Belagavi News: ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಕೃಷ್ಣಾ-ಉಪ ನದಿಗಳ ನೀರಿನ ಹರಿವು ಹೆಚ್ಚಳ, ಚಿಕ್ಕೋಡಿಯ 7 ಸೇತುವೆಗಳು ಜಲಾವೃತ-ಸಂಚಾರ ಕಡಿತ
ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಕೃಷ್ಣಾ-ಉಪ ನದಿಗಳ ನೀರಿನ ಹರಿವು ಹೆಚ್ಚಳ, ಚಿಕ್ಕೋಡಿಯ 7 ಸೇತುವೆಗಳು ಜಲಾವೃತ-ಸಂಚಾರ ಕಡಿತ

Belagavi News: ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಕೃಷ್ಣಾ-ಉಪ ನದಿಗಳ ನೀರಿನ ಹರಿವು ಹೆಚ್ಚಳ, ಚಿಕ್ಕೋಡಿಯ 7 ಸೇತುವೆಗಳು ಜಲಾವೃತ-ಸಂಚಾರ ಕಡಿತ

Chikkodi bridges: ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ಭಾಗದಲ್ಲಿ ಜನಜೀವನಕ್ಕೆ ಸಮಸ್ಯೆ ಆಗಿದೆ. ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿದ್ದು, ಪ್ರಯಾಣಿಕರು ಸುತ್ತುಬಳಸಿ ಪ್ರಯಾಣ ಮಾಡುವಂತಾಗಿದೆ.

ಬೆಳಗಾವಿಯಲ್ಲಿ ಜನಜೀವನ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಜನಜೀವನ ಅಸ್ತವ್ಯಸ್ತ

ಬೆಳಗಾವಿ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದ ಕೃಷ್ಣಾ ಹಾಗೂ ಉಪನದಿಗಳ ನೀರಿನಮಟ್ಟ ಹೆಚ್ಚಳವಾಗಿದ್ದು, ಕೃಷ್ಣಾ ನದಿಗೆ 92 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಅಲ್ಲದೇ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸುರಿದ ಮಳೆಯಿಂದ ಮಲಪ್ರಭಾ ನದಿ ಹರವಿನಲ್ಲೂ ಹೆಚ್ಚಳವಾಗಿದೆ.

ಮಹಾರಾಷ್ಟ್ರ ಘಟ್ಟ ಪ್ರದೇಶದ ಕೋಯ್ನಾ, ಪಾಟಗಾಂವ, ನವಜಾ. ಮಹಾಬಲೇಶ್ವರ, ವಾರಣ, ರಾಧಾನಗರಿ ಮತ್ತು ಕೊಲ್ಲಾಪೂರ ಭಾಗದಲ್ಲಿ ನಿರಂತರ ಮಳೆ ಸುರಿಯಲಾರಂಭಿಸಿದೆ. ಇದರಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡು ಬರುತ್ತಿದೆ. ಮಹಾರಾಷ್ಟ್ರ ರಾಜಾಪೂರ ಬ್ಯಾರೇಜದಿಂದ 72 ಸಾವಿರ ಕ್ಯೂಸೆಕ್ ಮತ್ತು ದೂಧಗಂಗಾ ನದಿಯಿಂದ 19500 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 92 ಸಾವಿರ ಕ್ಯೂಸೆಕ್ ನೀರು ಹರಿದು ಜಮಖಂಡಿ ತಾಲೂಕಿನ ಹಿಪ್ಪರಗಿ ಮೂಲಕ ಆಲಮಟ್ಟಿ ಜಲಾಶಯಕ್ಕೆ ಹೋಗುತ್ತಿದೆ.

ಮಹಾರಾಷ್ಟ್ರದ ಸೈಹಾದ್ರಿ ಘಟ್ಟದ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣಾ ಮತ್ತು ಉಪನದಿಗಳ ಒಳಹರಿವಿನಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ಇದರಿಂದ ನದಿ ತೀರದ ಜನರಲ್ಲಿ ನೆರೆ ಭೀತಿ ಆವರಿಸಿದೆ. ನೀರಾವರಿ ಪಂಪ್​​​​ಸೆಟ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ರೈತರು ಸ್ಥಳಾಂತರಿಸಲು ಮುಂದಾಗುತ್ತಿದ್ದಾರೆ. ದೂಧಗಂಗಾ ಮತ್ತು ವೇದಗಂಗಾ ನದಿಗಳು ಮೈದುಂಬಿ ಹರಿಯುತ್ತಿದ್ದು, ನೀರು ಹೊಲಗದ್ದೆಗಳನ್ನು ಆವರಿಸುತ್ತಿದೆ.

