87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಸೆ 30, ಅ 1ರಂದು ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಸಂಚಾರ
ಕನ್ನಡ ಸುದ್ದಿ  /  ಕರ್ನಾಟಕ  /  87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಸೆ 30, ಅ 1ರಂದು ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಸಂಚಾರ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಸೆ 30, ಅ 1ರಂದು ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಸಂಚಾರ

Dharwad News: ಧಾರವಾಡ ಜಿಲ್ಲೆಯಾದ್ಯಂತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರಣ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಸೆಪ್ಟೆಂಬರ್​ 30, ಅಕ್ಟೋಬರ್​ 1ರಂದು ಸಂಚಾರ ನಡೆಸಲಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ಸಾಂದರ್ಭಿಕ ಚಿತ್ರ)

ಧಾರವಾಡ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (87th Akhila Bharatha Kannada sahitya sammelana) ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಜಿಲ್ಲೆಯಾದ್ಯಂತ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸೆಪ್ಟೆಂಬರ್ 30 ರಂದು ಬೆಳಿಗ್ಗೆ 9 ಗಂಟೆಗೆ ಅಣ್ಣಿಗೇರಿ ತಾಲೂಕಿನಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಸ್ವಾಗತಿಸಲಾಗುವುದು. ರಥವು ಭದ್ರಾಪೂರ, ನಲವಡಿ, ಶಿರಗುಪ್ಪಿ, ಯರಗುಪ್ಪಿ, ಬೆನಕನಹಳ್ಳಿ ಮಾರ್ಗದ ಮೂಲಕ ಸಂಚರಿಸಲಿದೆ. ಮಧ್ಯಾಹ್ನ 12.30 ಗಂಟೆಗೆ ಕುಂದಗೋಳ ತಾಲೂಕಿನಿಂದ ಶೇರೆವಾಡ, ನೂಲ್ವಿ, ಅದರಗುಂಚಿ, ಕುಂದಗೋಳ ಕ್ರಾಸ್, ಹುಬ್ಬಳ್ಳಿ ರಿಂಗ್ ರಸ್ತೆ ಮೂಲಕ ಸಂಜೆ 5 ಗಂಟೆಗೆ ಕಲಘಟಗಿ ತಾಲೂಕಿಗೆ ಸಂಚರಿಸಲಿದೆ.

ಅಕ್ಟೋಬರ್ 1 ರಂದು ಬೆಳಿಗ್ಗೆ 10.30 ಗಂಟೆಗೆ ಕಲಘಟಗಿ ಮಾರ್ಗವಾಗಿ ಮಿಶ್ರಿಕೋಟಿ, ಹುಬ್ಬಳ್ಳಿ ಸಿದ್ಧಾರೋಢ ಮಠ, ಹುಬ್ಬಳ್ಳಿಯ ಕಿತ್ತೂರಾಣಿ ಚನ್ನಮ್ಮ ಸರ್ಕಲ್, ಹುಬ್ಬಳ್ಳಿಯ ಬಿಆರ್​​ಟಿಎಸ್ ಮಾರ್ಗವಾಗಿ ಮಧ್ಯಾಹ್ನ 2 ಗಂಟೆಗೆ ಧಾರವಾಡ ಜಿಲ್ಲೆ ಕೇಂದ್ರಕ್ಕೆ ಬಂದು ಮದ್ಯಾಹ್ನ 3 ಗಂಟೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಿಂದ ಹೋಗಲಿದೆ. ನಂತರ ಶಿವಳ್ಳಿ, ಹೆಬಸೂರ ಮಾರ್ಗವಾಗಿ ನವಲಗುಂದ ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಯಶಸ್ವಿಯಾಗಿ ಜರುಗಬೇಕು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡಪರ, ರೈತ, ಕಾರ್ಮಿಕ ಸಂಘಟನೆಗಳು. ವಿದ್ಯಾ ಸಂಸ್ಥೆಗಳು, ಎನ್​ಸಿಸಿ, ಎನ್​ಎಸ್​ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ, ಲಯನ್ಸ್ ಕ್ಲಬ್, ರೇಡ್ ಕ್ರಾಸ್ ಸಂಸ್ಥೆ, ಸ್ತ್ರೀ ಶಕ್ತಿ ಸಂಘಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ಜೊತೆಗೂಡಿಸಿಕೊಂಡು ಕಲಾತಂಡಗಳ ಕಲಾ ಪ್ರದರ್ಶನದ ಜೊತೆಗೆ ಕನ್ನಡ ರಥಕ್ಕೆ ಗೌರವಯುತವಾಗಿ ಧಾರವಾಡ ಜಿಲ್ಲೆಗೆ ಸ್ವಾಗತಿಸಿ, ಆಯಾ ತಾಲೂಕುಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಭದ್ರತೆ ಒದಗಿಸುವಂತೆ ಮನವಿ

ಕನ್ನಡ ರಥಯಾತ್ರೆ ಸಂಚರಿಸುವ ವೇಳೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಂತರ ತಾಲ್ಲೂಕಿನ ಗಡಿ ಭಾಗಗಳಲ್ಲಿ ಬೀಳ್ಕೊಡಬೇಕು. ರಥಯಾತ್ರೆಯು ಆಯಾ ತಾಲೂಕುಗಳಲ್ಲಿ ಸಂಚರಿಸುವಾಗ ಮತ್ತು ವಾಸ್ತವ್ಯದ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಬೇಕೆಂದು ಅವರು ತಿಳಿಸಿದ್ದಾರೆ.

ತಾಲೂಕು ಆಡಳಿತ, ಜಿಲ್ಲಾ ಸಾಹಿತ್ಯ ಪರಿಷತ್ತು ಸೇರಿ ಆಯಾ ತಾಲೂಕಿನ ತಾಲೂಕು ಮಟ್ಟದ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳು, ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಏರ್ಪಡಿಸುವ ಮೂಲಕ ಕನ್ನಡ ಜ್ಯೋತಿ ರಥಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಎಲ್ಲರೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ರಥಯಾತ್ರೆಯನ್ನು ಯಶಸ್ವಿಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Whats_app_banner