ಕನ್ನಡ ಸುದ್ದಿ  /  Karnataka  /  Before Saying Congress Is Corruption Bjp Is Amrita Kala Take Look Inside Yourself Siddaramaiah Hit Back To Pm Modi Rmy

Siddaramaiah: ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಬಿಜೆಪಿ ಎಂದರೆ ಅಮೃತ ಕಾಲ ಎನ್ನುವ ಮೋದಿ ಅವರೇ ಮೊದಲು ನಿಮ್ಮ ಅಂತರಂಗವನ್ನ ಒಮ್ಮೆ ಇಣುಕಿ ನೋಡಿ

ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ ಎಂದಿದ್ದಾರೆ.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ  ಕಾಲ, ಬಿಜೆಪಿ ಎಂದರೆ ಅಮೃತ ಕಾಲ ಎಂದಿರುವ ಪ್ರಧಾನಿ ಮೋದಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಕಾಲ, ಬಿಜೆಪಿ ಎಂದರೆ ಅಮೃತ ಕಾಲ ಎಂದಿರುವ ಪ್ರಧಾನಿ ಮೋದಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಕುಡುಚಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ (Bharatiya Janata Party) ನಿನ್ನೆ (ಏ.29, ಶನಿವಾರ) ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ (Election campaign) ಸಾರ್ವಜನಿಕ ಸಭೆಯಲ್ಲಿ (Public Meeting) ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಕಾಂಗ್ರೆಸ್ (Congress) ವಿರುದ್ಧ ಭ್ರಷ್ಟಾಚಾರ (Corruption) ಆರೋಪ ಮಾಡಿದ್ದರು.

ಭ್ರಷ್ಟಾಚಾರ ಮಾಡಲು ಇರುವ ಎಲ್ಲಾ ಮೂಲಗಳನ್ನು ಮುಚ್ಚಿಹಾಕಿರುವುದಕ್ಕೆ ಕಾಂಗ್ರೆಸ್‌ನವರು ನನ್ನ ನಿಂದಿಸುತ್ತಾ ತಿರುಗಾಡುತ್ತಿದ್ದಾರೆ. ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ. ಅವರ ಸರ್ಕಾರದ್ದು ಭ್ರಷ್ಟಾಚಾರದ ಕಾಲ, ಬಿಜೆಪಿ ಸರ್ಕಾರದ್ದು ಅಮೃತ ಕಾಲ ಎಂದು ಟೀಕಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಕಾಲ, ಬಿಜೆಪಿ ಎಂದರೆ ಅಮೃತ ಕಾಲ ಎನ್ನುವ ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ, ಅಲ್ಲಿರುವ ಅದಾನಿ, ಅಂಬಾನಿಗಳು ಕಾಣಲಿಲ್ಲವೇ? ನಿಮ್ಮ ಅಕ್ಕಪಕ್ಕದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಭ್ರಷ್ಟ ಮುಖಗಳೂ ಕಾಣಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಬಿಜೆಪಿ ಸಚಿವರ 40 ಪರ್ಸೆಂಟ್ ಕಮಿಷನ್ ಕಿರುಕಳದ ವಿರುದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನಿಮ್ಮ ಕಾರ್ಯಾಲಯಕ್ಕೆ ಬರೆದ ಪತ್ರವೂ ನಿಮಗೆ ನೆನಪಾಗಲಿಲ್ಲವೇ? ನಿಮ್ಮದೇ ಸಚಿವರ ಕಿರುಕಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದ ನೆನಪೂ ನಿಮಗೆ ಆಗಲಿಲ್ಲವೇ ಎಂದು ಪ್ರಶ್ನಿಸಿರುವ ಮೂಲಕ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ಲೂಟಿ ಹೊಡೆದ ಬಿಜೆಪಿ ಸಚಿವರಿಗೆ ಖಂಡಿತ ಅಮೃತ ಕಾಲ

ಕಳೆದ ಮೂರುವರೆ ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿರುವ ರಾಜ್ಯದ ಬಿಜೆಪಿ ಸಚಿವರಿಗೆ ಖಂಡಿತ ಇದು ಅಮೃತ ಕಾಲ. ಆದರೆ ನಿಮ್ಮಂತಹ ಭ್ರಷ್ಟರ ಸರ್ಕಾರ ಪಡೆದ ರಾಜ್ಯದ ಜನತೆಗೆ ಇದು ವಿಷಕಾಲ ಎಂದಿದ್ದಾರೆ.

ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ರಾಜ್ಯದ ಲಿಂಗಾಯತರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ನಿಮ್ಮ ಇಡೀ ಭಾಷಣದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿಎಸ್ ಯಡಿಯೂರಪ್ಪನವರ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ ಯಾಕೆ?

