ಕರ್ನಾಟಕ ಸೈಬರ್ ಭದ್ರತಾ ನೀತಿ 2024 ಜಾರಿ, ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಸೇರಿ 7 ಮುಖ್ಯ ಅಂಶಗಳಿವೆ-bengaluru news karnataka govt launches new karnataka cyber security policy 2024 amid frequent scams check imp 7 points ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಸೈಬರ್ ಭದ್ರತಾ ನೀತಿ 2024 ಜಾರಿ, ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಸೇರಿ 7 ಮುಖ್ಯ ಅಂಶಗಳಿವೆ

ಕರ್ನಾಟಕ ಸೈಬರ್ ಭದ್ರತಾ ನೀತಿ 2024 ಜಾರಿ, ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಸೇರಿ 7 ಮುಖ್ಯ ಅಂಶಗಳಿವೆ

Karnataka cyber security policy 2024; ಕರ್ನಾಟಕದಲ್ಲಿ ಸೈಬರ್ ವಂಚನೆ ತಡೆಯುವ ನಿಟ್ಟಿನಲ್ಲಿ ಹೊಸ ಕರ್ನಾಟಕ ಸೈಬರ್ ಭದ್ರತಾ ನೀತಿ 2024 ಜಾರಿಯಾಗಿದೆ. ಇದರಲ್ಲಿ, ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಸೇರಿ 7 ಮುಖ್ಯ ಅಂಶಗಳಿದ್ದು, ಅವುಗಳ ವಿವರ ಹೀಗಿದೆ.

ಕರ್ನಾಟಕ ಸೈಬರ್ ಭದ್ರತಾ ನೀತಿ 2024 ಜಾರಿಯಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ಇದನ್ನು ಗುರುವಾರ ಬಿಡುಗಡೆ ಮಾಡಿದರು. ಇದರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಸೇರಿ 7 ಮುಖ್ಯ ಅಂಶಗಳಿವೆ.
ಕರ್ನಾಟಕ ಸೈಬರ್ ಭದ್ರತಾ ನೀತಿ 2024 ಜಾರಿಯಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ಇದನ್ನು ಗುರುವಾರ ಬಿಡುಗಡೆ ಮಾಡಿದರು. ಇದರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಸೇರಿ 7 ಮುಖ್ಯ ಅಂಶಗಳಿವೆ. (GoK)

ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ನಿಯಂತ್ರಣಕ್ಕಾಗಿ ನೂತನ ಸೈಬರ್ ಭದ್ರತಾ ನೀತಿಯನ್ನು (Karnataka cyber security policy 2024) ರಾಜ್ಯ ಸರ್ಕಾರ ಪ್ರಕಟಿಸಿದೆ. ಇದರ ಅನುಷ್ಠಾನಕ್ಕೆ 103.87 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಅವರು ಗುರುವಾರ (ಆಗಸ್ಟ್‌ 1) ವಿಕಾಸ ಸೌಧದಲ್ಲಿ ಸೈಬರ್ ಭದ್ರತಾ ನೀತಿ ಬಿಡುಗಡೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ದಿನೇದಿನೆ ಸೈಬ‌ರ್‌ ವಂಚನೆ, ಆನ್‌ಲೈನ್ ವಂಚನೆ, ಮೋಸದ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರು ಒಂದೇ ಕಡೆ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 230 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ದೇಶದ ಮೊದಲ ಬಿಟ್‌ಕಾಯಿನ್ ಅಕ್ರಮ ಪ್ರಕರಣ ಕೂಡ ಕರ್ನಾಟಕದಲ್ಲೇ ದಾಖಲಾಗಿದ್ದು, ಇಂತಹ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಸೈಬರ್ ಭದ್ರತಾ ನೀತಿ ಜಾರಿಗೊಳಿಸಲಾಗಿದೆ. ಈ ನೀತಿಯ ಅನುಷ್ಠಾನಕ್ಕೆ 5 ವರ್ಷ ಬೇಕಾಗಬಹುದಾಗಿದ್ದು, ಕನಿಷ್ಠ 103.87 ಕೋಟಿ ರೂಪಾಯಿ ಅನುದಾನದ ಅವಶ್ಯಕತೆಯಿದೆ. ಇದನ್ನು ಐಟಿ-ಬಿಟಿ ಮತ್ತು ಎಸ್ ಆ್ಯಂಡ್ ಟಿ ಇಲಾಖೆಯಿಂದ ಒದಗಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುವ ವಿಡಿಯೋ, ಫೋಟೊಗಳ ನೈಜತೆಯನ್ನು ಅರಿಯಲು ಸ್ಥಾಪಿಸಲಾಗಿರುವ ಫ್ಯಾಕ್ಸ್‌ಚೆಕ್ ಘಟಕವು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶೇರ್ ಆಗಿದ್ದ 7.5 ಲಕ್ಷಕ್ಕೂ ಹೆಚ್ಚು ಸುಳ್ಳು ಮಾಹಿತಿಗಳನ್ನು ಪತ್ತೆ ಹಚ್ಚಿ ಜನಜಾಗೃತಿ ಮೂಡಿಸುವಲ್ಲಿ ನೆರವಾಗಿತ್ತು. ಅವುಗಳ ಪೈಕಿ 500ಕ್ಕೂ ಹೆಚ್ಚಿನ ಮಾಹಿತಿಗಳು ಗಂಭೀರ ಅಪರಾಧ ಸ್ವರೂಪದ್ದಾಗಿದ್ದವು. ಆದಾಗ್ಯೂ, 20 ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿದೆ. ಹೊಸ ಸೈಬರ್ ನೀತಿಯು ಇಂತಹ ಪ್ರಕರಣಗಳನ್ನು ನಿರ್ವಹಿಸುವುದಕ್ಕೂ ನೆರವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.

