ಯಾದಗಿರಿ ಪಿಎಸ್‌ಐ ಪರಶುರಾಮ್ ಅಸಹಜ ಸಾವು; ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತವರ ಪುತ್ರ ಆರೋಪಿಗಳು, ಈ ಕೇಸ್‌ನ 5 ಮುಖ್ಯ ಅಂಶಗಳಿವು-yadagiri news psi parashuram death case complaint against congress mla channareddy patil tunnur his son pampana gouda ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಯಾದಗಿರಿ ಪಿಎಸ್‌ಐ ಪರಶುರಾಮ್ ಅಸಹಜ ಸಾವು; ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತವರ ಪುತ್ರ ಆರೋಪಿಗಳು, ಈ ಕೇಸ್‌ನ 5 ಮುಖ್ಯ ಅಂಶಗಳಿವು

ಯಾದಗಿರಿ ಪಿಎಸ್‌ಐ ಪರಶುರಾಮ್ ಅಸಹಜ ಸಾವು; ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತವರ ಪುತ್ರ ಆರೋಪಿಗಳು, ಈ ಕೇಸ್‌ನ 5 ಮುಖ್ಯ ಅಂಶಗಳಿವು

PSI Parashuram Death Case; ಪೊಲೀಸ್ ವ್ಯವಸ್ಥೆಯಲ್ಲಿರುವ ವರ್ಗಾವಣೆ ದಂಧೆ ವಿಚಾರ ಈಗ ಮತ್ತೆ ಚರ್ಚೆಗೆ ಒಳಗಾಗಿದೆ. ಪೋಸ್ಟಿಂಗ್‌ಗಾಗಿ 30 ಲಕ್ಷ ರೂಪಾಯಿ ಕೊಟ್ಟಿದ್ದ ಯಾದಗಿರಿ ಪಿಎಸ್‌ಐ ಪರಶುರಾಮ್ ಅಸಹಜ ಸಾವು ಪ್ರಕರಣ ಇದಕ್ಕೆ ಕಾರಣ. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತವರ ಪುತ್ರ ಆರೋಪಿಗಳು. ಈ ಕೇಸ್‌ನ 5 ಮುಖ್ಯ ಅಂಶಗಳಿವು.

ಯಾದಗಿರಿ ಪಿಎಸ್‌ಐ ಪರಶುರಾಮ್ (ಎಡಚಿತ್ರ) ಅಸಹಜ ಸಾವು; ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ (ಬಲ ಚಿತ್ರ) ಮತ್ತವರ ಪುತ್ರ ಆರೋಪಿಗಳು.
ಯಾದಗಿರಿ ಪಿಎಸ್‌ಐ ಪರಶುರಾಮ್ (ಎಡಚಿತ್ರ) ಅಸಹಜ ಸಾವು; ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ (ಬಲ ಚಿತ್ರ) ಮತ್ತವರ ಪುತ್ರ ಆರೋಪಿಗಳು.

ಯಾದಗಿರಿ: ಪಿಎಸ್‌ಐ ಒಬ್ಬರ ಅಸಹಜ ಸಾವು ಪ್ರಕರಣ ಇದೀಗ ಪೊಲೀಸ್ ಇಲಾಖೆಯ ಪೋಸ್ಟಿಂಗ್ ಲಂಚಾವತಾರದ (ವರ್ಗಾವಣೆ ದಂಧೆ) ಬಗ್ಗೆ ಗಮನಸೆಳೆದಿದೆ. ಪೋಸ್ಟಿಂಗ್‌ಗಾಗಿ 30 ಲಕ್ಷ ರೂಪಾಯಿ ಸ್ಥಳೀಯ ಶಾಸಕರು ಮತ್ತು ಅವರ ಪುತ್ರ ಬೇಡಿಕೆ ಇಟ್ಟಿದ್ದರು. ಇದಲ್ಲದೇ ಜಾತಿ ವಿಚಾರವನ್ನೂ ಮುಂದಿಟ್ಟ ಕಾರಣ ಪಿಎಸ್‌ಐ ಪರಶುರಾಮ್ ಸಾವು ಸಂಭವಿಸಿದೆ ಎಂದು ಅವರ ಪತ್ನಿ ಶ್ವೇತಾ ಆರೋಪಿಸಿ ದೂರು ದಾಖಲಿಸಿದ್ದಾರೆ. ಹೀಗೆ, ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ್ ಅವರ ಅಸಹಜ ಸಾವು ಪ್ರಕರಣ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಲಂಚಗುಳಿತನ, ಭ್ರಷ್ಟಾಚಾರಗಳು ಒಂದೊಂದಾಗಿ ಬಹಿರಂಗವಾಗುತ್ತಿದ್ದು, ಯಾದಗಿರಿ ಪಿಎಸ್‌ಐ ಪರಶುರಾಮ್ ಅಸಹಜ ಸಾವಿಗೆ ಸಂಬಂಧಿಸಿದ ಅವರ ಪತ್ನಿ ಶ್ವೇತಾ ದಾಖಲಿಸಿರುವ ದೂರಿನಲ್ಲಿ ಕಾಂಗ್ರೆಸ್‌ ಶಾಸಕ ಚೆನ್ನಾರೆಡ್ಡಿ ಪಾಟೀಲ್ (Congress MLA Chennareddy Patil) ಮತ್ತು ಪುತ್ರ ಪಂಪನ ಗೌಡ ಪಾಟೀಲ್ ಪ್ರಮುಖ ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ. ಇದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪಿಎಸ್‌ಐ ಪರಶುರಾಮ್ ಅಸಹಜ ಸಾವು ಪ್ರಕರಣ; ಕೇಸ್‌ಗೆ ಸಂಬಂಧಿಸಿದ 5 ಮುಖ್ಯ ಅಂಶಗಳು

