Navaratri 2023: ದಸರಾ ಆಚರಣೆ ಮೈಸೂರಲ್ಲಿ ಮಾತ್ರವಲ್ಲ, ಕರ್ನಾಟಕದ ಹಲವು ಕಡೆ ಉಂಟು ನವರಾತ್ರಿ ನಂಟು
ದಸರಾವನ್ನು( Dasara) ಕೇವಲ ಮೈಸೂರಿನಲ್ಲಿ( Mysuru) ಮಾತ್ರ ಆಚರಿಸುವುದಿಲ್ಲ. ಕರ್ನಾಟಕ( Karnataka)ದಲ್ಲಿ ಮತ್ತು ಭಾರತ( India) ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ. ಎಲ್ಲೆಲ್ಲಿ ಹೇಗೆ ಆಚರಿಸುತ್ತಾರೆ ? ಇಲ್ಲಿದೆ ವಿವರ
ನಾಡಹಬ್ಬ ದಸರಾವನ್ನು ಕೇವಲ ಮೈಸೂರಿನಲ್ಲಿ ಮಾತ್ರ ಆಚರಿಸುವುದಿಲ್ಲ. ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ.
ದಸರಾ, ದುರ್ಗಾ ಪೂಜೆ, ನವರಾತ್ರಿ, ಶರನ್ನವರಾತ್ರಿ ಹೀಗೆ ಶಕ್ತಿ ದೇವತೆಯರಾದ ನವ ದುರ್ಗೆಯರನ್ನು ಒಂಬತ್ತು ದಿನಗಳ ಕಾಲ
ಪೂಜಿಸುವ ಆಚರಣೆಗೆ ಕರ್ನಾಟಕದಲ್ಲಿ ನಾಡಹಬ್ಬ ದಸರಾ ಎಂದು ಕರೆದರೆ ಉತ್ತರ ಭಾರತದಲ್ಲಿ ನವರಾತ್ರಿ ಉತ್ಸವ, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಎಂದು ಕರೆಯುತ್ತಾರೆ.ಎಲ್ಲ ಆಚರಣೆಗಳ ಉದ್ದೇಶ ನವ ದುರ್ಗೆಯರನ್ನು ಪೂಜಿಸಿ ಅವರ ಕೃಪೆಗೆ ಪಾತ್ರರಾಗುವುದೇ ಆಗಿದೆ.
ಮೈಸೂರು ದಸರಾ ಮಹತ್ವ
ಮೈಸೂರು ದಸರಾ ಕುರಿತು ವಿವರಣೆಯೇ ಬೇಕಿಲ್ಲ. ಅಷ್ಟರ ಮಟ್ಟಿಗೆ ಮನೆಮಾತಾಗಿದೆ. ಮೈಸೂರಿನಲ್ಲಿ ದಸರಾ ಹಬ್ಬ ಆರಂಭವಾಗುವುದಕ್ಕೆ ಮುಂಚೆಯೇ ಶ್ರೀರಂಗಪಟ್ಟಣದಲ್ಲಿ ಆಚರಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಸಾಮಂತ
ರಾಜ್ಯವಾಗಿದ್ದ ಶ್ರೀರಂಗಪಟ್ಟಣದಲ್ಲಿ ರಾಜ ಶ್ರೀರಂಗರಾಯ ಆಳ್ವಿಕೆ ನಡೆಸುತ್ತಿದ್ದ. ಹಾಗಾಗಿ ವಿಜಯನಗರದ ಆಳ್ವಿಕೆಗೊಳಪಟ್ಟಿದ್ದರಿಂದ ಅಲ್ಲಿನ ಆಚರಣೆಗಳು ಇಲ್ಲಿಯೂ ಅನುಸರಿಸುವುದು ಸಾಮಾನ್ಯ ಸಂಪ್ರದಾಯವಾಗಿತ್ತು.
