Forest Tales: ಅರಣ್ಯ ಇಲಾಖೆಗೆ ಆನೆ ಪಟಾಕಿಯೊಂದಿಗೆ ನಿತ್ಯ ದೀಪಾವಳಿ: ಹಾಡಿಗಳಲ್ಲಿ ಹಬ್ಬದ ಕಳಕಳಿ-forest news every day deepavali for karnataka forest staff also for elephants lightings in jenukuraba haadis kub ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Forest Tales: ಅರಣ್ಯ ಇಲಾಖೆಗೆ ಆನೆ ಪಟಾಕಿಯೊಂದಿಗೆ ನಿತ್ಯ ದೀಪಾವಳಿ: ಹಾಡಿಗಳಲ್ಲಿ ಹಬ್ಬದ ಕಳಕಳಿ

Forest Tales: ಅರಣ್ಯ ಇಲಾಖೆಗೆ ಆನೆ ಪಟಾಕಿಯೊಂದಿಗೆ ನಿತ್ಯ ದೀಪಾವಳಿ: ಹಾಡಿಗಳಲ್ಲಿ ಹಬ್ಬದ ಕಳಕಳಿ

Deepavali in forest ದೀಪಾವಳಿ( Deepavali) ಹಬ್ಬದ ಸಂತಸ ಎಲ್ಲೆಲ್ಲೂ ಇದೆ. ಜೇನು ಕುರುಬರ ಹಾಡಿಗಳಲ್ಲೂ ಅಬ್ಬರವಿಲ್ಲದ ಆಚರಣೆ. ಮತ್ತೊಂದೆಡೆ ಅರಣ್ಯ ಇಲಾಖೆ( Karntaka Forest department) ಸಿಬ್ಬಂದಿಗೆ ಆನೆ ಓಡಿಸುತ್ತಲೇ ಪಟಾಕಿ ಹಚ್ಚಿ ಹಬ್ಬ ಆಚರಿಸಬೇಕಾದ ಸನ್ನಿವೇಶ.

ದೀಪಾವಳಿ ಎಂದರೆ ಜೇನು ಕುರುಬರ ಹಾಡಿಯ ಸಂತಸದ ಹಬ್ಬ ಹಾಗೂ ಆನೆ ಪಟಾಕಿ ಸಿಡಿಸುವ ಅರಣ್ಯ ಸಿಬ್ಬಂದಿ ನಿತ್ಯ ದೀಪಾವಳಿ.
ದೀಪಾವಳಿ ಎಂದರೆ ಜೇನು ಕುರುಬರ ಹಾಡಿಯ ಸಂತಸದ ಹಬ್ಬ ಹಾಗೂ ಆನೆ ಪಟಾಕಿ ಸಿಡಿಸುವ ಅರಣ್ಯ ಸಿಬ್ಬಂದಿ ನಿತ್ಯ ದೀಪಾವಳಿ.

ನಮಗೆಲ್ಲಾ ನಿತ್ಯವೂ ದೀಪಾವಳಿ ಬಿಡಿ ಎಂದರು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು.

ಯಾಕೆ, ದೀಪಾವಳಿ ಈಗ ಆಚರಿಸಲ್ವೇ ಎಂದು ಕೇಳಿದರೆ, ಏನು ಹೇಳೋದು. ಪಟಾಕಿ ಈಗ ದಿನವೂ ಹಾರಿಸುವ ಸನ್ನಿವೇಶ ಇದೆ. ಕಾಡು ಕಾಯುವ ಸಿಬ್ಬಂದಿಯೊಂದಿಗೆ ಪಟಾಕಿ ಸದಾ ಇರುತ್ತದೆ. ಅದು ಹಿಂದೆಲ್ಲಾ ಕಡಿಮೆ ಬಳಕೆಯಾಗುತ್ತಿತ್ತು. ಈಗ ಬಹುಪಾಲು ನಿತ್ಯವೂ ಹಾರಿಸಲೇಬೇಕು ಎನ್ನುವ ಉತ್ತರ ಅವರದ್ದು.