1) ಯಾದಗಿರಿ ನಗರ ಪೊಲೀಸ್ ಠಾಣೆ ಪೋಸ್ಟಿಂಗ್‌ಗಾಗಿ ಪರಶುರಾಮ್ ಅವರು ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ಬೇಡಿಕೆಯಂತೆ 30 ಲಕ್ಷ ರೂಪಾಯಿ ಪಾವತಿಸಿದ್ದರು. ಇದಕ್ಕಾಗಿ ಅವರು ಸಾಲ ಮಾಡಿಕೊಂಡಿದ್ದರು. ಈ ಪೋಸ್ಟಿಂಗ್‌ನಲ್ಲಿ ಬಂದು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲಾರಂಭಿಸಿ ವರ್ಷವಾಗುವ ಮೊದಲೇ ಪರಶುರಾಮ್ ಅವರನ್ನು ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

2) ವರ್ಗಾವಣೆ ಹಿನ್ನೆಲೆಯಲ್ಲಿ ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್‌ಐ ಪರಶುರಾಮ್ ಅವರಿಗೆ ಗುರುವಾರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಶುಕ್ರವಾರ (ಆಗಸ್ಟ್ 2) ಕರ್ತವ್ಯದಿಂದ ಬಿಡುಗಡೆಯಾಗಿದ್ದರು. ಸಂಜೆ ಪೊಲೀಸ್ ವಸತಿ ನಿಲಯದಲ್ಲಿದ್ದ ತಮ್ಮ ಮನೆಗೆ ಆಗಮಿಸಿದ್ದ ಅವರಿಗೆ ರಾತ್ರಿ ಗಂಭೀರ ಹೃದಯಾಘಾತವಾಗಿ ಮೃತಪಟ್ಟಿದ್ದರು.

3) ಇದಕ್ಕೂ ಮುನ್ನ ಶಾಸಕರಿಗೆ 30 ಲಕ್ಷ ರೂಪಾಯಿ ಕೊಡುವುದಕ್ಕಾಗಿ ಮಾಡಿದ ಸಾಲ ತೀರಿಸಬೇಕಾದ ಪರಶುರಾಮ್ ಅವರು ವರ್ಗಾವಣೆಯಿಂದಾಗಿ ಒತ್ತಡಕ್ಕೆ ಒಳಗಾಗಿದ್ದರು. ಇದೇ ವಿಚಾರವಾಗಿ ಶುಕ್ರವಾರ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೆ ಫೋನ್‌ನಲ್ಲಿ ಪರಶುರಾಮ್ ಮಾತನಾಡಿದ್ದರು ಎಂದು ಅವರ ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

4) ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಗುರುವಾರದಂದು ನಗರ ಠಾಣೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆದಿತ್ತು. ಕರ್ತವ್ಯದಿಂದ ಬಿಡುಗಡೆಗೊಂಡಿದ್ದರು. ಈ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಶುಕ್ರವಾರ ಸಂಜೆ ಪೊಲೀಸ್ ವಸತಿ ನಿಲಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

