ಯೋಗ ಶಿಕ್ಷಕಿ ಅಪಹರಣ, ಕೊಲೆ ಯತ್ನ ಕೇಸ್; ಸಾವಿನ ದವಡೆಯಿಂದ ಪಾರಾಗಲು ನೆರವಾಯಿತು ಯೋಗ, 5 ಶಂಕಿತರ ಬಂಧನ
ಬೆಂಗಳೂರಿನ ಯೋಗ ಶಿಕ್ಷಕಿಯ ಅಪಹರಣ, ಕೊಲೆ ಯತ್ನದ ಕೇಸ್ ದಾಖಲಿಸಿಕೊಂಡ ಪೊಲೀಸರು 5 ಶಂಕಿತರನ್ನು ಬಂಧಿಸಿದ್ದಾರೆ. ಸಾವಿನ ದವಡೆಯಿಂದ ಪಾರಾಗಲು ಶಿಕ್ಷಕಿಗೆ ನೆರವಾಗಿದ್ದು ಯೋಗಾಭ್ಯಾಸ ಎಂಬ ಅಂಶ ಗಮನಸೆಳೆದಿದೆ.
ಬೆಂಗಳೂರು: ಯೋಗ ಶಿಕ್ಷಕಿ ಅಪಹರಣ, ಕೊಲೆ ಯತ್ನ ಕೇಸ್ ಗಮನಸೆಳೆದಿದ್ದು, ಆಕೆ ಸಾವಿನ ದವಡೆಯಿಂದ ಪಾರಾಗಲು ಯೋಗ ನೆರವಾಗಿರುವ ವಿಚಾರ ಚರ್ಚೆಗೆ ಒಳಗಾಗಿದೆ. ಈ ಕೇಸ್ ಸಂಬಂಧ ಪೊಲೀಸರು 5 ಶಂಕಿತರನ್ನು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾಗಿ ಹತ್ಯೆ ಯತ್ನ ನಡೆದಾಗ ಸತ್ತಂತೆ ನಟಿಸಿದ ಮಹಿಳೆಯನ್ನು ಬೆಂಗಳೂರು ಕೆಂಪೇಗೌಡ ಮುಖ್ಯ ರಸ್ತೆ ನಿವಾಸಿ ಅರ್ಚನಾ ಕೋಂ ವಿಶ್ವನಾಥ (34) ಎಂದು ಗುರುತಿಸಲಾಗಿದೆ. ಅಕ್ಟೋಬರ್ 24ರಂದು ಈ ಅಪಹರಣ, ಹತ್ಯೆ ಯತ್ನ ನಡೆದಿರುವುದು ಈಗ ಬೆಳಕಿಗೆ ಬಂದಿದೆ. ತನ್ನ ಗಂಡನ ಜೊತೆ ಅಕ್ರಮ ಸ೦ಬ೦ಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಗಂಡನ ಪ್ರಿಯತಮೆಯ ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ ಒಟ್ಟು ಮಂದಿ ಆರೋಪಿಗಳನ್ನು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಲೂರಹಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಬ೦ಧಿಸಿದ್ದಾರೆ.
ಯೋಗ ಶಿಕ್ಷಕಿಯ ಸುಪಾರಿ ಕೊಲೆಗೆ ಯತ್ನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಎಲೆಯೂರು ಗ್ರಾಮದ ನಿವಾಸಿ ವಿಶ್ವನಾಥ ಬಿನ್ ಅಂಜಿನಪ್ಪ ಅವರ ಪತ್ನಿ ಅರ್ಚನಾ. 11 ವರ್ಷಗಳ ಸಂಸಾರ ನಡೆಸಿದ ಬಳಿಕ ಎರಡು ವರ್ಷ ಹಿಂದ ಮನಸ್ತಾಪವಾಗಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಇಬ್ಬರು ಮಕ್ಕಳಿದ್ದಾರೆ. ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿ ವಿಶ್ವನಾಥಗೆ ಬೆಂಗಳೂರಿನ ಸಿಟಿ ಟಿನ್ ಫ್ಯಾಕ್ಟರಿ ಬಳಿ ಅಪಘಾತವಾದಾಗ ಆತನ ಸ್ನೇಹಿತ ಸಂತೋಷ್ ಕುಮಾರ್ ಎಂಬಾತ ಪರಿಚಯವಾಗಿತ್ತು. ಆತ ಅರ್ಚನಾ ಜೊತೆ ಸಲುಗೆಯಿಂದ ಇದ್ದ. ಇದನ್ನು ಗಮನಿಸಿದ್ದ ಸಂತೋಷ್ ಕುಮಾರ್ ಪತ್ನಿ ಬಿಂದು ಅಸಮಾಧಾನಗೊಂಡಿದ್ದಳು. ಅರ್ಚನಾ ಯೋಗ ಕ್ಲಾಸ್‌ಗೆ ಹೋಗುತ್ತಿದ್ದ ಆಂಧ್ರದ ಮಡಕಶಿರ ಮೂಲದ ಸತೀಶ್ ರೆಡ್ಡಿ ಅವರನ್ನು ಸಂಪರ್ಕಿಸಿದ ಬಿಂದು, ಸುಪಾರಿ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ಉದಯವಾಣಿ ವರದಿ ಮಾಡಿದೆ.
ಬಂಧಿತ ಆರೋಪಿಗಳ ಪೈಕಿ ಸಂತೋಷ್ ಕುಮಾರ್ ಪತ್ನಿ ಬಿಂದು (38), ಬೆಂಗಳೂರಿನ ಕೊತ್ತನೂರು ದಿನ್ನೆಯಲ್ಲಿ ವಾಸ ಇರುವ ಆಂಧ್ರ ಪ್ರದೇಶದ ಸತೀಶ್ ಕುಮಾರ್ ಕೋಂ ಸತೀಶ್ ರೆಡ್ಡಿ, ಬೆಂಗಳೂರಿನ ಆಗ್ರಹಾರದಲ್ಲಿರುವ ರಮಣ ಅಲಿಯಾಸ್ ಮಿಸಾಲ ರಮಣ ಬಿನ್ ವೆಂಕಟರಾಮಡು (34), ಬೆಂಗಳೂರಿನ ಸರ್ಜಾಪುರದಲ್ಲಿರುವ ಆಂಧ್ರ ಮೂಲದ ನಾಗೇಂದ್ರರೆಡ್ಡಿ ಬಿನ್ ಕಿನಿಮಿರೆಡ್ಡಿ ಬಿನ್ ಶಿವಾರೆಡ್ಡಿ, ರಾಯಚೂರು ಜಿಲ್ಲೆಯ ಸಿಂಧನೂರಿನ ಉಮಾಲೂಟಿ ಗ್ರಾಮದ ರವಿಚಂದ್ರ ಬಿನ್ ಹನುಮಂತಪ್ಪ (27) ಹಾಗೂ ಅಪ್ರಾಪ್ತ ಬಾಲಕ ಸೇರಿ ಒಟ್ಟು 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಬಿಂದುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಧು ಪೊಲೀಸರು ತಿಳಿಸಿದ್ದಾರೆ.
ಗನ್ ತರಬೇತಿ ನೆಪದಲ್ಲಿ ಕರದೊಯ್ದು ಅಪಹರಣ, ಗಂಭೀರ ಹಲ್ಲೆ, ಸತ್ತಂತೆ ಬಿದ್ದ ಅರ್ಚನಾ
ಬೆಂಗಳೂರಿನಲ್ಲಿ ಯೋಗ ಕಲಿಯಲು ಬರುತ್ತಿದ್ದ ಸತೀಶ್ ರೆಡ್ಡಿ, ತಾನು ಗನ್ ತರಬೇತಿ ಕೊಡುತ್ತೇನೆ. ನೋಡಲು ಬನ್ನಿ ಎಂದು ಅರ್ಚನಾ ಅವರನ್ನು ಆಹ್ವಾನಿಸಿದ್ದಾನೆ. ಆತನ ಆಹ್ವಾನಕ್ಕೆ ಸ್ಪಂದಿಸಿದ ಅರ್ಚನಾ, ತನ್ನ ಮಕ್ಕಳನ್ನು ಅಮ್ಮನ ಮನೆಗೆ ಕಳುಹಿಸಿ ಸತೀಶ್ ರೆಡ್ಡಿ ಬಂದಿದ್ದ ಕಾರಿನಲ್ಲಿ ಹೋಗಿದ್ದರು. ಆತ ಕಾರನ್ನು ಶಿಡ್ಲಘಟ್ಟಕ್ಕೆ ಕರೆದೊಯ್ದಿದ್ದ. ಅಲ್ಲಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿ, ಚಿನ್ನಾಭರಣ ದೋಚಿದ್ದಾನೆ. ಅಲ್ಲಿ ಸತೀಶ್ ರೆಡ್ಡಿ ಸಹಚರರು ಜೊತೆಗಿದ್ದರು.
ಗಂಭೀರ ಹಲ್ಲೆ ನಡೆದ ಕಾರಣ ಅರ್ಚನಾ ಸಂಪೂರ್ಣ ಪ್ರಜ್ಞೆ ತಪ್ಪಿದಂತೆ ಬಿದ್ದಿದ್ದಾರೆ. ಯೋಗದಲ್ಲಿ ಪ್ರಾಣಾಯಾಮ ಅಭ್ಯಾಸ ಮಾಡಿದ್ದ ಅರ್ಚನಾ, ಉಸಿರಾಟ ಬಿಗಿ ಹಿಡಿದಿದ್ದ ಕಾರಣ ಆಕೆ ಸತ್ತಿದ್ದಾಳೆ ಎಂದು ಭಾವಿಸಿದ ಸತೀಶ್ ರೆಡ್ಡಿ ಮತ್ತು ಸ್ನೇಹಿತರು ಅರಣ್ಯ ಪ್ರದೇಶದಲ್ಲಿ ಅರೆಬರೆ ಗುಂಡಿ ತೆಗೆದು ಆಕೆಯನ್ನು ಮುಚ್ಚಿ ಪರಾರಿಯಾಗಿದ್ದಾರೆ. ಅಲ್ಲಿಂದ ಹೊರ ಬಂದ ಅರ್ಚನಾ, ಸ್ಥಳೀಯರ ನೆರವಿನಿಂದಿಗೆ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು. ಪೊಲೀಸರು ತನಿಖೆ ಮುಂದುವರಿಸಿದ್ಧಾರೆ.