Dakshina Kannada News: ಚುನಾವಣಾ ಕರ್ತವ್ಯ ಲೋಪ; ದಕ್ಷಿಣ ಕನ್ನಡ ಡಿಡಿಪಿಯು ಜಯಣ್ಣ ಅಮಾನತು
ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada News: ಚುನಾವಣಾ ಕರ್ತವ್ಯ ಲೋಪ; ದಕ್ಷಿಣ ಕನ್ನಡ ಡಿಡಿಪಿಯು ಜಯಣ್ಣ ಅಮಾನತು

Dakshina Kannada News: ಚುನಾವಣಾ ಕರ್ತವ್ಯ ಲೋಪ; ದಕ್ಷಿಣ ಕನ್ನಡ ಡಿಡಿಪಿಯು ಜಯಣ್ಣ ಅಮಾನತು

Dakshina Kannada DDPU Jayanna: ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿಯನ್ನು ಪಡೆಯದೆ ಜಿಲ್ಲಾ ಕೇಂದ್ರವನ್ನು ತೊರೆಯುವ ಮೂಲಕ ಜಯಣ್ಣ ಅವರು ಚುನಾವಣಾ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿ ನೋಟೀಸ್‌ ನೀಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ.
ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ.

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ. (Jayanna CD) ಅವರನ್ನು ತಮ್ಮ ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವುದು ಅವರ ವಿರುದ್ಧ ಇರುವ ಆರೋಪವಾಗಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಆದರೆ, ತಮ್ಮ ಮೇಲೆ ಮಾಡಲಾದ ಆರೋಪಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಯು) ಜಯಣ್ಣ ಅವರು ನಿರಾಕರಿಸಿದ್ದಾರೆ.

ಸಮಾಧಾನ ತರದ ಉತ್ತರ

ಜಯಣ್ಣ ಅವರು ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಹೊರಡಿಸಿದ ನೋಟಿಸ್ ಗೆ ಮೇ‌ 22 ರಂದು ಲಿಖಿತ ಉತ್ತರ ನೀಡಿದ್ದರು. ಅದಕ್ಕೆ ನೀಡಿದ ಉತ್ತರ ಸಮಾಧಾನ ತರಲಿಲ್ಲ ಎಂಬ ನೆಲೆಯಿಂದ ಡಿಡಿಪಿಯು ಅವರನ್ನು ಅಮಾನತು ಮಾಡಲಾಗಿದೆ. ಇದೀಗ ಕೊಕ್ಕಡ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿ ಅವರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಭಾರವಾಗಿ ನೇಮಕ ಮಾಡಲಾಗಿದೆ.

ಜಿಲ್ಲಾಧಿಕಾರಿಗಳು ಮೇ 9 ರಂದು ಚುನಾವಣೆಯ ಪೂರ್ವ ಸಿದ್ಧತೆ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಹಾಜರಿರುವಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಜಯಣ್ಣ ಅವರಿಗೆ ಫೋನ್‌ ಮೂಲಕ ಮಾಹಿತಿಯನ್ನು ನೀಡಿದ್ದರು. ಆಗ ಪೋನ್ ಸ್ವೀಕರಿಸಿದ ಜಯಣ್ಣ ಅವರು ತಾವು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ದಾಖಲೆಗಳನ್ನು ಸಲ್ಲಿಸಲು ಬೆಂಗಳೂರಿಗೆ ತೆರಳುತ್ತಿರುವುದಾಗಿ, ಆದ ಕಾರಣ ಪತ್ರಿಕಾಗೋಷ್ಠಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿಯನ್ನು ಪಡೆಯದೆ ಜಿಲ್ಲಾ ಕೇಂದ್ರವನ್ನು ತೊರೆಯುವ ಮೂಲಕ ಜಯಣ್ಣ ಅವರು ಚುನಾವಣಾ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿ ನೋಟೀಸ್‌ ನೀಡಿದ್ದರು.

ಇನ್ನು ಪದವಿ ಪೂರ್ವ ಕಾಲೇಜುಗಳಲ್ಲಿನ ಮತಗಟ್ಟೆಗಳನ್ನು ಮೇ 9 ಮತ್ತು 10 ರಂದು ತೆರೆದಿಡಬೇಕಾಗಿದ್ದು, ಈ ಬಗ್ಗೆ ಕಾಲೇಜುಗಳಿಗೆ ಮಾಹಿತಿಯನ್ನು ನೀಡಬೇಕಾಗಿತ್ತು. ಆದರೆ, ಡಿಡಿಪಿಯು ಜಯಣ್ಣ ಅವರು ಸಮರ್ಪಕ ಮಾಹಿತಿ ನೀಡದ ಕಾರಣದಿಂದ ಚುನಾವಣಾ ಸಿಬ್ಬಂದಿಗಳು ಮತಗಟ್ಟೆಗಳಿಗೆ ತೆರಳುವಾಗ ವಿಳಂಬವಾಗಿತ್ತು. ಈ ಕಾರಣದಿಂದಾಗಿ ಜಿಲ್ಲಾ ಚುನಾವಣಾ ಆಧಿಕಾರಿಗೆ ಮಾಹಿತಿ ನೀಡದೆ ಕೇಂದ್ರ ಸ್ಥಾನ ತೊರೆದಿರುವುದು ಜಯಣ್ಣ ಅವರ ಕರ್ತವ್ಯ ಲೋಪವಾಗಿದೆ ಎಂದು ಜಿಲ್ಲಾಧಿಕಾರಿಗಳ ನೋಟಿಸ್‌ನಲ್ಲಿ ಹೇಳಲಾಗಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner