ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ನೌಕರ ಶವವಾಗಿ ಪತ್ತೆ; ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಸಂದೇಶ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ನೌಕರ ಶವವಾಗಿ ಪತ್ತೆ; ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಸಂದೇಶ

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ನೌಕರ ಶವವಾಗಿ ಪತ್ತೆ; ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಸಂದೇಶ

ಮೃತ ಯಾದವಣ್ಣನವರ್ ಸಾವಿಗೂ ಮುನ್ನ ವಾಟ್ಸಾಪ್‌ ಸಂದೇಶ ಕಳಿಸಿದ್ದರು. ಅದರಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳಲ್ಲಿ ಒಬ್ಬರು ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ನೌಕರ ಶವವಾಗಿ ಪತ್ತೆ (ಸಾಂದರ್ಭಿಕ ಚಿತ್ರ)
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ನೌಕರ ಶವವಾಗಿ ಪತ್ತೆ (ಸಾಂದರ್ಭಿಕ ಚಿತ್ರ) (iStock)

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ವಿಭಾಗದ ಸಹಾಯಕ (ಎಸ್‌ಡಿಎ) ನೌಕರ, ಕಚೇರಿಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ರುದ್ರಣ್ಣ ಯಾದವಣ್ಣನವರ್ (35) ಎಂಬವರು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಮಂಗಳವಾರ ನಗರದ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಬೆಳಗ್ಗೆ ಸ್ವಚ್ಛತಾ ಸಿಬ್ಬಂದಿ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ಯಾದವಣ್ಣನವರ್, ತಹಶೀಲ್ದಾರ್ ಕಚೇರಿ ಸಿಬ್ಬಂದಿಯ ವಾಟ್ಸಾಪ್ ಗ್ರೂಪ್‌ಗೆ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನವೆಂಬರ್ 4ರ ಸೋಮವಾರ ಸಂಜೆ ಸುಮಾರು 7.30ಕ್ಕೆ ಸಂದೇಶ ಹಾಕಿದ್ದರು. ಅಲ್ಲದೆ ತನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ್, ಅಶೋಕ್ ಕಬ್ಬಲಿಗಾರ್ ಮತ್ತು ಸೋಮು ಎಂಬ ವ್ಯಕ್ತಿ ಕಾರಣ ಎಂದು ಆರೋಪಿಸಿದ್ದರು.

ಮೃತ ಯಾದವಣ್ಣನವರ್ ಸಂದೇಶದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳಲ್ಲಿ ಒಬ್ಬರು ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ಎಂಬ ಊಹಾಪೋಹವಿದೆ. ಆದರೆ, ಈ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಉಪ ಪೊಲೀಸ್ ಆಯುಕ್ತ ರೋಹನ್ ಜಗದೀಶ್ ಹೇಳಿದ್ದಾರೆ.

ಮೃತ ವ್ಯಕ್ತಿಯ ಸಂದೇಶದಲ್ಲಿ ಹೆಸರಿಸಲಾದ ವ್ಯಕ್ತಿಗಳಲ್ಲಿ ಒಬ್ಬರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಸರ್ಕಾರದ ಭ್ರಷ್ಟಾಚಾರಕ್ಕೆ ಅನೇಕ ಪ್ರಾಮಾಣಿಕ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ‌ ಎಂದಿದ್ದಾರೆ.

ಸಂದೇಶದಲ್ಲಿ ಏನಿದೆ?

ತಮ್ಮ ಕಚೇರಿಯಲ್ಲಿ 'ಸಾಕಷ್ಟು ಅನ್ಯಾಯ' ನಡೆಯುತ್ತಿದೆ ಎಂದಿರುವ ಯಾದವಣ್ಣನವರ್, ಅದರ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಕಚೇರಿಯ ಎಲ್ಲಾ ಸಿಬ್ಬಂದಿಗೆ ಕೇಳಿಕೊಂಡಿದ್ದಾರೆ. ಸೋಮವಾರ ಅವರನ್ನು ಸವದತ್ತಿಗೆ ವರ್ಗಾವಣೆ ಮಾಡಲಾಗಿದ್ದು, ಮಂಗಳವಾರವೇ ಅಲ್ಲಿ ಕೆಲಸಕ್ಕೆ ಸೇರಬೇಕಿತ್ತು. ಇದು ಅವರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.‌ ಈ ಕುರಿತು ದಿ ಹಿಂದೂ ವರದಿ ಮಾಡಿದೆ.

ಮಗ ಊಟ ಬಿಟ್ಟು ಹೊರಹೋಗಿದ್ದ ಎಂದ ತಾಯಿ

ಘಟನೆ ಸಂಬಂಧ ಯಾದವಣ್ಣನವರ್ ಅವರ ತಾಯಿ ಮಲ್ಲವ್ವ ಮಾತನಾಡಿ, “ಸೋಮವಾರ ರಾತ್ರಿ ತನ್ನ ಮಗನ ಮೊಬೈಲ್ ಫೋನ್‌ಗೆ ಕರೆ ಬಂದಾಗ ಏಕಾಏಕಿ ಊಟವನ್ನು ಬಿಟ್ಟು ಹೊರಗೆ ಹೋಗಿದ್ದಾನೆ. ಅವನು ಮತ್ತೆ ಮನೆಗೆ ಬಾರದಿದ್ದಾಗ ನನಗೆ ಚಿಂತಿಯಾಯಿತು” ಎಂದು ಹೇಳಿದ್ದಾರೆ. ವರ್ಗಾವಣೆ ಬೇಡವೆಂದು ಯಾರಿಗೋ 2 ರೂಪಾಯಿ ಲಕ್ಷ ಲಂಚ ಕೊಟ್ಟಿರುವುದಾಗಿ ತಾಯಿ ಹೇಳಿಕೊಂಡಿದ್ದಾರೆ. ಆದರೆ, ಕಚೇರಿಯಲ್ಲಿ ಯಾವ ರೀತಿಯ ಸಮಸ್ಯೆಗಳಿವೆ, ಹಾಗೂ ಆತ್ಮಹತ್ಯೆಯ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದು ತನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

Whats_app_banner