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ್ದೀರಿ, ಅವರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಿರಿ, ಅವರ ಮಗನಿಗೆ ಕನಿಷ್ಠ ಶಾಸಕನನ್ನಾಗಿ ಮಾಡಲಿಲ್ಲ, ಸಚಿವರನ್ನಾಗಿ ಮಾಡಲಿಲ್ಲ. ಈಗ ಐಟಿ, ಇಡಿ, ಸಿಬಿಐ ಮೂಲಕ ಬಾಯಿಮುಚ್ಚಿಸಿ ಕೂರಿಸಿರುವವರು ನೀವೇ ಅಲ್ಲವೇ?

ಲಿಂಗಾಯತ ಸಮುದಾಯದಲ್ಲಿ ಎರಡನೇ ತಲೆಮಾರಿನ ನಾಯಕರೇ ಇರಬಾರದೆಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸಂಜಯ ಪಾಟೀಲ್, ಸೊಗಡು ಶಿವಣ್ಣ ಹೀಗೆ ಸಾಲು ಸಾಲು ನಾಯಕರಿಗೆ ಈ ಬಾರಿ ಟಿಕೆಟ್ ನೀಡದೆ ಅವರ ರಾಜಕೀಯ ಜೀವನವನ್ನೇ ಮುಗಿಸುವ ಹುನ್ನಾರ ಮಾಡಿರುವವರು ನೀವೇ ಅಲ್ಲವೇ?

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಲಿಂಗಾಯತರ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಯಾವ ಕಾರಣಕ್ಕೆ ಈ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದಿರಿ? ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿತ್ತಾ? ಸಿಡಿ ಹಗರಣ ಇತ್ತೇ? ಅವರು ಒಳ್ಳೆಯ ಆಡಳಿತಗಾರರರಾಗಿರಲಿಲ್ಲವೇ? ಯಾಕೆ ಅವರನ್ನು ಮೂಲೆಗೆ ತಳ್ಳಿದ್ದೀರಿ? ಅವರ ಈ ಪ್ರಶ್ನೆಗಳು ರಾಜ್ಯದ ಲಿಂಗಾಯತರ ಪ್ರಶ್ನೆಯೂ ಹೌದು. ಧಮ್-ತಾಕತ್ ಇದ್ದರೆ ಇದಕ್ಕೆ ಉತ್ತರ ಕೊಡಿ.

ಬಂಜಾರ ಸಮುದಾಯ ಮತ್ತು ಕಾಂಗ್ರೆಸ್ ಸಂಬಂಧಕ್ಕೆ ಹುಳಿ ಹಿಂಡುವ ನಿಮ್ಮ ಕುತಂತ್ರ ಫಲ ನೀಡಲಾರದು. ಬಂಜಾರರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಭೂ ಸುಧಾರಣೆ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿಯನ್ನು ತಂದಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎನ್ನುವುದು ನಿಮಗೆ ತಿಳಿದಿಲ್ಲವೇ?

ನರೇಂದ್ರ ಮೋದಿಯವರೇ ನಿಮ್ಮ ಇಡೀ ರಾಜಕೀಯ ಬದುಕೇ ಒಂದು ಸುಳ್ಳಿನ ಕೋಟೆ. ಅದು ಮುರಿದು ಬೀಳುವ ಕಾಲ ಬಂದಿದೆ. ಕಾಂಗ್ರೆಸ್ ನಿಮ್ಮನ್ನು 91 ಬಾರಿ ನಿಂದಿಸಿದೆ ಎನ್ನುವುದು ನಿಮ್ಮ ಇತ್ತೀಚಿನ ಸುಳ್ಳು. ನಮ್ಮ ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಿಂದಿಸುವುದೇ ನಿಮ್ಮ ಮತ್ತು ನಿಮ್ಮ ಪಕ್ಷದ ನಾಯಕರ ದಿನಚರಿ ಅಲ್ಲವೇ?

ಸೋನಿಯಾಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯೆಯ ವಿಷ ಇಲ್ಲವೇ?

ರಾಜ್ಯದ ಬಿಜೆಪಿ ಸರ್ಕಾರ 9 ಲಕ್ಷ ಮನೆಗಳನ್ನು ಕಟ್ಟಿದೆ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಿರಲ್ಲಾ, ನಾವು ಕಟ್ಟಿರುವ ಮನೆಗಳ ಲೆಕ್ಕವನ್ನು ನಿಮಗೆ ಕೊಟ್ಟು ನಿಮ್ಮಿಂದ ಸುಳ್ಳು ಹೇಳಿಸಿದ ವಸತಿ ಸಚಿವರನ್ನು ಒಮ್ಮೆ ಜನರ ಮಧ್ಯೆ ಬಹಿರಂಗ ಚರ್ಚೆಗೆ ಕರೆತನ್ನಿ ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

IPL_Entry_Point