯಾಗುತ್ತಿದೆ. ವಿಶೇಷವಾಗಿ ಕಚೇರಿಗೆ ಹೋಗಿ ಬರುವ ಸಮಯದಲ್ಲಿ ದಟ್ಟಣೆಗೆ ಕಾರಣವಾಗುತ್ತದೆ. ಈ ವಾಹನದ ಹರಿವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು, ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ನಿರ್ಬಂಧಗಳನ್ನು ವಿಧಿಸಿ ಬೆಂಗಳೂರು ನಗರ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ನಿತ್ಯ ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ನಾಲ್ಕು ಗಂಟೆಗಳ ಕಾಲ ಮತ್ತು ಸಂಜೆ 4 ರಿಂದ ರಾತ್ರಿ 10 ರವರೆಗೆ ಆರು ಗಂಟೆಗಳ ಕಾಲ ಸಂಚಾರ ನಿರ್ಬಂಧಗಳು ಜಾರಿಯಲ್ಲಿ ಇರಲಿದೆ. ಈ ಸಮಯದಲ್ಲಿ ಕೆಎಲ್ಎಂ ಸರ್ವಿಸ್ ರಸ್ತೆಯಿಂದ ಹೊರ ವರ್ತುಲ ರಸ್ತೆ (ಒಆರ್‌ಆರ್) ಮೂಲಕ ಕುಂದಲಹಳ್ಳಿ ಗೇಟ್ ಕಡೆಗೆ ವಾಹನಗಳು ಚಲಿಸಲು ಅನುಮತಿ ನೀಡಲಾಗುವುದಿಲ್ಲ.
ಇದಕ್ಕೆ ಪೂರಕವಾಗಿ ಬೆಂಗಳೂರು ಸಂಚಾರ ವಿಭಾಗದ ಅಧಿಕಾರಿಗಳು ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ಶಿಫಾರಸು ಮಾಡಿದ್ದಾರೆ. ಲಘು ವಾಹನಗಳು ಆಕಾಶ್ ವಿಹಾರ್ ಹೌಸಿಂಗ್ ಬಳಿ ಯು-ಟರ್ನ್ ತೆಗೆದುಕೊಂಡು ನಂತರ ಮಾರತ್ತಹಳ್ಳಿ ಸೇತುವೆ ಮೂಲಕ ಕುಂದಲಹಳ್ಳಿ ಗೇಟ್ ಕಡೆಗೆ ಹೋಗಬೇಕು ಇನ್ನು ಭಾರಿ ವಾಹನಗಳು ತುಳಸಿ ಥಿಯೇಟರ್ ಜಂಕ್ಷನ್ ನಲ್ಲಿ ಯು-ಟರ್ನ್ ಮಾಡಿ ಅದೇ ಮಾರ್ಗವನ್ನು ಅನುಸರಿಸಬೇಕು.
ಪಾದಚಾರಿಗಳು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಒಟ್ಟಾರೆ ಸಂಚಾರ ಚಲನೆಯನ್ನು ಸರಾಗಗೊಳಿಸಲು ನಿರ್ಬಂಧಿತ ಸಮಯದಲ್ಲಿ ವರ್ತೂರು ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯನ್ನು ದಾಟಲು ಸ್ಕೈವಾಕ್ ಅನ್ನು ಬಳಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ ಸಂಚಾರ ಪೊಲೀಸರು ಕೈಗೊಂಡಿರುವ ಈ ಹೊಸ ಹಾಗೂ ಪರ್ಯಾಯ ಕ್ರಮಗಳು ಅತಿ ಹೆಚ್ಚು ವಾಹನ ದಟ್ಟಣೆ ಇರುವ ಜಂಕ್ಷನ್‌ನಲ್ಲಿ ಚಾಲಕರು ಮತ್ತು ಪ್ರಯಾಣಿಕರು ದೀರ್ಘಕಾಲದವರೆಗೂ ತಪ್ಪಲಿದೆ. ಅಲ್ಲದೇ ಕಚೇರಿ ಸಮಯದಲ್ಲಿ ಹಾಗೂ ಮನೆಗೆ ವಾಪಾಸಾಗುವಾಗ ಗಮನಾರ್ಹ ವಿಳಂಬವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ದೈನಂದಿನ ಪ್ರಯಾಣವನ್ನು ಸುಧಾರಿಸುವಲ್ಲಿ ಬದಲಾವಣೆಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ಪರಾಮರ್ಶಿಸಲು ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಬೆಂಗಳೂರಿನ ಇದೇ ಮಾದರಿಯ ಸಂಚಾರ ದಟ್ಟಣೆ ಇರುವ ಹಲವಾರು ಪ್ರದೇಶಗಳನ್ನು ಗುರುತಿಸಿ ಸ್ಥಳೀಯವಾಗಿ ಆಗಬಹುದಾದ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಈ ಸಂಚಾರ ಸುಧಾರಣೆ ಕ್ರಮಗಳು ಮಾರತ್ತಹಳ್ಳಿ ಸೇತುವೆ ಪ್ರದೇಶದಲ್ಲಿ ಶುರುವಾಗಿದೆ. ಕೆಲ ದಿನಗಳ ಕಾಲ ಬೆಳಿಗ್ಗೆ ಹಾಗೂ ಸಂಜೆ ಸಮಯದ ಸಂಚಾರ ಸೂಚನೆ ಪಾಲನೆ ಗಮನಿಸಿ ಆನಂತರ ಇನ್ನಷ್ಟು ಸುಧಾರಣೆ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.