ಸೈಬರ್ ಭದ್ರತಾ ನೀತಿ 2024ರ 3 ಪ್ರಮುಖ ಉದ್ದೇಶ

1) ಕರ್ನಾಟಕದ ಡಿಜಿಟಲ್ ಮೂಲಸೌಕರ್ಯ ರಕ್ಷಿಸುವುದು

2) ಸೈಬರ್ ಅಪರಾಧ ತಡೆ ಮತ್ತು ರಕ್ಷಣೆ ಕುರಿತು ಜಾಗೃತಿ ಮೂಡಿಸುವುದು

3) ಕೌಶಲ್ಯ ನಿರ್ಮಾಣ, ತಂತ್ರಜ್ಞಾನ ಏಕೀಕರಣ ಜಾರಿಗೊಳಿಸುವುದು

ಸೈಬರ್ ಭದ್ರತಾ ನೀತಿಯು ಎರಡು ಭಾಗದಲ್ಲಿದ್ದು, ಮೊದಲ ಭಾಗದಲ್ಲಿ ಸಾರ್ವಜನಿಕ, ಶೈಕ್ಷಣಿಕ, ಉದ್ಯಮ, ಸ್ಟಾರ್ಟ್‌ಅಪ್, ರಾಜ್ಯದ ಮಾಹಿತಿ ತಂತ್ರಜ್ಞಾನ ಸ್ವತ್ತುಗಳು ಮತ್ತು ಸರ್ಕಾರದ ಎಲ್ಲ ವಿಭಾಗಗಳಲ್ಲಿ ಬಲವಾದ ಸೈಬರ್ ಭದ್ರತೆ ವ್ಯವಸ್ಥೆ ಅಳವಡಿಸುವ ವಿಚಾರವಿದೆ. ಎರಡನೇ ಭಾಗದಲ್ಲಿ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಇಲಾಖೆಗಳಲ್ಲಿ ಐಟಿ ಅನುಷ್ಠಾನಗಳ ಕುರಿತ ಅಂಶಗಳನ್ನು ಹೊಂದಿದೆ. ಅದೇ ರೀತಿ, ಜಾಗೃತಿ ಮತ್ತು ಶಿಕ್ಷಣ, ಕೌಶಲ್ಯ ನಿರ್ಮಾಣ, ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ಸೇರಿದಂತೆ ಇನ್ನಿತರ ವಿಚಾರಗಳ ಕಡೆಗೆ ಈ ನೀತಿಯು ಅನ್ವಯವಾಗಲಿದೆ.

