ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ
ಕನ್ನಡ ಸುದ್ದಿ  /  ಕರ್ನಾಟಕ  /  ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಬಂಟ್ವಾಳ ಸಮೀಪ 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ ನಡೆ ಈಗ ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಗೆ ಒಳಗಾಗಿದೆ. ಉಮೇಶ್ ಮಠದಬೆಟ್ಟು ಎಂಬ ಯುವಕ ಈ ಸಾಹಸಿಗ. ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ಘಟನೆಯ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು (ಚಿತ್ರದಲ್ಲಿರುವವರು) ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು (ಚಿತ್ರದಲ್ಲಿರುವವರು) ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಮಂಗಳೂರು: ಮಗುವೊಂದು ಬಾವಿಗೆ ಬಿದ್ದಾಗ ತನ್ನ ಪ್ರಾಣಕ್ಕೆ ಅಪಾಯವಾಗುವುದನ್ನೂ ಲೆಕ್ಕಿಸದೆ ಯುವಕನೋರ್ವ ಬಾವಿಗೆ ಇಳಿದು ಮಗುವನ್ನು ರಕ್ಷಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೇ 14ರಂದು ಈ ಘಟನೆ ನಡೆದಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಯುವಕನ ಸಾಹಸದ ಕುರಿತು ಭಾರಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ ಯುವಕ ಉಮೇಶ್ ಸಾಹಸಗಾಥೆ ಇದು.

ಘಟನೆ ವಿವರ ಹೀಗಿದೆ

ಹಂಚಿಕಟ್ಟೆಯ ನೋಣಯ್ಯ ನಾಯ್ಕ ಅವರ ಮನೆಯ ಅಂಗಳದಲ್ಲಿ ಬಾವಿಯೊಂದಿದೆ. ಅದಕ್ಕೆ ಕಸ ಬೀಳದಂತೆ ಹಸಿರು ಬಣ್ಣದ ನರ್ಸರಿಯನ್ನು ಕಟ್ಟಿದ್ದರು (ಕಸ ಬೀಳದಂತೆ ಬಾವಿ ಸುತ್ತ ಬೇಲಿ ರೀತಿಯ ವ್ಯವಸ್ಥೆ). ಮೇ 14ರಂದು ಸಂಜೆ ಸುಮಾರು 6ರ ವೇಳೆ ಅವರ ಪುತ್ರ ಅಭಿಷೇಕ್ (3) ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ.

ತಾಯಿ ಮನೆಯೊಳಗೆ ಇದ್ದರೆ, ತಂದೆ ನೋಣಯ್ಯ ಅವರು ಕೆಲಸ ಮುಗಿಸಿ ಬಂದು ಹೊರಗೆ ಹೋಗಿದ್ದರು. ಇದೇ ಸಂದರ್ಭ, ಆಡುತ್ತಿದ್ದ ಅಭಿಷೇಕ್ ಬಾವಿಯ ಕಟ್ಟೆಯನ್ನು ಹತ್ತಿದ್ದಾನೆ. ಅಲ್ಲಿದ್ದ ಹಸಿರು ಬಣ್ಣದ ನರ್ಸರಿಯ ಮೇಲಕ್ಕೆ ಹೋಗಿದ್ದಾನೆ. ಮಧ್ಯಕ್ಕೆ ತಲುಪುವ ವೇಳೆ ಅದು ಮಗುವಿನ ಭಾರದಿಂದ ಹರಿದಿದೆ. ಈ ವೇಳೆ ಮಗು ಏಕಾಏಕಿ ಬಾವಿಗೆ ಬಿದ್ದಿದೆ.

