ಕನ್ನಡ ಸುದ್ದಿ  /  Karnataka  /  Bangalore News Rameshwaram Cafe Blast Case One Arrested Nia Announce 10 Lakh Prize For Others Information Mrt

Bangalore News:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಬ್ಬನ ಸೆರೆ, ಮತ್ತಿಬ್ಬರ ಪತ್ತೆಗೆ ತಲಾ 10 ಲಕ್ಷ ಬಹುಮಾನ ಘೋಷಣೆ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಎನ್‌ಐಎ ಮಹತ್ವದ ಅಂಶಗಳನ್ನು ಕಲೆ ಹಾಕಿದೆ. ಒಬ್ಬಾತನನ್ನು ಬಂಧಿಸಲಾಗಿದ್ದು, ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಿನ ರಾಮೇಶ್ವರಂ ಕೆಫೆ.
ಬೆಂಗಳೂರಿನ ರಾಮೇಶ್ವರಂ ಕೆಫೆ.

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಬಂಧನವಾಗುತ್ತಿದ್ದಂತೆ ಮತ್ತಿಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ ) ಬಲೆ ಬೀಸಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನಿಗೆ ಸಹಕಾರ ನೀಡಿದ ಇಬ್ಬರ ಮಾಹಿತಿ ನೀಡಿದವರಿಗೆ ತಲಾ ರೂಪಾಯಿ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಪ್ರಕಟಿಸಿದೆ.ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮಥೀನ್ ಅಹ್ಮದ್ ತಾಹ ಪತ್ತೆಗೆ ನೆರವಾಗುವಂತಹ ಸುಳಿವು ಹಂಚಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ದಳ ಎಕ್ಸ್‌ನಲ್ಲಿ ಕೋರಿದೆ. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿರಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

 

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದು ಮುಸ್ಸಾವಿರ್ ಹುಸೇನ್ ಶಾಜಿಬ್ ಎಂದು ಎನ್‌ಐಎ ಊಹಿಸಿದೆ. ಆತನ ಚಲನವಲನ ಮಾಹಿತಿಯನ್ನು ಪಡೆದು ನಿಖರವಾಗಿಯೇ ಆತನ ಮೇಲೆ ಎನ್‌ಐಎ ಕಣ್ಣಿಟ್ಟಿತ್ತು. ಈ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಮುಜಮೀಲ್ ಶರೀಫ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.ಬಾಂಬ್ ಇಟ್ಟಿದ್ದ ಶಂಕಿತ ಆರೋಪಿ ಮುಸ್ಸಾವೀರ್ ಹುಸೇನ್ ಶಾಜಿದ್, ಅಬ್ದುಲ್ ಅಹಮದ್ ಮಥೀನ್ ತಾಹಾ ಜೊತೆ ಸೇರಿಕೊಂಡು ಮುಜಮೀಲ್ ಸಂಚು ರೂಪಿಸಿದ್ದ ಎನ್ನುವುದು ಖಚಿತವಾಗಿದೆ.

ಚಿಕ್ಕಮಗಳೂರಿನ ದುಬೈನಗರದ ನಿವಾಸಿಯಾಗಿರುವ ಈತ ಮೊಬೈಲ್ ಶಾಪ್ ನಡೆಸುತ್ತಿದ್ದಾನೆ. ಅಬ್ದುಲ್ ಮಥೀನ್ ತಾಹಾ ತೀರ್ಥಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದ್ದು, ಆತನ ಮನೆಯ ಮೇಲೂ ದಾಳಿ ನಡೆದಿದೆ. ಮುಸಾವೀರ್ ಮತ್ತು ಅಬ್ದುಲ್ ಮಥೀನ್ ತಾಹಾ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ. ಇವರ ಪತ್ತೆಗೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

ಇವರಿಬ್ಬರೂ ಹಿಂದೂ ಹೆಸರಿನಲ್ಲಿ ಆಧಾರ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ನಕಲಿ ಗುರುತಿನ ಚೀಟಿಗಳನ್ನು ಸೃಷ್ಟಿ ಮಾಡಿ ಕೊಂಡಿದ್ದರು.

ಮುಸ್ಸಾವೀರ್ , ಮೊಹಮ್ಮದ್ ಜುನೈದ್ ಸಯ್ಯದ್ ಅಥವಾ ಇದೇ ಹೆಸರನ್ನು ಹೋಲುವಂತಹ ಹೆಸರಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಅಬ್ದುಲ್ ಮಥೀನ್ ಅಹಮದ್ ತಾಹಾ, ವಿಗ್ನೇಶ್ ಹೆಸರಿನಲ್ಲಿ ನಕಲಿ ಆಧಾರ್ ಮತ್ತಿತರ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಈ ಕುರಿತ ಎಲ್ಲಾ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇದನ್ನಾಧರಿಸಿಯೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎನ್ನಲಾಗುತ್ತಿದೆ.

ಮುಜಮೀಲ್, ಕೆಫೆಯಲ್ಲಿ ಬಾಂಬ್‌ ಇರಿಸಿದ್ದ ಶಂಕಿತ ಹಾಗೂ ಇತರರ ಜೊತೆ ಸೇರಿ ಸಂಚು ರೂಪಿಸಿದ್ದ. ಕೆಲ ಪುರಾವೆಗಳನ್ನು ಆಧರಿಸಿ ಮುಜಮೀಲ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಈತನೇ ಪ್ರಮುಖ ಸಂಚುಕೋರ ಎಂಬುದು ಗೊತ್ತಾಗಿದೆ. ಈತನನ್ನು ಬುಧವಾರ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಹೋಟೆಲ್ ನಲ್ಲಿ ಇರಿಸಲು ಬಾಂಬ್ ತಯಾರಿಕೆಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳನ್ನು ತಲೆ ಮರೆಸಿಕೊಂಡಿರುವ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮಥೀನ್ ಅಹ್ಮದ್ ತಾಹಾಗೆ ಬೇಕಿದ್ದ ಕಚ್ಚಾ ಸಾಮಗ್ರಿಗಳನ್ನು ಮುಜಮೀಲ್ ಶರೀಫ್‌ ಒದಗಿಸಿದ್ದ.

ಬ್ರೂಕ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1ರಂದು ಮಧ್ಯಾಹ್ನ ಊಟದ ಸಮಯದಲ್ಲಿ ಬಾಂಬ್ ಸ್ಫೋಟವಾಗಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಆರೋಪಿಗಳನ್ನು ಬಂಧಿಸಲು ಎನ್ಐಎ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಹುಡುಕಾಟ ನಡೆಸಿತ್ತು. ತನಿಖೆ ಮಾಹಿತಿಯನ್ನು ಆಧರಿಸಿಯೇ ಒಬ್ಬಾತನನ್ನು ಬಂಧಿಸಲಾಗಿದ್ದು, ಇನ್ನಿಬ್ಬರ ಸೆರೆಗೆ ಬಲೆ ಬೀಸಿದೆ ಎಂದು ಮೂಲಗಳು ಖಚಿತಪಡಿಸಿವೆ.

(ವರದಿ: ಎಚ್. ಮಾರುತಿ, ಬೆಂಗಳೂರು)

IPL_Entry_Point