ಸೈಬರ್ ಭದ್ರತಾ ನೀತಿ 2024ರಲ್ಲೇನಿದೆ; 7 ಮುಖ್ಯ ಅಂಶ

1) ಕರ್ನಾಟಕದ ಪಿಯು ಮತ್ತು ಸ್ನಾತಕೋತ್ತರ ಪ್ರಶಿಕ್ಷಣಾರ್ಥಿಗಳಿಗೆ ಸೈಬರ್ ಭದ್ರತೆ ಕುರಿತ ಇಂಟರ್ನ್‌ಶಿಪ್ ಕಾರ್ಯಕ್ರಮ ಜಾರಿಗೊಳಿಸುವುದು. ಇದರಲ್ಲಿ ಗರಿಷ್ಠ 3 ತಿಂಗಳವರೆಗೆ ಮಾಸಿಕ 10 ರಿಂದ 15 ಸಾವಿರ ರೂಪಾಯಿ ಸ್ಟೈಪೆಂಡ್ ಒದಗಿಸುವುದು.

2) ಸೈಬರ್ ಭದ್ರತಾ ನೀತಿ ಜಾರಿಯಾಗುವ 5 ವರ್ಷಗಳ ಅವಧಿಯಲ್ಲಿ 600 ಸ್ನಾತಕ ಪೂರ್ವ ಮತ್ತು 120 ಸ್ನಾತಕೋತ್ತರ ಪ್ರಶಿಕ್ಷಣಾರ್ಥಿಗಳ ಕಲಿಕೆಗೆ ಅನುಕೂಲ

3) ಕರ್ನಾಟಕ ಮೂಲದ ಸ್ಟಾರ್ಟ್ ಅಪ್ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ 50 ಲಕ್ಷ ರೂಪಾಯಿವರೆಗೆ ಅನುದಾನ ಒದಗಿಸುವುದು

4) ಸರ್ಕಾರದ ದತ್ತಾಂಶಗಳ ಸಂರಕ್ಷಣೆಗೆ ಕ್ರಿಯಾತ್ಮಕ, ಸುರಕ್ಷಿತ ಮತ್ತು ಚೇತರಿಸಿಕೊಳ್ಳುವ ಸೈಬರ್ ಸ್ಪೇಸ್ ನಿರ್ಮಾಣ

5) ಕರ್ನಾಟಕದಲ್ಲಿ ಸೈಬರ್ ಸುರಕ್ಷತೆ ಕೌಶಲ್ಯ ಮತ್ತು ಡಿಜಿಟಲ್ ಸುರಕ್ಷತೆಗೆ ಯೋಜನೆ ರೂಪಿಸುವುದು

6) ಸೈಬರ್ ಭದ್ರತಾ ಸಮಿತಿ ಮತ್ತು ಸೈಬರ್ ಭದ್ರತಾ ಕಾರ್ಯಪಡೆ ರಚಿಸುವುದು

7) 40,000 ಜನರಿಗೆ ಸೈಬರ್ ಸುರಕ್ಷತೆ ಕೌಶಲ್ಯ ಮತ್ತು ಜಾಗೃತಿ ತರಬೇತಿ ನೀಡುವುದು.

ಸದ್ಯ ಕರ್ನಾಟಕ ಸರ್ಕಾರವು 1,400 ಸೇವೆಗಳನ್ನು ಆನ್‌ಲೈನ್ ಮೂಲಕ ನೀಡುತ್ತಿದೆ. ಇಂತಹ ಸರ್ಕಾರದ ದಾಖಲೆಗಳ ಕಳ್ಳತನ ತಡೆ ಸೇರಿದಂತೆ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ನಿವಾರಣೆ ಮಾಡುವುದು ಕೂಡ ನೀತಿಯಲ್ಲಿ ಉಲ್ಲೇಖವಾಗಿದೆ. ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು 1 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಿ, ಅವರ ಮೂಲಕ ಆನ್‌ಲೈನ್ ಮತ್ತು ಸೈಬರ್ ಭದ್ರತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವನ್ನು ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.