ಕುಖ್ಯಾತ ಮನೆಗಳ್ಳ ಚೋರ್ ಇಮ್ರಾನ್ ಬಂಧನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ -Bengaluru Crime News
ಕನ್ನಡ ಸುದ್ದಿ  /  ಕರ್ನಾಟಕ  /  ಕುಖ್ಯಾತ ಮನೆಗಳ್ಳ ಚೋರ್ ಇಮ್ರಾನ್ ಬಂಧನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ -Bengaluru Crime News

ಕುಖ್ಯಾತ ಮನೆಗಳ್ಳ ಚೋರ್ ಇಮ್ರಾನ್ ಬಂಧನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ -Bengaluru Crime News

ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಇಮ್ರಾನ್, ಒಮ್ಮೆಲೆ ಐದಾರು ಮನೆಗಳಲ್ಲಿ ಕಳ್ಳತನ ಮುಗಿಸಿ ನೇರವಾಗಿ ಮುಂಬೈಗೆ ತೆರಳುತ್ತಿದ್ದ. ಅಲ್ಲಿ ಲೈವ್‌ಬ್ಯಾಂಡ್‌ಗಳಲ್ಲಿ ಮೋಜು ನಡೆಸಿ ಹಣ ಖಾಲಿ ಮಾಡಿಕೊಂಡ ನಂತರ ಮತ್ತೆ ಬೆಂಗಳೂರಿಗೆ ಹಿಂದಿರುಗಿ ಕಳ್ಳತನದಲ್ಲಿ ತೊಡಗಿಸಿಕೊಳ್ಳುತ್ತಿದ್ದ. (ವರದಿ: ಮಾರುತಿ ಎಚ್.)

ಕುಖ್ಯಾತ ಮನೆಗಳ್ಳ ಚೋರ್ ಇಮ್ರಾನ್ ಬಂಧನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ
ಕುಖ್ಯಾತ ಮನೆಗಳ್ಳ ಚೋರ್ ಇಮ್ರಾನ್ ಬಂಧನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು: ನಗರದ ವಿವಿಧ ಬಡಾವಣೆಗಳ ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿ ಹೊರ ರಾಜ್ಯದ ಚಿನ್ನದ ಮಳಿಗೆಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೋಣನಕುಂಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಣನಕುಂಟೆಯ ನಿವಾಸಿ ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿ. ಈತನಿಂದ 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು ಮತ್ತು ಕಳ್ಳತನ ಮಾಡಲು ಮತ್ತು ಚಿನ್ನವನ್ನು ಸಾಗಿಸಲು ಬಳಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚೋರ್ ಇಮ್ರಾನ್ ಬಂಧನದಿಂದ ಒಟ್ಟು 26 ಕಳವು ಪ್ರಕರಣಗಳು ಪತ್ತೆಯಾಗಿವೆ. ವೃತ್ತಿಪರ ಕಳ್ಳನಾಗಿದ್ದ ಆರೋಪಿಯು ನಗರದ ವಿವಿಧ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ನಂತರ ಕದ್ದ ಚಿನ್ನದ ಆಭರಣಗಳನ್ನು ಮೈಸೂರು ಸೇರಿದಂತೆ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ, ಇಲ್ಲವೇ ಗಿರವಿ ಇಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚುಂಚಘಟ್ಟ ಬಡಾವಣೆಯ ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ತಾವು ನಡೆಸುತ್ತಿದ್ದ ಅಂಗಡಿಗೆ ಹೋಗಿದ್ದರು. ರಾತ್ರಿ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಬಂದಿತ್ತು. ಮುಖ್ಯ ಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ 300 ಗ್ರಾಂ ಚಿನ್ನಾಭರಣ ಹಾಗೂ ‍1.70 ಲಕ್ಷ ನಗದು ಹಣವನ್ನು ಆರೋಪಿ ಕದ್ದುಕೊಂಡು ಹೋಗಿದ್ದ. ಮನೆ ಮಾಲೀಕರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಕಳ್ಳನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಸುಳಿವು ಕೊಟ್ಟ ಸಿಸಿಟಿವಿ

ಕಳ್ಳತನ ಮಾಡಿದ್ದ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಈತ ಕೇವಲ ಕರ್ನಾಟಕ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈತ 120ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ ಎನ್ನುವುದು ತನಿಖೆಯಿಂದ ಪತ್ತೆಯಾಗಿದೆ. ಇದೇ ಕಾರಣಕ್ಕೆ ಈತನನ್ನು ಸೆಂಚುರಿ ಕಳ್ಳ ಎಂದೂ ಕರೆಯುತ್ತಿದ್ದರು. ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಏಕಾಂಗಿಯಾಗಿ ಕಳ್ಳತನ ಮಾಡುವ ಕಲೆಯಲ್ಲಿ ಇಮ್ರಾನ್ ನಿಷ್ಣಾತನಾಗಿದ್ದ. ದೊಡ್ಡ ಮನೆಗಳಲ್ಲಿ ಕಳ್ಳತನ ಮಾಡುವಾಗ ಮಾತ್ರ ಸಹಾಯಕರನ್ನು ಕರೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಜು, ಐಷಾರಾಮಿ ಜೀವನಕ್ಕಾಗಿ ಕಳವು

ಚೋರ್ ಇಮ್ರಾನ್ ಕದ್ದ ಆಭರಣಗಳನ್ನು ಮೈಸೂರು, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಚಿನ್ನಾಭರಣ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದ. ಹೀಗೆ ಗಳಿಸಿದ ಹಣದಲ್ಲಿ ಗೋವಾ ಹಾಗೂ ಮುಂಬೈ ಮೊದಲಾದ ಕಡೆ ಮೋಜಿನ ಜೀವನ ನಡೆಸುತ್ತಿದ್ದ. ಹಣ ಖಾಲಿಯಾದ ನಂತರ ಬೆಂಗಳೂರಿಗೆ ಮರಳಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಎಂದೂ ಗೊತ್ತಾಗಿದೆ.

ಕಳ್ಳತನದಲ್ಲಿ ಎಕ್ಸ್‌ಪರ್ಟ್‌

ಬೆಂಗಳೂರಿನ ಕೆಜಿ ಹಳ್ಳಿ ಮೂಲದ ಚೋರ್ ಇಮ್ರಾನ್, 15ನೇ ವಯಸ್ಸಿನಲ್ಲಿಯೇ ಮನೆಗಳ್ಳತನ ಶುರು ಮಾಡಿದ್ದ. 2000 ನೇ ಇಸವಿಯಲ್ಲಿ ಮೊದಲ ಬಾರಿಗೆ ಪೊಲೀಸರು ಇವನನ್ನು ಜೈಲಿಗೆ ಕಳಿಸಿದ್ದರು. ನಂತರದ ದಿನಗಳಲ್ಲಿ 10ಕ್ಕೂ ಹೆಚ್ಚು ಬಾರಿ ಬಂಧನಕ್ಕೆ ಒಳಪಟ್ಟಿದ್ದ. ಆದರೆ ಪ್ರತಿ ಸಲ ಬಿಡುಗಡೆಯಾದ ನಂತರವೂ ಕಳ್ಳತನ ಮುಂದುವರಿಸಿದ್ದ. ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಇಮ್ರಾನ್, ಒಮ್ಮೆಲೆ ಐದಾರು ಮನೆಗಳಲ್ಲಿ ಕಳ್ಳತನ ಮುಗಿಸಿ ನೇರವಾಗಿ ಮುಂಬೈಗೆ ತೆರಳುತ್ತಿದ್ದ. ಅಲ್ಲಿ ಲೈವ್‌ಬ್ಯಾಂಡ್‌ಗಳಲ್ಲಿ ಮೋಜು ನಡೆಸಿ ಹಣ ಖಾಲಿ ಮಾಡಿಕೊಂಡ ನಂತರ ಮತ್ತೆ ಬೆಂಗಳೂರಿಗೆ ಹಿಂದಿರುಗಿ ಕಳ್ಳತನದಲ್ಲಿ ತೊಡಗಿಸಿಕೊಳ್ಳುತ್ತಿದ್ದ.

Whats_app_banner