ಕನ್ನಡ ಸುದ್ದಿ  /  ಕರ್ನಾಟಕ  /  Prajwal To Jail : ಪ್ರಜ್ವಲ್‌ ರೇವಣ್ಣಗೆ ಜೈಲು, ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ನ್ಯಾಯಾಲಯ

Prajwal to Jail : ಪ್ರಜ್ವಲ್‌ ರೇವಣ್ಣಗೆ ಜೈಲು, ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ನ್ಯಾಯಾಲಯ

Hassan Scandal ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ.

ಜೈಲು ಪಾಲಾದ ಪ್ರಜ್ವಲ್‌ ರೇವಣ್ಣ
ಜೈಲು ಪಾಲಾದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಹಾಸನದ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ವಶದಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಜೈಲಿಗೆ ಕಳುಹಿಸಲಾಗಿದೆ. ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಹನ್ನೊಂದು ದಿನದಿಂದ ಎಸ್‌ಐಟಿ ವಶದಲ್ಲಿಯೇ ಇದ್ದ ಪ್ರಜ್ವಲ್‌ ಅವರ ವಿಚಾರಣೆ ಬಳಿಕ ಸೋಮವಾರ ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಎಸ್‌ಐಟಿ ವಿಶೇಷ ಅಭಿಯೋಜಕರು ಮುಚ್ಚಿದ ಲಕೋಟೆಯಲ್ಲಿ ಎಸ್‌ಐಟಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅಲ್ಲದೇ ಪ್ರಜ್ವಲ್‌ ಅವರನ್ನು ಇನ್ನಷ್ಟು ಅವಧಿಗೆ ತಮ್ಮ ಕಸ್ಟಡಿಗೆ ನೀಡುವಂತೆ ಕೋರದೇ ಇರುವುದರಿಂದ ಅವರನ್ನು ಜೈಲಿಗೆ ಕಳುಹಿಸಲಾಯಿತು. ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಜೂನ್‌ 24ರವರೆಗೆ ಪ್ರಜ್ವಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್‌ ಅವರು ಜೈಲಿನಲ್ಲಿಯೇ ಇರಬೇಕಾಗುತ್ತದೆ. ಆದೇಶದ ನಂತರ ಪೊಲೀಸರು ಜೈಲಿಗೆ ಕರೆದುಕೊಂಡು ಹೋದರು.

ಪ್ರಜ್ವಲ್‌ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಏಪ್ರಿಲ್‌ ನಲ್ಲಿ ದಾಖಲಿಸಲಾಗಿತ್ತು. ಆನಂತರ ಅವರು ಸುಮಾರು 34 ದಿನ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಆನಂತರ ಮೇ 31 ರಂದು ವಿದೇಶದಿಂದ ಆಗಮಿಸಿ ಎಸ್‌ಐಟಿ ಪೊಲೀಸರ ಮುಂದೆ ಹಾಜರಾಗಿದ್ದರು.ವಶಕ್ಕೆ ಪಡೆದಿದ್ದ ಎಸ್‌ಐಟಿ ಪೊಲೀಸರು ಬೆಂಗಳೂರಿನ ನ್ಯಾಯಾಲಯದ ಮುಂದೆ ಎರಡು ಬಾರಿ ಪ್ರಜ್ವಲ್‌ ಅವರನ್ನು ಹಾಜರುಪಡಿಸಲಾಗಿತ್ತು. ಮೊದಲ ಬಾರಿಗೆ ಆರು ದಿನ, ಎರಡನೇ ದಿನ ನಾಲ್ಕು ದಿನ ಎಸ್‌ಐಟಿ ಕಸ್ಟಡಿಗೆ ಪ್ರಜ್ವಲ್‌ ಅವರನ್ನು ನೀಡಿ ನ್ಯಾಯಾಲಯ ಆದೇಶಿಸಿತ್ತು.