ಅರಣ್ಯ ಇಲಾಖೆ ಸೇರಿ 7 ವರ್ಷವೇ ಆಗುತ್ತಾ ಬಂತು. ಕೆಲಸಕ್ಕೆ ಸೇರಿಕೊಂಡಾಗ ಅರಣ್ಯ ಇಲಾಖೆ ಜವಾಬ್ದಾರಿ ಸವಾಲಿನದ್ದು. ಇಲ್ಲಿ ಜನರ ಜತೆಗೆ ವನ್ಯಜೀವಿಗಳನ್ನೂ ನಿರ್ವಹಣೆ ಮಾಡಬೇಕು. ಅದರಲ್ಲೂ ಕಾಡಂಚಿನ ಗ್ರಾಮಗಳ ಜನರು, ಕಾಡಾನೆಗಳನ್ನು ನಿಭಾಯಿಸಿದರೆ ನೀವೆಲ್ಲಾ ಗೆದ್ದ ಹಾಗೆ ಎಂದೇ ಹಿರಿಯ ಅಧಿಕಾರಿಗಳು ಹೇಳಿಕೊಟ್ಟಿದ್ದರು. ಅದು ನಿಜವೂ ಹೌದು ಎನ್ನುವುದು 7 ವರ್ಷದ ಈ ಅವಧಿಯಲ್ಲಿ ಅನುಭವಕ್ಕೆ ಬಂದಿದೆ ಎಂದು ಅವರು ತಮ್ಮ ವೃತ್ತಿ ಅನುಭವವನ್ನು ದೀಪಾವಳಿ ಹಬ್ಬದ ಈ ವೇಳೆ ಹೇಳುತ್ತಾ ಹೋದರು.

ಹಿಂದೆಲ್ಲಾ ಕಾಡಾನೆಗಳ ಉಪಟಳ ಇತ್ತು. ವನ್ಯಜೀವಿ ಹಾಗೂ ಮಾನವ ಸಂಘರ್ಷವೂ ಇತ್ತು. ಆದರೆ ಈಗಿನಷ್ಟು ಅಲ್ಲವೇ ಅಲ್ಲ. ಕಾಡಿನಿಂದ ಆನೆಗಳು ಹೊರ ಬರುವುದೇ ಅಪರೂಪವೂ ಆಗಿತ್ತು. ಬಂದಾಗ ಸಿಬ್ಬಂದಿ ಪಟಾಕಿ ಸಿಡಿಸಿ ಓಡಿಸೋರು, ನಾಲ್ಕೈದು ಬಾರಿ ಪಟಾಕಿ ಶಬ್ದ ಕೇಳಿದರೆ ಸಾಕು ಆನೆಗಳು ಅದರ ಭಯಕ್ಕೆ ಓಡುತ್ತಿದ್ದವು.

ಒಂದೆರಡು ದಶಕದಲ್ಲಿ ಪರಿಸ್ಥಿತಿಯೇ ಬದಲಾಗಿದೆ. ಅರಣ್ಯ ನಾಶ, ಬಿದಿರು ಸೇರಿ ಆಹಾರದ ಕೊರತೆ, ರೈತರ ಬೆಳೆ ಪದ್ದತಿ ಬದಲಾವಣೆ ಸಹಿತ ಹತ್ತಾರು ಕಾರಣಗಳಿಗೆ ಈಗ ಆನೆಗಳು ಕಾಡಿಗಿಂತ ನಾಡಿನಲ್ಲೇ ಹೆಚ್ಚು ಇರುತ್ತವೆ. ಅರಣ್ಯದಂಚಿನ ಗ್ರಾಮದವರಿಗೆ ಕಾಡಾನೆ ಕಾಯಂ ಸಂಗಾತಿಗಳೇ ಆಗಿಬಿಟ್ಟಿವೆ. ಹಳ್ಳಿಗಳತ್ತ ಯಾವಾಗ ಬರಬಹುದು ಎಂಬ ಭಯದಿಂದಲೇ ಜನ ಆನೆಗಳಿಗೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ.

ನಗರ ಪ್ರದೇಶಗಳತ್ತ ಆನೆಗಳು ಧಾವಿಸುತ್ತಲೇ ಇವೆ. ಬೆಂಗಳೂರು, ಮೈಸೂರು, ಮಂಡ್ಯ ನಗರ ಇಲ್ಲವೇ ಸಮೀಪವೇ ಆನೆಗಳು ಬರುವಷ್ಟರ ಮಟ್ಟಿಗೆ ಪರಿಸ್ಥಿತಿಯಾಗಿದೆ. ತಿಂಗಳ ಹಿಂದೆಯಷ್ಟೇ ಮೈಸೂರು ಸುತ್ತಮುತ್ತ ಆನೆಗಳ ಹಿಂಡು ಸಂಚರಿಸಿದ್ದವು. ಅವುಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಹೋದ ವಾರ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ಸಮೀಪದಲ್ಲೇ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದವು. ದಕ್ಷಿಣ ಕನ್ನಡದ ಸುಳ್ಯ, ಬೆಳ್ತಂಗಡಿ ಸಹಿತ ಹಲವು ಭಾಗಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ. ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡ ಇಲ್ಲಿ ಆನೆಗಳ ಹಿಂಡೇ ಇದೆ. ಇರುವ ಹಿಂಡಿನಲ್ಲಿ ಒಂದೆರಡು ಬೇರ್ಪಟ್ಟಿವೆ. ಅವುಗಳು ಬೇರೆ ಬೇರೆ ಕಾಣಿಸಿಕೊಳ್ಳುತ್ತಿವೆ. ಮಂಗಳೂರಿಗೆ ಹೋಗುವ ಮಾರ್ಗ ಹಾಗೂ ಹತ್ತಿರದಲ್ಲೇ ಆನೆಗಳು ಬಂದಿರುವುದು ಜನರ ಭಯವನ್ನೂ ಹೆಚ್ಚಿಸಿದೆ.

ಹೀಗಿದ್ದಾಗ ಆನೆಗಳನ್ನು ಅರಣ್ಯ ಇಲಾಖೆಯವರು ಓಡಿಸಲೇಬೇಕು. ಅವುಗಳನ್ನು ಬಂದ ದಾರಿಗೆ ಕಳುಹಿಸಲು ನಿರಂತರ ಪ್ರಯತ್ನ ಮಾಡಲೇಬೇಕು. ಇದನ್ನು ಅರಣ್ಯ ಇಲಾಖೆ ಶುರು ಮಾಡೋದೇ ಪಟಾಕಿ ಸಿಡಿಸುವುದರಿಂದ. ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವಂತದ್ದು. ಏಕೆಂದರೆ ಆನೆಗಳೂ ಕೊಂಚ ಹೆದರೋದು ಶಬ್ದಕ್ಕೆ. ಅದರಲ್ಲೂ ಪಟಾಕಿ ಶಬ್ದ ಕೇಳಿದ ತಕ್ಷಣವೇ ಓಡುತ್ತವೆ. ಇದರಿಂದಲೇ ಈಗ ಆನೆಗಳು ನಾಡಿಗೆ ಬರುವ, ಅವುಗಳನ್ನು ಕಾಡಿಗೆ ಅಟ್ಟುತ್ತಲೇ ಇರುವ ಸಂಖ್ಯೆ ಹೆಚ್ಚಾಗಿ ಪಟಾಕಿ ಸಿಡಿಸುವ ಪ್ರಕರಣ ಅಧಿಕವಾಗಿದೆ.

ಪಟಾಕಿ ನಮ್ಮ ಬ್ಯಾಗ್‌ಗಳ ಭಾರವನ್ನೂ ಹಚ್ಚಿಸಿದೆ. ಪ್ರತಿದಿನವೂ ಸಿಡಿಸಲೇಬೇಕು. ಇದರಿಂದ ದೀಪಾವಳಿಯಲ್ಲಿ ಪಟಾಕಿ ಸಿಡಿಸೋದು ನಮಗೆ ಸಾಮಾನ್ಯ ಅನ್ನಿಸಿಬಿಡುತ್ತದೆ. ಆನೆ ಕಾರಣಕ್ಕೆ ದೀಪಾವಳಿ ದಿನವೂ ರಜೆ ಸಿಗದೇ ಮನೆಯವರ ಬದಲಿಗೆ ಅರಣ್ಯದಂಚಿನಲ್ಲೋ, ಆನೆ ಹಿಂದೆ ಓಡುತ್ತಲೇ ಅಲ್ಲಿಯೇ ಪಟಾಕಿ ಹಚ್ಚಿ ಹಬ್ಬ ಆಚರಿಸಿಬಿಡುತ್ತೇವೆ ಎಂದು ಅವರು ಅರಣ್ಯ ಅಧಿಕಾರಿ ನಗುತ್ತಾ ಹೇಳುವಾಗ ಅದರ ಹಿಂದೆ ಅವರ ವಿಷಾದ, ಬೇಸರ ಎರಡೂ ಇದೆ.

ಈ ಅನುಭವ ಕಾಡು ಕಾಯುವ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮಾತ್ರ ಅಲ್ಲ. ಅರಣ್ಯದಂಚಿನ ಗ್ರಾಮಗಳ ಜನರಿಗೂ ಆಗುತ್ತಿದೆ. ಅರಣ್ಯ ಇಲಾಖೆಯರು ಪಟಾಕಿ ಸಿಡಿಸಿದಾಗ ಅವರಿಗೂ ಶಬ್ದ ಕೇಳಿಸುತ್ತಲೇ ಇರುತ್ತದೆ.

ಇದೇ ಪ್ರಶ್ನೆ ಆನೆಗೂ ಕೇಳಿನೋಡಿ. ನಮ್ಮ ಜಾಗದಲ್ಲಿ ಜನ ಬಂದಿದ್ದಾರೆ. ನಾವು ಅಲ್ಲಿಗೆ ಹೋಗಿಯೇ ತೀರುತ್ತೇವೆ. ನಾವೂ ಬದುಕಬೇಕು. ನಾವಿದ್ದರೆ ಕಾಡು. ಆನೆ ಪಟಾಕಿ ಹಿಡಿದು ದೀಪಾವಳಿಯನ್ನು ನಿತ್ಯ ಆಚರಿಸುವಂತೆ ಮಾಡಿದ್ದೇವೆ ಎಂದು ಹೇಳಬಹುದು !.

ಈ ವರ್ಷದ ದೀಪಾವಳಿ ಇಂದು ಕೊನೆಯಾಗಬಹುದು. ಆದರೆ ಅರಣ್ಯ ಇಲಾಖೆಯವರಿಗೆ ಹಾಗೂ ಕಾಡಾನೆಗಳಿಗೆ ನಿತ್ಯದ ದೀಪಾವಳಿ ಮಾತ್ರ ಸದ್ಯಕ್ಕಂತೂ ನಿಲ್ಲದು.

ಜೇನುಕುರುಬರ ದೀಪಾವಳಿ ಸಡಗರ

ನಾಗರಹೊಳೆ ಅರಣ್ಯದಂಚಿನ ಗ್ರಾಮ ಹನಗೋಡು ಸಮೀಪದ ಭರತವಾಡಿ ಹಾಡಿಯ ವಾಸಿ ಜೇನುಕುರುಬರ ಕುಂಡಯ್ಯ ಅವರ ಪತ್ನಿ ಸಣ್ಣಮ್ಮ ಅವರಿಗೆ ನಿಮಗೆ ಕುಂತಿ ಬಗ್ಗೆ ಯಾಕೆ ಅಷ್ಟು ಆಸಕ್ತಿ ಎನ್ನುವ ಪ್ರಶ್ನೆ ಕೇಳಿ. ಅವರು ಕುಂತಿ ಬಗ್ಗೆ ಹಲವು ವಿಷಯಗಳನ್ನು ಹೇಳುತ್ತಾ ಹೋಗುತ್ತಾರೆ. ಕುಂತಿ, ದೀಪಾವಳಿ ಹಾಗೂ ಮಹಾಭಾರತದ ನಂಟನ್ನು ತಮ್ಮದೇ ಶೈಲಿಯಲ್ಲಿ ವಿವರಿಸುತ್ತಾರೆ. ತಾವು ಹಿರಿಯರಿಂದ ತಿಳಿದುಕೊಂಡು ಬಂದಿರುವಂತ ವಿಚಾರಗಳನ್ನೇ ಮನನ ಮಾಡಿಕೊಂಡು ಪುರಾಣವನ್ನು ಬಿಡಿಸಿಡುತ್ತಾರೆ. ಕುಂತಿ ಕುರಿತಾಗಿ ತಾವೇ ಕಟ್ಟಿಕೊಂಡಿರುವ ಹಾಡುಗಳನ್ನೂ ಹಾಡುತ್ತಾರೆ. ನಿರಂತರವಾಗಿ ರಾತ್ರಿ ಶುರುವಾದರೆ ಬೆಳಗಿನವರೆಗೂ ಕುಂತಿ ಹಾಗೂ ಮಹಾಭಾರತ, ರಾಮಾಯಣದ ಅದೆಷ್ಟೋ ಹಾಡುಗಳನ್ನು ಸಣ್ಣಮ್ಮ ಹೇಳುತ್ತಿದ್ದರೆ ಜತೆಯಲ್ಲಿರುವ ಹಾಡಿಗಳ ಹೆಣ್ಣುಮಕ್ಕಳೂ ದನಿಗೂಡಿಸುತ್ತಾರೆ. ಸಣ್ಣಮ್ಮನಿಂದ ಕಲಿತವರು ತಾವೂ ಹಾಡುತ್ತಾರೆ.

ಜೇನುಕುರುಬರ ಹಾಡಿಗೂ ಕುಂತಿಗೂ ಸಣ್ಣಮ್ಮಗೂ ಏನು ಸಂಬಂಧವಿರಬಹುದು ಎನ್ನುವ ಪ್ರಶ್ನೆ ಎದುರಾಗಬಹುದು. ಏಕೆಂದರೆ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಭಾಗದಲ್ಲಿ ದೀಪಾವಳಿ ಬಂದರೆ ಕುಂತಿ ಪೂಜೆ ಶುರುವಾಗುತ್ತದೆ. ಹೆಣ್ಣು ಮಕ್ಕಳು ದೀಪಾವಳಿ ವೇಳೆ ಹೆಚ್ಚು ಆಚರಿಸೋದು ಕುಂತಿ ಪೂಜೆಯನ್ನೇ. ಬಹಳಷ್ಟು ಹಳ್ಳಿಗಳಲ್ಲಿ ಕುಂತಿ ಕುರಿತ ಹಾಡುಗಳನ್ನೂ ಹಾಡುತ್ತಾರೆ.

ಜೇನು ಕುರುಬರು ಹೆಚ್ಚಾಗಿರುವ ಹಾಡಿಗಳಲ್ಲೂ ದೀಪಾವಳಿ ಬಂದರೆ ಕುಂತಿ ಮನೆಗಳನ್ನು ಪ್ರವೇಶಿಸುತ್ತಾಳೆ.ಮನೆಯಲ್ಲಿ ಇರುವ ಗುಂಡುಕಲ್ಲು ಅಥವಾ ಇನ್ಯಾವುದೋ ಕಲ್ಲಿನ ವಸ್ತುವಿಗೆ ಕುಂತಿ ರೂಪ ನೀಡುತ್ತಾರೆ. ಇಲ್ಲವೇ ಮಣ್ಣಿನಿಂದಾದರೂ ಕುಂತಿಯನ್ನು ರೂಪಿಸುತ್ತಾರೆ. ಆನಂತರ ಕುಂತಿಯನ್ನು ಕೂರಿಸಿ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಪೂಜೆ ಜತೆಯಲ್ಲಿ ಕುಂತಿಯ ಮಹತ್ವ ಸಾರುವ ಹಾಡುಗಳನ್ನು ಹಾಡುವ ಪದ್ದತಿ ಬೆಳೆದುಕೊಂಡು ಬಂದಿದೆ. ಕುಂತಿಗೆ ಹಚ್ಚಿದ ದೀಪ ಆರದಂತೆ ನೋಡಿಕೊಳ್ಳುತ್ತಾರೆ.

ಮೈಸೂರು ಜಿಲ್ಲೆಯಲ್ಲಿಯೇ ಜೇನು ಕುರುಬರು ಇರುವ164 ಹಾಡಿಗಳಿವೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 12, ಕೊಡಗಿನಲ್ಲಿ 80 ಕ್ಕೂ ಅಧಿಕ ಜೇನುಕುರುಬರೇ ಹೆಚ್ಚಿರುವ ಹಾಡಿಗಳಿವೆ.

ಜೇನು ಕುರುಬರು ಕರ್ನಾಟಕದಲ್ಲಿ ನೆಲೆಗೊಂಡ ಜನರಲ್ಲಿ ಮೊದಲಿಗರು. ನೂರಾರು ವರುಷಗಳಿಂದ ಇವರು ಜೀವನ ಸಾಗಿಸುವ ರೀತಿ ಹೆಚ್ಚಾಗಿ ಬದಲಾಗಿಲ್ಲ.ಬಹುತೇಕರು ಈಗಲೂ ಕಾಡನ್ನೇ ನಂಬಿ, ಅದರಲ್ಲಿ ಸಿಗುವ ಪದಾರ್ಥಗಳನ್ನು ಸೇವಿಸಿ ಬಾಳುವವರು. ಹಾಡಿಗಳಲ್ಲಿ ತಮ್ಮ ಕುಟುಂಬದವರೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

ಇಲ್ಲೆಲ್ಲಾ ಕುಂತಿ ಪೂಜೆಯ ಸಡಗರ ಜೋರಾಗಿಯೇ ಇರುತ್ತದೆ. ದೀಪಾವಳಿ ವೇಳೆ ಈ ಹಾಡಿಗಳಲ್ಲಿ ಹಸುಗಳನ್ನು ಶುಚಿಗೊಳಿಸಿ ಬಣ್ಣ ಹಚ್ಚುವುದೂ ಇದೆ. ಅವುಗಳ ಕೊಂಬಿಗೆ ಹೂವು ಮುಡಿಸಿ ಅಲಂಕಾರದೊಂದಿಗೆ ಮೆರವಣಿಗೆ ಮಾಡುವುದು ಇವೆಲ್ಲವನ್ನೂ ಪುರುಷರು ಮಾಡಿದರೆ ಮಹಿಳೆಯರಿಗೆ ಕುಂತಿಯ ಧ್ಯಾನ ಎಂದು ಹಾಡಿಗಳಲ್ಲಿನ ದೀಪಾವಳಿ ಸಂಭ್ರಮವನ್ನು ಹುಣಸೂರು ಡೀಡ್‌ ಸಂಸ್ಥೆಯ ಎಸ್‌.ಶ್ರೀಕಾಂತ್‌ ತೆರೆದಿಡುತ್ತಾರೆ.

ದೀಪಾವಳಿ ವೇಳೆ ಹಾಡಿಯವರು ತಾವೇ ತಯಾರಿಸಿದ ಕೊಳಲಿನಂತಹ ಅಂಜುಲೆಯಿಂದ ನಾದ ಹರಿಸುತ್ತಾ ಖುಷಿ ಪಡುತ್ತಾರೆ. ಡಬ್ಬಗಳನ್ನೇ ಡೋಲು ಮಾಡಿಕೊಂಡು ಬಾರಿಸುತ್ತಾ ಕುಣಿಯುತ್ತಾರೆ. ಮನೆಗಳ ಸುತ್ತಲೂ ದೀಪ ಇಟ್ಟು ಜಗತ್ತಿನ ಕತ್ತಲೆಯಲ್ಲಾ ಕಳೆಯಲಿ ಎಂಬ ಆಶಯದೊಂದಿಗೆ ಹಬ್ಬ ಆಚರಿಸುತ್ತಾರೆ.

ಮಕ್ಕಳು, ಯುವಕರು, ಹಿರಿಯರು ಎನ್ನದೇ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಈ ಬಾರಿಯೂ ಹಾಡಿಗಳಲ್ಲಿ ಪಟಾಕಿ ಅಬ್ಬರವಿಲ್ಲ. ಪಟಾಕಿ, ಶಬ್ದ,ಮಾಲಿನ್ಯ, ಸುಪ್ರೀಂಕೋರ್ಟ್‌ ಆದೇಶದ ಯಾವುದರ ಗೋಜಿಲ್ಲದೇ ದೀಪದ ಬೆಳಕು ಹಾಗೂ ಕುಂತಿಯ ಗೀತೆಗಳ ಖುಷಿಯಲ್ಲಿ ಹಾಡಿ ಜನರಿದ್ದಾರೆ. ದೀಪಾವಳಿ ಸಂತಸ ಎಂದರೆ ಇದೇ ತಾನೇ.

-ಕುಂದೂರು ಉಮೇಶಭಟ್ಟ

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

mysore-dasara_Entry_Point