Lok Sabha Elections 2024: ಲೋಕಸಭಾ ಚುನಾವಣೆ ಬಂತು, ವಹಿವಾಟಿನ ಮೇಲೆ ಕಣ್ಗಾವಲು ಶುರು, ಹೀಗಿರಲಿ ನಿಮ್ಮ ಬ್ಯಾಂಕ್‌ ವ್ಯವಹಾರ-bangalore news lok sabha election2024 officials eye on big transactions prepared with documents money transportation kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Elections 2024: ಲೋಕಸಭಾ ಚುನಾವಣೆ ಬಂತು, ವಹಿವಾಟಿನ ಮೇಲೆ ಕಣ್ಗಾವಲು ಶುರು, ಹೀಗಿರಲಿ ನಿಮ್ಮ ಬ್ಯಾಂಕ್‌ ವ್ಯವಹಾರ

Lok Sabha Elections 2024: ಲೋಕಸಭಾ ಚುನಾವಣೆ ಬಂತು, ವಹಿವಾಟಿನ ಮೇಲೆ ಕಣ್ಗಾವಲು ಶುರು, ಹೀಗಿರಲಿ ನಿಮ್ಮ ಬ್ಯಾಂಕ್‌ ವ್ಯವಹಾರ

Finance News ಇಡೀ ದೇಶದಲ್ಲಿ ಚುನಾವಣೆಗೆ ಸಿದ್ದತೆಗಳು ನಡೆದಿವೆ. ಅದರಲ್ಲೂ ಹಣ ವಹಿವಾಟಿನ ಮೇಲೆ ನಿಗಾ ಹೆಚ್ಚಲಿದೆ. ಈಗಾಗಲೇ ಕಣ್ಗಾವಲು ಆರಂಭಗೊಂಡಿದ್ದು, ಹಣ ಸಾಗಿಸುವವರು, ವಹಿವಾಟು ನಡೆಸುವವರು ಮುನ್ನಚ್ಚರಿಕೆ ವಹಿಸುವುದು ಹೇಗೆ. ಇಲ್ಲಿದೆ ವಿವರ.

ಚುನಾವಣೆ ಕಾರಣಕ್ಕೆ ಹಣ ಸಾಗಿಸುವುದು ಸೇರಿ ವಹಿವಾಟಿನ ಮೇಲೆ ನಿಗಾ ಇರುವುದು ಒಳ್ಳೆಯದು.
ಚುನಾವಣೆ ಕಾರಣಕ್ಕೆ ಹಣ ಸಾಗಿಸುವುದು ಸೇರಿ ವಹಿವಾಟಿನ ಮೇಲೆ ನಿಗಾ ಇರುವುದು ಒಳ್ಳೆಯದು.

ಬೆಂಗಳೂರು: ಲೋಕಸಭೆ ಚುನಾವಣೆ ದಿನಾಂಕ ಇನ್ನೂ ಪ್ರಕಟಣೆಯಾಗಿಲ್ಲ. ಆದರೆ ಚುನಾವಣೇಗೆ ತಯಾರಿ ಕೆಲಸಗಳು ಎಲ್ಲಾ ಜಿಲ್ಲಾ ಹಂತದಲ್ಲಿ ನಡೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಹಣಕಾಸಿನ ವಹಿವಾಟಿನ ಮೇಲೆ ಈಗಿನಿಂದಲೇ ನಿಗಾ ವಹಿಸುವುದು ಶುರುವಾಗಿದೆ. ಜಿಲ್ಲಾಡಳಿತಗಳು ಬ್ಯಾಂಕ್‌ ವಹಿವಾಟಿನ ಮೇಲೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದು, ಅನುಮಾನಾಸ್ಪದ ಆರ್ಥಿಕ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲಾಗಿದೆ. ಚುನಾವಣೆ ದಿನಾಂಕ ಸದ್ಯದಲ್ಲೇ ಪ್ರಕಟಣೆಯಾಗುವ ಸಾಧ್ಯತೆಯಿದೆ. ಆನಂತರ ಇದು ತಾಲ್ಲೂಕು, ಗ್ರಾಮ ಹಂತದಲ್ಲೂ ಇನ್ನಷ್ಟು ಚುರುಕಾಗಲಿದೆ.

