ಬೆಂಗಳೂರು: ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ 150ಕ್ಕೂ ಹೆಚ್ಚು; ಮಕ್ಕಳು, ಬದಿಗಿದ್ದವರು ಸಂತ್ರಸ್ತರು
ಬೆಂಗಳೂರಿನಲ್ಲಿ ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಸಿಡಿತದಿಂದ ದೃಷ್ಟಿ ದೋಷಕ್ಕೆ ಒಳಗಾದವರ ಸಂಖ್ಯೆ 150 ದಾಟಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಮಾಹಿತಿ ಲೆಕ್ಕಕ್ಕೆ ಸಿಕ್ಕಿಲ್ಲ. ಸಂತ್ರಸ್ತರು ಬಹುತೇಕ ಮಕ್ಕಳು. ಈ ಪ್ರಕರಣಗಳಲ್ಲಿ ಪೋಷಕರ ಬೇಜವಾಬ್ದಾರಿಯೂ ಕಾರಣ ಎನ್ನುತ್ತಾರೆ ನೇತ್ರತಜ್ಞರು. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 31ರಿಂದ ನವಂಬರ್ 3ರವರೆಗಿನ ಅವಧಿಯಲ್ಲಿ ಬೆಂಗಳೂರಿನಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡು ದೃಷ್ಟಿದೋಷದ ಸಮಸ್ಯೆ ತಂದುಕೊಂಡವರ ಸಮಸ್ಯೆ 150 ರ ಗಡಿ ದಾಟಿದೆ. ಕೆಲವರು ತಮ್ಮದಲ್ಲ ತಪ್ಪಿಗೆ ಹಾನಿಗೊಳಗಾಗಿದ್ದರೆ ಇನ್ನು ಅನೇಕರು ಮುಂಜಾಗ್ರತೆ ತೆಗೆದುಕೊಳ್ಳದೇ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಇನ್ನು ಮಕ್ಕಳ ವಿಚಾರಕ್ಕೆ ಬಂದರೆ ಅವರ ಪಾಲಕರ ನಿರ್ಲಕ್ಷ್ಯದಿಂದಲೇ ಮಕ್ಕಳು ತೊಂದರೆಗೆ ಒಳಗಾಗಿದ್ದಾರೆ ಎಂಬ ಅಂಶಗಳು ಗಮನಸೆಳೆದಿವೆ. ಮಕ್ಕಳಿಗೆ ಸುರಕ್ಷತಾ ಕ್ರಮಗಳನ್ನು ಹೇಳಿಕೊಡದೆ ಇರುವುದು, ಪಟಾಕಿ ಹಚ್ಚುವಾಗ ಪೋಷಕರು ಅವರತ್ತ ಗಮನ ಹರಿಸಿದೆ ಇರುವುದು, ಕೈಗಳಲ್ಲಿ ಪಟಾಕಿ ಹಿಡಿದುಕೊಂಡು ಸಿಡಿಸುವುದು ಮತ್ತು ಪಟಾಕಿಗೆ ತುಂಬಾ ಹತ್ತಿರ ನಿಂತುಕೊಳ್ಳುವಂತಹ ಕ್ರಮಗಳಿಂದ ಮಕ್ಕಳಿಗೆ ದೃಷ್ಟಿ ದೋಷ ಉಂಟಾಗಿದೆ. ಬೆಂಗಳೂರಿನ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ 150 ಕ್ಕೂ ಹೆಚ್ಚು ಮಂದಿ ಪಟಾಕಿ ಸಿಡಿದು ಕಣ್ಣಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಜನರಿಗೆ ಚಿಕಿತ್ಸೆ
ಸರ್ಕಾರಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 65, ನಾರಾಯಣ ನೇತ್ರಾಲಯದಲ್ಲಿ , 73, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 18 ಮಂದಿ ದಾಖಲಾಗಿದ್ದಾರೆ. ಬೌರಿಂಗ್, ಕೆಸಿ ಜನರಲ್ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ನಗರದ ವಿವಿಧ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ದಾಖಲಾದವರ ಸಂಖ್ಯೆಯ ಮಾಹಿತಿ ಇಲ್ಲ.
ನಾರಾಯಣ ನೇತ್ರಾಲಯದಲ್ಲಿ 35 ಮಕ್ಕಳು ದಾಖಲಾಗಿದ್ದು, ಇವರಲ್ಲಿ 10 ವರ್ಷದೊಳಗಿನ 14 ಮಕ್ಕಳು, ಮತ್ತು 10 ರಿಂದ 18 ವರ್ಷದೊಳಗಿನ 21 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಗೆ ದಾಖಲಾದ 69 ಮಂದಿಯಲ್ಲಿ ನಾಲ್ವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಗಾಯವಾದದಂತಹ ಸಣ್ಣ ಪ್ರಮಾಣದ ಪ್ರಕರಣದಿಂದ ಹಿಡಿದು ಕಾರ್ನಿಯಾ ಹರಿದು ಹೋಗಿರುವುದು, ಎಪಿಥೆಲಿಯಲ್ ದೋಷ ಮತ್ತು ಲೆನ್ಸ್ ಜರುಗಿರುವುದು ಸೇರಿದಂತೆ ಅನೇಕ ರೀತಿಯ ದೃಷ್ಟಿ ದೋಷದ ಪ್ರಕರಣಗಳು ವರದಿಯಾಗಿವೆ.