ಕೆಲಸ ಮುಗಿಸಿ ಬರುವಾಗ ತಾಯಿ ರೋದನ ಕೇಳಿಸಿತು

ಉಮೇಶ್ ಮಠದಬೆಟ್ಟು ಅವರು ಸರಪಾಡಿಯ ಮಠದಬೆಟ್ಟು ನಿವಾಸಿ. ಮರದ ಕೆಲಸಗಳನ್ನು ಮಾಡುವುದರಲ್ಲಿ ನಿಷ್ಣಾತರು. ವಿವಿಧೆಡೆ ಅವರು ಮರದ ಕೆಲಸಗಳನ್ನು ನಿರ್ವಹಿಸಿ, ಸಂಜೆ ವೇಳೆ ಮನೆಗೆ ಮರಳುತ್ತಾರೆ. ಇದೇ ರೀತಿ ಬೈಕ್ ನಲ್ಲಿ ಅವರು ಮನೆಗೆ ಮರಳುತ್ತಿದ್ದ ಸಂದರ್ಭ ರಸ್ತೆ ಬದಿಯಲ್ಲೇ, ಅಂದರೆ ಸರಪಾಡಿಯ ಶರಭೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ಹಂಚಿಕಟ್ಟೆ ಎಂಬಲ್ಲಿ ರಸ್ತೆ ಬದಿಯ ನೋಣಯ್ಯ ಅವರ ಮನೆಯಿಂದ ತಾಯಿಯ ರೋದನ ಕೇಳಿಸಿತು. ಕೂಡಲೇ ಬೈಕ್ ನಿಲ್ಲಿಸಿ ಅಲ್ಲಿಗೆ ತೆರಳಿದರು.

ಮಗು ಬಾವಿಗೆ ಬಿದ್ದಿದೆ, ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ ಎಂದು ತಾಯಿ ಹೇಳಿದರು. ಆ ಕ್ಷಣಕ್ಕೆ ಉಮೇಶ್ ಅವರಿಗೆ ಬಾವಿಯಲ್ಲಿ ಬಿದ್ದ ಮಗುವಿನದ್ದಷ್ಟೇ ಧ್ಯಾನ. ಬಾವಿಯ ಹಗ್ಗ ದುರ್ಬಲವಾಗಿರುವುದು, ಬಾವಿ ಕಟ್ಟೆಯೂ ಸಾಧಾರಣವಾಗಿಯಷ್ಟೇ ಇರುವುದು ಸಹಿತ ಯಾವುದೂ ಅವರ ಗಮನಕ್ಕೆ ಬರಲಿಲ್ಲ. ನೇರವಾಗಿ ಬಾವಿಗೆ ಹಗ್ಗದ ಸಹಾಯದಿಂದ ಕೆಳಗಿಳಿದರು.

ಸುದೈವವಶಾತ್, ಮಗುವೂ ನಿಂತಿದ್ದುದು ಹಾಗೂ ನೀರು ಹೆಚ್ಚು ಇರದೇ ಇದ್ದುದು ಉಮೇಶ್ ಅವರಿಗೆ ಮಗುವನ್ನು ರಕ್ಷಿಸಲು ಸುಲಭವಾಯಿತು. ಕೆಳಗೆ ಇಳಿದ ಮೇಲಷ್ಟೇ ಉಮೇಶ್, ಅವರೂ ಮೇಲೆ ಬರುವ ಕುರಿತು ಯೋಚಿಸಲಾರಂಭಿಸಿದರು. ಆ ಹೊತ್ತಿಗಾಗಲೇ ನೋಣಯ್ಯ ಅವರಿಗೆ ಪತ್ನಿಯಿಂದ ಕರೆ ಹೋಗಿತ್ತು. ಊರವರೂ ಬರತೊಡಗಿದ್ದರು. ಎಲ್ಲರ ಸಹಾಯದಿಂದ ಉಮೇಶ್ ಅವರು ಮಗುವನ್ನು ಮೇಲಕ್ಕೆ ತಂದು, ತಾನೂ ಮೇಲಕ್ಕೆ ಬಂದರು.

ಆ ಸಂದರ್ಭ ನನಗೆ ಮಗುವಿನ ಪ್ರಾಣ ರಕ್ಷಿಸುವುದು ಮುಖ್ಯವಾಗಿತ್ತು. ಆ ಕ್ಷಣದಲ್ಲಿ ಹಗ್ಗ ದುರ್ಬಲವಾಗಿದೆ, ಬಾವಿಯೂ ಉತ್ತಮ ಸ್ಥಿತಿಯಲ್ಲಿಲ್ಲ ಎಂಬುದು ಇಳಿದ ಮೇಲಷ್ಟೇ ಗೊತ್ತಾಯಿತು. ಆದರೆ ಮಗುವನ್ನು ರಕ್ಷಿಸುವುದು ಪ್ರಥಮ ಆದ್ಯತೆಯಾಗಿತ್ತು ಎನ್ನುತ್ತಾರೆ ಉಮೇಶ್.

28ರ ಹರೆಯದ ಉಮೇಶ್ ಈಗ ಸ್ಥಳೀಯವಾಗಿ ಹೀರೋ ಆಗಿದ್ದಾರೆ. ಅವರ ಸಾಹಸಗಾಥೆಯ ಕುರಿತು ತಿಳಿದುಕೊಂಡ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಇನ್ನು ಅವರ ಮೊಬೈಲ್ ಫೋನ್ ಪ್ರತಿ ಹೊತ್ತಿಗೂ ಎಂಗೇಜ್. ಅಭಿನಂದನೆಗಳ ಮಹಾಪೂರವೇ ಅವರಿಗೆ ಹರಿದುಬರುತ್ತಿದೆ.

ಆಪದ್ಭಾಂಧವನಾದ ಉಮೇಶ್

ನೀರಿಗೆ ಏನೋ ಬಿದ್ದ ಶಬ್ದ ಕೇಳಿ ಓಡಿ ಬಂದು ನೋಡಿದಾಗ ಮಗು ನೀರಿಗೆ ಬಿದ್ದಿದೆ. ಬಳಿಕ ಬೊಬ್ಬೆ ಹಾಕಿದಾಗ ಮನೆಗೆ ಹೋಗುತ್ತಿದ್ದ ಉಮೇಶ್ ಮಠದಬೆಟ್ಟು ಎಂಬ ಯುವಕ ಧಾವಿಸಿದ್ದಾರೆ. ಏಕಾಏಕಿ ಅಲ್ಲೇ ಇದ್ದ ಹಗ್ಗದಲ್ಲಿ ಇಳಿದಿದ್ದಾರೆ. ಹಗ್ಗ ದುರ್ಬಲವಾಗಿದ್ದರೂ ಆ ಸಂದರ್ಭ ಅದನ್ನು ಲೆಕ್ಕಿಸದೆ ಬಾವಿಯೊಳಗೆ ಇಳಿದಿದ್ದಾರೆ. ಬಾವಿಯಲ್ಲಿ ನೀರಿನಲ್ಲಿ ಮಗುವನ್ನು ಎತ್ತಿ ಹಿಡಿದಿದ್ದಾರೆ. ಬಳಿಕ ಮಗುವಿನ ತಂದೆ ಬಂದು ಮಗುವನ್ನು ಹಗ್ಗದ ಮೂಲಕ ಮೇಲಕ್ಕೆ ಎತ್ತಿದ್ದಾರೆ. ಬಾವಿಯಲ್ಲಿ ಮಗುವಿನ ಕುತ್ತಿಗೆವರೆಗೆ ನೀರು ಇತ್ತು, ಉಮೇಶ್ ಇಳಿಯುವ ವೇಳೆ ಮಗು ನೀರಿನಲ್ಲಿ ನಿಂತಿದ್ದ ಎನ್ನಲಾಗಿದೆ. ಉಮೇಶ್ ಅವರ ಸಾಹಸಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ತನ್ನ ಪ್ರಾಣದ ಹಂಗು ತೊರೆದು ಮಗುವನ್ನು ರಕ್ಷಿಸಿದ ಉಮೇಶ್ ಸಾಹಸ ನಿಧಾನವಾಗಿ ಊರು, ಗಡಿ ದಾಟಿ ಸೋಶಿಯಲ್ ಮೀಡಿಯಾ ಮೂಲಕ ಪಸರಿಸುತ್ತಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner