ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಮರು ತನಿಖೆ ಕೋರಿದ್ದ ಅರ್ಜಿಗಳ ವಜಾ; ದಶಕ ಕಳೆದರೂ ಗೊಂದಲದ ಗೂಡಾಗಿ ಉಳಿದ ಪ್ರಕರಣ
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಮೂರು ಅರ್ಜಿಗಳು ವಜಾಗೊಂಡಿವೆ. (ವರದಿ: ಎಚ್. ಮಾರುತಿ)
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮೂರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಪ್ರಕರಣದ ಮರು ತನಿಖೆ ನಡೆಸಬೇಕು ಹಾಗೂ ಈ ಪ್ರಕರಣದಿಂದ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಮತ್ತು ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು ಎಂದು ಕೋರಲಾಗಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರ ದ್ವಿಸದಸ್ಯ ಪೀಠ ಈ ಪ್ರಕರಣಕ್ಕೆ ಸಂಬಂಧಪಟ್ಟ ಅರ್ಜಿಗಳ ವಿಚಾರಣೆ ನಡೆಸಿತು. ರಾಜ್ಯ ಪ್ರಾಸಿಕ್ಯೂಷನ್ ಪರವಾಗಿ ವಿಜಯಕುಮಾರ್ ಮಜಗೆ ವಾದ ಮಂಡಿಸಿದ್ದರು.
ಸೌಜನ್ಯ ಪ್ರಕರಣದ ವಿವರ
ಧರ್ಮಸ್ಥಳ ಮೂಲದ ಸೌಜನ್ಯ, ದಕ್ಷಿಣ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ. ಈಕೆಯ ಮೇಲೆ 2012ರ ಅಕ್ಟೋಬರ್ 9ರಂದು ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಆದರೆ ಸಿಐಡಿ 2012ರ ನವಂಬರ್ 6ರಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆಯ ಹಂತದಲ್ಲಿ ಕಾರ್ಕಳ ತಾಲೂಕಿನ ಕುಕುಂದೂರಿನ ಸಂತೋಷ್ ರಾವ್ ಅವರನ್ನು ಆರೋಪಿ ಎಂದು ಗುರುತಿಸಿತ್ತು. 2023ರ ಜುಲೈ 16ರಂದು ಸಿಬಿಐ ವಿಶೇಷ ನ್ಯಾಯಾಲಯ ಇವರನ್ನು ಆರೋಪದಿಂದ ಮುಕ್ತಗೊಳಿಸಿತ್ತು.
ಸೌಜನ್ಯ ತಂದೆ ಅರ್ಜಿ ಸಲ್ಲಿಕೆ
ತಮ್ಮ ಪುತ್ರಿ ಸೌಜನ್ಯಳ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಬೇಕು ಎಂದು ಧರ್ಮಸ್ಥಳದ ನಿವಾಸಿ ಚಂದಪ್ಪ ಗೌಡ ರಿಟ್ ಅರ್ಜಿ ಸಲ್ಲಿಸಿದ್ದರು. ಎರಡನೆಯದಾಗಿ ಸಂತೋಷ್ ರಾವ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು ಎಂದು ಸಿಬಿಐ ಅರ್ಜಿ ಸಲ್ಲಿಸಿತ್ತು. ಮೂರನೆಯದಾಗಿ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಂತೋಷ್ ರಾವ್ ಅರ್ಜಿ ಸಲ್ಲಿಸಿದ್ದರು.
ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿ ಸಂತೋಷ್ ರಾವ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಆರೋಪದಿಂದ ಮುಕ್ತಗೊಳಿಸಿದೆ. ಕೃತ್ಯದಲ್ಲಿ ರಾವ್ ಪಾತ್ರ ಇರುವುದನ್ನು ಮತ್ತು ಅವರ ಮೇಲಿರುವ ಆಪಾದನೆಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಒಟ್ಟಾರೆ ಇಡೀ ತನಿಖೆ ಸಮರ್ಪಕವಾಗಿ ನಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದ್ದರಿಂದ ಮರು ತನಿಖೆ ನಡೆಸಬೇಕು ಎಂದು ಚಂದಪ್ಪ ಗೌಡರ ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.
ಸಿಬಿಐ ಮನವಿ ಏನು?
ಸೌಜನ್ಯ ಅವರ ಮೇಲೆ ಅತ್ಯಾಚಾರ ನಡೆದ 2ನೇ ದಿನ ಸಂತೋಷ್ ರಾವ್ ಅವರನ್ನು ಬಂಧಿಸಲಾಗಿದೆ. ಅವರು ಆ ಊರಿನವರಲ್ಲ ಮತ್ತು ಅಂದು ಅಲ್ಲಿ ಏಕೆ ಬಂದಿದ್ದರು ಎನ್ನುವುದನ್ನು ಸಾಬೀತುಪಡಿಸುವಲ್ಲಿ ಅವರು ವಿಫಲರಾಗಿದ್ದರು. ಕೊಲೆ ನಡೆದ ಸ್ಥಳದಲ್ಲಿ ಪಂಚೆಯೊಂದು ಸಿಕ್ಕಿದ್ದು, ಅದರಲ್ಲಿ ಸಂತೋಷ್ ರಾವ್ ಅವರ ಕೂದಲು ಸಿಕ್ಕಿದ್ದು, ಅವರದ್ದೇ ಎನ್ನುವುದು ಡಿಎನ್‌ಎ ವರದಿಯಲ್ಲಿ ಸಾಬೀತಾಗಿದೆ. ಅವರೇ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದಕ್ಕೆ ಇದು ಪುಷ್ಠಿಯನ್ನೊದಗಿಸುತ್ತದೆ. ಆದ್ದರಿಂದ ಅವರೇ ಆರೋಪಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ವಾದ ಮಂಡಿಸಿತ್ತು.
ಸಂತೋಷ್ ರಾವ್ ಮನವಿ
ತಪ್ಪು ಮಾಡದೇ ಇದ್ದರೂ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ವಿಶೇಷ ನ್ಯಾಯಾಲಯ ನನ್ನನ್ನು ಆರೋಪ ಮುಕ್ತಗೊಳಿಸಿದೆ. ಆದರೆ ನಿಜವಾದ ಆರೋಪಿ ತಪ್ಪಿಸಿಕೊಂಡಿದ್ದಾನೆ. ಆದ್ದರಿಂದ ಇಡೀ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಸಂತೋಷ್ ರಾವ್ ಅರ್ಜಿಯಲ್ಲಿ ಪ್ರಾರ್ಥಿಸಿದ್ದರು. ವಿನಾ ಕಾರಣ ನನ್ನನ್ನು ಬಂಧಿಸಿದ್ದಕ್ಕೆ 50 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದೂ ಮನವಿ ಮಾಡಿಕೊಂಡಿದ್ದರು.
ಸದ್ಯ ಎಲ್ಲಾ ಮೂರು ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿದೆ. ಒಟ್ಟಾರೆ ಈ ಬೆಳವಣಿಗೆಗಳಿಂದ ಸೌಜನ್ಯ ಕುಟುಂಬ ಮತ್ತು ಆಕೆಯ ಪರವಾಗಿ ನಿಂತಿದ್ದವರಿಗೆ ತೀವ್ರ ನಿರಾಶೆಯುಂಟಾಗಿರುವುದು ಸತ್ಯ. ಇವರ ಪಾಲಿಗೆ ನ್ಯಾಯ ಎನ್ನುವುದು ಮರೀಚಿಕೆಯಾಗಿ ಉಳಿದುಕೊಂಡಿದ್ದು ವಿಪರ್ಯಾಸವೇ ಸರಿ.