5) ಕಾಂಗ್ರೆಸ್​ ಶಾಸಕ ಚನ್ನಾರೆಡ್ಡಿ ಪಾಟೀಲ್​ ತುನ್ನೂರು ಹಾಗೂ ಪುತ್ರ ಪಂಪನಗೌಡ (ಸನ್ನಿ ಗೌಡ) ಕಾರಣ ಎಂದು ಪಿಎಸ್​ಐ ಪರಶುರಾಮ ಪತ್ನಿ ಶ್ವೇತಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಹೋಗಿ ದೂರು ದಾಖಲಿಸಿದ್ದಾರೆ. ಇದರಲ್ಲಿ, ಶಾಸಕ ಚೆನ್ನಾರೆಡ್ಡಿ ಪಾಟೀಲ್ ಪದೇಪದೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ನಾವು ದಲಿತರು, ದುಡ್ಡು ಕೊಡಲಿಲ್ಲ ಎಂಬ ಕಾರಣಕ್ಕೆ ಪೋಸ್ಟಿಂಗ್ ಅವಧಿ ಪೂರ್ಣಗೊಳಿಸಲು ಬಿಡಲಿಲ್ಲ. ಶಾಸಕರು ತಪ್ಪು ಮಾಡಿದ್ದಾರೆ. ಅವರು ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪಿಎಸ್‌ಐ ಪರಶುರಾಮ್ ಪತ್ನಿ ಶ್ವೇತಾ ದೂರು ಆಧರಿಸಿ ಕೇಸ್ ದಾಖಲು, ಯಾರು ಏನು ಹೇಳಿದರು

1) ಶ್ವೇತಾ ಅವರು ನೀಡಿದ ದೂರು ಆಧರಿಸಿ ಯಾದಗಿರಿ ನಗರ ಠಾಣೆಯ ಪೊಲೀಸರು​ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಅವರ ಪುತ್ರ ಪಂಪನಗೌಡ ವಿರುದ್ಧ ​​ಜಾತಿ ನಿಂದನೆ ಆರೋಪಕ್ಕಾಗಿ ಕೇಸ್ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಮೊದಲ ಆರೋಪಿಯಾದರೆ, ಅವರ ಪುತ್ರ ಪಂಪನಗೌಡ ಎರಡನೇ ಆರೋಪಿಯಾಗಿದ್ದಾರೆ.

2) ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಅವರು ಶಾಸಕರು ಮತ್ತು ಅವರ ಪುತ್ರನ ವಿರುದ್ಧ ಆರೋಪ ಮಾಡಿದ್ದಾರೆ. ಅದು ಆರೋಪ ಮಾತ್ರ. ಆರೋಪ ಮಾಡಿದ ಕೂಡಲೇ ಅದುವೇ ಸತ್ಯ ಎಂದಾಗಲಿ ಅಥವಾ ಸುಳ್ಳು ಎಂದಾಗಲಿ ಖಚಿತವಾಗಿ ಹೇಳಲಾಗುವುದಿಲ್ಲ. ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ತನಿಖೆಯಾಗಲಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.

3) ಪಿಎಸ್‌ಐ ಪರಶುರಾಮ್ ಅವರ ಸಾವು ಸಹಜವಾಗಿ ಸಂಭವಿಸಿದೆ. ಅದು ಆತಹತ್ಯೆ ಅಲ್ಲ. ಮರಣದ ಮುನ್ನ ಯಾವುದೇ ಪತ್ರ ಬರೆದಿರುವ ಮಾಹಿತಿ ಇಲ್ಲ. ವರ್ಗಾವಣೆ ಹಿನ್ನೆಲೆಯಲ್ಲಿ ಒತ್ತಡಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಶಾಸಕರಿಗೆ ಲಂಚವಾಗಿ 30 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಾವು ಆ ಆರೋಪವನ್ನು ತಳ್ಳಿ ಹಾಳುವುದಿಲ್ಲ. ತನಿಖೆ ನಡೆಸಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

4) ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆಗೆ ಮತ್ತೊಬ್ಬ ಅಧಿಕಾರಿಯ ಬಲಿಯಾಗಿದೆ. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಅವರ ಮಗ ಸನ್ನಿ ಗೌಡ ಕಿರುಕುಳ ನೀಡಿ, ಹಣಕ್ಕಾಗಿ ಪೀಡಿಸಿ ಪಿಎಸ್​ಐ ಪರಶುರಾಮ್ ಸಾವಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದು, ನಿಯಮ ಬಾಹಿರ ವರ್ಗಾವಣೆ ವಿರುದ್ಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.