ಶಿವಾಜಿನಗರ ಬಸ್‌ನಿಲ್ದಾಣಕ್ಕೆ ಹೋಗಲು ಇನ್ನೊಂದು ತಿಂಗಳು ಈ ಮಾರ್ಗ ಬಳಸಿ ಅಂತಿದ್ದಾರೆ ಬೆಂಗಳೂರು ಸಂಚಾರ ಪೊಲೀಸರು
ಶಿವಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾಜಿ ಸರ್ಕಲ್, ಜ್ಯೋತಿ ಕೆಫೆ ಬಳಿ ಇನ್ನೊಂದು ತಿಂಗಳು ಸಂಚಾರ ವ್ಯತ್ಯಯವಾಗಲಿದೆ. ಆದ್ದರಿಂದ ಶಿವಾಜಿನಗರ ಬಸ್‌ನಿಲ್ದಾಣಕ್ಕೆ ಹೋಗಲು ಇನ್ನೊಂದು ತಿಂಗಳು ಈ ಮಾರ್ಗ ಬಳಸಿ ಅಂತಿದ್ದಾರೆ ಬೆಂಗಳೂರು ಸಂಚಾರ ಪೊಲೀಸರು. ಪರ್ಯಾಯ ಮಾರ್ಗ ಮತ್ತು ಸಂಬಂಧ ಪಟ್ಟ ಮಾಹಿತಿ ಇಲ್ಲಿದೆ.
ಬೆಂಗಳೂರು: ಸುಗಮ ಸಂಚಾರ ಸೌಕರ್ಯ ಹೆಚ್ಚಿಸುವ ಕೆಲಸ ನಡೆಯುತ್ತಿದ್ದರೂ, ಸಂಚಾರ ದಟ್ಟಣೆ ನಿರ್ವಹಣೆ ಬೆಂಗಳೂರು ಸಂಚಾರ ಪೊಲೀಸರನ್ನು ಕಾಡುವ ದೊಡ್ಡ ಸವಾಲು. ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಮ್ಮ ಮೆಟ್ರೋ ಕಾಮಗಾರಿ ಶುರುವಾಗುತ್ತಿದ್ದು, ಇನ್ನೊಂದು ತಿಂಗಳು ಅಲ್ಲಿನ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಲಿದೆ. ಸೋಮವಾರದಿಂದ (ನವೆಂಬರ್ 11) ಡಿಸೆಂಬರ್ 10 ರ ತನಕ ಈ ಸಂಚಾರ ವ್ಯತ್ಯಯ ಇರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಯನ್ನು ಪ್ರಕಟಿಸಿದ್ದಾರೆ.
ಶಿವಾಜಿ ಸರ್ಕಲ್, ಜ್ಯೋತಿ ಕೆಫೆ ಬಳಿ ಸಂಚಾರ ಸಲಹೆ
ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಸರ್ಕಲ್ ಮತ್ತು ಜ್ಯೋತಿ ಕೆಫೆ ಬಳಿ ಮೆಟ್ರೋ( ಬಿ.ಎಂ.ಆರ್.ಸಿ.ಎಲ್) ವತಿಯಿಂದ ಕಾಮಗಾರಿ ಕೈಗೊಳ್ಳುತ್ತಿದ್ದಾರೆ ಹೀಗಾಗಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ನವೆಂಬರ್ 11 ರಿಂದ 30 ದಿನಗಳ ಕಾಲ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಇರಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ಧಾರೆ.
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ
1) ಬಾಳೆಕುಂದ್ರಿಯಿಂದ ಶಿವಾಜಿ ಸರ್ಕಲ್ ಮೂಲಕ ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಬಿ.ಎಂ.ಟಿ.ಸಿ ಬಸ್ ಮತ್ತು ಎಲ್ಲಾ ಮಾದರಿಯ ವಾಹನಗಳಿಗೆ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
2) ಶಿವಾಜಿ ರಸ್ತೆಯ ಮೂಲಕ ಶಿವಾಜಿ ಸರ್ಕಲ್ ಕಡೆಯಿಂದ ಜೋತಿ ಕೆಫೆ ಮತ್ತು ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಬರುವ ಎಲ್ಲಾ ಮಾದರಿಯ ವಾಹನಗಳಿಗೆ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ
1) ಬಾಳೆಕುಂದ್ರಿಯಿಂದ ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಬಸ್ ಹಾಗೂ ಎಲ್ಲಾ ಮಾದರಿಯ ವಾಹನಗಳು ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆಯ ಮೂಲಕ ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಮೂಲಕ ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
2) ಶಿವಾಜಿ ರಸ್ತೆಯಿಂದ ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣಕ್ಕೆ ಬರುವ ಎಲ್ಲಾ ಮಾದರಿಯ ವಾಹನಗಳು ಶಿವಾಜಿ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ವೆಂಕಟಸ್ವಾಮಿ ನಾಯ್ಡು ರಸ್ತೆಯ ಮೂಲಕ ಬಾಳೆಕುಂದ್ರಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಇನ್‌ಫೆಂಟ್ರಿ ರಸ್ತೆಯ ಮೂಲಕ ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್‌ನಲ್ಲಿ ಎಡ ತಿರುವು ತೆಗೆದುಕೊಂಡು ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಮೂಲಕ ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ಧಾರೆ.
ಕಾಡುಗೋಡಿ - ಹೂಡಿ ಮಾರ್ಗದಲ್ಲಿ ಕೆಪಿಟಿಸಿಎಲ್ ಕಾಮಗಾರಿ
ಕಾಡುಗೋಡಿ ಟ್ರೀ ಪಾರ್ಕ್ - ಹೂಡಿ ಮಾರ್ಗದಲ್ಲಿ ಕೆಪಿಟಿಸಿಎಲ್ ಕಾಮಗಾರಿ ನಡೆಯುತ್ತಿರುವ ಕಾರಣ ನಿಧಾನಗತಿಯ ವಾಹನ ಸಂಚಾರವಿದೆ. ಇಂದು (ನವೆಂಬರ್ 9) ಈ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಈ ಬಗ್ಗೆ ಗಮನಹರಿಸಿ ಸಹಕರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ನೆರವಿಗಾಗಿ 112ಕ್ಕೆ ಕರೆಮಾಡಬಹುದು.
ಇ ಬೈಕ್ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ನವೆಂಬರ್ 4 ರಿಂದ 7 ರ ನಡುವೆ 176 ಪ್ರಕರಣ ದಾಖಲಾಗಿದೆ. ಇ ಬೈಕ್ ಸವಾರರಿಂದ 88,000 ರೂಪಾಯಿ ದಂಡ ಸಂಗ್ರಹಿಸಿದ್ದು, ಅವರೆಲ್ಲರಿಗೂ ಸಂಚಾರ ನಿಯಮ ಪಾಲನೆ ಮಾಡುವಂತೆ ಜಾಗೃತಿ ಮೂಡಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.