ನಿರಂತರವಾಗಿ ವಿಚಾರಣೇ ನಡೆಸಿ ಹೊಳೆನರಸೀಪುರ, ಹಾಸನ, ಬೆಂಗಳೂರಿನಲ್ಲಿ ಸ್ಥಲ ಮಹಜರು ಮಾಡಲಾಗಿತ್ತು. ದೂರುದಾರರ ಹೇಳಿಕೆ, ಸಾಕ್ಷ್ಯಗಳಿಗೆ ಅನುಗುಣವಾಗಿ ಎಸ್‌ಐಟಿ ಪೊಲೀಸರು ಪ್ರಜ್ವಲ್‌ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದರು. ವಿಚಾರಣೆ ಮುಗಿದ ಹಿನ್ನಲೆಯಲ್ಲಿ ಸೋಮವಾರ ಅವರನ್ನು ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಈ ವೇಳೆ ನ್ಯಾಯಾಧೀಶರು ಎಸ್‌ಐಟಿ ವಶದಲ್ಲಿದ್ದಾಗ ಏನಾದರೂ ಸಮಸ್ಯೆಯಾಯಿತಾ ಎಂದು ಪ್ರಜ್ವಲ್‌ ಅವರನ್ನು ಕೇಳಿದರು. ಯಾವುದೇ ಸಮಸ್ಯೆಯಾಗಲಿಲ್ಲ ಎಂದು ಪ್ರಜ್ವಲ್‌ ಉತ್ತರಿಸಿದರು. ಪ್ರಕರಣದ ಕುರಿತು ಎಸ್‌ಐಟಿ ಕಸ್ಟಡಿ ವಿಸ್ತರಣೆಗೆ ಯಾವುದೇ ಮನವಿ ಸಲ್ಲಿಸಲಿಲ್ಲ. ಈ ಕಾರಣದಿಂದ ಪ್ರಜ್ವಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಹದಿನಾಲ್ಕು ದಿನಗಳ ಕಾಲ ಪ್ರಜ್ವಲ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದರಿಂದ ಎಸ್‌ಐಟಿ ಕಸ್ಟಡಿ ಅವಧಿ ಮುಗಿದಿದೆ. ಇನ್ನೂ ಎರಡು ಪ್ರಕರಣದಲ್ಲಿ ಪ್ರಜ್ವಲ್‌ ಅವರು ಬೇಕಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ಎಸ್‌ಐಟಿ ವಶಕ್ಕೆ ಮುಂದೆ ಪಡೆದುಕೊಳ್ಳುವ ಸಾಧ್ಯತೆಯಿದೆ.

ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.ಇದಲ್ಲದೇ ಇನ್ನೂ ಎರಡು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲಾಗಿದ್ದು, ಅದರ ವಿಚಾರಣೆ ಬಾಕಿಯಿದೆ.

ಕಳೆದ ತಿಂಗಳು ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಆರು ದಿನ ಅವರು ಜೈಲಿನಲ್ಲಿಯೇ ಇದ್ದು ಆನಂತರ ಬಿಡುಗಡೆಯಾಗಿದ್ದರು. ಈಗ ಪ್ರಜ್ವಲ್‌ ರೇವಣ್ಣ ಕೂಡ ಅಲ್ಲಿಗೆ ತೆರಳಲಿದ್ದಾರೆ.

ಈ ನಡುವೆ ಪ್ರಜ್ವಲ್‌ ರೇವಣ್ಣ ಅವರು ಬಸವನಗುಡಿಯಲ್ಲಿರುವ ನಿವಾಸದಲ್ಲೂ ಕೆಲ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಇದ್ದುದರಿಂದ ಅಲ್ಲಿಗೂ ಸೋಮವಾ ರ ಪ್ರಜ್ವಲ್‌ ಅವರನ್ನು ಕರೆದುಕೊಂಡು ಹೋಗಲಾಗಿತ್ತು.ಸುಮಾರು ಎರಡು ಗಂಟೆ ಕಾಲ ಬಸವನಗುಡಿ ನಿವಾಸ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು. ಈ ಮೂಲಕ ಮೂರು ಪ್ರಕರಣಗಳ ಮೇಲೆ ಸ್ಥಳ ಮಹಜರನ್ನು ಪೊಲೀಸರು ಪೂರ್ಣಗೊಳಿಸಿದರು.

ಟಿ20 ವರ್ಲ್ಡ್‌ಕಪ್ 2024