1610ರಲ್ಲಿ ಶ್ರೀರಂಗಪಟ್ಟಣದಲ್ಲಿ ಪ್ರಾರಂಭವಾದ ದಸರಾ ನವರಾತ್ರಿ ಉತ್ಸವ 1805ರಲ್ಲಿ ಯದುವಂಶದ ಅರಸರ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡಿತು. ಇಲ್ಲಿ ಸಾಂಸ್ಕೃತಿಕ ಕಲೆಗಳ ಪ್ರದರ್ಶನ, ಸೇನೆಯ ಬಲಾಬಲ ಪರಿಚಯ, ಮಹಾರಾಜರ ಮೆರವಣಿಗೆ ಸೇರಿದಂತೆ ಹತ್ತು ಹಲವು ಸಂಪ್ರದಾಯಗಳನ್ನು ಮೆರೆಸಲಾಗುತ್ತಿತ್ತು. ಇಂದು ಸರ್ಕಾರದ ಆಶ್ರಯದಲ್ಲಿ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ.
ಕರ್ನಾಟಕದಲ್ಲಿ ದಸರಾ ಆಚರಣೆ
ಕರ್ನಾಟಕ ರಾಜ್ಯದಲ್ಲಿ ದಸರಾವನ್ನು ನಾಡ ಹಬ್ಬದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯು ನಾಡಹಬ್ಬದ ರೂಪ ಪಡೆದು ದಸರಾ ಆಗಿದೆ ಎಂದರೆ ಉತ್ಪ್ರೇಕ್ಷೆ ಏನಲ್ಲ. ದಸರಾ ಎಂದರೆ ಮನಸ್ಸಿನಲ್ಲಿ ಮೂಡುವುದೇ ಮೈಸೂರು ದಸರಾ. ಆದರೆ ರಾಜ್ಯದಲ್ಲಿ ದಸರಾವನ್ನು ವಿವಿಧ ಭಾಗಗಳಲ್ಲಿ ಸಾಮೂಹಿಕ ಹಬ್ಬವಾಗಿ ಆಚರಿಸಲಾಗುತ್ತಿದೆ.
ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನ, ಕಟೀಲು ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಜಿಲ್ಲೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಉತ್ತರಕನ್ನಡ ಜಿಲ್ಲೆ, ಬಂಟ್ವಾಳ, ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿದಿಯಲ್ಲಿ ದಸರಾ ಆಚರಿಸಲಾಗುತ್ತದೆ.
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿ, ಶೃಂಗೇರಿಯ ಶಾರದಾಂಬೆ ದೇವಿ ದೇವಸ್ಥಾನ, ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿ ಸಿಗಂದೂರು ಚೌಡೇಶ್ವರಿ ಹಾಗೂ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ನವರಾತ್ರಿ ಉತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಕೊಡಗು ದಸರಾವೂ ವಿಭಿನ್ನ
ಕೊಡಗನ್ನು ಆಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು. ಈ ಹಿಂದೆ ಕೊಡಗಿನಲ್ಲಿ
ವಿವಿಧ ಮಾರಕ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡು ಅಸಂಖ್ಯಾತ ಸಾವು ನೋವುಗಳು ಸಂಭವಿಸಿದ್ದವು. ಇದರಿಂದ ಚಿಂತೆಗೀಡಾದ ಅಂದಿನ ಅರಸರು, ಪರಿಹಾರಕ್ಕಾಗಿ ಶಕ್ತಿ ದೇವತೆ ಮಾರಿಯಮ್ಮ ದೇವರಿಗೆ ಮೊರೆ ಹೋಗಿ ಕರಗಗಳ ನಗರ ಪ್ರದಕ್ಷಿಣೆ ಮಾಡಿಸಿದರು. ನಂತರ ಸಾಂಕ್ರಮಿಕ ರೋಗ ತಾನೇತಾನಾಗಿ ಮರೆಯಾಯಿತು. ಹೀಗೆ ಇದು ಮಡಿಕೇರಿ ದಸರಾ ಆರಂಭಕ್ಕೆ ಮುನ್ನುಡಿ ಬರೆಯಿತು.
