Explainer; ಮಾಜಿ ಸಿಎಂ ಯಡಿಯೂರಪ್ಪ ಡಿನೋಟಿಫಿಕೇಶನ್‌ ಹಗರಣ, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌; ಸಾಮ್ಯತೆಗಳಿವೆಯೇ?-bengaluru news ex cm bs yediyurappa de notification case vs cm siddaramaiah muda case explainer mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Explainer; ಮಾಜಿ ಸಿಎಂ ಯಡಿಯೂರಪ್ಪ ಡಿನೋಟಿಫಿಕೇಶನ್‌ ಹಗರಣ, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌; ಸಾಮ್ಯತೆಗಳಿವೆಯೇ?

Explainer; ಮಾಜಿ ಸಿಎಂ ಯಡಿಯೂರಪ್ಪ ಡಿನೋಟಿಫಿಕೇಶನ್‌ ಹಗರಣ, ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌; ಸಾಮ್ಯತೆಗಳಿವೆಯೇ?

BSY vs Siddaramaiah; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿದ್ದ ಡಿನೋಟಿಫಿಕೇಶನ್‌ ಹಗರಣ ಮತ್ತು ಸಿದ್ದರಾಮಯ್ಯ ಆರೋಪ ಎದುರಿಸುತ್ತಿರುವ ಮುಡಾ ಹಗರಣ ಈ ಎರಡರಲ್ಲೂ ಸಾಮ್ಯತೆಗಳಿವೆಯೇ?, ಬಿಎಸ್‌ ವೈ ರಾಜೀನಾಮೆ ಕೊಟ್ಟಿದ್ದು ಏಕೆ ಮತ್ತು ಸಿದ್ದರಾಮಯ್ಯ ಕೊಡುತ್ತಿಲ್ಲ ಏಕೆ? (ವಿವರ ವರದಿ- ಎಚ್.ಮಾರುತಿ, ಬೆಂಗಳೂರು)

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಎಡಚಿತ್ರ), ಮುಖ್ಯಮಂತ್ರಿ ಸಿದ್ದರಾಮಯ್ಯ (ಬಲ ಚಿತ್ರ)
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (ಎಡಚಿತ್ರ), ಮುಖ್ಯಮಂತ್ರಿ ಸಿದ್ದರಾಮಯ್ಯ (ಬಲ ಚಿತ್ರ)

ಬೆಂಗಳೂರು: ಮೈಸೂರಿನ ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿರುವ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಇದೀಗ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ.

ಮತ್ತೊಂದು ಕಡೆ ಸರಿಯಾಗಿ 13 ವರ್ಷಗಳ ಹಿಂದೆ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದನ್ನು ಪ್ರಸ್ತಾಪಿಸುತ್ತಾ ಸಿದ್ದರಾಮಯ್ಯ ಅವರೂ ಇದೇ ಹಾದಿಯನ್ನು ತುಳಿಯಬೇಕು ಎಂದು ಬಿಜೆಪಿ ನಾಯಕರು ಆಗ್ರಹಪಡಿಸುತ್ತಿದ್ದಾರೆ. ಹಾಗಾದರೆ ಅಂದಿನ ಡಿನೋಟಿಫಿಕೇಸನ್‌ ಮತ್ತು ಇಂದಿನ ಮುಡಾ ಪ್ರಕರಣಕ್ಕೆ ಸಾಮ್ಯತೆಗಳಿವೆಯೇ? ಎರಡೂ ಪ್ರಕರಣಗಳ ನಡುವಿನ ವ್ಯತ್ಯಾಸಗಳೇನು? ಯಡಿಯೂರಪ್ಪ ಅವರು ರಾಜೀನಾಮೆ ನೀಡುವಂತಹ ಸನ್ನಿವೇಶ ಉದ್ಭವಿಸಿದ್ದು ಏಕೆ ? ಇಲ್ಲಿದೆ ಕೂಲಂಕಷ ವಿಶ್ಲೇಷಣೆ.

ಬಿಎಸ್ ಯಡಿಯೂರಪ್ಪ ಡಿನೋಟಿಫಿಕೇಶನ್‌ ವಿವಾದ

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲಘಟ್ಟದಲ್ಲಿ ಅಂದರೆ 2011ರ ಜನವರಿ 21 ರಂದು ಅಂದಿನ ರಾಜ್ಯಪಾಲ ಹಂಸರಾಜ್‌ ಭಾರದ್ವಜ್‌ ಅವರು ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ್ದರು. ಆಗ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದರು. ಈಗ ಅವರ ಮಾದರಿಯಲ್ಲಿಯೇ ಸಿದ್ದರಾಮಯ್ಯ ಅವರೂ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಪಡಿಸುತ್ತಿದ್ದಾರೆ. ಈ ಎರಡೂ ಪ್ರಕರಣಗಳು ಬೇರೆ ಬೇರೆಯಾಗಿದ್ದು ಯಾವುದೇ ಸಾಮ್ಯತೆಗಳಿಲ್ಲ. ಎರಡೂ ಪ್ರಕರಣಗಳನ್ನು ಹೋಲಿಸುವುದು ಸರಿಯಲ್ಲ ಎಂಬ ವಾದವೂ ಕೇಳಿ ಬರುತ್ತಿದೆ.

