ಕನ್ನಡ ಸುದ್ದಿ  /  Karnataka  /  Bbmp Budget 2024 8 Categories For The Brand Bangalore Concept <Span Class='webrupee'>₹</span>12370 Cr Budget Presented Uks

ಬಿಬಿಎಂಪಿ ಬಜೆಟ್ 2024: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ 8 ವಿಭಾಗಗಳು; 12370 ಕೋಟಿ ರೂ ಮುಂಗಡ ಪತ್ರ ಮಂಡನೆ

ಬಿಬಿಎಂಪಿ ಬಜೆಟ್ 2024: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಂದಿನ ಹಣಕಾಸು ವರ್ಷದ ಮುಂಗಡಪತ್ರವನ್ನು ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಮಂಡಿಸಿದ್ದಾರೆ. 12370 ಕೋಟಿ ರೂಪಾಯಿ ಬಜೆಟ್‌ನಲ್ಲಿ 1580 ಕೋಟಿ ರೂಪಾಯಿ ಬ್ರ್ಯಾಂಡ್ ಬೆಂಗಳೂರಿಗೆ ಮೀಸಲು. ವಿವರ ಹೀಗಿದೆ.

ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬಜೆಟ್ 2024 ಅನ್ನು ಮಂಡಿಸಿದರು. ಬಲಚಿತ್ರದಲ್ಲಿ ಬಿಬಿಎಂಪಿ ಕಚೇರಿ.
ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬಜೆಟ್ 2024 ಅನ್ನು ಮಂಡಿಸಿದರು. ಬಲಚಿತ್ರದಲ್ಲಿ ಬಿಬಿಎಂಪಿ ಕಚೇರಿ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2024-25ನೇ ಹಣಕಾಸು ವರ್ಷದ ಬಜೆಟ್ ಮಂಡನೆಯಾಗಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕೆ 8 ವಿಭಾಗಗಳನ್ನಾಗಿ ಮುಂಗಡ ಪತ್ರದಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಸಲ 12,370 ಕೋಟಿ ರೂಪಾಯಿಯ ಮುಂಗಡ ಪತ್ರವನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಮಂಡಿಸಿದರು.

ಬೆಂಗಳೂರಿನ ಸರ್. ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್) ದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಮಂಡಿಸಿದ ಶಿವಾನಂದ ಕಲಕೇರಿ, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ವಿಸ್ತರಿಸುತ್ತ ಹೋದರು.

ಬ್ರ್ಯಾಂಡ್ ಬೆಂಗಳೂರಿಗಾಗಿ ಬಜೆಟ್‌ನಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ವ್ಯಯಿಸುವುದಕ್ಕಾಗಿ 1,580 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪಾಲಿಕೆಯ ಬೃಹತ್ ಯೋಜನೆಗಳನ್ನು ಬ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ತಯಾರಿಸಿ, ಮೇಲಿನ ವಿಭಾಗಗಳ ಜೊತೆಗೆ ಆಯವ್ಯಯಕ್ಕೆ ಸಂಬಂಧಿಸಿದ ಇತರೆ ವಿಷಯಗಳನ್ನು ಒಳಗೊಂಡು 2024-25ನೇ ಸಾಲಿನ ಆಯ ವ್ಯಯವನ್ನು ರೂಪಿಸಲಾಗಿದೆ ಎಂದು ಕಲಕೇರಿ ಹೇಳಿದರು.

ಬ್ಯಾಂಡ್ ಬೆಂಗಳೂರು ಪರಿಕಲ್ಪನೆ ಕಾರ್ಯಕ್ರಮಗಳು ಕಾಲಮಿತಿಯೊಳಗೆ ಜಾರಿ

ಬೆಂಗಳೂರಿನ ನಿವಾಸಿಗಳಿಗೆ ಉತ್ಕೃಷ್ಟ ದರ್ಜೆಯ ಸೌಲಭ್ಯ ಮತ್ತು ಅನುಕೂಲ ಕಲ್ಪಿಸುವ ದೃಷ್ಟಿಯಿಂದ 'ನಾಗರೀಕರ ಧ್ವನಿ ಸರ್ಕಾರದ ಧ್ವನಿ' ಎಂಬ ಘೋಷವಾಕ್ಯದೊಂದಿಗೆ 'ಬ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಚಿಂತನಶೀಲ ಉಪಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯು ಉಪ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರ ದೂರದೃಷ್ಟಿಯದ್ದು. ಇದರ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಎಲ್ಲ ಕಾರ್ಯಕ್ರಮ, ಯೋಜನೆಗಳನ್ನು ಆದ್ಯತೆ ಮೇರೆಗೆ ಕಾಲಮಿತಿಯೊಳಗೆ ಬಿಬಿಎಂಪಿ ಮುಗಿಸಲಿದೆ.