ಸೇತುವೆಗಳು ಮುಳುಗಡೆ:

ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಜತ್ರಾಟ-ಭೀವಸಿ, ಬಾರವಾಡ-ಕುನ್ನೂರ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ, ಮಮದಾಪೂರ-ಹುನ್ನರಗಿ, ದೂಧಗಂಗಾ ನದಿಯ ಕಾರದಾಗ-ಭೋಜ, ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ ಸೇತುವೆಗಳು ಮುಳುಗಡೆಗೊಂಡಿದ್ದು, ಎಲ್ಲ ಸೇತುವೆಗಳ ಮೇಲೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ನೆರೆ ಹಾವಳಿ ಸಮರ್ಥವಾಗಿ ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ, ನೊಡಲ್ ಅಧಿಕಾರಿಗಳು ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

ಸಂಪರ್ಕ ಕಡಿತ:

ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ ಸುರಿದ ಮಳೆಯಿಂದ ಬೇವಿನಕೊಪ್ಪ, ಸಂಗೊಳ್ಳಿ ಗ್ರಾಮಗಳ ಸಂಪರ್ಕ ಸೇತುವೆ ನದಿಯಲ್ಲಿ ಸಂಪೂರ್ಣ ಮುಳುಗಡೆ ಆಗಿದೆ. ಇದರಿಂದ ಎರಡು ಗ್ರಾಮಗಳ ನಾಗರಿಕರ ಸಂಪರ್ಕ ಕಡಿತವಾಗಿದೆ. ವಾಹನಗಳ ಓಡಾಟ ಸ್ಥಗಿತಗೊಂಡಿದೆ. ವಕ್ಕುಂದ ಗ್ರಾಮದ ತ್ರಿಕೋಟೇಶ್ವರ ಜೈನ್ ಮಂದಿರ ನದಿಯಲ್ಲಿ ಅರ್ಧ ಭಾಗ ಮುಳುಗಡೆಗೊಂಡಿದೆ. ದೇವಸ್ಥಾನ ಸುತ್ತಲೂ ನದಿ ನೀರು ಆವರಿಸಿಕೊಂಡಿದೆ.

ಸುತ್ತುಬಳಸಿ ಪ್ರಯಾಣ:

ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ಭಾಗದಲ್ಲಿ ಜನಜೀವನಕ್ಕೆ ಸಮಸ್ಯೆ ಆಗಿದೆ. ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿದ್ದು, ಪ್ರಯಾಣಿಕರು ಸುತ್ತುಬಳಸಿ ಪ್ರಯಾಣ ಮಾಡುವಂತಾಗಿದೆ.

ನದಿ ತೀರದಲ್ಲಿ ಜನರಿಗೆ ಮುನ್ನೆಚ್ಚರಿಕೆ:

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಮೂರು ನದಿಗಳು ಅಪಾಯ ಮಟ್ಟ ಮೀರಿ ಹರಿಯತೊಡಗಿರುವುದರಿಂದ ನದಿ ತೀರದ ಸೇತುವೆ ಬಳಿ ಪೊಲೀಸ್ ಬ್ಯಾರಿಕೇಡ್ ಹಾಖಿ ನದಿ ತೀರಕ್ಕೆ ಯಾರು ಹೋಗದಂತೆ ಸೂಚನೆ ನೀಡಲಾಗಿದೆ. ಜನರು ಬಟ್ಟೆ ತೊಳೆಯಲು ನದಿ ತೀರಕ್ಕೆ ಹೋಗಬಾರದು, ಜಾನುವಾರಗಳನ್ನು ನದಿಗೆ ಬಿಡದಂತೆ ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ.

ಶಾಲೆಗಳಿಗೆ ರಜೆ:

ನಿರಂತರ ಸುರಿಯುತ್ತಿರುವ ಮಳೆಯಿಂದ ಖಾನಾಪುರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.22ರಂದು ಶನಿವಾರ ರಜೆ ಘೋಷಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಳೆ ವಿವರ:

ಕೋಯ್ನಾ-84 ಮಿಮೀ. ಮಹಾಬಲೇಶ್ವರ-103 ಮಿಮೀ. ವಾರಣ- 50 ಮಿಮೀ. ರಾಧಾನಗರಿ- 157 ಮಿಮೀ. ಕಾಳಮ್ಮವಾಡಿ-75 ಮಿಮೀ, ನವಜಾ-95 ಮಿಮೀ, ಕೊಲ್ಲಾಪೂರ-30 ಮಿಮೀ, ಪಾಟಗಾಂವ-290 ಮಿಮೀ, ದೂಧಗಂಗಾ-68 ಮಿಮೀ ಮಳೆ ಸುರಿದಿದೆ.

ಚಿಕ್ಕೋಡಿ ಉಪವಿಭಾಗ:

ಚಿಕ್ಕೋಡಿ-9.3, ಸದಲಗಾ-9.8, ಅಂಕಲಿ-8.6, ಜೋಡಟ್ಟಿ-7.9, ನಾಗರಮುನ್ನೊಳ್ಳಿ-5.8, ನಿಪ್ಪಾಣಿ-19, ಗಳತಗಾ-9, ಸೌಂದಲಗಾ-19.1, ಅಥಣಿ-5.5., ಸತ್ತ-12.6, ರಾಯಬಾಗ-11.2, ಹಾರೂಗೇರಿ-18.3, ಕುಡಚಿ-19.8, ಯಲ್ಪಾರಟ್ಟಿ-15.4, ಕುಡಚಿ ರೈಲ್ವೆ ಸ್ಟೇಷನ-19.8 ಮಿಮೀ ಮಳೆಯಾಗಿದೆ.

ವರದಿ: ಪ್ರಹ್ಲಾದಗೌಡ ಬಿ.ಜಿ

Whats_app_banner