ಸ್ವತಃ ಸಿದ್ದರಾಮಯ್ಯ ಅವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಬಿಜೆಪಿ ಮುಖಂಡರು ಉದ್ದೇಶಪೂರ್ವಕವಾಗಿ ಸತ್ಯಾಂಶಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರು ಭಾಗಿಯಾಗಿದ್ದಾರೆ ಎನ್ನಲಾದ ರಾಚೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಅರ್ಜಿದಾರರು ಸಲ್ಲಿಸಿದ್ದ ಸುಮಾರು 1600ಕ್ಕೂ ಹೆಚ್ಚು ಪುಟಗಳ ಸಾಕ್ಷ್ಯಗಳನ್ನು ಪರಾಮರ್ಶಿಸಿ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಹಾಗೆಂದು ಅವರು ಕೂಡಲೇ ರಾಜೀನಾಮೆ ಸಲ್ಲಿಸಿರಲಿಲ್ಲ.

ರಾಜೀನಾಮೆಗೆ ಒತ್ತಡ ಬಂದರೂ ಅವರು ರಾಜೀನಾಮೆ ಸಲ್ಲಿಸಿರಲಿಲ್ಲ. ಅವರೂ ಸಹ ಸಚಿವ ಸಂಪುಟದ ಸಭೆ ನಡೆಸಿ ರಾಜ್ಯಪಾಲರ ನಡೆಯನ್ನು ಖಂಡಿಸುವ ನಿರ್ಣಯವನ್ನು ಕೈಗೊಂಡಿದ್ದರು.

ಲೋಕಾಯುಕ್ತ ಸಂತೋಷ ಹೆಗ್ಡೆ ಅವರು, ಅಕ್ರಮ ಗಣಿಗಾರಿಕೆ ಕುರಿತು ರಾಜ್ಯಪಾಲರಿಗೆ ವರದಿ ಸಲ್ಲಿಸಿದ ನಂತರ ಯಡಿಯೂರಪ್ಪ ಅವರು 2011, ಆಗಸ್ಟ್‌ 3ರಂದು ರಾಜೀನಾಮೆ ಸಲ್ಲಿಸಿದ್ದರು. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 16,500 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.

ರಾಚೇನಹಳ್ಳಿ ಡಿನೋಟಿಫಿಕೇಷನ್‌ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ನಂತರ ನಡೆದ ತನಿಖೆಯಲ್ಲಿ ಲೋಕಾಯುಕ್ತ 1,600 ಪುಟಗಳ ಸಾಕ್ಷ್ಯಗಳನ್ನು ಬಳಸಿಕೊಂಡಿತ್ತು ಮತ್ತು ಚಾರ್ಜ್‌ ಶೀಟ್‌ ನಲ್ಲಿಯೂ ಉಲ್ಲೇಖವಾಗಿದ್ದವು. ರಾಜ್ಯಪಾಲ ಎಚ್. ಆರ್.‌ ಭಾರದ್ವಾಜ್‌ ಅವರು ಒಂದಲ್ಲ, ಎರಡಲ್ಲ, 16 ಡಿನೋಟಿಫಿಕೇಶನ್‌ ಪ್ರಕರಣಗಳ ತನಿಖೆಗೆ ಅನುಮತಿ ನೀಡಿದ್ದರು. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರೂ ಈ ಅಂಶಗಳನ್ನು ಖಚಿತಪಡಿಸಿದ್ದರು. ಈ ಬೆಳವಣಿಗೆಗಳನ್ನೇ ಮುಂದಿಟ್ಟುಕೊಂಡು ಸ್ವತಃ ಮುಖ್ಯಮಂತ್ರಿಗಳೇ ತಮ್ಮ ಪ್ರಕರಣ ಹೇಗೆ ಭಿನ್ನ ಎಂದು ಸಮರ್ಥನೆ ನೀಡುತ್ತಿದ್ದಾರೆ.

ಬಿಎಸ್‌ವೈ ರಾಜೀನಾಮೆ ಕೊಟ್ಟಿದ್ರು, ಸಿದ್ದರಾಮಯ್ಯ ಯಾಕಿಲ್ಲ

ಸತ್ಯಾಂಶ ಬೇಕಾದರೆ ಅಂದಿನ ಲೋಕಾಯುಕ್ತ ಹೆಗ್ಡೆ ಅವರ ವರದಿಯನ್ನು ಓದಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಇಂದು ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. 2011ರಲ್ಲಿಯೂ ಹಂಸರಾಜ್‌ ಭಾರದ್ವಾಜ್‌ ಅವರ ವಿರುದ್ಧ ಇದೇ ರೀತಿಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಿರುಗಿ ಬಿದ್ದಿದ್ದನ್ನು ನೆನಪು ಮಾಡಿಕೊಳ್ಳಬಹುದು. ಇಂದು ಕಾಂಗ್ರೆಸ್‌ ಮುಖಂಡರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ 2011ರಲ್ಲಿ ಬಿಜೆಪಿ ಕರ್ನಾಟಕ ಬಂದ್‌ ಗೆ ಕರೆ ಕೊಟ್ಟಿದ್ದನ್ನು ಕಾಂಗ್ರೆಸ್‌ ಮುಖಂಡರು ನೆನಪು ಮಾಡಿಕೊಡುತ್ತಿದ್ದಾರೆ.

ರಾಜ್ಯದ ಮಟ್ಟಿಗೆ ಹಾಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ್ದರು. ವಿವಿಧ ರಾಜ್ಯಗಳ ಮಟ್ಟಿಗೆ ಹೇಳುವುದಾದರೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿದ ನಂತರ ಮುಖ್ಯಮಂತ್ರಿಗಳಾಗಿದ್ದ ಎ.ಆರ್.‌ ಅಂತುಳೆ, ಜೆ. ಜಯಲಲಿತಾ ಮತ್ತು ಲಾಲೂ ಪ್ರಸಾದ್‌ ಯಾದವ್‌ ಅವರು ರಾಜೀನಾಮೆ ಸಲ್ಲಿಸಿದ್ದರು.

(ವಿವರ ವರದಿ- ಎಚ್.ಮಾರುತಿ, ಬೆಂಗಳೂರು)