Bengaluru News: ಖಾಕಿ ಸಮವಸ್ತ್ರದಲ್ಲಿದ್ದಾಗ ರೀಲ್ಸ್ ಮಾಡಬೇಡ್ರಪ್ಪ; ಪೊಲೀಸರಿಗೆ ಬೆಂಗಳೂರು ಆಯುಕ್ತರಿಂದ ಖಡಕ್ ವಾರ್ನಿಂಗ್
Bengaluru police News: ಖಾಕಿ ಸಮವಸ್ತ್ರದಲ್ಲಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡದಂತೆ ಬೆಂಗಳೂರು ಪೊಲೀಸರಿಗೆ ಆಯುಕ್ತರಾದ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ. ಶಿಸ್ತು ಮತ್ತು ಬದ್ಧತೆಗೆ ಹೆಸರುವಾಸಿಯಾದ ಕರ್ನಾಟಕ ಪೊಲೀಸ್ ಇಲಾಖೆಗೆ ಇದರಿಂದ ಕೆಟ್ಟ ಹೆಸರು ಬರಬಹುದೆಂದು ಎಚ್ಚರಿಸಿದ್ದಾರೆ.
ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿ ವೈರಲ್ ಆಗುವುದು ಎಲ್ಲರ ಬಯಕೆ. ಪೊಲೀಸ್, ಟೀಚರ್ಸ್, ಸರಕಾರಿ ಅಧಿಕಾರಿಗಳೂ ಆಗಾಗ ರೀಲ್ಸ್ ಮಾಡುತ್ತ ವೈರಲ್ ಆಗೋದುಂಟು. ಆದರೆ, ಕೆಲವೊಮ್ಮೆ ಇಂತಹ ರೀಲ್ಸ್ ಸಂಬಂಧಪಟ್ಟ ಇಲಾಖೆಗೆ ಮುಜುಗರ ಉಂಟುಮಾಡುವುದುಂಟು. ಇದೇ ಕಾರಣಕ್ಕೆ ಬೆಂಗಳೂರು ಪೊಲೀಸರಿಗೆ ಆಯುಕ್ತರಾದ ಬಿ ದಯಾನಂದ್ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಯೂನಿಫಾರ್ಮ್ ಧರಿಸಿ ಅನಪೇಕ್ಷಿತ ರೀಲ್ಸ್‌ಗಳನ್ನು ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ. ಪೊಲೀಸ್ ಯೂನಿಫಾರ್ಮ್ ಧರಿಸಿ ಪೊಲೀಸರು ಮಾಡಿರುವ ಅನೇಕ ತಮಾಷೆಯ ರೀಲ್ಸ್‌ಗಳು ವೈರಲ್ ಆದ ಬಳಿಕ ಆಯುಕ್ತರು ಎಚ್ಚೆತ್ತುಕೊಂಡು ಈ ಖಡಕ್ ಸೂಚನೆ ರವಾನಿಸಿದ್ದಾರೆ.
ಸಮವಸ್ತ್ರದಲ್ಲಿದ್ದಾಗ ರೀಲ್ಸ್ ಮಾಡಿ
ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರು ನಿನ್ನೆಯೇ ಸುತ್ತೋಲೆ ಹೊರಡಿಸಿದ್ದಾರೆ. ಪೊಲೀಸ್ ಹುದ್ದೆಗೆ ಸಂಬಂಧಪಡದೆ ಇರುವಂತಹ ರೀಲ್ಸ್‌ಗಳನ್ನು ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡುವುದನ್ನು ಮುಂದುವರೆಸಿದರೆ ಜನರಿಗೆ ಪೊಲೀಸರ ಕುರಿತು ತಪ್ಪು ಅಭಿಪ್ರಾಯ ಮೂಡಬಹುದು. ವಿಶೇಷವಾಗಿ ಪೊಲೀಸ್ ಸ್ಟೇಷನ್‌ಗಳಲ್ಲಿ ಡ್ಯಾನ್ಸ್ ಮಾಡುವಂತಹ ರೀಲ್ಸ್‌ಗಳಿಂದ ಪೊಲೀಸರು ನಗೆಪಾಟಿಲಿಗೆ ಈಡಾಗಬೇಕಾಗಬಹುದು. ಕರ್ನಾಟಕ ಪೊಲೀಸ್ ಇಲಾಖೆಯು ಶಿಸ್ತು ಮತ್ತು ಬದ್ಧತೆಗೆ ಹೆಸರುವಾಸಿ. ಇಂತಹ ಕೃತ್ಯಗಳು ಪೊಲೀಸ್ ಇಲಾಖೆಯ ಹೆಸರುಕೆಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಈ ರೀತಿಯ ರೀಲ್ಸ್ ಮಾಡುವ ಕುರಿತು ನಿಗಾ ವಹಿಸುವಂತೆ ಬೆಂಗಳೂರು ಪೊಲೀಸ್ ಸೋಷಿಯಲ್ ಮೀಡಿಯಾ ವಿಭಾಗಕ್ಕೂ ಸೂಚಿಸಲಾಗಿದೆ. ಈ ರೀತಿಯ ವಿಡಿಯೋ ಪೋಸ್ಟ್ ಮಾಡಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿ. ದಯಾನಂದ್ ಎಚ್ಚರಿಸಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥಯ ಬಸ್ ಚಾಲಕ ಮತ್ತು ಕಂಡೆಕ್ಟರ್ ತಾವು ಪಾಳಿಯಲ್ಲಿ ಇರುವಾಗಲೇ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ವೈರಲ್ ಆಗಿತ್ತು. ಇದಾದ ಬಳಿಕ ಇವರಿಬ್ಬರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. "ರೀಲ್ಸ್ ಮೂಲಕ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ತಂದಿರುವ ಕಾರಣ ಇವರನ್ನು ಅಮಾನತು ಮಾಡಲಾಗಿದೆ" ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿತ್ತು.
ಕರ್ನಾಟಕದಲ್ಲಿ ಆಸ್ಪತ್ರೆಗಳ ಒಳಗಡೆ ರೀಲ್ಸ್ ಮಾಡುವ ಕೆಲವು ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಇನ್‌ಸ್ಟಾಗ್ರಾಂ ಸ್ಟಾರ್ ಆಗೋದು ಹೇಗೆ?
ಈಗ ಸಾಕಷ್ಟು ಜನರು ಸೋಷಿಯಲ್ ಮೀಡಿಯಾವನ್ನು ವೃತ್ತಿಪರವಾಗಿ ತೆಗೆದುಕೊಂಡು ರೀಲ್ಸ್ ಮಾಡಿ ಹಣ ಗಳಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್ ಇದ್ದರೆ ಪ್ರಮೋಷನ್ ಇತ್ಯಾದಿಗಳಿಂದ ಆದಾಯ ದೊರಕುತ್ತದೆ. ನೀವು ಗಮನಿಸಿರಬಹುದು, ಇಂತಹ ಇನ್‌ಫ್ಲೂಯೆನ್ಸರ್‌ಗಳ ಖಾತೆಯಲ್ಲಿ ಡಿಎಂ ಪಾರ್ ಪ್ರಮೋಷನ್ ಇತ್ಯಾದಿ ಸಂದೇಶ ಇರುತ್ತದೆ. ಕೆಲವರು ಈಗ ರೀಲ್ಸ್ ಅನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಉದ್ಯೋಗದಲ್ಲಿದ್ದುಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೀಲ್ಸ್ ಮೂಲಕ ಹಣ ಗಳಿಸಬೇಕೆಂದರೆ ನೀವು ರೀಲ್ಸ್ ಜಗತ್ತಿನಲ್ಲಿ ಜನಪ್ರಿಯತೆ ಪಡೆಯಬೇಕು. ಇನ್‌ಸ್ಟಾಗ್ರಾಂ ಸ್ಟಾರ್ ಆಗೋದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಹಿಂದೂಸ್ತಾನ್ ಟೈಮ್ಸ್ ಉಪಯುಕ್ತ ಲೇಖನವನ್ನು ಪ್ರಕಟಿಸಿದೆ. ಆ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.