Davangere News: ನಕಲಿ ಲೆಟರ್ ಹೆಡ್ ಸೃಷ್ಟಿಸಿ ದಾವಣಗೆರೆ ಶಾಸಕ ಶಾಮನೂರು ಆಪ್ತ ಸಹಾಯಕಿ ಹುದ್ದೆ ಗಿಟ್ಟಿಸಿದ್ದ ಮಾಗಡಿ ಮಹಿಳೆ ವಿರುದ್ಧ ಪ್ರಕರಣ
Shamanur Shivashankarappa ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಲೆಟರ್ ಬಳಸಿ ಪಿಎ ಹುದ್ದೆ ಗಿಟ್ಟಿಸಿದ್ದ ಮಹಿಳೆ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು: ಮಾಜಿ ಸಚಿವ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಕಲಿ ಲೆಟರ್ ಹೆಡ್ ಮತ್ತು ಸಹಿ ಬಳಸಿಕೊಂಡು ಅವರ ಆಪ್ತ ಸಹಾಯಕಿಯಾಗಿ ವಿಧಾನಸಭಾ ಸಚಿವಾಲಯದಿಂದ ಮಹಿಳೆಯೊಬ್ಬರು ನೇಮಕಾತಿ ಆದೇಶ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಅಕ್ರಮ ಕುರಿತು ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಂಚನೆ ಎಸಗಿದ್ ಕೆ.ಸಿ. ವಿನುತಾ ಎಂಬುವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶಾಸಕರ ನಕಲಿ ಲೆಟರ್‌ಹೆಡ್‌ನಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರು ನಿವಾಸಿ ಕೆ.ಸಿ. ವಿನುತಾ ಅವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸುವಂತೆ ಶಾಸಕರು ಸಹಿ ಹಾಕಿ ಮನವಿ ನೀಡಿರುವ ಹಾಗೆ ಲೆಟರ್ ಅನ್ನು ವಿಧಾನಸಭಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಶಾಮನೂರು ಶಿವಶಂಕರಪ್ಪ ಅವರೇ ನೀಡಿರುವ ಪತ್ರ ಎಂದು ಭಾವಿಸಿ ಸಚಿವಾಲಯದ ಅಧಿಕಾರಿಗಳು, ವಿನುತಾ ಅವರನ್ನು ಆಪ್ತ ಸಹಾಯಕಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು.
ನಂತರ ಶಿವಶಂಕರಪ್ಪ ಅವರು ತಾವು ಪತ್ರ ನೀಡಿಲ್ಲ ಎಂದು ವಿಧಾನಸಭಾ ಸಚಿವಾಲಯದ ಗಮನಕ್ಕೆ ತಂದಿದ್ದಾರೆ. ಆರೋಪಿಯನ್ನು ಶೀಘ್ರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿ ಹೆಸರಿನಲ್ಲಿ ಬಾಡಿಗೆಗೆ ಮನೆ ಪಡೆದು ಭೋಗ್ಯಕ್ಕೆ ನೀಡುತ್ತಿದ್ದ ವಂಚಕ ದಂಪತಿ ಬಂಧನ
ಬೆಂಗಳೂರು ನಗರದಲ್ಲಿ ಬಾಡಿಗೆಗೆ ಮನೆ ಮತ್ತು ಅಪಾರ್ಟ್ ಮೆಂಟ್ ಗಳನ್ನು ಬಾಡಿಗೆಗೆ ಪಡೆದು ನಂತರ ಅದೇ ಮನೆಗಳನ್ನು ಇತರರಿಗೆ ಭೋಗ್ಯಕ್ಕೆ ನೀಡುವ ಮೂಲಕ ಅಮಾಯಕರನ್ನು ವಂಚಿಸುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಝಿಯು ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ನಡೆಸುತ್ತಿದ್ದ ಅಹಮದ್ ಅಲಿ ಬೇಗ್ ಹಾಗೂ ಅವರ ಪತ್ನಿ ಮುಯಿದಾ ಸಮ್ಹಾನಿ ಬಾನು ಬಂಧಿತ ಆರೋಪಿಗಳು.
ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಇವರನ್ನು ಬಂಧಿಸಲಾಗಿದೆ. ಇವರ ಜೊತೆ ಕೈ ಜೋಡಿಸಿದ್ದ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ
ಝಿಯು ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಕಂಪನಿ ಆರಂಭಿಸಿದ್ದ ವಂಚಕ ದಂಪತಿಗಳು ಎಚ್.ಬಿ.ಆರ್ ಲೇಔಟ್‌ನಲ್ಲಿ ಕಚೇರಿ ನಡೆಸುತ್ತಿದ್ದರು.
ಖಾಲಿ ಇರುವ ಮನೆ ಹಾಗೂ ಅಪಾರ್ಟ್ ಮೆಂಟ್ ಗಳ ಮಾಲೀಕರನ್ನು ಏಜೆಂಟ್ ಗಳ ಮೂಲಕ ಸಂಪರ್ಕಿಸಿ, ತಮ್ಮ ಕಂಪನಿ ಬಾಡಿಗೆದಾರರನ್ನು ಹುಡುಕಿ ಕೊಡುವ ಮೂಲಕ ನಿರ್ವಹಣೆ ಮಾಡುವುದಾಗಿ ನಂಬಿಸುತ್ತಿದ್ದರು. ನಂತರ ಬಾಡಿಗೆಗೆ ಎಂದು ಮನೆಯ ಕರಾರು ಪತ್ರವನ್ನು ಮಾಡಿಸಿಕೊಳ್ಳುತ್ತಿದ್ದರು. ನಂತರ ಮನೆ ಹಾಗೂ ಅಪಾರ್ಟ್ ಮೆಂಟ್ ಗಳನ್ನು ಬೇರೆಯವರಿಗೆ ರೂಪಾಯಿ 15 ರಿಂದ 20 ಲಕ್ಷದವರೆಗೂ ಭೋಗ್ಯಕ್ಕೆ ಹಾಗೂ 15 ರಿಂದ 20 ಸಾವಿರ ರೂ.ವರೆಗೆ ಕ್ಕೆ ಬಾಡಿಗೆಗೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೆರಡು ತಿಂಗಳು ಮಾತ್ರ ಮಾಲೀಕರಿಗೆ ಬಾಡಿಗೆ ನೀಡುತ್ತಿದ್ದರು. ನಂತರ ನೀಡುತ್ತಿರಲಿಲ್ಲ. ಮಾಲೀಕರು ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ, ಮತ್ತೊಬ್ಬರು ವಶಕ್ಕೆ ಇರುತ್ತಿದ್ದರು. ಅವರು ಮನೆಯನ್ನು ಭೋಗ್ಯಕ್ಕೆ ಪಡೆದಿರುವುದಾಗಿ ತಿಳಿಸುತ್ತಿದ್ದರು. ಹೀಗೆ ಏಕ ಕಾಲಕ್ಕೆ ಮನೆ ಮಾಲೀಕರು ಹಾಗೂ ಬಾಡಿಗೆದಾರರನ್ನು ವಂಚಿಸುತ್ತಿದ್ದರು. ಏಪ್ರಿಲ್‌ನಲ್ಲಿ ಹೆಣ್ಣೂರು, ಬಾಣಸವಾಡಿ ಪೊಲೀಸ್ ಠಾಣೆಗಳಲ್ಲಿ ಮನೆ ಮತ್ತು ಅಪಾರ್ಟ್ ಮೆಂಟ್ ಮಾಲೀಕರು, ಝಿಯು ಕಂಪನಿಯ ಮಾಲೀಕ ಅಹಮದ್ ಅಲಿ ಬೇಗ್, ನೂರ್ ಅಹಮದ್ ಅಲಿ ಬೇಗ್, ಅಕ್ರಂ ಪಾಷ, ಅಬ್ದುಲ್ ರಹೀಂ ಹಾಗೂ ಸೈಯ್ಯದ್ ವಿರುದ್ಧ ದೂರು ನೀಡಿದ್ದರು. ಏಪ್ರಿಲ್‌ನಲ್ಲಿ ಬಾಣಸವಾಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಂಚನೆ ಬಯಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದರು. ವಂಚನೆಗೊಳಗಾದ ಮನೆ ಮತ್ತು ಅಪಾರ್ಟ್ ಮೆಂಟ್ ಮಾಲೀಕರು ಹಾಗೂ ಭೋಗ್ಯಕ್ಕೆ ವಾಸವಿದ್ದವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೂನ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ನಂತರ ಆರೋಪಿಗಳ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.
ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಅಹಮದ್ ಅಲಿ ಬೇಗ್ ಹಾಗೂ ಆತನ ಪತ್ನಿ ಮುಯಿದಾ ಸಮ್ಮಾನಿ ಬಾನು ಅವರನ್ನು ಬಂಧಿಸಿ,ಬೆಂಗಳೂರಿಗೆ ಕರೆತರಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ತಲೆ ಮರೆಸಿಕೊಂಡಿರುವ ಇನ್ನೂ ಕೆಲವು ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.