ಮಂಗಳೂರು ನವದುರ್ಗೆಯರ ಆರಾಧನೆ
ವಿಶ್ವಖ್ಯಾತಿಯ ಮೈಸೂರು ದಸರಾ ಮಾದರಿಯಲ್ಲೇ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ನವರಾತ್ರಿಯ ನವದುರ್ಗಾರಾಧನೆ
'ಮಂಗಳೂರು ದಸರಾ' ಎಂದೇ ಪ್ರಖ್ಯಾತಿ ಪಡೆದಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ವಿಜೃಂಭಣೆಯಿಂದ ನಡೆಯುತ್ತವೆ. ಈ ದಸರಾ ನೋಡಲು ವಿವಿಧ ಭಾಗಗಳಿಂದ ಪ್ರೇಕ್ಷಕರು ಆಗಮಿಸುತ್ತಾರೆ.
ಹಂಪಿಯಲ್ಲಿ ಐತಿಹಾಸಿಕ ಬನ್ನಿ ಮಹೋತ್ಸವ
ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ಹಂಪಿಯಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈಗಲೂ ಆ ಪರಂಪರೆಯನ್ನು ವಾಲ್ಮೀಕಿ ನಾಯಕ ಸಮಾಜ ಮುಂದುವರಿಸಿಕೊಂಡು ಬರುತ್ತಿದೆ.
ಶ್ರೀಕೃಷ್ಣದೇವರಾಯರ ಕಾಲದಲ್ಲಿ ಸೋಲನ್ನೇ ಕಾಣದ ಏಳು ಸಾವಿರ ಸೈನಿಕರುಳ್ಳ ಬೇಡರ ಪಡೆಯಿತ್ತು. ಆ ಬೇಡರ ವಂಶಸ್ಥರೇ ಇಂದಿಗೂ ದಸರಾ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಹೊಸಪೇಟೆಯ ಧರ್ಮದ ಗುಡ್ಡದಲ್ಲಿ ದೇವರ ಬನ್ನಿಯನ್ನು ಮುಡಿಯಲಾಗುತ್ತದೆ. ಹೊಸಪೇಟೆಯ ಏಳುಕೇರಿ, ಕಮಲಾಮರದ ಏಳುಕೇರಿ ಮತ್ತು ನಾಗೇನಹಳ್ಳಿ, ಬಸವನದುರ್ಗ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಶಕ್ತಿ ದೇವತೆಗಳನ್ನು ದೇವಾಲಯಗಳಲ್ಲಿ 9 ದಿನಗಳವರೆಗೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ರಂಭಾಪುರಿ, ಶೃಂಗೇರಿಯಲ್ಲಿ ಶರನ್ನವರಾತ್ರಿ
ಚಿಕ್ಕಮಗಳೂರು ಜಿಲ್ಲೆಯ ರಂಭಾಪುರೀ ಪೀಠ ಹಾಗೂ ಶೃಂಗೇರಿ ಪೀಠದಲ್ಲಿ ಶರನ್ನವರಾತ್ರಿ ಆಚರಣೆ ಮಾಡಲಾಗುತ್ತಿದೆ. ಶೃಂಗೇರಿಯಲ್ಲಿ ಶ್ರೀ ಶಾರಾದಾಂಬೆಗೆ 9 ದಿನ ವಿಶೇಷ ಅಲಂಕಾರ ಮಾಡಲಾಗುವುದು. ಕೊನೆಯ ದಿನ ಶೃಂಗೇರಿಯ ರಾಜಬೀದಿಯಲ್ಲಿ ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲೂ ಈ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.
ಶಿವಮೊಗ್ಗದಲ್ಲೂ ಜಂಬೂ ಸವಾರಿ
ಮೈಸೂರಿನಂತೆ ಶಿವಮೊಗ್ಗದಲ್ಲೂ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ ನೀಡಲಾಗುತ್ತದೆ. 9 ದಿನಗಳ ಕಾಲ ನಡೆಯುವ ದಸರಾ ಆಚರಣೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರೈತ
ದಸರಾ, ಯುವ ದಸರಾ, ಆಹಾರ ದಸರಾ, ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಪರಿಸರ ದಸರಾ, ಕಲಾ ದಸರಾ, ಮಕ್ಕಳ ದಸರಾ, ಕ್ರೀಡಾ ದಸರಾ ಹೀಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ವಿಜಯದಶಮಿಯಂದು ಅಂಬಾರಿಯ ಮೇಲೆ ದೇವಿಯ ಮೆರವಣಿಗೆ ಮಾಡಲಾಗುತ್ತದೆ. ಕೊನೆಯಲ್ಲಿ ರಾವಣ ಸಂಹಾರವಾಗುತ್ತಿದ್ದಂತೆ ಚಿತ್ತಾಕರ್ಷಕ ಪಟಾಕಿಗಳನ್ನು ಸಿಡಿಸಿ ಸಾರ್ವಜನಿಕರಿಗೆ ಮನರಂಜನೆ ನೀಡಲಾಗುತ್ತದೆ.
ದಾಂಡೇಲಿಯಲ್ಲಿ ರಾಮಲೀಲಾ ಉತ್ಸವ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಕಳೆದ ಆರು ದಶಕಗಳಿಂದ ದಸರಾ ಅಂಗವಾಗಿ ರಾಮಲೀಲಾ ಉತ್ಸವ ಆಚರಿಸಲಾಗುತ್ತಿದೆ. ದುಷ್ಟಶಕ್ತಿಗಳ ಪ್ರತೀಕವಾದ ಅಸುರರ ಪ್ರತಿಕೃತಿಗಳನ್ನು ದಹಿಸುವುದು ಇದರ ವಿಶೇಷ. ಸುಮಾರು 50 ಅಡಿ ಎತ್ತರದ ರಾವಣ, 45 ಅಡಿ ಎತ್ತರದ ಕುಂಭಕರ್ಣ ಮತ್ತು 30 ಅಡಿ ಎತ್ತರದ ಮೇಘನಾದನ ಪ್ರತಿಕೃತಿಗಳನ್ನು ದಹಿಸಿದ ನಂತರ
ದಾಂಡೇಲಿಯ ದಸರಾಕ್ಕೆ ತೆರೆಬೀಳುತ್ತದೆ. ದಾಂಡೇಲಿ ಕಾಗದ ಕಾರ್ಖಾನೆಗೆ ಉದ್ಯೋಗಿಗಳು, ಕಾರ್ಮಿಕರಾಗಿ ಉತ್ತರ ಭಾರತದಿಂದ ಬಂದವರು ತಮ್ಮ ಜತೆಯಲ್ಲಿ ರಾಮಲೀಲಾ ಉತ್ಸವ, ದಾಂಡಿಯಾವನ್ನೂ ತಂದರು.
ದೇಶದ ಇತರ ಭಾಗಗಳಲ್ಲಿ ದಸರಾ
ದಸರಾ ಹಬ್ಬವನ್ನು ಉತ್ತರ ಭಾರತದಲ್ಲಿ ದಶೇರ, ದುರ್ಗಾ ಪೂಜೆ ಎಂಬ ಹೆಸರುಗಳಲ್ಲಿ ಆಚರಿಸುತ್ತಾರೆ. ಒಂಭತ್ತು ದಿನಗಳ ಈ ಹಬ್ಬಕ್ಕೆ ನವರಾತ್ರಿ ಎಂದೂ ಕರೆಯುತ್ತಾರೆ.
ಆಯುಧ ಪೂಜೆ, ವಿಜಯ ದಶಮಿಯನ್ನು ಕರ್ನಾಟಕ, ಅದರಲ್ಲೂ ಮೈಸೂರಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಬಂಗಾಳದಲ್ಲಿ ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಪೂಜಿಸುತ್ತಾರೆ.
ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಸುತ್ತಾರೆ. ಅವುಗಳೆಂದರೆ
ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ ಇವೇ ಆ ಒಂಭತ್ತು ದೇವಿಯರು.
ನವರಾತ್ರಿ ಉತ್ಸವ ಆಚರಣೆಯ ಮೂಲ ಉದ್ದೇಶ ನಾಡಿಗೆ ಶಾಂತಿ, ಸೌಹಾರ್ದತೆಯನ್ನು ತರುವುದೇ ಆಗಿದೆ.