ಕಂದಾಯ ಇಲಾಖೆಯಲ್ಲಿ ತೆಗೆದುಕೊಳ್ಳುವ ಹೊಸ ನೀತಿ ಮತ್ತು ಸುಧಾರಣೆಗಳಿಂದ ಕ್ರೋಢಿಕೃತವಾಗುವ ಹೆಚ್ಚಿನ ತೆರಿಗೆ ಹಣವನ್ನು ನೇರವಾಗಿ ಬ್ಯಾಂಡ್ ಬೆಂಗಳೂರು ಯೋಜನೆಗಳಡಿಯ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರತ್ಯೇಕ ಎಸ್ಕ್ರಾವ್‌ ಖಾತೆಯನ್ನು ತೆರೆದು ಆದ್ಯತೆಯ ಮೇರೆಗೆ ಹಣ ಪಾವತಿ ಮಾಡಲಾಗುವುದು. ಇದರಿಂದ ಈ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಹಕಾರಿಯಾಗುವುದು ಎಂದು ಕಲಕೇರಿ ಹೇಳಿದರು.

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ 8 ವಿಭಾಗಗಳು.

1) ಸುಗಮ ಸಂಚಾರ ಬೆಂಗಳೂರು,

2) ಸ್ವಚ್ಛ ಬೆಂಗಳೂರು.

3) ಹಸಿರು ಬೆಂಗಳೂರು,

4) ಆರೋಗ್ಯಕರ ಬೆಂಗಳೂರು,

5) ಶಿಕ್ಷಣ ಬೆಂಗಳೂರು,

6) ಟೆಕ್ ಬೆಂಗಳೂರು,

7) ವೈಬ್ರೆಂಟ್ (ರೋಮಾಂಚನ) ಬೆಂಗಳೂರು.

8) ನೀರಿನ ಭದ್ರತೆ ಬೆಂಗಳೂರು.

ಬಿಬಿಎಂಪಿ ಆದಾಯ ನಿರೀಕ್ಷೆಗಳು ಮತ್ತು ವೆಚ್ಚದ ವಿವರ

ಆಸ್ತಿ ತೆರಿಗೆ ಕಾಯ್ದೆ ತಿದ್ದುಪಡಿಯ ಕಾರಣ 15 ಲಕ್ಷ ಜನರಿಗೆ 2,500 ಕೋಟಿ ರೂಪಾಯಿ ತೆರಿಗೆ ಮನ್ನಾ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆಸ್ತಿ ತೆರಿಗೆಯಿಂದ 4470 ಕೋಟಿ ಆದಾಯ, ತೆರಿಗೆಯೇತರ ಆದಾಯ 3097.91 ಕೋಟಿ ರೂಪಾಯಿ, ರಾಜ್ಯ ಸರ್ಕಾರದಿಂದ 3589.58 ಕೋಟಿ ರೂ ನಿರೀಕ್ಷೆ, ಕೇಂದ್ರ ಸರ್ಕಾರದಿಂದ 488 ಕೋಟಿ ರೂ‌, ಅಸಾಧಾರಣ ಆದಾಯದಿಂದ 724 ಕೋಟಿ ಆದಾಯ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.ಜಾಹೀರಾತು ನಿಯಮವೂ ಜಾರಿಯಾಗಲಿದ್ದು, ಇದರ ಮೂಲಕ 2024-25ನೇ ಸಾಲಿನಲ್ಲಿ ಜಾಹೀರಾತು ಪಾಲಿಸಿ ಜಾರಿ ಮಾಡಿ 500 ಕೋಟಿ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ.

ಕಾರ್ಯಾಚರಣೆ ಹಾಗೂ ನಿರ್ವಹಣೆ ವೆಚ್ಚ ಎಂದು 2271 ಕೋಟಿ ರೂಪಾಯಿ, ಸಿಬ್ಬಂದಿ ವೆಚ್ಚ 1607 ಕೋಟಿ ರೂಪಾಯಿ, ಆಡಳಿತ ವೆಚ್ಚ - 389 ಕೋಟಿ ರೂಪಾಯಿ, ಠೇವಣಿ ಮತ್ತು ಕರ ಮತು ಪಾವತಿ/ವೆಚ್ಚ- 527 ಕೋಟಿ ರೂಪಾಯಿ ಅಂದಾಜಿಸಲಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point