Bengaluru Weather: ಊಟಿಯಂತಾದ ಉದ್ಯಾನನಗರಿ, ಹಳದಿ ಅಲರ್ಟ್ ಘೋಷಣೆ, ಅಕ್ಟೋಬರ್ 23-25ರಂದು ಭಾರಿ ಮಳೆ ಮುನ್ಸೂಚನೆ
Bengaluru weather: ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಮಳೆಯ ಕುರಿತು ಹವಾಮಾನ ಇಲಾಖೆ ವಾರದ ಮುನ್ಸೂಚನೆ ಪ್ರಕಟಿಸಿದೆ. ಭಾನುವಾರ ಮತ್ತು ಸೋಮವಾರ ಗುಡುಗು ಸಹಿತ ಸಾಧಾರಣ ಮಳೆ ಸುರಿಯಲಿದೆ. ಅಕ್ಟೋಬರ್ 23-25ರಂದು ನಗರದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.
ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಉದ್ಯಾನನಗರಿ ಬೆಂಗಳೂರಿನಲ್ಲಿ ಭಾನುವಾರ ಯೆಲ್ಲೊ ಅಲರ್ಟ್ ಘೋಷಿಸಿದೆ. ಭಾನುವಾರ ರಾತ್ರಿಯಿಡಿ ರಾಜಧಾನಿಯಲ್ಲಿ ಧೋ ಎಂದು ಮಳೆ ಸುರಿದಿದೆ. ಸಾಕಷ್ಟು ಮನೆಗಳೊಳಗೆ ನೀರು ನುಗ್ಗಿದ್ದು, ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದಾರೆ. ಬೆಂಗಳೂರಿನ ವಾತಾವರಣವೂ ಊಟಿಯಂತೆ ಶೀತಮಯವಾಗಿದೆ. ಕಳೆದ ವಾರದಿಂದಲೇ ನಗರದಲ್ಲಿ ಮಳೆಯಾಗುತ್ತಿದ್ದು, ರಸ್ತೆಯಲ್ಲಿ ಟ್ರಾಫಿಕ್ ಜಾಮ್, ನೀರು ತುಂಬಿದ ರಸ್ತೆಗಳಲ್ಲಿ ಸವಾರರು ಪರದಾಡುತ್ತಿರುವ ಪರಿಸ್ಥಿತಿ ಮಾಮೂಲಾಗಿದೆ. ವಾರಾಂತ್ಯದ ಶಾಪಿಂಗ್‌ಗೂ ಮಳೆ ಕಡಿವಾಣ ಹಾಕಿದೆ.
ಈಗಾಗಲೇ ಭಾರತದ ಹವಾಮಾನ ಇಲಾಖೆಯು ವಾರದ ಹವಾಮಾನ ಮುನ್ಸೂಚನೆ ಪ್ರಕಟಿಸಿದೆ. ಬೆಂಗಳೂರಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಆಕಾಶದಲ್ಲಿ ಮೋಡ ಹೆಚ್ಚಾಗಿದ್ದು, ಮಂಜು ಮುಸುಕಿದ ವಾತಾವರಣ ಇರಲಿದೆ. ಗುಡುಗುಸಹಿತ ಮಳೆಯೂ ಇರಲಿದೆ.
ಬೆಂಗಳೂರು ಹವಾಮಾನ ಮುನ್ನೋಟ: ಅಕ್ಟೋಬರ್ 20-25
ಅಕ್ಟೋಬರ್ 20-21: ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನಲ್ಲಿ ಅಕ್ಟೋಬರ್ 20-21ರಲ್ಲಿ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ. ಆಗಾಗ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. (ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆಯವರೆಗೂ ಬೆಂಗಳೂರಿನಲ್ಲಿ ಗುಡುಗುಸಹಿತ ಮಳೆಯಾಗಿದೆ).
ಅಕ್ಟೋಬರ್ 22ರಂದು ಹಗುರ ಮಳೆ ನಿರೀಕ್ಷಿಸಲಾಗಿದೆ.
ಅಕ್ಟೋಬರ್ 23ರಿಂದ 25ರವರೆಗೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸೂಚನೆಯಿದೆ.
ಬಂಗಾಳ ಕೊಳ್ಳಯಲ್ಲಿ ವಾಯುಭಾರ ಕುಸಿತದಿಂದ ಅನಿರೀಕ್ಷಿತ ಮಳೆಯು ಉಂಟಾಗುತ್ತಿದೆ. ಇದರಿದಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಗೆ ಕಾರಣವಾಗಿದೆ. ಮುಂದಿನ ಹಲವು ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರೆಯಲಿದ್ದು, ಅಕ್ಟೋಬರ್ 25ರ ನಂತರ ಮಾತ್ರ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು ಮಳೆ: ಹುಷಾರಾಗಿರಿ
ಬೆಂಗಳೂರಿನಲ್ಲಿ ಒಂದು ವಾರ ಮಳೆ ಮುಂದುವರೆಯುವ ಕಾರಣ ಉದ್ಯೋಗ ಅಥವಾ ಇತರೆ ಕಾರಣಗಳಿಂದ ಹೊರಹೋಗುವವರು ಎಚ್ಚರಿಕೆಯಿಂದ ಇರಬೇಕು. ಉದ್ಯೋಗಿಗಳು ಆಫೀಸ್‌ಗೆ ಹೋಗುವ ಅನಿವಾರ್ಯತೆ ಇರುವವರು ತುಸು ಮುಂಚೆಯೇ ಹೊರಡುವುದು ಒಳ್ಳೆಯದು. ವರ್ಕ್‌ಫ್ರಮ್ ಹೋಮ್ ಅವಕಾಶ ಇರುವವರು ಈ ವಾರ ಮನೆಯಲ್ಲಿ ಕೆಲಸ ಮಾಡಿದರೆ ಮಳೆಯ ತೊಂದರೆಗಳಿಂದ ಪಾರಾಗಬಹುದು. ಇದೇ ಸಮಯದಲ್ಲಿ ಚಳಿಯೂ ಹೆಚ್ಚಾಗಿರುತ್ತದೆ. ಹೀಗಾಗಿ, ಮಕ್ಕಳು, ಹಿರಿಯರು ಸೇರಿದಂತೆ ಆರೋಗ್ಯದ ಕುರಿತೂ ಕಾಳಜಿ ವಹಿಸಿಕೊಳ್ಳುವುದು ಉತ್ತಮ.
ಬೆಂಗಳೂರು ಮಳೆಯು ಭಾರತ-ನ್ಯೂಜಿಲೆಂಡ್ ಕ್ರಿಕೆಟ್ ಮ್ಯಾಚ್ ಮೇಲೂ ಪರಿಣಾಮ ಬೀರುವ ಸೂಚನೆ ಇದೆ.