ಮಹಾಲಕ್ಷ್ಮಿ ಬಡಾವಣೆಯ 12 ವರ್ಷದ ಬಾಲಕಿಯೊಬ್ಬಳು ಬುಲೆಟ್ ಬಾಂಬ್ ಹಚ್ಚುವಾಗ ಪಟಾಕಿ ಸಿಡಿದು ಕಣ್ಣಿಗೆ ಭಾರಿ ಹಾನಿಯುಂಟಾಗಿದೆ. ಈಕೆಯ ಕಣ್ಣಿನಲ್ಲಿ ರಕ್ತ ತುಂಬಿಕೊಂಡಿದೆ. ಈಕೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ನಾರಾಯಣ ನೇತ್ರಾಲಯದ ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬ ಬಾಲಕ ಪಟಾಕಿಯು ಪೂರ್ಣ ಸಿಡಿದಿಲ್ಲ ಎಂದು ನೋಡಲು ಹೋದಾಗ ಆ ಪಟಾಕಿ ಸಿಡಿದು ಬಲಗಣ್ಣಿಗೆ ಹಾನಿಯಾಗಿದೆ. ಈತನ ಕಣ್ಣಿಗೆ ಆಪರೇಷನ್ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಶಂಕರ ಆಸ್ಪತ್ರೆಯಲ್ಲಿ 18 ಮಕ್ಕಳಿಗೆ ಚಿಕಿತ್ಸೆ
ಶಂಕರ ಆಸ್ಪತ್ರೆಯಲ್ಲಿ ದಾಖಲಾದ 18 ಪ್ರಕರಣಗಳಲ್ಲಿ ನಾಲ್ವರು ವಯಸ್ಕರು ಮತ್ತು 18 ಮಕ್ಕಳು ಸೇರಿದ್ದಾರೆ. ಇವರಲ್ಲಿ ಐವರಿಗೆ ದೃಷ್ಟಿದೋಷ ಉಂಟಾಗಿದ್ದು, 9 ಮಕ್ಕಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಈ ಮಕ್ಕಳಲ್ಲಿ ಮೂರು ವರ್ಷದ ಅತಿ ಕಡಿಮೆ ವಯಸ್ಸಿನ ಮಗುವೂ ಇದ್ದು 14 ವರ್ಷದ ಬಾಲಕನೂ ಸೇರಿದ್ದಾನೆ. ನಾಲ್ವರು ವಯಸ್ಕರಲ್ಲಿ 52 ವರ್ಷದ ವ್ಯಕ್ತಿಯೊಬ್ಬರಿಗೆ ಗಂಭೀರ ಸ್ವರೂಪದ ಹಾನಿಯುಂಟಾಗಿದೆ. ಗಮನಕ್ಕೆ ಬಾರದೆ ಇರುವ ನೂರಾರು ಪ್ರಕರಣಗಳು ಕಂಡು ಬಂದಿವೆ. ಖಾಸಗಿ ಕಣ್ಣಿನ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗಿರುತ್ತಾರೆ. ಇನ್ನೂ ಕೆಲವರು ಆಪರೇಷನ್‌ಗೂ ಒಳಗಾಗಿರುತ್ತಾರೆ. ಅಂತಹ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ.
ಈ ಮಧ್ಯೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಾ ಕೈಗಳಲ್ಲಿ ಪಟಾಕಿ ಹಿಡಿದು ಇತರೆ ವಾಹನ ಸವಾರರ ಮೇಲೆ ಎಸೆಯುತ್ತಿದ್ದ ಇಬ್ಬರನ್ನು ಪತ್ತೆ ಹಚ್ಚಿರುವ ಎಚ್.ಬಿ ಆರ್ ಲೇಔಟ್ ಪೊಲೀಸರು ದಂಡ ವಿಧಿಸಿದ್ದಾರೆ. ಇವರ ಕಿಡಿಗೇಡಿ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಸಾರ್ವಜನಿಕರೊಬ್ಬರು ಎಕ್ಸ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇವರನ್ನು ಪತ್ತೆ ಹಚ್ಚಿ, ಹೆಲ್ಮೆಟ್ ರಹಿತ ವಾಹನ ಚಾಲನೆ, ಚಾಲನಾ ಪರವಾನಗಿ ಇಲ್ಲದೆ ಇರವುದು, ಸಂಚಾರಕ್ಕೆ ಅಡಚಣೆ ಮತ್ತು ಅಪಾಯಕಾರಿ ಚಾಲನೆ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)