ಕೇಂದ್ರ ಚುನಾವಣೆ ಆಯೋಗ ಈಗಾಗಲೇ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳ ಸಭೆ ನಡೆಸಿ ಲೋಕಸಭೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದೆ. ಈಗಾಗಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಿಬ್ಬಂದಿ ನೇಮಕ, ತರಬೇತಿ, ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಸೇರಿದಂತೆ ಹಲವಾರು ವಿಚಾರಗಳ ಕುರಿತು ತಯಾರಿಗಳು ನಡೆದಿವೆ. ಅದರಲ್ಲೂ ಚುನಾವಣೆಗೆ ಮುನ್ನ ಕಪ್ಪು ಹಣ ಸರಬರಾಜು, ಸಂಗ್ರಹದಂತದ ಮಾಹಿತಿ ಬಂದರೆ ಗಮನ ಇಡಿ. ಬ್ಯಾಂಕ್‌ಗಳಿಂದ ವಹಿವಾಟು ನಡೆಸುವಾಗ ಸೂಕ್ತ ಮಾಹಿತಿಯನ್ನು ಒದಗಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು ಎಂಬ ಆದೇಶದ ಹಿನ್ನೆಲೆಯಲ್ಲಿ ಚಟುವಟಿಕೆ ನಡೆದಿದೆ.

ಬ್ಯಾಂಕ್ ಗಳಲ್ಲಿ ಅನುನಾನಸ್ಪದವಾಗಿ 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಖಾತೆಗೆ ಜಮೆ ಮಾಡುವುದು ಹಾಗೂ ಹಿಂಪಡೆಯುವ ಪ್ರಕರಣಗಳ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ನಿಗಾ ವಹಿಸಬೇಕು.ಒಂದು ಖಾತೆಯಿಂದ ಪೋನ್ ಫೇ, ಗೂಗಲ್ ಪೇ ಸೇರಿದಂತೆ ವಿವಿಧ ಆ್ಯಪ್ ಮೂಲಕ ಐದು ಅಥವಾ ಹೆಚ್ಚಿನ ಖಾತೆಗೆ ಒಂದೇ ಬಾರಿ ಹಣ ವರ್ಗಾವಣೆಯಾಗುವ ಪ್ರಕರಣಗಳನ್ನು ಪಟ್ಟಿ ಮಾಡಿಕೊಂಡು ವರದಿ ಮಾಡಬೇಕು ಎನ್ನುವ ಸೂಚನೆಯನ್ನು ಬ್ಯಾಂಕ್‌ ಅಧಿಕಾರಿಗಳಿಗೆ ನೀಡಲಾಗಿದೆ ಎನ್ನುವುದು ಮಂಡ್ಯ ಡಿಸಿ ಡಾ.ಕುಮಾರ್‌ ಅವರು ನೀಡುವ ವಿವರಣೆ.

ಅಧಿಕಾರಿಗಳಿಗೆ ಸೂಚನೆ

ಎಸ್.ಎಸ್.ಟಿ, ಫೈಯಿಂಗ್ ಸ್ಕ್ವಾಡ್‌ (flying squad) ಜಪ್ತಿ ಮಾಡಿಕೊಳ್ಳುವ ಹಣವನ್ನು ಖಜಾನೆಗೆ ಜಮೆ ಮಾಡುತ್ತಾರೆ. ಇದಕ್ಕೆ ಅಗತ್ಯ ಸಿಬ್ಬಂದಿಗಳನ್ನು ಖಜಾನೆ ಅಧಿಕಾರಿಗಳು ನಿಯೋಜಿಸಬೇಕು ಎಂದರು. ಚುನಾವಣಾ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಹಣ ಮತ್ತು ಇತರೆ ವಸ್ತುಗಳನ್ಬು ಜಪ್ತಿ ಮಾಡುವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ, ಮಹಜರ್ ಮಾಡಿ ವರದಿ ಸಂಗ್ರಹಿಸಬೇಕು. ಚುನಾವಣಾ ಆಯೋಗ ತಿಳಿಸುವ ಆ್ಯಪ್ ಗಳಲ್ಲಿ ನಿಗದಿತ ಸಮಯದಲ್ಲಿ ಆ್ಯಪ್ ಗಳಲ್ಲಿ ಅಪ್ ಲೋಡ್ ಮಾಡಬೇಕು . ಅಬಕಾರಿ ಇಲಾಖೆಯವರು ಅಬಕಾರಿ ಸನ್ನದ್ದುಗಳಲ್ಲಿ ಪ್ರತಿದಿನ ಮಾರಾಟವಾಗುವ ಸ್ಟಾಕ್ ಗಳ ಬಗ್ಗೆ ನಿಗಾ ವಹಿಸಬೇಕು. ಅನಾಧಿಕೃತವಾಗಿ ಮದ್ಯ ಮಾರಾಟವಾಗುವ ಸ್ಥಳಗಳಲ್ಲಿ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು.

ವಿವಿಧ ಇಲಾಖೆಗಳ ವೆಬಸೈಟ್ ಗಳನ್ನು ಪಟ್ಟಿ ಮಾಡಿಕೊಂಡು ಚುನಾವಣೆ ಘೋಷಣೆಯಾದ ತಕ್ಷಣ ವೆಬ್ ಸೈಟ್ ಗಳಲ್ಲಿರುವ ಸಚಿವರು ಹಾಗೂ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಬೇಕು ಎನ್ನುವ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ.

ನಿಮ್ಮ ವಹಿವಾಟು ಹೀಗಿರಲಿ

- ಚುನಾವಣೆ ಘೋಷಣೆಯಾಗದೇ ಇದ್ದರೂ ವಹಿವಾಟಿನ ಮೇಲೆ ಗಮನ ಇರಲಿ

- ಹೆಚ್ಚಿನ ಮೊತ್ತವನ್ನು ತೆಗೆದುಕೊಂಡು ಹೋಗುವಾಗ ದಾಖಲೆ ಇಟ್ಟುಕೊಳ್ಳಿ

- ಎಲ್ಲಿಂದ ಹಣ ತರುತ್ತೀದ್ದಿರಿ ಎಂದಾಗ ಅಲ್ಲಿಂದ ಸೂಕ್ತ ಪತ್ರ ಪಡೆದುಕೊಳ್ಳಿ

- ಮದುವೆ, ಕುಟುಂಬದ ಕಾರಣಕ್ಕೆ ಹಣ ತೆಗೆದುಕೊಂಡು ಹೋಗುವಾಗಲು ಗಮನ ಕೊಡಿ

- ಹೆಚ್ಚಿನ ಹಣ ತೆಗೆದುಕೊಂಡು ಹೋಗುವಾಗ ಅನಿವಾರ್ಯತೆ ಇದ್ದಾಗ ಎಚ್ಚರ ವಹಿಸಿ

- ಬೆಳೆ ಮಾರಾಟ, ಇತರೆ ರೂಪದಲ್ಲಿ ಹಣ ಬಂದಾಗ ಅದರ ದಾಖಲೆ ನಿಮ್ಮ ಬಳಿ ಇರಲಿ

- ಚುನಾವಣೆ ನೀತಿ ಸಂಹಿತೆ ಹೇಗಿದೆ, ಹಣ ಸಾಗಣೆಗೆ ಇರುವ ನಿಯಮಗಳ ಮಾಹಿತಿ ಪಡೆದುಕೊಳ್ಳಿ

- ನಿಮ್ಮ ಬ್ಯಾಂಕ್‌ನ ಅಧಿಕಾರಿಗಳು, ಹಣ ಪಡೆದವರ ದೂರವಾಣಿ ಸಂಖ್ಯೆಯನ್ನು ಇಟ್ಟುಕೊಳ್ಳಿ

- ಎಲ್ಲಿಯಾದರೂ ತಪಾಸಣೆ ಮಾಡುವಾಗ ಬ್ಯಾಂಕ್‌ನ ಅಧಿಕಾರಿಗಳನ್ನು ಮಾತನಾಡಿಸಲು ಸಹಕಾರಿಯಾಗಲಿದೆ

- ಅನುಮಾನಾಸ್ಪದವಾಗಿ ನಡೆದುಕೊಳ್ಳುವಂತಹ ಪ್ರಯತ್ನ ಮಾಡಬೇಡಿ

- ಹಣದ ವಿಚಾರದಲ್ಲಿ ಸಣ್ಣ ತಪ್ಪು ಮಾಡಿದರೂ ತೊಂದರೆ ಅನುಭವಿಸಬೇಕಾಗುತ್ತದೆ.